ದೇಹದ ಸುಸ್ಥಿತಿಯಲ್ಲಿ ಇರುವುದಕ್ಕೆ ಎಲ್ಲಾ ಅಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರಬೇಕು ಎಂಬುದು ಗೊತ್ತಿರುವುದೇ. ಹೊಟ್ಟೆಗೆ ಹೋದ ಆಹಾರವನ್ನು ಜೀರ್ಣಾಂಗಗಳು ಸರಿಯಾಗಿ ಚೂರ್ಣಿಸುವುದರಿಂದ ತೊಡಗಿ, ಬೇಡದ್ದನ್ನು ಮೂತ್ರಪಿಂಡಗಳು ಹೊರಹಾಕುವವರೆಗೆ ಎಲ್ಲಿಯೂ ಕೊಂಡಿ ತಪ್ಪಬಾರದು. ಹಾಗಾದರೆ ತಿನ್ನುವಾಗಲೂ ಬೇಕಾದ್ದೇನು ಮತ್ತು ಬೇಡದ್ದೇನು ಎಂಬ ಎಚ್ಚರ ಬೇಕಲ್ಲವೇ? ಆಗ ಮಾತ್ರ ಕರುಳು ಮತ್ತು ಮೂತ್ರಪಿಂಡಗಳ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಸಕ್ಕರೆ ಮತ್ತು ಉಪ್ಪು- ಇವುಗಳಲ್ಲಿ ಕಿಡ್ನಿಗೆ ಯಾವುದು ಹಿತ? ಈ ಎರಡು ಪ್ರಮುಖ ಅಂಶಗಳು (Sugar Vs Salt) ನಮ್ಮ ಆಹಾರದಲ್ಲಿ ಹೇಗಿರಬೇಕು, ಎಷ್ಟಿರಬೇಕು ಎಂಬ ಮಾಹಿತಿ ಇಲ್ಲಿದೆ.
ಸಕ್ಕರೆ ಮತ್ತು ಕಿಡ್ನಿಯ ಸಂಬಂಧ
ಮೂತ್ರಪಿಂಡಗಳು ಮತ್ತು ಸಕ್ಕರೆ ನಡುವಿನ ನೇರ ಸಂಬಂಧ ಸ್ವಲ್ಪ ಕಡಿಮೆಯೇ ಎನ್ನಬಹುದು. ಆದರೆ ಸಕ್ಕರೆಯ ಸೇವನೆ ಅತಿಯಾದರೆ ಮಧುಮೇಹ, ಬೊಜ್ಜು, ಹೃದಯದ ತೊಂದರೆಗಳು ಅಮರಿಕೊಳ್ಳಲು ಕಾಯುತ್ತಿರುತ್ತವೆ. ಮಧುಮೇಹದಂಥ ಸಮಸ್ಯೆ ಕ್ರಮೇಣ ಕಿಡ್ನಿಯನ್ನು ಅಪಾಯಕ್ಕೆ ದೂಡುತ್ತದೆ. ನಿಯಂತ್ರಣಕ್ಕೆ ಬಾರದಂತೆ ಸಕ್ಕರೆ ಕಾಯಿಲೆ ಹೆಚ್ಚಾದರೆ ಅದು ನೇರವಾಗಿ ಡಯಾಬಿಟಿಕ್ ನೆಫ್ರೊಪಥಿಗೆ ಕಾರಣವಾಗುತ್ತದೆ. ಅಂದರೆ ರಕ್ತದಲ್ಲಿರುವ ಕಶ್ಮಲಗಳನ್ನು ಬೇರ್ಪಡಿಸಿ ಹೊರಹಾಕುವ ಕಿಡ್ನಿಗಳ ಸಾಮರ್ಥ್ಯ ಕುಸಿದು ನಂತರ, ಕಿಡ್ನಿ ವೈಫಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಮಾತ್ರವಲ್ಲ, ಹೃದಯ ತೊಂದರೆಗಳಿಗೂ ರಕ್ತದ ಏರೊತ್ತಡಕ್ಕೂ ನೇರ ನಂಟು. ಇದು ಮೂತ್ರಪಿಂಡಗಳ ಸಮಸ್ಯೆಗೆ ರಹದಾರಿ ಕಲ್ಪಿಸುತ್ತದೆ. ಹಾಗಾಗಿ ಸಕ್ಕರೆ ಸೇವನೆ ತಕ್ಷಣಕ್ಕೆ ಕಿಡ್ನಿಗಳ ಮೇಲೆ ಒತ್ತಡ ಹಾಕದಿದ್ದರೂ, ಪರೋಕ್ಷವಾಗಿ ಮೂತ್ರಪಿಂಡದ ಸಮಸ್ಯೆಗಳಿಗೆ ತಳುಕು ಹಾಕಿಕೊಳ್ಳುತ್ತದೆ
ಉಪ್ಪು ಮತ್ತು ಕಿಡ್ನಿ ಅರೋಗ್ಯಕ್ಕಿರುವ ನಂಟು
ಉಪ್ಪಿಗಿಂತ ರುಚಿಯಿಲ್ಲ ಎಂಬುದನ್ನು ಮೊದಲಿಗೇ ಒಪ್ಪಿಕೊಂಡವರು ನಾವು. ಹಾಗಾಗಿ ಉಪ್ಪು ಅಥವಾ ಸೋಡಿಯಂ ಕ್ಲೋರೈಡ್ ನಮ್ಮ ಆಹಾರದ ಅವಿಭಾಜ್ಯ ಅಂಗ. ಸಮರ್ಪಕ ಕಾರ್ಯ ನಿರ್ವಹಣೇಗೆ ನಮ್ಮ ಶರೀರಕ್ಕೆ ಸಣ್ಣ ಪ್ರಮಾಣದಲ್ಲಿ ಸೋಡಿಯಂ ಬೇಕು. ಅದು ದೊರೆಯದಿದ್ದರೆ ಒಂದಿಷ್ಟು ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ. ಹಾಗೆಂದು ಸೋಡಿಯಂ ದೇಹಕ್ಕೆ ಹೆಚ್ಚಾದರೆ, ಆ ಒತ್ತಡದ ನೇರ ಫಲಾನುಭವಿ ನಮ್ಮ ಮೂತ್ರಪಿಂಡಗಳು. ಉಪ್ಪಿನಂಶ ದೇಹಕ್ಕೆ ಹೆಚ್ಚಾದರೆ ರಕ್ತದೊತ್ತಡಕ್ಕೆ ನಾಂದಿ ಹಾಡುತ್ತದೆ. ಇದೂ ಸಹ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಎಲ್ಲವುಗಳ ಪರಿಣಾಮವಾಗಿ ಕಿಡ್ನಿಗಳ ಆರೋಗ್ಯ ಕೈಕೊಟ್ಟು, ರೋಗಗಳು ದಾಳಿಯಿಡುತ್ತವೆ. ಅಂತಿಮವಾಗಿ ಕಿಡ್ನಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬ ಮಾತಿನಂತೆ, ಅತಿಯಾಗಿ ನೀರನ್ನೂ ದೇಹ ಹಿಡಿದಿರಿಸಿಕೊಳ್ಳುತ್ತದೆ
ಏನು ಮಾಡಬೇಕು?
ಸಕ್ಕರೆ, ಉಪ್ಪುಗಳನ್ನು (Sugar Vs Salt) ಹೆಚ್ಚು ತಿಂದರೆ ಕಿಡ್ನಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಇನ್ನಿತರ ರೋಗಗಳನ್ನೂ ತರುತ್ತದೆ ಎಂಬ ಕಾರಣಕ್ಕೆ ಜೀವಮಾನವಿಡೀ ಸಪ್ಪೆ ಆಹಾರವನ್ನು ತಿನ್ನಲು ಸಾಧ್ಯವಿಲ್ಲ ಮತ್ತು ಹಾಗೆ ತಿನ್ನುವ ಅಗತ್ಯವೂ ಇಲ್ಲ. ಮಿತಿಯಲ್ಲಿ ತಿನ್ನುವುದನ್ನು ಅಳವಡಿಸಿಕೊಳ್ಳುವುದು ಅಗತ್ಯ. ಉಪ್ಪು-ಸಕ್ಕರೆಯೂ ಉಳಿದೆಲ್ಲಾ ಆಹಾರದಂತೆ ಸಮತೋಲನದಲ್ಲಿ ಇರಬೇಕು. ಒಂದು ಹಿತ, ಇನ್ನೊಂದು ಅಹಿತ ಎನ್ನುವಂತಿಲ್ಲ- ಅತ್ತ ದರಿ, ಇತ್ತ ಪುಲಿ! ಹಾಗಾಗಿ, ಕಿಡ್ನಿ-ಸ್ನೇಹಿ ಡಯಟ್‌ನ ಬಗೆಗೆ ಹೇಳುವುದಾದರೆ,
ಹೆಚ್ಚುವರಿ ಸಕ್ಕರೆಭರಿತ ಆಹಾರಗಳನ್ನು ಹತ್ತಿರ ಸೇರಿಸಬೇಡಿ
ಸೋಡಾ, ಕೃತಕ ಬಣ್ಣ-ಸಕ್ಕರೆ ಭರಿತ ಪಾನೀಯಗಳು, ಸಂಸ್ಕರಿತ ಆಹಾರಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಇವುಗಳನ್ನು ದೂರ ಮಾಡಿ. ಹಬ್ಬಕ್ಕೋ ಹುಣ್ಣಿಮೆಗೋ ತಿನ್ನುವ ಪಾಯಸ-ಲಾಡುಗಳಿಗಿಂತ ಈ ಕೃತಕ ಮತ್ತು ಸಂಸ್ಕರಿತ ಆಹಾರಗಳೇ ಹೆಚ್ಚಿನ ತೊಂದರೆ ನೀಡುತ್ತವೆ.
ಸಂರಕ್ಷಿಸಿಟ್ಟ ಆಹಾರಗಳಿಗಿಂತ ತಾಜಾ ಆಹಾರಗಳು ನಿಮ್ಮ ಆಯ್ಕೆಯಾಗಿರಲಿ
ಸಂರಕ್ಷಿತ ಆಹಾರಗಳಲ್ಲಿ ಉಪ್ಪಿನಂಶ ಹೆಚ್ಚಿರುತ್ತದೆ. ಪ್ಯಾಕೆಟ್ ಕುರುಕಲುಗಳಂತೆಯೇ ತೊಕ್ಕು, ಉಪ್ಪಿನಕಾಯಿಗಳ ಅತಿಯಾದ ಬಳಕೆಯೂ ಸಮಸ್ಯೆಗೆ ಮೂಲವಾಗುತ್ತದೆ. ಒಂದೊಮ್ಮೆ ರೆಡಿ ಆಹಾರಗಳನ್ನು ಖರೀದಿಸಬೇಕಾಗಿ ಬಂದರೆ, ಅದರ ಮೇಲೆ ಪೋಷಕಾಂಶಗಳ ಮಾಹಿತಿಯಿದ್ದರೆ ಸೋಡಿಯಂ ಅಂಶದ ಮೇಲೆ ಗಮನಹರಿಸಿ.
ಆಹಾರದಲ್ಲಿ ಸಾಕಷ್ಟು ಹಣ್ಣು-ತರಕಾರಿಗಳನ್ನು ಸೇರಿಸಿಕೊಳ್ಳಿ
ನೀರು ಯಥೇಚ್ಛವಾಗಿ ಕುಡಿಯಿರಿ, ಇದರಿಂದ ಕಿಡ್ನಿಯ ಕೆಲಸ ಹಗುರವಾಗುತ್ತದೆ.
ಇದನ್ನೂ ಓದಿ: Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ