Site icon Vistara News

Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

Superfoods

ಇತ್ತೀಚೆಗಿನ ದಿನಗಳಲ್ಲಿ, ಒಳ್ಳೆಯ ಆಹಾರ ಯಾವುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ಕೊಂಚ ಸಮಯ ಬೇಕು. ಯಾಕೆಂದರೆ ಸೂಪರ್‌ ಫುಡ್‌ (Superfoods) ಹೆಸರಿನಲ್ಲಿ ಇಂದು ಸಾಕಷ್ಟು ಆಹಾರಗಳು ಮಾರುಕಟ್ಟೆಯನ್ನು ಆಕ್ರಮಿಸಿ ಜನರನ್ನು ದಾರಿ ತಪ್ಪಿಸುತ್ತಿವೆ. ಯಾವುದೇ ಸೂಪರ್‌ ಮಾರ್ಕೆಟ್‌ಗೆ ನೀವು ಹೋದರೂ ಅಲ್ಲೊಂದಿಷ್ಟು ಆಹಾರ ನಮ್ಮನ್ನು ʻಆರೋಗ್ಯಕರ; ಎಂಬ ಹೆಸರಿನಲ್ಲಿ ಆಕರ್ಷಿಸುತ್ತದೆ. ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಇವುಗಳಲ್ಲಿದೆ ಎಂದು ಹೇಳುವ ಆಹಾರಗಳನ್ನು ನಾವು ಮನೆಗೆ ಕೊಂಡು ತಂದು ಬಳಸುತ್ತೇವೆ. ಆ ಮೂಲಕ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಸಿಗುತ್ತಿದೆ ಎಂಬ ಭ್ರಮೆಯಲ್ಲೇ ಬದುಕುತ್ತೇವೆ. ಆದರೆ, ಇಂತಹ ಆಹಾರಗಳಲ್ಲಿ ಪೋಷಕಾಂಶಗಳ ಜೊತೆಜೊತೆಗೆ, ನಮ್ಮ ದೇಹಕ್ಕೆ ಅಗತ್ಯವಿಲ್ಲದೆ ಕೆಲವು ವಸ್ತುಗಳೂ ಸೇರಿರುತ್ತವೆ. ಇವುಗಳಿಂದ ಒಳ್ಳೆಯದಾಗುವ ಜೊತೆಗೆ ಕೆಲವು ಕೆಟ್ಟ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ. ಬನ್ನಿ, ಸೂಪರ್‌ ಫುಡ್‌ ಹೆಸರಿನಲ್ಲಿ ನಾವು ಸೇವಿಸುವ ಯಾವೆಲ್ಲ ಆಹಾರಗಳು ನಿಜವಾಗಿಯೂ ಸೂಪರ್‌ಫುಡ್‌ಗಳಲ್ಲ ಎಂಬುದನ್ನು ನೋಡೋಣ.

ಗ್ರೀನ್‌ ಟೀ

ನಿಮಗೆ ಆಶ್ಚರ್ಯವಾದರೂ ಸತ್ಯವೇ. ಗ್ರೀನ್‌ ಟೀ ಖಂಡಿತವಾಗಿಯೂ ಸೂಪರ್‌ ಫುಡ್‌ ಅಲ್ಲ. ಹಲವರಿಗೆ ನಿತ್ಯವೂ ಆಗಾಗ ಗ್ರೀನ್‌ ಟೀ ಕುಡಿಯುವ ಅಭ್ಯಾಸವಿರಬಹುದು. ರುಚಿಗಾಗಿ ಅಲ್ಲ, ದೇಹಕ್ಕೆ ಒಳ್ಳೆಯದು, ತೂಕ ಇಳಿಸಬಹುದು ಎಂಬ ಕಾರಣಕ್ಕೆ. ಆದರೆ, ಇವು ಖಂಡಿತವಾಗಿಯೂ ತೂಕ ಇಳಿಸಲಾರವು. ನಿಮಗೆ ಇದು ರುಚಿಯಾಗಿ ಅನಿಸಿ ದಿನಕ್ಕೆ ಒಂದೆರಡು ಬಾರಿ ಕುಡಿದರೆ ಅಡ್ಡಿಯಿಲ್ಲ. ಆದರೆ, ಪದೇ ಪದೇ ಕುಡಿಯುವುದರಿಂದ ತೂಕ ಇಳಿಯಲಾರದು. ಇದರಲ್ಲೂ ಕೆಫೀನ್‌ ಇದೆ. ಇದರ ಬದಲಾಗಿ ಆರೋಗ್ಯದ ದೃಷ್ಟಿಯಿಂದ ಕೆಲವು ಹರ್ಬಲ್‌ ಚಹಾಗಳನ್ನು ಹೀರಬಹುದು.

ಇದನ್ನೂ ಓದಿ: Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

ಪ್ಯಾಕೇಜ್ಡ್‌ ಜ್ಯೂಸ್‌ಗಳು

ಶೇ.100ರಷ್ಟು ಹಣ್ಣಿನ ರಸ ಇದೆ ಎಂದು ಜಾಹಿರಾತುಗಳನ್ನು ಕೊಟ್ಟು, ಆಕರ್ಷಿಸುವ ಪ್ಯಾಕೇಜ್ಡ್‌ ಜ್ಯೂಸ್‌ಗಳು ಖಂಡಿತವಾಗಿಯೂ ಸೂಪರ್‌ ಫುಡ್‌ ಆಗಿರಲಾರದು. ಅವುಗಳಲ್ಲಿ ನಿಜವಾದ ಹಣ್ಣಿನ ಅಂಶಗಳಿದ್ದರೂ, ನಾರಿನಂಶವನ್ನು ತೆಗೆದಿರುತ್ತಾರೆ. ಜೊತೆಗೆ ಸಾಕಷ್ಟು ಕೃತಕ ಬಣ್ಣಗಳು ಹಾಗೂ ಎಮಲ್ಸಿಫೈಯರ್‌ಗಳನ್ನು ಸೇರಿಸಿರಲಾಗುತ್ತದೆ. ಮಕ್ಕಳಿಗಂತೂ ಇದು ಖಂಡಿತವಾಗಿಯೂ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ. ನಿಮಗೆ ಹಣ್ಣಿನ ಪೋಷಕಾಂಶಗಳು ಬೇಕಾಗಿದ್ದರೆ ಹಣ್ಣನ್ನೇ ಹಾಗೆಯೇ ತಿನ್ನಿ.

ಹೆಲ್ತ್‌ ಡ್ರಿಂಕ್‌ಗಳು

ಮಾರುಕಟ್ಟೆಯಲ್ಲಿ ಪ್ರೊಟೀನ್‌, ಪೋಷಕಾಂಶಗಳ ಹೆಸರಿನಲ್ಲಿ ದೊರಕುವ ಹೆಲ್ತ್‌ ಡ್ರಿಂಕ್‌ಗಳು ನಿಜಕ್ಕೂ ಸೂಪರ್‌ ಫುಡ್‌ಗಳಲ್ಲ. ಇಂತಹ ಪುಡಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಪುಡಿ, ಸಕ್ಕರೆ ಹಾಗೂ ಕೃತಕ ಫ್ಲೇವರ್‌ಗಳು ಇರುತ್ತವೆ. ಅವು ನಿಮ್ಮ ಮಕ್ಕಳು ಕುಡಿಯುವ ಹಾಲನ್ನು ಇನ್ನಷ್ಟು ರುಚಿಯನ್ನಾಗ ಮಾಡಬಹುದೇ ಹೊರತು, ಮತ್ತಷ್ಟು ಪೋಷಕಾಂಶಯುಕ್ತವಾಗಿ ಮಾಡಲಾರವು ಎಂಬುದನ್ನು ನೆನಪಿಡಿ. ಇದಕ್ಕೆ ಬದಲಾಗಿ ,ಮನೆಯಲ್ಲೇ ಹೆಲ್ತ್‌ ಡ್ರಿಂಕ್‌ ಪುಡಿಗಳನ್ನು ಮಾಡಿಟ್ಟುಕೊಳ್ಳಬಹುದು. ನಿಜವಾದ ಸೂಪರ್‌ಫುಡ್‌ಗಳು ನಾವು ನಿತ್ಯವೂ ಬಳಸುವ ಸಾಧಾರಣವಾದ ಆಹಾರಗಳೇ ಆಗಿವೆ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ನೈಸರ್ಗಿಕವಾದ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ನಾರಿನಂಶ, ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆಯೋ ಅವು ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತವೆ. ಅವುಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಕಡಿಮೆ ಕ್ಯಾಲರಿಯನ್ನು ಹೊಂದಿರುತ್ತವೆ. ಹಾಗೂ ದೇಹಕ್ಕೆ ಒಳ್ಳೆಯದನ್ನೇ ಬಯಸುತ್ತವೆ ಎಂಬುದನ್ನು ಸದಾ ನೆನಪಿನಲ್ಲಿಡಿ.

Exit mobile version