ಸಾಸಿವೆಯಷ್ಟೇ ಚಿಕ್ಕದಾಗಿರುವ ಕಪ್ಪುಬಿಳುಪಿನ ಬಣ್ಣದ ಪುಟಾಣಿ ಚಿಯಾ ಬೀಜಗಳಲ್ಲಿರುವ ಶಕ್ತಿ ದೊಡ್ಡದು. ಇದರಲ್ಲಿರುವ ಅತ್ಯಧಿಕ ಖನಿಜಾಂಶ ಹಾಗೂ ಪೋಷಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಎಲ್ಲವನ್ನೂ ಪೂರೈಕೆ ಮಾಡುವುದಲ್ಲದೆ ಹೃದಯವನ್ನು ಚೆನ್ನಾಗಿಟ್ಟು, ಬೊಜ್ಜನ್ನೂ ದೂರವಿರಿಸುತ್ತದೆ. ಹಾಗಾಗಿಯೇ ಇದೊಂದು ಸೂಪರ್ ಫುಡ್.
ಇತ್ತೀಚೆಗಿನ ದಿನಗಳಲ್ಲಿ ಚಿಯಾ ಬೀಜಗಳ ಬಳಕೆ ಹಾಗೂ ಅವುಗಳ ಬಗ್ಗೆ ಜ್ಞಾನ ವೃದ್ಧಿಯಾಗುತ್ತಿದೆ. ಹಾಗಾಗಿ ಇದನ್ನು ಜನಸಾಮಾನ್ಯರು ನಿತ್ಯದ ಬಳಕೆಯಲ್ಲಿ ಬಳಸಲು ಆರಂಭಿಸಿದ್ದಾರೆ. ಹಾಗಾದರೆ ಈ ಚಿಯಾ ಬೀಜಗಳಿಂದ ದೊರೆಯುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.
೧. ಚಿಯಾ ಬೀಜಗಳಲ್ಲಿರುವ ಒಮೆಗಾ ೩ ಫ್ಯಾಟಿ ಸಿಡ್‌ಗಳು ಹೃದ್ರೋಗವನ್ನು ಹಾಗೂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಯಕೃತ್ತಿನಲ್ಲಿರುವ ಕೊಬ್ಬನ್ನು ಕಡಿಮೆ ಮಾಡಿ, ಎಲುಬಿಗೆ ಹೆಚ್ಚು ಶಕ್ತಿ ನೀಡುತ್ತದೆ. ಸುಕ್ಕು ಮತ್ತಿತರ ಚರ್ಮದ ಸಮಸ್ಯೆಗಳಿಗೋ ಇದು ಒಳ್ಳೆಯದು.
೨. ಚಿಯಾ ಬೀಜಗಳು ತೂಕ ಕಡಿಮೆ ಮಾಡುತ್ತದೆ. ಸದ್ಯಕ್ಕೆ ತೂಕ ಕಡಿಮೆ ಮಾಡುವ ಆಹಾರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಈ ಚಿಯಾ ಬೀಜಗಳು ಸದಾ ಟ್ರೆಂಡ್‌ನಲ್ಲೇ ಇರುತ್ತದೆ. ಚಿಯಾದಲ್ಲಿರುವ ನಾರಿನಂಶ ಕಡಿಮೆ ಕ್ಯಾಲರಿ ಇರುವುದರಿಂದ ತೂಕ ಹೆಚ್ಚಾಗದೆ, ದೇಹಕ್ಕೆ ಬೇಕಾದ ಪೋಷಕಾಂಶವೂ ಹೇರಳವಾಗಿ ಸಿಗುತ್ತದೆ. ಅಂದರೆ, ಸ್ವಲ್ಪ ಬೀಜಗಳಿಂದ ಹೊಟ್ಟೆ ತುಂಬಿದಂಥ ಫೀಲ್ ಸಿಗುತ್ತದೆ. ಹೀಗಾಗಿ ತೂಕ ಇಳಿಕೆಯಲ್ಲಿ ಇದರ ಪಾತ್ರ ದೊಡ್ಡದು.
೩. ಇದು ಪಚನಕ್ರಿಯೆಯನ್ನು ಉದ್ದೀಪಿಸುತ್ತದೆ. ಪ್ರತಿ ೨೮ ಗ್ರಾಂ ಚಿಯಾ ಬೀಜಗಳಲ್ಲಿ ೧೧ ಗ್ರಾಂ ನಾರಿನಂಶ ಇರುವುದರಿಂದ ಕೇವಲ ಒಮ್ಮೆ ಇದನ್ನು ತಿನ್ನುವ ಮೂಲಕ ಆ ದಿನಕ್ಕೆ ಬೇಕಾದ ಎಲ್ಲ ನಾರಿನಂಶವೂ ಒಮ್ಮೆಲೇ ಸಿಕ್ಕಂತಾಗುತ್ತದೆ. ಜೊತೆಗೆ ಇದರಲ್ಲಿ ಜಿಲೆಟಿನ್ ಮಾದರಿಯ ಶವೂ ಇರುವುದರಿಂದ ಇದು ಹೊಟ್ಟೆಗೆ ಹೋದ ಮೇಲೆ ತನ್ನ ಕೆಲಸ ಆರಂಭಿಸುತ್ತದೆ. ಹಾಗಾಗಿ ಪಚನಕ್ರಿಯೆ ಸರಾಗವಾಗಿ ಆಗುತ್ತದೆ.
೪. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡಿ ಹಲವು ರೋಗಗಳು ಬರದಂತೆ ಮುಂಚಿತವಾಗಿಯೇ ತಡೆಯುತ್ತದೆ. ಫ್ರೀ ರ್ಯಾಡಿಕಲ್ಸ್ ದೇಹಕ್ಕೆ ಮಾರಕವಾಗಿದ್ದು ಇದರಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳೂ ಬರುತ್ತವೆ. ಆದರೆ, ಚಿಯಾ ಬೀಜಗಳಲ್ಲಿರುವ ಆಂಟಿ ಆಕ್ಸಿಡೆಂಟ್ಸ್‌ಗಳು ಇವುಗಳಿಂದ ರಕ್ಷಣೆ ನೀಡುತ್ತವೆ.
೫. ನಿದ್ರಾಹೀನತೆಯಿಂದ ಬಳಲುವವರಿಗೆ ಇದರಿಂದ ಪರಿಹಾರ ಸಿಗುತ್ತದೆ.
೬. ಇದರಲ್ಲಿರುವ ಕ್ಯಾಲ್ಶಿಯಂ, ಝಿಂಕ್, ಫಾಸ್ಪರಸ್, ವಿಟಮಿನ್ ಎ ಎಲ್ಲವೂ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವು ಬಾಯಿಯ ಕೆಟ್ಟ ವಾಸನೆಯನ್ನೂ ತೊಲಗಿಸಲು ಸಹಾಯ ಮಾಡುತ್ತದೆ.
೭. ಪ್ರತಿನಿತ್ಯ ಒಬ್ಬ ಮನುಷ್ಯನಿಗೆ ಬೇಕಾಗುವ ಕ್ಯಾಲ್ಶಿಯಂನ ಶೇ.೧೮ರಷ್ಟನ್ನು ಚಿಯಾ ಬೀಜವೇ ಪೂರೈಸುವುದರಿಂದ ಇದು ಎಲುಬಿನ ಆರೋಗ್ಯಕ್ಕೆ ಒಳ್ಳೆಯದು. ಇದು ಕೇವಲ ಕ್ಯಾಲ್ಶಿಯಂ ಮಾತ್ರವಲ್ಲದೆ, ಕಾರ್ಬೋಹೈಡ್ರೇಟ್, ಕೊಬ್ಬು, ನಾರು, ಮೆಗ್ನೀಶೀಯಂ, ಮ್ಯಾಂಗನೀಸ್, ಫಾಸ್ಪರಸ್, ಪ್ರೊಟೀನ್ ಹಾಗೂ ವಿಟಮಿನ್ ಎಯನ್ನೂ ಹೊಂದಿದೆ.
ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು
೮. ಚಿಯಾ ಬೀಜಗಳು ಮಧುಮೇಹವನ್ನೂ ನಿಯಂತ್ರಿಸುತ್ತದೆ. ಇದನ್ನು ಕರಗಿಸಲು ದೇಹ ತನ್ನ ಸಕ್ಕರೆಯ ಅಂಶವ್ನ್ನು ಹೆಚ್ಚು ಮಾಡಬೇಕಿಲ್ಲ ಹಾಗೂ ದೇಹ ಸಹಜವಾಗಿಯೇ ಇನ್ಸುಲಿನ್ ಉತ್ಪಾದನೆ ಹೆಚ್ಚು ಮಾಡಬೇಕಾಗುವುದಿಲ್ಲ. ಹಾಗಾಗಿ ಚಿಯಾದ ಇದರ ನಿಯಮಿತ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಹತೋಟಿಯಲ್ಲಿರುತ್ತದೆ.
ಅತಿಯಾದರೆ ಅಮೃತವೂ ವಿಷ ಅಂತಾರಲ್ಲ, ಹಾಗೆ ಅತಿಯಾಗಿ ಚಿಯಾ ಬೀಜ ಸೇವನೆ ಒಳ್ಳೆಯದಲ್ಲ. ಯಾಕೆಂದರೆ ಇದರ ಅಡ್ಡ ಪರಿಣಾಮಗಳೂ ಇವೆ. ನಾರಿನಂಶ ದೇಹಕ್ಕೆ ಒಳ್ಳೆಯದು ನಿಜ. ಆದರೆ ಅತಿಯಾದ ನಾರಿನಂಶದಿಂದ ಹೊಟ್ಟೆನೋವು, ಹೊಟ್ಟೆ ಉಬ್ಬರಿಸಿದಂಥ ಅನುಭವ ಇತ್ಯಾದಿ ಆಗಬಹುದು.
ಈ ಪುಟ್ಟ ಪುಟ್ಟ ಬೀಜಗಳನ್ನು ತಿನ್ನುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡಬಹುದು. ಈ ಬೀಜದಲ್ಲಿರುವ ಎಲ್ಲ ಪೋಷಕಾಂಶಗಳನ್ನು ನಮ್ಮ ದೇಹ ತೆಗೆದುಕೊಳ್ಳಬೇಕೆಂದರೆ ಈ ಬೀಜಗಳನ್ನು ನೆನೆಸಿ ಕೊಂಚ ರುಬ್ಬಿ ಆಹಾರವಾಗಿ ತೆಗೆದುಕೊಂಡರೆ ಉತ್ತಮ. ಬಹಳಷ್ಟು ಮಂದಿಗೆ ಕೇವಲ ಆರೋಗ್ಯಕರ ಆಹಾರವನ್ನು ಮಾತ್ರ ತಿಂದುಂಡು ಇರುವುದು ಸಾಧ್ಯವಾಗುವುದಿಲ್ಲ. ಪ್ಯಾನ್ ಕೇಕ್, ಮಫಿನ್, ವ್ಯಾಫಲ್ ಇತ್ಯಾದಿಗಳನ್ನು ಆಗಾಗ ತಿನ್ನುತ್ತಿರಬೇಕೆನ್ನಿಸುತ್ತದೆ. ಅಂಥವರು ಮಫಿನ್, ಕೇಕ್ ಮಾಡುವಾಗಿ ಚಿಯಾ ಬೀಜಗಳನ್ನೂ ಸೇರಿಸಿ ಪೋಷಕಾಂಶವೂ ದಕ್ಕುವಂತೆ ಮಾಡಿಕೊಳ್ಳಬಹುದು. ತರಕಾರಿ, ಹಣ್ಣು ಸಲಾಡ್ ಜೊತೆ ಸೇರಿಸಿ ತಿನ್ನಬಹುದು. ಅಥವಾ ಹಣ್ಣಿನ ಜಾಮ್ ಮಾಡುವುದಿದ್ದರೆ ಇದನ್ನು ಸೇರಿಸಬಹುದು. ಅಥವಾ ಇದರ ಪುಡ್ಡಿಂಗ್ ಕೂಡಾ ಮಾಡಿಡಬಹುದು. ಸ್ಮೂದಿ ಮಾಡಿ ಕುಡಿಯಬಹುದು. ಅಥವಾ ಇದರ ಆರೋಗ್ಯಕರ ಅಂಶ ದಿನವೂ ಆರೋಗ್ಯಕರ ರೀತಿಯಲ್ಲೇ ಸಿಗಬೇಕೆಂದರೆ ಬೆಳಗ್ಗೆದ್ದು ಒಂದು ಚಮಚ ಚಿಯಾ ಬೀಜಗಳನ್ನು ದಿನವೂ ಅರ್ಧ ಗಂಟೆ ನೆನೆ ಹಾಕಿ, ಅದಕ್ಕೆ ನಿಂಬೆ ಹಣ್ಣು, ಜೇನುತುಪ್ಪ ಸೇರಿಸಿ ಕುಡಿಯಬಹುದು. ಹೀಗೆ ಮಾಡುವುದು ತೂಕ ಇಳಿಕೆಯಲ್ಲಿ ನೆರವಾಗುತ್ತದೆ.
ಇದನ್ನೂ ಓದಿ | Almond benefits | ಬಾದಾಮಿ ಎಷ್ಟು ತಿನ್ನಬೇಕು? ಇಲ್ಲಿದೆ ಉತ್ತರ