ಪುಟ್ಟ ಮಕ್ಕಳಿಗೆ ಘನ ಆಹಾರವನ್ನು ಪ್ರಾರಂಭಿಸುವ ದಿನಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವುದು ಹುರಿದ ಹಿಟ್ಟುಗಳು ಅಥವಾ ಹುರಿಟ್ಟುಗಳು. ಧಾನ್ಯಗಳು, ಸಿರಿಧಾನ್ಯಗಳು, ಕಾಳುಗಳನ್ನು ತೊಳೆದು, ಮೊಳಕೆ ಬರಿಸಿ, ಅದನ್ನು ಹುರಿದು, ಹಿಟ್ಟು ಮಾಡಲಾಗುತ್ತದೆ. ಈ ಪೌಷ್ಟಿಕ ಪುಡಿಯನ್ನು ಅಂಬಲಿ ಅಥವಾ ಗಂಜಿಯಂತೆ ಕಾಯಿಸಿ ಪುಟ್ಟ ಮಕ್ಕಳಿಗೆ ಉಣಿಸಲಾಗುತ್ತದೆ. ಜೊತೆಗೆ ಹಾಲು, ಬೆಲ್ಲ ಎಂದೆಲ್ಲ ಹಾಕಿ, ರುಚಿಕಟ್ಟಾಗಿಸಿದರೆ ಪುಟಾಣಿಗಳು ತಿನ್ನುವುದಕ್ಕೆ ʻಒಲ್ಲೆʼ ಎನ್ನುವುದಿಲ್ಲ. ಅದನ್ನು ಪುಟ್ಟ ಮಕ್ಕಳಿಗೆ ಮಾತ್ರವೇ ಬಳಸಬೇಕೆಂದಿಲ್ಲ. ಈ ಪೌಷ್ಟಿಕ ಪುಡಿಯನ್ನು ಹಲವು ರೀತಿಯಲ್ಲಿ ಉಪಯೋಗಿಸಬಹುದು. ಅದರಲ್ಲೂ ಬೇಸಿಗೆ ದಿನಗಳಲ್ಲಿ ಊಟ ಮಾಡುವುದೇ ಬೇಡ ಎನಿಸುವಾಗ, ಕುಡಿಯುವುದಕ್ಕೆ ಏನಾದರೂ ಇದ್ದೆ ಸಾಕು ಎನಿಸುವಾಗ ಇಂಥ ಹುರಿಹಿಟ್ಟುಗಳು ದೇಹಕ್ಕೆ ಚೈತನ್ಯ ನೀಡುತ್ತವೆ. ಇದನ್ನು ಅಂಬಲಿಯಂತೆ ಮಾಡಿ ಕುಡಿಯಬಹುದು; ಹಾಲು ಸೇರಿಸಿ ಸೇವಿಸಬಹುದು; ಮಜ್ಜಿಗೆ ಬೆರೆಸಿ ಕುಡಿಯಬಹುದು. ಬೇರೆ ವ್ಯಂಜನಗಳೊಂದಿಗೆ ಬೆರೆಸಿ ಖೀರಿನಂತೆ ಮಾಡಿದರೆ ರುಚಿ ಹೆಚ್ಚು. ಇದರಿಂದ ಬೇಶಿಗೆಯ ದಿನಗಳಲ್ಲಿ ದೇಹಕ್ಕೆ ಬೇಕಾದ ಸತ್ವಗಳು ಸುಲಭವಾಗಿ ದೊರೆಯುತ್ತವೆ ಮತ್ತು ಪಚನಕ್ಕೂ ಕಷ್ಟವಾಗುವುದಿಲ್ಲ. ಏನು ಈ (Summer Health Tips) ಹುರಿಹಿಟ್ಟಿನ ಲಾಭಗಳು?
ಹಲವು ಬಗೆ
ಈ ಹಿಟ್ಟಿನಲ್ಲೇ ಹಲವು ಬಗೆಗಳಿವೆ. ಆದರೆ ಜನಪ್ರಿಯವಾಗಿ ಬಳಕೆಯಲ್ಲಿರುವುದು ರಾಗಿ ಹುರಿಹಿಟ್ಟು. ಅದಲ್ಲದೆ, ಕಡಲೆ, ಹೆಸರು, ಹುರುಳಿ ಮುಂತಾದ ಕಾಳುಗಳು, ಗೋದಿ, ಜೋಳದಂಥ ಧಾನ್ಯಗಳು, ಚಿಯಾ, ಅಗಸೆಯಂಥ ಬೀಜಗಳು, ಬಾದಾಮಿ, ಗೋಡಂಬಿ ಮುಂತಾದ ಯಾವುದನ್ನೂ ಈ ಹಿಟ್ಟಿಗೆ ಹುರಿದು ಸೇರಿಸಿಕೊಳ್ಳಬಹುದು. ಇದರಿಂದ ಪೌಷ್ಟಿಕಾಂಶ ಮತ್ತು ರುಚಿ ಹೆಚ್ಚುತ್ತದೆ. ಯಾವುದೆಲ್ಲ ಪರಿಕರಗಳನ್ನು ಇದಕ್ಕೆ ಸೇರಿಸಲಾಗಿದೆ ಎನ್ನುವುದರ ಮೇಲೆ ಇದರ ಸತ್ವಗಳ ಏನೇನು ಎಂಬುದು ನಿರ್ಧಾರವಾಗುತ್ತದೆ.
ಸ್ನಾಯುಗಳಿಗೆ ಬೇಕು
ಈ ಹಿಟ್ಟಿನಲ್ಲಿ ಪ್ರೊಟೀನ್ ಸಾಂದ್ರವಾಗಿದೆ. ಚಿಕನ್, ಮೊಟ್ಟೆ, ಪನೀರ್‌ನಂಥ ಹೆಚ್ಚು ಕೊಬ್ಬಿರುವ ಆಹಾರಗಳು ಕೆಲವೊಮ್ಮೆ ಬಿರುಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಹಾಗೆಂದು ಪ್ರೊಟೀನ್ ಕಡಿಮೆಯಾದರೆ ದೇಹ ಸೊರಗುವುದು ಖಚಿತ. ಬದಲಿಗೆ, ಪ್ರೊಟಿನ್ಭರಿತವಾದ ಇಂಥ ಲಘು ಆಹಾರದ ಆಯ್ಕೆಗಳು ಬೇಸಿಗೆಗೆ ಸೂಕ್ತವಾದವು. ಇವು ದೇಹಕ್ಕೆ ಬೇಕಾದ ಪುಷ್ಟಿಯನ್ನು ನೀಡಿ, ದಿನವಿಡೀ ಚೈತನ್ಯಪೂರ್ಣವಾಗಿ ಇರುವಂತೆ ನೋಡಿಕೊಳ್ಳುತ್ತವೆ.
ಪಚನಕಾರಿ
ಧಾನ್ಯ, ಕಾಳುಗಳ ತೌಡಿನ ಜೊತೆಗೇ ಮಾಡಿರುವಂಥ ಪುಡಿಯಿದು. ಹಾಗಾಗಿ ಇದರಲ್ಲಿ ನಾರಿನಂಶವೂ ಹೇರಳವಾಗಿರುತ್ತದೆ. ಇದರಿಂದ ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಈ ಮೂಲಕ ಸತ್ವಗಳ ಹೀರಿಕೊಳ್ಳುವಿಕೆ ಸಹ ಹೆಚ್ಚುತ್ತದೆ. ಜೊತೆಗೆ ಅಧಿಕ ನಾರಿನಂಶದ ಆಹಾರದಿಂದ ಮಲಬದ್ಧತೆಯೂ ದೂರಾಗುತ್ತದೆ.
ಮಧುಮೇಹಿಗಳಿಗೆ ಸೂಕ್ತ
ಹುರಿಹಿಟ್ಟುಗಳ ಗ್ಲೈಸೆಮಿಕ್ ಸೂಚಿ ಕಡಿಮೆ. ಜೊತೆಗೆ ನಾರು, ಪ್ರೊಟೀನ್ ಮತ್ತು ಸಂಕೀರ್ಣಪಿಷ್ಟಗಳಿರುವ ಆಹಾರಗಳು ಮಧುಮೇಹಿಗಳಿಗೆ ಒಳ್ಳೆಯದು. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ದಿಢೀರ್ ಏರಿಕೆ ಆಗುವುದನ್ನು ತಡೆಯಬಹುದು. ಹುರಿಹಿಟ್ಟುಗಳಲ್ಲಿ ರಾಗಿ, ಜೋಳ ಮುಂತಾದ ಸಿರಿಧಾನ್ಯಗಳ ಪ್ರಮಾಣವನ್ನು ಹೆಚ್ಚಿಸಿದರೆ, ಅದನ್ನು ಪ್ರಮುಖ ಆಹಾರವಾಗಿಯೂ ಮಧುಮೇಹಿಗಳು ಬಳಸಬಹುದು.
ಹೃದಯದ ಮಿತ್ರ
ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಜೊತೆಗೆ, ಮೆಗ್ನೀಶಿಯಂ, ಪೊಟಾಶಿಯಂನಂಥ ಖನಿಜಗಳು ರಕ್ತದೊತ್ತಡ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ದೇಹದಲ್ಲಿರುವ ಅಧಿಕ ಕೊಬ್ಬಿನಂಶವನ್ನು ಕರಗಿಸಿ, ರಕ್ತದೊತ್ತಡವನ್ನೂ ನಿಯಂತ್ರಿಸಲು ನೆರವಾಗುವ ಮೂಲಕ, ಈ ಹಿಟ್ಟು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ತೂಕ ಇಳಿಗೆ
ಪ್ರೊಟೀನ್ ಮತ್ತು ನಾರು ಹೆಚ್ಚಿರುವ ಆಹಾರಗಳು ತೂಕ ಇಳಿಕೆಗೆ ಪೂರಕವಾದವು. ಇವುಗಳ ಜೊತೆಗೆ ಸರಳ ಪಿಷ್ಟದ ಆಹಾರದ ಬದಲಿಗೆ, ಸಂಕೀರ್ಣ ಪಿಷ್ಟವಿರುವ ಆಹಾರ ಬೇಕು. ಅವೆಲ್ಲವೂ ಹುರಿಹಿಟ್ಟಿನಲ್ಲಿ ಲಭ್ಯವಿದೆ. ಈ ಎಲ್ಲ ಅಂಶಗಳು ವಿಘಟನೆಗೊಂದು ರಕ್ತ ಸೇರಲು ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ. ಅಂದರೆ ಬೇಗ ಹಸಿವಾಗುವುದಿಲ್ಲ. ಹೆಚ್ಚು ಆಹಾರ ತಿನ್ನದಿದ್ದರೂ, ದೀರ್ಘ ಸಮಯದವರೆಗೆ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ.
ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ