ಬೇಸಿಗೆಯ ಬಿಸಿಲಿನಿಂದ ದಣಿಯದಂತೆ ಕಾಪಾಡುವಲ್ಲಿ ಮಾರುಕಟ್ಟೆಯ ಅನೇಕ ಪಾನೀಯಗಳು ನಮ್ಮನ್ನು ಸೆಳೆಯುವುದುಂಟು. ನಮ್ಮ ದಣಿವು ಇಂಗಿಸಲು, ಫಟಾಫಟ್ ಶಕ್ತಿ ನೀಡಿ ನಮ್ಮಲ್ಲಿ ಚೈತನ್ಯ ಚಿಮ್ಮಿಸಲು ಮಾರುಕಟ್ಟೆಯ ಆಕರ್ಷಕ ಪಾನೀಯಗಳಿಗೆ ಸೆಡ್ಡು ಹೊಡೆದು ನಿಲ್ಲುವ ತಾಕತ್ತಿರುವ ಪಾನೀಯಗಳ ಪೈಕಿ ಕಬ್ಬಿನಹಾಲು ಪ್ರಮುಖವಾದದ್ದು. ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ಕಬ್ಬಿನ ಜಲ್ಲೆಯಿಂದ ರಸ ಹಿಂಡುವ ಪುಟ್ಟ ಪುಟ್ಟ ಕಿರಾಣಿ ಅಂಗಡಿಗಳು ಸಾಮಾನ್ಯ. ಇಲ್ಲಿ ಸ್ವಚ್ಛತೆ ಕಡಿಮೆ ಅಂತ ಅನಿಸಿದರೆ, ಹವಾನಿಯಂತ್ರಿತ ಅಂಗಡಿಗಳಲ್ಲೂ ಇಂದು ಸ್ವಚ್ಛವಾದ ವಿವಿಧ ಫ್ಲೇವರ್‌ಗಳಲ್ಲಿ ಲಭ್ಯವಾಗುವ ಕಬ್ಬಿನಹಾಲಿನದೇ ಅಂಗಡಿಗಳೂ ಇವೆ.
ಮನಸ್ಸನ್ನೂ ದೇಹವನ್ನೂ ಬೇಸಿಗೆಯಲ್ಲಿ ತಣ್ಣಗಿಡುವ ಕಬ್ಬಿನಹಾಲಿನ ನೈಸರ್ಗಿಕ ಸಿಹಿಗೆ ಮಾರು ಹೋಗದವರೇ ಇಲ್ಲ. ದೊಡ್ಡ ಗ್ಲಾಸು ತುಂಬಾ ಕಬ್ಬಿನ ರಸ ಹೀರಿದರೆ ಸಾಕು ಬೇಸಿಗೆಯ ಎಲ್ಲ ದಾಹವೂ ಇಂಗಿದ ಭಾವ. ಇಂಥ ಕಬ್ಬಿನ ಹಾಳಿನ ಶ್ರೇಷ್ಠತೆಯ ಅರಿವು ಕುಡಿಯುವ ಮುನ್ನ ನಮಗೆ ಇರಬೇಕು. ಹಾಗಾದರೆ ಬನ್ನಿ, ಬೇಸಿಗೆಯಲ್ಲಿ ಕಬ್ಬಿನಹಾಲು ಕುಡಿಯುವುದರಿಂದ ಆಗುವ ಲಾಭಗಳನ್ನು ತಿಳಿಯೋಣ.
1. ಕಬ್ಬಿನಹಾಲಿನಲ್ಲಿ ಸಾಕಷ್ಟು ಎಲೆಕ್ಟ್ರೋಲೈಟ್ಸ್ ಇರುವುದರಿಂದ ಬೇಸಿಗೆಗೆ ಹೇಳಿ ಮಾಡಿಸಿದ ಡ್ರಿಂಕ್. ದೇಹಕ್ಕೆ ಬೇಕಾಗಿರುವ ಇನ್ಸ್‌ಟ್ಯಾಂಟ್ ಎನರ್ಜಿಯನ್ನು ಇದು ನೀಡುತ್ತದೆ. ಇದು ದೇಹದಲ್ಲಿ ನೀರಿನಂಶದ ಮಟ್ಟದ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ನಿರ್ಜಲೀಕರಣದಂತಹ ಸಮಸ್ಯೆಗಳು ಬೇಸಿಗೆಯಲ್ಲಿ ನಿಮ್ಮನ್ನು ಕಾಡುವುದಿಲ್ಲ.
2. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಪೊಟಾಶಿಯಂ ಇರುವುದರಿಂದ ಇದು ದೇಹದ ಪಿಎಚ್ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಇದು ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸಗಳ ಉತ್ಪಾದನೆಗೆ ಪ್ರಚೋದನೆಯನ್ನು ನೀಡುವುದಲ್ಲದೆ, ದೇಹದ ಜೀರ್ಣಾಂಗವ್ಯೂಹವನ್ನು ಆರೋಗ್ಯವಾಗಿರಿಸುತ್ತದೆ.
3. ಪಿತ್ತಕೋಶವನ್ನು ಇನ್ನಷ್ಟು ಸದೃಢಗೊಳಿಸುವ ತಾಕತ್ತು ಇದರಲ್ಲಿದೆ. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಕಳಿಸಿ ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತದೆ.
4. ಹಲ್ಲಿನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದರಲ್ಲಿರುವ ಖನಿಜಾಂಶಗಳು ಹಾಗೂ ಇತರ ಪೋಷಕಾಂಷಗಳು ಹಲ್ಲಿನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ಹಲ್ಲಿನ ಸವಕಳಿಯನ್ನು ತಪ್ಪಿಸುವುದಲ್ಲದೆ, ಬಾಯಿಯ ಕೆಟ್ಟ ವಾಸನೆಯನ್ನೂ ದೂರಾಗಿಸುತ್ತದೆ.
5. ಕಬ್ಬಿನಹಾಲಿನಲ್ಲಿ ಸಾಕಷ್ಟು ಆಂಟಿಆಕ್ಸಿಡೆಂಟ್‌ಗಳು, ಫಿನೋಲಿಕ್ ಆಸಿಡ್ ಹಾಗೂ ಫ್ಲೇವನಾಯ್ಡ್‌ಗಳು ಇರುವುದರಿಂದ ಇದು ಚರ್ಮಕ್ಕೆ ನೈಸರ್ಗಿಕ ಮಾಯ್‌ಶ್ಚರೈಸರ್ ಆಗಿಯೂ ವರ್ತಿಸುತ್ತದೆ. ಹಾಗಾಗಿ, ಕಬ್ಬಿನಹಾಲು ಕುಡಿಯುವುದರಿಂದ ಮುಖದಲ್ಲಿ ಕಾಂತಿ ಉಕ್ಕುತ್ತದೆ.
ಇದನ್ನೂ ಓದಿ:
ಇಷ್ಟೆಲ್ಲ ಒಳ್ಳೆಯ ಉಪಯೋಗಗಳಿರುವ, ಆರೋಗ್ಯಕರ ಲಾಭಗಳಿರುವ ಕಬ್ಬಿನ ಹಾಲು ಕುಡಿದರೆ ತೂಕ ಹೆಚ್ಚಾಗಿಬಿಡುತ್ತದೆ ಎಂಬುದು ಅನೇಕರ ಸಮಸ್ಯೆ. ಇದರಿಂದ ಕೊಬ್ಬು ಸಂಗ್ರಹವಾಗುತ್ತದೆ ಎಂಬ ಯೋಚನೆ ಹಾಗೂ ನಂಬಿಕೆಯೂ ಹಲವರದ್ದು. ಒಂದೇ ಒಂದು ನೂರು ಗ್ರಾಂ ಕಬ್ಬಿನಲ್ಲಿ 270 ಕ್ಯಾಲರಿಗಳಿರುವುದರಿಂದ ಒಮ್ಮೆ ಕಬ್ಬಿನಹಾಲು ಕುಡಿದರೂ ಸಾಕು ಕ್ಯಾಲರಿ ಏರುತ್ತದೆ ಏಂಬುದು ಕ್ಯಾಲರಿಯ ಪ್ರಕಾರ ಆಹಾರ ತೆಗೆದುಕೊಳ್ಳುವವರ ಸಮಸ್ಯೆ. ಹಾಗಾಗಿ, ಇದರಲ್ಲಿರುವ ಆರೋಗ್ಯಕರ ಲಾಭಗಳನ್ನು ಪಡೆಯಲು ಮಿತವಾಗಿ ಕಬ್ಬಿನಹಾಲನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಕಬ್ಬಿನ ಹಾಲಿಗೆ ಕೊಂಚ ಶುಂಠಿ ಸೇರಿಸಿ ತೆಗೆದುಕೊಳ್ಳುವುದರಿಂದ ಇದರಲ್ಲಿರುವ ಆಂಟಿ ವೈರಲ್ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳೂ ಸೇರಿ ವಾತ, ಪಿತ್ತ ಹಾಗೂ ಕಫದೋಷಗಳನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ. ಬೇಸಿಗೆಯಲ್ಲಿ ಕಾಡುವ ಹಲವು ಸಮಸ್ಯೆಗಳಿಗೂ ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಇದನ್ನೂ ಓದಿ: