Site icon Vistara News

Summer Foods: ಬೇಸಿಗೆಯಲ್ಲಿ ದೇಹಕ್ಕೆ ಬೇಕೇಬೇಕು ಈ ಕೂಲಿಂಗ್‌ ಮಸಾಲೆ ಪದಾರ್ಥಗಳು!

cool spices

ನಾವು ಬಹುತೇಕ ಋತುಗಳಿಗೆ ಅನುಸಾರವಾಗಿ ನಮ್ಮ ಆಹಾರಕ್ರಮವನ್ನು ಬದಲಾಯಿಸಿಕೊಳ್ಳುತ್ತೇವೆ. ಬೇಸಿಗೆ ಬಂದ ತಕ್ಷಣ ದೇಹವನ್ನು ತಂಪಾಗಿರಿಸಿಕೊಳ್ಳುವ ಆಹಾರದ ಮೊರೆ ಹೋದರೆ, ಚಳಿಗಾಲ ಬರುತ್ತಿದ್ದಂತೆ ದೇಹವನ್ನು ಬೆಚ್ಚಗಿಡುವ ಆಹಾರಕ್ರಮಕ್ಕೆ ಶರಣಾಗುತ್ತೇವೆ. ಮಳೆಗಾಲದಲ್ಲಿ ದೇಹ ರೋಗಗಳಿಗೆ ತುತ್ತಾಗದಂತೆ ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಆಹಾರಗಳನ್ನೂ ನಮ್ಮ ನಿತ್ಯಾಹಾರದಲ್ಲಿ ಸೇರಿಸಿಕೊಳ್ಳುತ್ತೇವೆ. ತಂಪಾದ ಗುಣಗಳುಳ್ಳ ಹಣ್ಣುಹಂಪಲು ತರಕಾರಿಗಳನ್ನು ಬೇಸಿಗೆಯಲ್ಲಿ ಸಾಕಷ್ಟು ಸೇವಿಸುತ್ತೇವೆ. ಆದರೆ, ನಿತ್ಯವೂ ಅಡುಗೆ ಮಾಡುವ ಕೆಲವು ಆಹಾರಗಳ, ಮಸಾಲೆ ಪದಾರ್ಥಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮಸಾಲೆಗಳು ನಮ್ಮ ದೇಹವನ್ನು ಇನ್ನಷ್ಟು ಉಷ್ಣಗೊಳಿಸಬಹುದು, ಹಾಗಾಗಿ ಇವು ಬೇಸಿಗೆಗೆ ಒಳ್ಳೆಯದಲ್ಲ ಎಂದೂ ಹಲವರು ಆಂದುಕೊಳ್ಳಬಹುದು. ಆದರೆ ಇದು ತಪ್ಪು ಗ್ರಹಿಕೆ. ನಿತ್ಯ ಬಳಕೆಯ ಮಸಾಲೆಗಳೇ ನಮ್ಮನ್ನು ಎಲ್ಲ ಕಾಲದಲ್ಲೂ ಸಮಾನವಾಗಿ ಪೊರೆಯುತ್ತವೆ. ಮುಖ್ಯವಾಗಿ, ಬೇಸಿಗೆಯಲ್ಲೂ, ಇವು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾಗಿರುವಂಥದ್ದು ಎಂದರೆ ನಂಬುತ್ತೀರಾ?

1. ಸೋಂಪು: ಬಡೇಸೊಪ್ಪು ಅಥವಾ ಸೋಂಪು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಗೆ ಬರುವ ಮಸಾಲೆಗಳಲ್ಲಿ ಒಂದು. ಹೊಟೇಲುಗಳಲ್ಲಿ ಊಟದ ನಂತರ ಸೋಂಪು ಕೊಡುವ ಅಭ್ಯಾಸವಿದೆ. ಹೆಚ್ಚು ತಿಂದರೆ, ಜೀರ್ಣಕ್ರಿಯೆ ಸರಾಗವಾಗಿ ನಡೆಯಲಿ ಎಂದರೆ ಈ ಸೋಂಪು ಉಪಕಾರಕ್ಕೆ ಬರುತ್ತದೆ. ಅಸಿಡಿಟಿ, ತಲೆಸುತ್ತು, ನಿತ್ರಾಣ ಹಾಗೂ ಮಲಬದ್ಧತೆಯನ್ನು ಹೊಡೆದೋಡಿಸುವ ಶಕ್ತಿ ಇದಕ್ಕಿದೆ. ಇದಕ್ಕೆ ದೇಹದ ಕಶ್ಮಲಗಳನ್ನೆಲ್ಲ ಹೊರಕ್ಕೆ ಕಳಿಸಿ ಡಿಟಾಕ್ಸ್‌ ಮಾಡುವ ತಾಕತ್ತೂ ಇದೆ. ಹಾಗಾಗಿ ಇದರ ಪ್ರಯೋಜನ ಪಡೆದುಕೊಳ್ಳಲು ನಿತ್ಯವೂ ರಾತ್ರಿ ಅರ್ಧ ಚಮಚ ಸೋಂಪು ನೆನೆ ಹಾಕಿ ಬೆಳಗ್ಗೆ ಇದರ ನೀರನ್ನು ಕುಡಿದರೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.

2. ಕೊತ್ತಂಬರಿ: ಕೊತ್ತಂಬರಿ ಬೆವರನ್ನು ಉತ್ಪಾದಿಸುತ್ತದೆ. ಬೆವರು ಒಳ್ಳೆಯದು. ಇದು ದೇಹದ ಕಶ್ಮಲಗಳನ್ನು ಹೊರಕ್ಕೆ ಕಳಿಸುತ್ತದೆ. ಜೊತೆಗೆ ದೇಹದ ಉಷ್ಣತೆಯನ್ನೂ ನಿಯಂತ್ರಿಸುತ್ತದೆ. ಕೊತ್ತಂಬರಿಯಲ್ಲಿ ವಿಟಮಿನ್‌ ಎ, ಸಿ ಹಾಗೂ ಕೆ ಇದ್ದು, ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಸೋಂಪಿನಂತೆಯೇ ಇದನ್ನೂ ರಾತ್ರಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.

3. ಪುದಿನ: ಪುದಿನ ಎಲೆಗಳನ್ನು ಯಾವಾಗಲೂ ಬೇಸಿಗೆ ಡ್ರಿಂಕ್‌ಗಳನ್ನು ಅಲಂಕರಿಸಲು ಬಳಸುವುದನ್ನು ನೋಡಿರುತ್ತೇವೆ. ಆದರೆ, ಪುದಿನ ಕೇವಲ ಅಲಂಕಾರಕ್ಕಲ್ಲ. ಬೇಸಿಗೆಗೆ ಅತ್ಯಗತ್ಯವಾಗಿ ಸೇವಿಸಬಹುದಾದ ಕೂಲಿಂಗ್‌ ಗುಣಗಳುಳ್ಳ ಮೂಲಿಕೆಯಿದು. ಇದರಲ್ಲಿ ಮೆಂಥಾಲ್‌ ಇರುವುದರಿಂದ ಸೇವಿಸುವಾಗಲೇ ತಂಪಿನ ಅನುಭವವೂ ಆಗುತ್ತದೆ. ದೇಹದ ಉಷ್ಣತೆಯನ್ನು ಸಮತೋಲನಗೊಳಿಸುವ ತಾಕತ್ತಿರುವ ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಚರ್ಮದ ಸೌಂದರ್ಯಕ್ಕೆ ಅತ್ಯಂತ ಒಳ್ಳೆಯದು.

ಇದನ್ನೂ ಓದಿ: Summer Tips: ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂಬುದರ 7 ಸೂಚನೆಗಳು!

4. ಏಲಕ್ಕಿ: ಏಲಕ್ಕಿ ದೇಹದ ಉಷ್ಣತೆಯನ್ನು ಸಮತೋಲನಗೊಳಿಸುವ ತಾಕತ್ತನ್ನು ಹೊಂದಿದೆ. ಇದು ಹೊಟ್ಟೆಯ ಸಮಸ್ಯೆಗಳು, ಜೀರ್ಣಕ್ರಿಯೆ ತಂದರೆಗಳು, ಆಸಿಡಿಟಿ ಹಾಗೂ ಎದೆಯುರಿ ಇವುಗಳನ್ನು ಏಲಕ್ಕಿ ಶಮನಗೊಳಿಸುತ್ತದೆ. ದೇಹದ ವಾತ, ಪಿತ್ತ ಹಾಗೂ ಕಫ, ಈ ಮೂರೂ ದೋಷಗಳನ್ನು ಸಮತೋಲನಗೊಳಿಸುವ ತಾಕತ್ತು ಏಲಕ್ಕಿಗಿದೆ ಎಂದು ಆಯುರ್ವೇದವೂ ಹೇಳುತ್ತದೆ. ಬಾಯಿ ವಾಸನೆಯಂತ ಸಮಸ್ಯೆಗೂ ಇದು ಉತ್ತಮ ಪರಿಹಾರ. ಉತ್ತಮ ಡಿಟಾಕ್ಸ್‌ ಕೂಡಾ ಹೌದು.

5. ಜೀರಿಗೆ: ಜೀರಿಗೆ ನಿತ್ಯವೂ ಉಪಯೋಗಕ್ಕೆ ಬರುವ ಮಸಾಲೆ. ಇದೂ ಕೂಡಾ ಉತ್ತಮ ಡಿಟಾಕ್ಸ್‌ ಆಗಿ ವರ್ತಿಸುತದೆ. ಬೇಸಿಗೆಯಲ್ಲಿ, ಮಜ್ಜಿಗೆಗೆ, ಜಲ್‌ ಜೀರಾ ಇತ್ಯಾದಿಗಳಲ್ಲಿ ದೇಹಕ್ಕೆ ತಂಪೆರೆಯುವ, ಹೊಟ್ಟೆಯ ಸಮಸ್ಯೆಗಳನ್ನು ಸದಾ ಪರಿಹರಿಸುವ ಆಪತ್ಬಾಂಧವ. ಎದೆಯುರಿ, ಅಸಿಡಿಟಿ ಇವೆಲ್ಲವುಗಳಿಗೆ ರಾಮಬಾಣ. ದೇಹಕ್ಕೆ ಶಕ್ತಿ ನೀಡಿ, ದಿಢೀರ್‌ ಚೈತನ್ಯ ನೀಡುವ ಶಕ್ತಿಯೂ ಇದಕ್ಕಿದೆ. ತಂಪುಕಾರಕ ಕೂಡಾ ಹೌದು.

ಮಸಾಲೆಗಳಾದ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಕರಿಮೆಣಸು ಇತ್ಯಾದಿಗಳು ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತವೆ. ಇತ್ಯಾದಿಗಳನ್ನು ಬೇಸಿಗೆಯ ಸಂದರ್ಭ ಕಡಿಮೆ ಬಳಸಬಹುದು. ಆದರೆ ಬಳಸಲೇಬಾರದು ಎಂದಿಲ್ಲ. ಮಿತವಾಗಿ ಬಳಸಿದರೆ, ಬೇಸಿಗೆಯ ಅಡ್ಡ ಪಡಿಣಾಮಗಳಿಂದ ಬಚಾವಾಗಬಹುದು.

ಇದನ್ನೂ ಓದಿ: Indian spices | ಮಸಾಲೆ ಪರಿಮಳ ಸದಾ ಘಮಘಮ ಅಂತಾ ಇರಬೇಕಿದ್ದರೆ ಹೀಗೆ ಮಾಡಿ

Exit mobile version