Site icon Vistara News

Summer Hair Care: ಬೇಸಿಗೆಯಲ್ಲಿ ಕೂದಲನ್ನು ನಯವಾಗಿರಿಸಲು ಕಷ್ಟವಾಗುತ್ತಿದೆಯೆ? ಈ ಸಲಹೆಗಳನ್ನು ಪಾಲಿಸಿ

Hair Care

ಬೇಸಿಗೆಯ ಹೊಡೆತಕ್ಕೆ ಸಿಲುಕಿ ನಲುಗದಂತೆ ನಮ್ಮ ಕೂದಲನ್ನು ಕಾಪಾಡಿಕೊಳ್ಳುವುದು ಹೇಗೆ? ಬೆವರಿನಿಂದ ತಲೆಯ ಚರ್ಮ ಪದೇಪದೆ ಕೊಳಕಾಗಿ, ಅಂಟಾಗಿ, ನವೆಯುಂಟಾಗಿ, ಹೊಟ್ಟಾಗಿ ತೊಂದರೆ ಕೊಡುತ್ತದೆ. ಉರಿಯುತ್ತಿರುವ ಗೋಳದಂಥ ಸೂರ್ಯನ ಅತಿನೇರಳೆ ಕಿರಣಗಳಿಂದ ಕೂದಲಿಗೆ ಹಾನಿಯಾಗಬಹುದು, ಒಣಗಿ ತುಂಡಾಗಬಹುದು. ಬೇಸಿಗೆಯಲ್ಲಿ ಪೋಷಕಾಂಶಗಳ ಕೊರತೆಯಾಗಿ ಕೂದಲು ಸಿಕ್ಕಾಪಟ್ಟೆ ಉದುರಲೂಬಹುದು. ಇಂಥ ಸಂದರ್ಭದಲ್ಲಿ (summer hair care) ಏನು ಮಾಡಬಹುದು?

ತಲೆಸ್ನಾನ

ಬೆವರಿನಿಂದ ಕೂದಲು ಒದ್ದೆಯಾಗುತ್ತಿರುವಾಗ ಪದೇಪದೆ ತಲೆಸ್ನಾನ ಮಾಡಬೇಕೆನ್ನಿಸಿದರೆ ಸ್ವಲ್ಪ ತಾಳಿ. ಅತಿಯಾದ ಕ್ಲೋರಿನ್ ಅಂಶವೂ ಕೂದಲಿಗೆ ತೊಂದರೆ ಕೊಡುತ್ತದೆ. ಅಷ್ಟೇ ಅಲ್ಲ, ದಿನದಿನವೂ ತಲೆಸ್ನಾನ ಮಾಡುವುದು ಅರೆತಲೆ ಶೂಲೆಯಂಥ ಸಮಸ್ಯೆಗಳನ್ನು ತರಬಹುದು. ತಲೆ ಸ್ನಾನದ ಹೊತ್ತಿನಲ್ಲಿ ಸೌಮ್ಯವಾದ ಶಾಂಪೂ ಬಳಸಿ, ಕಂಡೀಶನರ್‌ ಉಪಯೋಗಿಸಬಹುದು. ರಾಸಾಯನಿಕ ಕಂಡೀಶನರ್‌ಗಳು ಬೇಡವೆಂದಿದ್ದರೆ ಮದರಂಗಿ, ಭೃಂಗರಾಜವನ್ನು ಬಳಸಬಹುದು.

ಬಿಸಿ ಬೇಡ

ಯಾವುದೋ ಮದುವೆ ಮನೆಗೆಂದು ಅಲಂಕರಿಸಿಕೊಳ್ಳುತ್ತಿದ್ದೀರಾದರೆ, ಸ್ವಲ್ಪ ಜಾಗ್ರತೆ ಮಾಡಿ. ಹೀಟ್‌ ಸ್ಟೈಲಿಂಗ್‌, ಅಂದರೆ ಡ್ರೈಯರ್‌, ಸ್ಟ್ರೇಟ್ನರ್‌, ಕೂದಲು ಸುರುಳಿ ಮಾಡುವುದು ಮುಂತಾದ ಹೀಟೀಂಗ್‌ ಉಪಕರಣಗಳನ್ನು ಬೇಸಿಗೆಯಲ್ಲಿ ಆದಷ್ಟೂ ಬಳಸಬೇಡಿ. ಸಾಮಾನ್ಯ ಜೆಲ್‌ಗಳಿಂದಲೂ ಸುಂದರ ಕೇಶಾಲಂಕಾರ ಸಾಧ್ಯವಿದೆ. ಕೂದಲಿಗೆ ಈ ಬೇಸಿಗೆಯಲ್ಲಿ ಮತ್ತೂ ಬಿಸಿ ಸೋಕಿಸುವುದು ಬೇಡ.

ಮುಚ್ಚಿಕೊಳ್ಳಿ

ತಲೆಗೂದಲಿಗೂ ಪರದೆ ಮುಚ್ಚಿಕೊಳ್ಳಬಹುದು. ಬಿಸಿಲಿಗೆ ಹೋಗುವಾದ ತೆಳುವಾದ ಸ್ಕಾರ್ಫ್‌ ಅಥವಾ ಕ್ಯಾಪ್‌ ಬಳಸುವುದರಿಂದ ಅತಿನೇರಳೆ ಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳಬಹುದು. ಮಾತ್ರವಲ್ಲ, ಕೂದಲು ಒಣಗಿ, ಬಣ್ಣಗೆಟ್ಟು ತುಂಡಾಗುವುದನ್ನೂ ತಪ್ಪಿಸಬಹುದು. ಸಾಮಾನ್ಯವಾಗಿ ಕೂದಲ ತುದಿಗಳು ಸಪೂರಾಗಿ, ಕವಲೊಡೆದು ಹೋಗುವ ಸಂಭವವಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಕತ್ತರಿಸಿ. ಇದರಿಂದ ಕೂದಲು ಸಿಕ್ಕಾಗಿ, ಬಾಚುವಷ್ಟರಲ್ಲಿ ಇನ್ನಷ್ಟು ತುಂಡಾಗಿ, ಉದುರುವುದನ್ನು ತಡೆಯಬಹುದು.

ಮಸಾಜ್ ಮತ್ತು ಹೇರ್‌ಪ್ಯಾಕ್

ಕೂದಲ ಬುಡಗಳಿಗೆ ಮಸಾಜ್‌ ಬೇಕೆಬೇಕು. ಶುದ್ಧ ಕೊಬ್ಬರಿ ಎಣ್ಣೆಯೂ ಈ ಕೆಲಸಕ್ಕೆ ಅನುಕೂಲವೇ. ಅದಿಲ್ಲದಿದ್ದರೆ ನಿಮ್ಮಷ್ಟದ ಯಾವುದಾದರೂ ಕೇಶ ತೈಲ ಬಳಸಿ ತಲೆಗೆ ಮಸಾಜ್‌ ಮಾಡಿ. ಇದರಿಂದ ಕೂದಲ ಬುಡಕ್ಕೆ ಚೆನ್ನಾಗಿ ರಕ್ತಸಂಚಾರವಾಗಿ, ಬೆಳವಣಿಗೆ ಹೆಚ್ಚುತ್ತದೆ. ಜೊತೆಗೆ, ಮೆಂತೆ, ಮೊಸರು, ಮೊಟ್ಟೆ ಮುಂತಾದ ವಸ್ತುಗಳಿಂದ ಹೇರ್‌ಪ್ಯಾಕ್‌ ಮಾಡುವುದರಿಂದ ಕೂದಲು ಒಣಗಿ ತುಂಡಾಗುವುದನ್ನು ತಪ್ಪಿಸಬಹುದು.

ಆಹಾರ

ತಿನ್ನುವ ಆಹಾರ ಸಮತೋಲಿತವಾಗಿರಬೇಕು. ಸಾಕಷ್ಟು ಪ್ರೊಟೀನ್‌, ಖನಿಜ ಮತ್ತು ಜೀವಸತ್ವಗಳು ಇಲ್ಲದಿದ್ದರೆ ಕೂದಲುದುರುವುದನ್ನು ತಡೆಯಲು ಸಾಧ್ಯವಿಲ್ಲ. ಆಹಾರದಲ್ಲಿ ಸಾಕಷ್ಟು ಬೀಜಗಳು, ಸೊಪ್ಪು, ಇಡೀ ಧಾನ್ಯಗಳನ್ನು ಸೇರಿಸಿಕೊಳ್ಳಿ. ಕುಡಿಯುವ ನೀರಿನ ಪ್ರಮಾಣ ಕಡಿಮೆಯಾದರೂ ಕೂದಲಿಗೆ ಹಾನಿಯಾಗುತ್ತದೆ. ಬೇಸಿಗೆಯಲ್ಲಿ ಉಂಟಾಗುವ ನಿರ್ಜಲೀಕರಣವಂತೂ ಕೂದಲಿಗೆ ಸಿಕ್ಕಾಪಟ್ಟೆ ತೊಂದರೆ ನೀಡುತ್ತದೆ. ಹಾಗಾಗಿ ನೀರು-ಆಹಾರ ಎರಡೂ ಗಮನಿಸಬೇಕಾದ ಅಂಶಗಳು.

ನಿದ್ದೆ

ದೇಹದ ಯಾವುದೇ ಭಾಗಕ್ಕೆ ಆಗುವ ಹಾನಿಯನ್ನು ರಿಪೇರಿ ಮಾಡುವ ಸಮಯವೆಂದರೆ ನಿದ್ದೆ. ದಿನವಿಡೀ ನಾವು ಮಾಡುವ ಕೆಲಸಗಳಿಂದ ಉಂಟಾಗುವ ಮಾನಸಿಕ, ದೈಹಿಕ ಒತ್ತಡಗಳನ್ನು ನಿವಾರಿಸಿ ದೇಹವನ್ನು ಸಮಸ್ಥಿತಿಗೆ ತರುವಲ್ಲಿ ನಿದ್ದೆ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಹಾರ್ಮೋನುಗಳ ಏರುಪೇರನ್ನೂ ಸರಿದೂಗಿಸಬಹುದು. ಹಾಗಾಗಿ ಪ್ರತಿದಿನ ಕಣ್ತುಂಬಾ ನಿದ್ದೆ ಮಾಡಿ.

ಇದನ್ನೂ ಓದಿ: Whooping Cough Outbreak: ಹರಡುತ್ತಿದೆ ನಾಯಿಕೆಮ್ಮು; ಈ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

Exit mobile version