ಬೇಸಿಗೆ ಬಂತೆಂದರೆ ಸಾಕು, ಧಗೆ ತಣಿಸಲು, ಆಗಾಗ ಆಗುವ ಬಾಯಾರಿಕೆಗೆ, ಸುಸ್ತಿನಿಂದ ಮುಕ್ತಿಗೆ ಹಲವು ಬಗೆಯ ಜ್ಯೂಸುಗಳು, ಪಾನಕಗಳ ಮೊರೆ ಹೋಗುವುದು ಸಾಮಾನ್ಯ. ಬಹಳ ಸುಲಭವಾಗಿ ಮಾಡಬಹುದಾದ, ಹಾಗೂ ಎಲ್ಲ ಕಡೆಯೂ ಸುಲಭವಾಗಿ ಸಿಗುವ ಜ್ಯೂಸ್‌ಗಳ ಪೈಕಿ ನಿಂಬೆಹಣ್ಣಿನ ಜ್ಯೂಸ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಜೊತೆಗೆ ಫಟಾಫಟ್ ರಿಪ್ರೆಶಿಂಗ್ ಅನುಭವವನ್ನೂ ನೀಡುವ, ದಣಿವನ್ನಾರಿಸುವ ಜ್ಯೂಸ್‌ಗಳ ಪೈಕಿ ಇದಕ್ಕೆ ಪ್ರಮುಖ ಸ್ಥಾನ. ಆದರೆ, ನಿತ್ಯವೂ ಲೆಮನೇಡ್ ಕುಡಿಯಲು ಬೋರಾಗುತ್ತದೆಯೇ? ನಿಂಬೆಹಣ್ಣಿಗೆ ಪುದಿನ ಸೇರಿಸಿ, ಅಥವಾ ಸೋಡಾ ಸೇರಿಸಿ, ಚಾಟ್ ಮಸಾಲಾ ಉದುರಿಸಿ, ಹೀಗೆ ಏನೇನೋ ಸರ್ಕಸ್‌ಗಳನ್ನು ಮಾಡಿ, ನಿಂಬೆಹಣ್ಣಿನ ಪಾನಕಕ್ಕೆ ಬೇರೆಯ ರುಚಿಯನ್ನು, ಘಮವನ್ನು ನೀಡಲು ಪ್ರಯತ್ನಿಸುವುದು ಸಹಜ. ಬನ್ನಿ, ಈ ಬೇಸಿಗೆಯಲ್ಲಿ ನಿಂಬೆಹಣ್ಣಿನ ಜ್ಯೂಸ್ ಮಾಡುವಾಗ ಯಾವೆಲ್ಲ ಮಸಾಲೆಗಳನ್ನು ಸೇರಿಸುವ ಮೂಲಕ ಬೇರೆಯದೇ ರಿಫ್ರೆಶಿಂಗ್ ರುಚಿ (summer drinks), ಘಮವನ್ನು ಪಡೆಯಬಹುದು ಎಂಬುದನ್ನು ನೋಡೋಣ.
ಚೆಕ್ಕೆ
ಪಲಾವು, ಬೇಕಿಂಗ್ ರೆಸಿಪಿಗಳಲ್ಲಿ ನೀವು ಚೆಕ್ಕೆಯನ್ನು ಸೇರಿಸಿರಬಹುದು. ಆದರೆ, ನಿಂಬೆಹಣ್ಣಿನ ಜ್ಯೂಸಿಗೆ ಸೇರಿಸಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಸೇರಿಸಿ ನೋಡಿ. ಚೆಕ್ಕೆ ಪುಡಿಯನ್ನು ನಿಮ್ಮ ನಿಂಬೆಹಣ್ಣಿನ ಪಾನಕಕ್ಕೆ ಕೊಂಚವೇ ಉದುರಿಸಿ ನೋಡಿ. ಇದು ಒಂದು ಬಗೆಯ ಸಿಹಿಯಾದ ವಿಶೇಷವಾದ ರುಚಿಯನ್ನು ನಿಮ್ಮ ನಿಂಬೆಹಣ್ಣಿನ ಪಾನಕಕ್ಕೆ ನೀಡುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.
ಶುಂಠಿ
ತಂಪಾದ ನಿಂಬೆಹಣ್ಣಿನ ಜ್ಯೂಸ್ ಜೊತೆ ಕೊಂಚ ಶುಂಠಿ ರಸ ಸೇರಿಸಿದರೆ, ಬೆಸಿಲಿನ ಧಗೆಗೆ ತಣ್ಣಗಿನ ಜ್ಯೂಸ್‌ನಿಂದ ಆಗಬಹುದಾದ ನೆಗಡಿಯ ಭಯವೇ ಇಲ್ಲ. ಶುಂಠಿಯ ಖಾರವಾದ ರುಚಿ, ನಿಂಬೆಹಣ್ಣಿನ ಜ್ಯೂಸ್‌ಗೆ ಎಷ್ಟು ಹೊಂದಿಕೆಯಾಗುತ್ತದೆ ಎಂದರೆ, ರಿಫ್ರೆಶಿಂಗ್ ಅನುಭವಕ್ಕೆ ಇನ್ನೂ ಹೆಚ್ಚಿನ ಕಿಕ್ ನೀಡುತ್ತದೆ.
ಏಲಕ್ಕಿ
ಏಲಕ್ಕಿಯನ್ನು ನಿಂಬೆಹಣ್ಣಿನ ಜ್ಯೂಸ್‌ಗೆ ಸೇರಿಸುತ್ತಾರಾ ಎಂದು ಆಶ್ಚರ್ಯಪಡಬೇಡಿ. ಒಮ್ಮೆ ಕುಟ್ಟಿ ಪುಟಿ ಮಾಡಿದ ಏಲಕ್ಕಿ ಪುಡಿಯನ್ನು ನಿಮ್ಮ ನಿಂಬೆಹಣ್ಣಿನ ಪಾನಕಕ್ಕೆ ಸೇರಿಸಿ. ಇದೊಂದು ಅದ್ಭುತವಾದ ರುಚಿಯನ್ನೂ ಘಮವನ್ನೂ ನಿಮ್ಮ ಲೆಮನೇಡ್‌ಗೆ ನೀಡದಿದ್ದರೆ ಕೇಳಿ!
ಲವಂಗ
ಲವಂಗವನ್ನು ಜಜ್ಜಿ ನಿಂಬೆಹಣ್ಣಿನ ಪಾನಕಮಾಡುವ ಸಂದರ್ಭ ಹಾಖಿಟ್ಟು ಕೊಂಚ ಹೊತ್ತು ಬಿಟ್ಟು ಕುಡಿದಾಗ ಅದರ ಘಮ ಸರಿಯಾದ ಪ್ರಮಾಣದಲ್ಲಿ ಲೆಮನೇಡ್ ಜೊತೆಗೆ ಮಿಳಿತಗೊಂಡು ಅದ್ಭುತ ಘಮವನ್ನೂ ರುಚಿಯನ್ನೂ ಕೊಡುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ!
ಹಸಿ ಮೆಣಸು
ಹೌದು, ಹಸಿ ಮೆಣಸನ್ನು ಕತ್ತರಿಸಿ ಲೆಮನೇಡ್ ಮಾಡುವ ಸಂದರ್ಭ ಅದಕ್ಕೆ ಹಾಕಿ, ಸಕ್ಕರೆ ಹಾಕಿ ಕುಲುಕಿ, ಆಮೇಲೆ ಹಸಿಮೆಣಸನ್ನು ತೆಗೆದುಬಿಡಿ. ಹಸಿಮೆಣಸಿನ ಖಾರವಾದ ಘಮ ನಿಂಬೆಹಣ್ಣಿನ ಜೊತೆಗೆ ಸೇರಿಕೊಂಡು ಅದ್ಬುತವಾದ ರುಚಿಯನ್ನು ಕೊಡುತ್ತದೆ.
ಸೋಂಪು, ಜೀರಿಗೆ
ಜೀರಿಗೆ ಹಾಗೂ ಸೋಂಪನ್ನು ಕೊಂಚ ಜಜ್ಜಿಕೊಂಡು ನಿಂಬೆಹಣ್ಣಿನ ಜ್ಯೂಸ್‌ಗೆ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಇರಲು ಬಿಟ್ಟು ನಂತರ ಸೋಸಿಕೊಂಡು ಕುಡಿದರೆ ಅದ್ಭುತ ರುಚಿ.