Site icon Vistara News

Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

Summer Health Tips

ದೇಹದ ಪ್ರತಿರೋಧಕ ಶಕ್ತಿಯನ್ನು ಕುಂದಿಸುವಂಥ ಹವಾಮಾನ ಯಾವುದೇ ದಿನಗಳಲ್ಲೂ ಎದುರಾಗಬಹುದು. ಅದಕ್ಕೇನು ಮಳೆಯೇ ಬೇಕು. ಚಳಿಯೇ ಇರಬೇಕು ಎಂದಿಲ್ಲ. ಈ ಬಿರು ಬೇಸಿಗೆಯಲ್ಲೂ ಕಾಟ ಕೊಡುವ ವೈರಸ್‌ಗಳು ತಪ್ಪುವುದಿಲ್ಲ. ಇದಕ್ಕಾಗಿ ಭದ್ರವಾದ ಪ್ರತಿರೋಧಕ ವ್ಯವಸ್ಥೆಯನ್ನ ನಮ್ಮ ದೇಹ ಹೊಂದಬೇಕಾಗುತ್ತದೆ. ಅದಿಲ್ಲದಿದ್ದರೆ ಬಿಸಿಲಾಘಾತ, ನಿರ್ಜಲೀಕರಣದಿಂದಲೂ ತಪ್ಪಿಸಿಕೊಳ್ಳುವುದಕ್ಕೆ ದೇಹ ಸೋಲುತ್ತದೆ. ಇಂಥ ದಿನಗಳಲ್ಲಿ ನಮ್ಮ ನೆರವಿಗೆ ಬರುವುದು ಹುಳಿ-ಸಿಹಿಯ ಬೆಟ್ಟದ ನೆಲ್ಲಿಕಾಯಿ. ವಿಟಮಿನ್‌ ಸಿ ಅಂಶವನ್ನು ಹೇರಳವಾಗಿ ತುಂಬಿಕೊಂಡಿರುವ ಈ ಪುಟ್ಟ ಕಾಯಿಗಳನ್ನು ಹಲವು ರೀತಿಯಲ್ಲಿ ಸೇವಿಸುವುದರಿಂದ ಬಿಸಿಲ ದಿನಗಳಲ್ಲಿ ದೇಹ ನಿತ್ರಾಣಗೊಳ್ಳದಂತೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತವಾಗದಂತೆ (summer Health Tips) ಕಾಪಾಡಿಕೊಳ್ಳಬಹುದು. ಬಿಸಿಲಿನ ದಿನಗಳಿಗೆ ಪೂರಕವಾಗುವಂತೆ ನೆಲ್ಲಿಕಾಯಿಯನ್ನು ಬಳಸುವುದು ಹೇಗೆ?

ಪುದೀನಾ-ನೆಲ್ಲಿ ಪಾನಕ

ವಿಟಮಿನ್‌ ಸಿ, ಇ ಮತ್ತು ಎ, ನಾರು ಹಾಗೂ ವಿಟಮಿನ್‌ ಬಿ1 ಸತ್ವಗಳನ್ನು ಈ ಪಾನಕ ಭರಪೂರ ತುಂಬಿಕೊಂಡಿರುತ್ತದೆ. ಬೇಸಿಗೆಯಲ್ಲಿ ಕಾಡುವ ಜೀರ್ಣಾಂಗಗಳ ಸಮಸ್ಯೆಯಿಂದ ಮುಕ್ತಿ ನೀಡುವಂಥ ಪೇಯವಿದು. ಬೆಟ್ಟದ ನೆಲ್ಲಿಕಾಯಿಗೆ ಚಿಟಿಕೆ ಉಪ್ಪು ಮತ್ತು ಪುದೀನಾ ಎಲೆಗಳನ್ನು ಸೇರಿಸಿ ರುಬ್ಬಿ, ರಸ ತೆಗೆಯಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಅಥವಾ ಹಾಗೆಯೇ ಕುಡಿಯುವವರು ಅಂತೆಯೇ ಕುಡಿಯಬಹುದು.

ನೆಲ್ಲಿ ಸ್ಮೂದಿ

ಇದಕ್ಕಾಗಿ ಮೊಸರು, ಬಾಳೆಹಣ್ಣು, ಕೊಂಚ ಪಾಲಕ್‌ ಎಲೆಗಳು ಮತ್ತು ನೆಲ್ಲಿಕಾಯಿಯನ್ನು ಬ್ಲೆಂಡರ್‌ಗೆ ಹಾಕಿ ತಿರುಗಿಸಿ. ಇದರನ್ನು ಸೋಸಬಾರದು. ಎಲ್ಲ ನಾರಿನಂಶ ಇರುವಂತೆಯೇ ಸೇವಿಸಬೇಕು. ಇದರಿಂದ ಬಾಳೆಹಣ್ಣಿನಲ್ಲಿರುವ ಶರ್ಕರಪಿಷ್ಟಗಳು, ಮೊಸರಿನಲ್ಲಿರುವ ಕೊಬ್ಬು ಮತ್ತು ಪ್ರೊಬಯಾಟಿಕ್‌ ಅಂಶಗಳು, ಪಾಲಕ್‌ನಲ್ಲಿರುವ ಖನಿಜಗಳು ಎಲ್ಲವೂ ನೆಲ್ಲಿ ಕಾಯಿಯ ಜೊತೆಗೆ ಹೊಟ್ಟೆ ಸೇರುತ್ತವೆ. ತೂಕ ಇಳಿಸುವವರು ಇದನ್ನು ಬೆಳಗಿನ ಉಪಹಾರವಾಗಿಯೂ ಸೇವಿಸಬಹುದು.

ನೆಲ್ಲಿ ಸಲಾಡ್‌

ಬೇಸಿಗೆಯಲ್ಲಿ ತಂಪಾದ ಸಲಾಡ್‌ಗಳು ಎಲ್ಲರಿಗೂ ಇಷ್ಟವಾಗುವಂಥವು. ಅದರಲ್ಲೂ ಹುಳಿ-ಸಿಹಿ ರುಚಿಯ ಸಲಾಡ್‌ಗಳು ಮತ್ತೂ ಇಷ್ಟವಾಗುತ್ತವೆ. ಇದಕ್ಕಾಗಿ ನೆಲ್ಲಿಕಾಯಿಯ ಜೊತೆ ಸೌತೇಕಾಯಿ, ದಾಳಿಂಬೆ, ಸೇಬು ಮತ್ತು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತೆಗೆದುಕೊಳ್ಳಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಕೊಂಚ ಕಾಳುಮೆಣಸಿನ ಪುಡಿ ಸೇರಿಸಿ. ನಿಮ್ಮ ರುಚಿಕರ ಸಲಾಡ್‌ ಸಿದ್ಧ.

ನೆಲ್ಲಿ ಪಾಪ್ಸಿಕಲ್‌

ತಂಪಾದ ಏನನ್ನು ಕೊಟ್ಟರೂ ಕೈಯೊಡ್ಡುವಂಥ ಸ್ಥಿತಿ ಈ ಬೇಸಿಗೆಯಲ್ಲಿ. ಅದರಲ್ಲೂ ಫ್ರೋಜನ್‌ ತಿಂಡಿಗಳು ಮತ್ತೂ ಇಷ್ಟವಾಗುತ್ತವೆ. ಪಾಪ್ಸಿಕಲ್‌ ರೂಪದಲ್ಲಿ ನಮಗೆ ಪ್ರಿಯವಾದ್ದನ್ನು ಸವಿಯುವುದು ಬೇರೆಯದೇ ಸೊಗಸನ್ನು ನೀಡುತ್ತದೆ. ನೆಲ್ಲಿಕಾಯನ್ನು ರುಬ್ಬಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನುತುಪ್ಪ ಮತ್ತು ಸಿಹಿ ಮೊಸರು ಬೆರೆಸಿ. ಈ ಮಿಶ್ರಣವನ್ನು ಪಾಪ್ಸಿಕಲ್‌ ಅಚ್ಚಿಗೆ ಸುರಿಯಿರಿ. ಫ್ರೀಜ್‌ ಮಾಡಿ ತೆಗೆದು ಬಾಯಿ ಚಪ್ಪರಿಸಿದರಾಯಿತು.

ಡಿಟಾಕ್ಸ್‌ ನೀರು

ಬರೀ ನೀರು ಕುಡಿಯುವುದಕ್ಕೆ ಸಾಧ್ಯವಿಲ್ಲ ಎನಿಸಿದರೆ, ಐದು ಲೀ ಪಾತ್ರೆಯಲ್ಲಿ ಹತ್ತಿಪ್ಪತ್ತು ಪುದೀನಾ ಎಲೆಗಳು, ಸೌತೆಕಾಯಿ ಗಾಲಿಗಳು ಮತ್ತು ನೆಲ್ಲಿಯ ತುಂಡುಗಳನ್ನು ಧಾರಾಳವಾಗಿ ಸೇರಿಸಿ. ಒಂದೆರಡು ತಾಸು ಹಾಗೆಯೇ ಬಿಡಿ. ನಂತರ ದಿನವಿಡೀ ಈ ನೀರು ಕುಡಿದು ಸಂತೃಪ್ತಿಯಿಂದಿರಿ. ಇದರಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ.

ನೆಲ್ಲಿ ಐಸ್‌ ಟೀ

ಆರೆಂಟು ಪುದೀನಾ ಚಿಗುರುಗಳ ಜೊತೆಗೆ ನೆಲ್ಲಿ ಕಾಯಿಯ ತುಣುಕುಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದು ಆರಿದ ಮೇಲೆ ಕೊಂಚ ಜೇನುತುಪ್ಪ ಸೇರಿಸಿ, ಫ್ರಿಜ್‌ನಲ್ಲಿಡಿ. ಬೇಕಾದಾಗ ಈ ಈ ಪೇಯವನ್ನು ತೆಗೆದು, ಕುಡಿದು ಸಂಭ್ರಮಿಸಿ. ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸುವುದೂ ಸಮಸ್ಯೆಗಳನ್ನು ತರಬಹುದು. ಈಗಾಗಲೇ ತೂಕ ಕಡಿಮೆ ಇರುವವರು ಇನ್ನೂ ತೂಕ ಇಳಿದ ನಿದಾರ್ಶನಗಳಿವೆ. ಹಾಗಾಗಿ ತೂಕ ಇಳಿಸುವವರು ಇದನ್ನು ಸೇವಿಸಿದಷ್ಟು, ಕಡಿಮೆ ತೂಕದವರಿಗೆ ಬೇಕಾಗುವುದಿಲ್ಲ.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

Exit mobile version