ಬೇಸಿಗೆಯ ತಾಪಮಾನ 40 ಡಿ.ಸೆ. ದಾಟುತ್ತಿದೆ ಬಹಳಷ್ಟು ಕಡೆಗಳಲ್ಲಿ. ಕಂಡು ಕೇಳರಿಯದ ಈ ಬೆಂಕಿಯಂಥ ಬೇಸಿಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಎಲ್ಲರೂ ಒದ್ದಾಡುತ್ತಿದ್ದಾರೆ. ದೇಹವನ್ನು ತಂಪು ಮಾಡುವ ಭರದಲ್ಲಿ ಕೆಲವೊಮ್ಮೆ ತದ್ವಿರುದ್ಧ ಕೆಲಸವನ್ನೇ ಮಾಡಿರುತ್ತೇವೆ. ಅದರಲ್ಲೂ ಕೆಲವು ಆಹಾರಗಳು ಹೆಚ್ಚಿನ ಉಷ್ಣತೆಯನ್ನು ದೇಹದಲ್ಲಿ ಉತ್ಪತ್ತಿ ಮಾಡುತ್ತವೆ ಅಥವಾ ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಇದರಿಂದ ದೇಹ ತಂಪಾಗಿಡುವುದು ಕಷ್ಟಸಾಧ್ಯ. ಯಾವ (Summer Food Tips) ಆಹಾರಗಳವು?
ಕಾಫಿ
ಹೀಗೆನ್ನುತ್ತಿದ್ದಂತೆ ಕಾಫಿ ಪ್ರಿಯರು ಸಿಟ್ಟಿಗೇಳಬಹುದು. ಆದರೆ ಕೇವಲ ಕಾಫಿ ಅಂತಲೇ ಅಲ್ಲ, ಕೆಫೇನ್ ಹೆಚ್ಚಿರುವ ಯಾವುದೇ ಪಾನೀಯಗಳು ಬೇಸಿಗೆಗೆ ಹೇಳಿಸಿದ್ದಲ್ಲ. ಚಹಾ ಸೇವನೆ ಹೆಚ್ಚಾದರೂ ಬೇಸಿಗೆಯಲ್ಲಿ ತೊಂದರೆಗೆ ಆಹ್ವಾನ ನೀಡಿದಂತೆ. ಹಾಗಾಗಿ ಈ ಬಿರು ಬೇಸಿಗೆಯಲ್ಲಿ ಬೇರೆ ಆರೋಗ್ಯಕರ ಪಾನೀಯಗಳ ಮೊರೆ ಹೋಗುವುದು ಸೂಕ್ತ.
ಉಪ್ಪಿನಕಾಯಿ
ಕೆಲವರಿಗೆ ಊಟಕ್ಕೆ ಮುಂಚೆ ಇದೇ ಬೇಕಾಗುತ್ತದೆ; ಆದರೆ ಬೇಸಿಗೆಯಲ್ಲಿ ಸರಿಯಲ್ಲ. ಇವುಗಳಲ್ಲಿ ಉಪ್ಪಿನಂಶ ಹೆಚ್ಚಿರುವುದರಿಂದ, ದೇಹದಲ್ಲಿನ ನೀರಿನಂಶ ಕಡಿಮೆಯಾಗುವಂತೆ ಮಾಡುತ್ತವೆ. ಹಾಗಾಗಿ ಹೆಚ್ಚು ಉಪ್ಪಿರುವ ಯಾವುದೇ ಆಹಾರಗಳನ್ನೂ ಬಿರು ಬೇಸಿಗೆಯಲ್ಲಿ ಸೇವಿಸದೆ ಇರುವುದು ಜಾಣತನ.
ಸೋಡಾ
ಇದರಲ್ಲಿ ಕೆಫೇನ್ ಮತ್ತು ಸಕ್ಕರೆ ಎರಡೂ ಸೇರಿದ್ದರಿಂದ, ಬೇಸಿಗೆಯ ದಾಹ ತಣಿಸಿಕೊಳ್ಳಲು ಹೇಳಿಸಿದ್ದಲ್ಲ ಈ ಪೇಯ. ಒಮ್ಮೆ ಕುಡಿದರೆ ಮತ್ತೆ ಕುಡಿಯಬೇಕೆನಿಸುವ ಸೋಡಾಗಳು, ದಾಹ ತಣಿಸುವುದಕ್ಕಿಂತ, ದೇಹವನ್ನು ನಿರ್ಜಲೀಕರಣದತ್ತ ದೂಡುತ್ತವೆ. ಅನಗತ್ಯ ಸಕ್ಕರೆಯಂಶವನ್ನು ದೇಹಕ್ಕೆ ತುರುಕಿ, ತೂಕವನ್ನೂ ಹೆಚ್ಚಿಸುತ್ತವೆ.
ಒಣ ಹಣ್ಣುಗಳು
ಖರ್ಜೂರ, ಉತ್ತುತ್ತೆ, ಅಂಜೂರ ಮುಂತಾದ ಒಣ ಹಣ್ಣುಗಳು ಜೀರ್ಣವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಹಾಗಾಗಿ ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತವೆ. ಇವುಗಳ ಬದಲಿಗೆ ಬೇಸಿಗೆಯ ತಾಜಾ ರಸಭರಿತ ಹಣ್ಣುಗಳನ್ನು ಸೇವಿಸುವುದು ಸೂಕ್ತ. ಒಣದ್ರಾಕ್ಷಿಯ ಬದಲಿಗೆ ಹಸಿ ದ್ರಾಕ್ಷಿಯನ್ನು ಸೇವಿಸಬಾರದೇಕೆ?
ಖಾರದ ತಿನಿಸುಗಳು
ಬಾಯಿಗೆ ರುಚಿಕಟ್ಟೆನಿಸುವ ಖಾರದ ತಿನಿಸುಗಳು ಬೇಸಿಗೆಯಲ್ಲಿ ಸೂಕ್ತವಲ್ಲ. ಜೀರ್ಣಾಂಗಗಳ ಕಿರಿಕಿರಿ, ಅಜೀರ್ಣಕ್ಕೆ ಕಾರಣವಾಗಿ, ದೇಹದ ಉಷ್ಣತೆಯನ್ನು ಅಧಿಕ ಮಾಡುತ್ತವೆ. ಜೊತೆಗೆ ಎಷ್ಟು ನೀರು ಕುಡಿದರೂ ಮುಗಿಯದ ನೀರಡಿಕೆಯನ್ನು ತಂದಿಕ್ಕುತ್ತವೆ. ಹಾಗಾಗಿ ಖಾರ ಪ್ರಿಯರು ನೀವಾಗಿದ್ದರೆ, ಬೇಸಿಗೆಯಲ್ಲಿ ಸ್ವಲ್ಪ ಖಾರ ಕಡಿಮೆ ಮಾಡುವುದು ಒಳ್ಳೆಯದು.
ಕರಿದ ತಿಂಡಿಗಳು
ಇದರಲ್ಲೂ ಸೋಡಿಯಂ ಅಂಶ ಹೆಚ್ಚಿರುವುದರಿಂದ, ಕುಡಿದಷ್ಟಕ್ಕೂ ದಾಹ ತೀರುವುದೇ ಇಲ್ಲ ಎನ್ನುವಂತಾಗುತ್ತದೆ. ಜೊತೆಗೆ ಹೆಚ್ಚು ಕೊಬ್ಬಿರುವ ಆಹಾರಗಳು ಜೀರ್ಣಾಂಗಗಳಿಗೆ ಸಿಕ್ಕಾಪಟ್ಟೆ ಕೆಲಸ ನೀಡುತ್ತವೆ. ಇದನ್ನು ಚೂರ್ಣಿಸುವಲ್ಲಿ ದೇಹದ ಶಾಖವೂ ಏರುತ್ತದೆ. ಹಾಗಾಗಿ ಕರಿದ ತಿಂಡಿಗಳು ಸಹ ಬೇಸಿಗೆಗೆ ಸೂಕ್ತವಾದದ್ದಲ್ಲ.
ಮೊಟ್ಟೆ, ಚಿಕನ್
ಕೊಬ್ಬು ಮತ್ತು ಪ್ರೊಟೀನ್ ಸಾಂದ್ರವಾದ ಆಹಾರವಿದು. ಜೊತೆಗೆ ಹಲವು ರೀತಿಯ ಖನಿಜಗಳೂ ದೇಹಕ್ಕೆ ದೊರೆಯುತ್ತವೆ. ಆದರೆ ಇದನ್ನು ಪಚನ ಮಾಡುವುದಕ್ಕೆ ದೇಹದಲ್ಲಿ ಬಹಳಷ್ಟು ಶಾಖ ಉತ್ಪತ್ತಿಯಾಗುತ್ತದೆ. ಸದಾ ಕಾಲ ಸೆಕೆಯ ಅನುಭವ ಆಗಬಹುದು ಕೆಲವರಿಗೆ. ಹಾಗಾಗಿ ಬೇಸಿಗೆಯಲ್ಲಿ ಈ ಆಹಾರಗಳ ಸೇವನೆಯನ್ನು ಮಿತಗೊಳಿಸಿದರೆ ಒಳ್ಳೆಯದು.
ಆಲ್ಕೊಹಾಲ್
ಯಾವುದೇ ರೀತಿಯ ಆಲ್ಕೋಹಾಲ್ ಸೇವನೆಯು ದೇಹವನ್ನು ನಿರ್ಜಲೀಕರಣದತ್ತ ದೂಡುತ್ತದೆ. ಇದರಿಂದ ಬಾಯಿ ಒಣಗುವುದು, ತಲೆನೋವು ಮುಂತಾದ ಲಕ್ಷಣಗಳು ಕಾಣಬಹುದು. ಜೊತೆಗೆ ಅತಿಯಾದ ಮೂತ್ರ ಮತ್ತು ಬೆವರು ಉತ್ಪತ್ತಿ ಮಾಡಿ, ದೇಹವನ್ನು ಸಂಕಷ್ಟಕ್ಕೆ ದೂಡುತ್ತದೆ. ಹಾಗಾಗಿ ಬೇಸಿಗೆಗೆ ಹೇಳಿಸಿದ್ದಲ್ಲ ಇದು.