“ಬಿಸಿಲೋ ಬಿಸಿಲು.” ಎಲ್ಲೇ ಹೋಗಲಿ, ಈ ಮಾತು ನಿತ್ಯವೂ ಮಂತ್ರದಂತೆ ನಿಮ್ಮ ಕಿವಿಗೆ ಕೇಳುತ್ತಲೇ ಇರುತ್ತದೆ. ನೀವೂ ನಿತ್ಯವೂ ಹೇಳುತ್ತಲೇ ಇರುತ್ತೀರಿ. ಬೇಸಿಗೆಯಲ್ಲಿ ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು, ದೇಹವನ್ನು ತಂಪಾಗಿಡಲು, ನೀರಿನ ಜೊತೆಗೆ, ಏನೇನೋ ಪಾನಕಗಳು, ಎಳನೀರು, ಜ್ಯೂಸ್ಗಳು, ಹಣ್ಣುಗಳು, ಐಸ್ಕ್ರೀಂಗಳನ್ನು ತಿಂದು ಕುಡಿದು ಮಾಡುತ್ತಿರುತ್ತೇವೆ. ಇವುಗಳಲ್ಲಿ ಕೆಲವು ಬಾಯಿಗೆ ಮಾತ್ರ ತಂಪಾದರೆ, ಇನ್ನೂ ಕೆಲವು ದೇಹಕ್ಕೂ ತಂಪು. ದೇಹಕ್ಕೆ ತಂಪಾಗಿರುವ ನೈಸರ್ಗಿಕವಾದ ತಂಪು ಪಾನೀಯಗಳು ಯಾವಾಗಲೂ ಆರೋಗ್ಯಕ್ಕೆ ಹಿತ. ಇಂಥವುಗಳ ಪೈಕಿ, ಸಕ್ಕರೆ ಹಾಕದೆಯೇ ಸಿಹಿಯಾಗಿರುವ, ಕುಡಿದರೆ, ತಂಪಾದ ಅನುಭವ ನೀಡುವ ಪಾನೀಯಗಳ ಪೈಕಿ ಕಬ್ಬಿನ ಹಾಲೂ ಒಂದು. ರುಚಿಯಾದ ಕಬ್ಬಿನ ಹಾಲು ಸಾಮಾನ್ಯವಾಗಿ ಎಲ್ಲ ಜಾಗಗಳಲ್ಲೂ ಸುಲಭವಾಗಿ ಸಿಗುತ್ತದೆ. ಜೊತೆಗೆ ನಿಂಬೆ, ಶುಂಠಿ, ಪುದಿನ ಮತ್ತಿತರ ನೈಸರ್ಗಿಕ ಫ್ಲೇವರ್ಗಳಲ್ಲೂ ಇದು ಸಿಗುವುದರಿಂದ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭಗಳೂ ಇವೆ. ಬನ್ನಿ, ಕಬ್ಬಿನ ಹಾಲನ್ನು ಬೇಸಿಗೆಯಲ್ಲಿ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ (sugarcane milk benefits) ಎಂಬುದನ್ನು ನೋಡೋಣ.
- ಬಿಸಿಲಿಗೆ ಸುಸ್ತಾಗಿದ್ದೀರಾ? ನಿಮ್ಮ ಶಕ್ತಿಯನ್ನು ಒಡನೆಯೇ ಚಿಮ್ಮುವಂತೆ ಮಾಡಲು ನೀವೊಂದು ಲೋಟ ಕಬ್ಬಿನ ಹಾಲು ಕುಡಿಯಿರಿ. ಆಸ್ಪತ್ರೆಯಲ್ಲಿ ಒಂದು ಬಾಟಲಿ ಗ್ಲುಕೋಸ್ ಹಾಕಿಸಿಕೊಂಡ ಹಾಗೆ ನಿಮಗೆ ದಿಢೀರ್ ಚೈತನ್ಯ, ಉಲ್ಲಾಸ ಬರುತ್ತದೆ. ಕಬ್ಬಿನ ಹಾಲಿನಲ್ಲಿ ಸಾಕಷ್ಟು ಗ್ಲುಕೋಸ್ ಹಾಗೂ ಎಲೆಕ್ಟ್ರೋಲೈಟ್ಗಳು ಇರುವುದರಿಂದ ಇದು ದಿಢೀರ್ ಶಕ್ತಿವರ್ಧನೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ತಂಪು ಮಾಡುವ ಶಕ್ತಿ ಇದಕ್ಕಿದೆ.
- ಚರ್ಮದ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದೆಯೇ? ಹಾಗಿದ್ದರೆ ನೀವು ಕಬ್ಬಿನ ಹಾಲು ಸೇವಿಸಿ. ಇದರಲ್ಲಿ ಆಂಟಿಆಕ್ಸಿಡೆಂಟ್ಗಳು, ಮೆಗ್ನೀಶಿಯಂ, ಕಬ್ಬಿಣಾಂಶ ಹಾಗೂ ಬಗೆಬಗೆಯ ಎಲೆಕ್ಟ್ರೋಲೈಟ್ಗಳು ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ದೇಹದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ. ಚರ್ಮ ಸುಕ್ಕಾಗುವುದನ್ನೂ ತಡೆಯುತ್ತದೆ.
- ಕಬ್ಬಿನಹಾಲಿಗೆ ನಮ್ಮ ದೇಹದಿಂದ ಬೇಡವಾದ ಉಪ್ಪಿನಂಶ ಹಾಗೂ ನೀರನ್ನು ಹೊರಗೆ ಕಳಿಸುವ ತಾಕತ್ತಿದೆ. ಇದರಿಂದ ಕಿಡ್ನಿಯ ಆರೋಗ್ಯ ಹೆಚ್ಚಾಗುತ್ತದೆ. ಮೂತ್ರನಾಳದಲ್ಲಿ ಇನ್ಫೆಕ್ಷನ್ ಆದಾಗಲೂ ಕಬ್ಬಿನಹಾಲು ಕುಡಿಯುವುದರಿಂದ ಸಮಸ್ಯೆ ಹತೋಟಿಗೆ ಬರುತ್ತದೆ.
- ಕಬ್ಬಿನಹಾಲಿನಲ್ಲಿರುವ ಫ್ಲೇವನ್ಗಳು ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ತಾಕತ್ತನ್ನು ಹೊಂದಿವೆ ಎಂಬುದನ್ನಾ ಸಾಕಷ್ಟು ಸಂಶೋಧನೆಗಳು ಬಹಿರಂಗಪಡಿಸಿವೆ. ಇವು ಕ್ಯಾನ್ಸರ್ ಅಂಗಾಂಶ ಬೆಳೆಯುವುದನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ದೇಹದ ಇತರ ಭಾಗಗಳಿಗೆ ಹರಡುವುದನ್ನು ತಪ್ಪಿಸುತ್ತದೆ.
- ಕಬ್ಬಿನಹಾಲಿನಲ್ಲಿ ಸಾಕಷ್ಟು ಪೊಟಾಶಿಯಂ ಇರುವುದರಿಂದ ಇದು ಜೀರ್ಣಕ್ರಿಯೆಗೆ ಸಾಕಷ್ಟು ಸಹಾಯ ಮಾಡುತ್ತದೆ. ದೇಹದ ಪಿಎಚ್ ಮಟ್ಟವನ್ನು ಸರಿದೂಗಿಸಿ, ಹೊಟ್ಟೆಯನ್ನು ಇನ್ಫೆಕ್ಷನ್ ಆಗದಂತೆ ಕಾಪಾಡುತ್ತದೆ.
ಇದನ್ನೂ ಓದಿ: Oil Pulling: ಆಯಿಲ್ ಪುಲ್ಲಿಂಗ್; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!