Site icon Vistara News

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

Sweat Problem

ಬಿರುಬೇಸಿಗೆಯಲ್ಲಿ ಯಾರಿಗೆ ಬೆವರುವುದಿಲ್ಲ ಹೇಳಿ! ಅದರಲ್ಲೂ ತುಂಬಿದ ಬಸ್‌, ಕಿಕ್ಕಿರಿದು ನೆರೆದಿರುವ ಜನಸಂದಣಿಯ ನಡುವೆ ಇರುವುದು ಸುಲಭದ ಮಾತಲ್ಲ. ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಕೆಲವರಿಗೆ ಕಡಿಮೆ ಬೆವರಿದರೆ, ಇನ್ನೂ ಕೆಲವರಿಗೆ ಬೆವರುವುದೇ ಒಂದು ಸಮಸ್ಯೆ. ಇದಕ್ಕೆ ಕಾರಣಗಳು ಅನೇಕ. ಕೆಲವರ ಆಹಾರಭ್ಯಾಸದಿಂದ ಈ ಸಮಸ್ಯೆ ಕಾಡಿದರೆ, ಇನ್ನೂ ಕೆಲವರಿಗೆ ಬೊಜ್ಜು, ಹೃದಯದ ಸಮಸ್ಯೆ, ಥೈರಾಯ್ಡ್‌ ಸಮಸ್ಯೆ, ಒತ್ತಡ, ಮಧುಮೇಹ, ಮೆನೋಪಾಸ್‌ ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಂದಲೂ ಹೀಗಾಗುತ್ತದೆ. ಆದರೆ, ಬೆವರಿನ ದುರ್ಗಂಧದಿಂದ ಪಾರಾಗಲು ಅನೇಕರು ಹಲವು ವಿಧಾನಗಳಿಂದ ಪ್ರಯತ್ನಿಸುತ್ತಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಬಗೆಬಗೆಯ ಡಿಯೋಡರೆಂಟ್‌ ಹಾಗೂ ಪರಿಮಳ ದ್ರವ್ಯಗಳ ಮೂಲಕ ಉತ್ತರ ಸಿಗುತ್ತದೆಯಾದರೂ, ಅವೆಲ್ಲ ತಾತ್ಕಾಲಿಕ ಉತ್ತರಗಳಾದುವು. ಕೆಲವು ನೈಸರ್ಗಿಕ ವಿಧಾನಗಳಿಂದ ಬೆವರಿನ ದುರ್ಗಂಧಕ್ಕೆ ಮುಕ್ತಿ ಹಾಡಬಹುದು. ಆ ಕೆಲವು ಉಪಾಯಗಳು (sweat problem) ಇಲ್ಲಿವೆ.

ಆಪಲ್‌ ಸೈಡರ್‌ ವಿನೆಗರ್

ಆಪಲ್‌ ಸೈಡರ್‌ ವಿನೆಗರ್‌ನಲ್ಲಿ ಆಸ್ಟ್ರಿಂಜೆಂಟ್‌ ಗುಣಗಳಿರುವುದರಿಂದ ಇದು ನಮ್ಮ ದೇಹದಲ್ಲಿ ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ ದುರ್ಗಂಧವನ್ನೂ ಕಡಿಮೆ ಮಾಡುತ್ತದೆ. ಇದರ ಆಂಟಿ ಪರ್ಸ್ಪಿರೆಂಟ್‌ ಗುಣಗಳು ಚರ್ಮದ ಮೇಲಿರುವ ಬೆವರಿನ ರಂಧ್ರಗಳನ್ನು ಮುಚ್ಚುವಂತೆ ಮಾಡುವುದರಿಂದ ದೇಹದ ಪಿಎಚ್‌ ಮಟ್ಟ ಸಮತೋಲನ ಕಾಯ್ದುಕೊಳ್ಳುತ್ತದೆ. ಒಂದು ಸಣ್ಣ ಬೌಲ್‌ನಲ್ಲಿ ಆಪಲ್‌ ಸೈಡರ್‌ ವಿನೆಗರ್‌ ಅನ್ನು ಸ್ವಲ್ಪ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ. ನಂತರ ಒಂದು ಹತ್ತಿಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ತೆಗೆದು ಬೆವರು ಹೆಚ್ಚು ಬರುವ ಜಾಗಗಳಲ್ಲಿ ಹಚ್ಚಿಕೊಳ್ಳಿ. ಇದನ್ನು ನಿತ್ಯವೂ ಬಳಸುವುದರಿಂದ ಬೆವರಿನ ಸಮಸ್ಯೆ ಕಡಿಮೆಯಾಗಬಹುದು.

ಬೇಕಿಂಗ್‌ ಸೋಡಾ

ಕೇವಲ ಕೇಕ್‌ಗಷ್ಟೇ ಬೇಕಿಂಗ್‌ ಸೋಡಾದ ಪ್ರಯೋಜನ ಎಂದು ನೀವಂದುಕೊಂಡರೆ ತಪ್ಪಾಗುತ್ತದೆ. ಇದಕ್ಕೆ ಕೆಟ್ಟವಾಸನೆಯನ್ನು ಹೀರಿಕೊಳ್ಳುವ ಒಂದು ಅದ್ಭುತ ಗುಣವಿದೆ. ಹಾಗಾಗಿ ಇದು ನೈಸರ್ಗಿಕವಾದ ಡಿಯೋಡರೆಂಟ್.‌ ಇದು ಆಲ್ಕಲೈನ್‌ ಗುಣಗಳನ್ನು ಹೊಂದಿರುವುದರಿಂದ ದೇಹದ ಬೆವರಿನ ಆಮ್ಲೀಯ ಗುಣಗಳನ್ನು ಸಮತೋಲನಗೊಳಿಸಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಸ್ವಲ್ಪ ಬೇಕಿಂಗ್‌ ಸೋಡಾವನ್ನು ತೆಗೆದುಕೊಂಡು ಅದನ್ನು ಹೆಚ್ಚು ಬೆವರಿನ ಸಮಸ್ಯೆಯಿರುವ ದೇಹದ ಭಾಗಗಳಿಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಸಂದರ್ಭ ಇದನ್ನು ಹಚ್ಚಿಕೊಂಡು ಬೆಳಗ್ಗೆ ತೊಳೆಯಿರಿ. ಹೀಗೆ ಕೆಲದಿನಗಳ ಕಾಲ ಮಾಡುತ್ತಾ ಬಂದರೆ, ನಿಮ್ಮ ಬೆವರಿನ ಸಮಸ್ಯೆ ಕಡಿಮೆಯಾಗುವುದು.

ತೆಂಗಿನೆಣ್ಣೆ ಹಾಗೂ ಕರ್ಪೂರ

ಕರ್ಪೂರ ಹಾಗೂ ತೆಂಗಿನೆಣ್ಣೆ ಇವೆರಡು ನಮ್ಮ ದೇಹದ ಬೆವರಿನ ಸಮಸ್ಯೆಗೆ ಅತ್ಯದ್ಭುತ ಪರಿಹಾರವನ್ನು ನೀಡುತ್ತದೆ. ತೆಂಗಿನೆಣ್ಣೆಯಲ್ಲಿ ಲಾರಿಕ್‌ ಆಸಿಡ್‌ ಇರುವುದರಿಂದ ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೆವರಿನ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಒಂದೆರಡು ಕರ್ಪೂರವನ್ನು ಸ್ವಲ್ಪ ತೆಂಗಿನೆಣ್ಣೆಯಲ್ಲಿ ಬೆರೆಸಿ ಅದನ್ನು ಬೆವರಿನ ಸಮಸ್ಯೆಯ ಭಾಗಗಳಿಗೆ ಹಚ್ಚಬಹುದು. ಈ ಎಣ್ಣೆ ದೇಹದ ಚರ್ಮದ ಮೇಲೆ ಒಂದು ಲಘುವಾದ ಘಮದೊಂದಿಗೆ ಇದ್ದು ಬೆವರಿನ ದುರ್ಗಂಧಕ್ಕೆ ಮುಕ್ತಿ ನೀಡುತ್ತದೆ.

ಬ್ಲ್ಯಾಕ್‌ ಟೀ

ಬ್ಲ್ಯಾಕ್‌ ಟೀಯಲ್ಲಿ ಆಂಟಿ ಪರ್ಸ್ಪಿರೆಂಟ್‌ ಗುಣಗಳಿರುವುದರಿಂದ ಇದೂ ಕೂಡಾ ಆಪಲ್‌ ಸೈಡರ್‌ ವಿನೆಗರ್‌ನಂತೆಯೇ ವರ್ತಿಸುತ್ತದೆ. ದೇಹದ ಬೆವರುಗ್ರಂಥಿಗಳ ಮೇಲೆ ಒಂದು ಪದರದಂತೆ ನಿಂತು ಬೆವರಿನ ಸಮಸ್ಯೆ ಕಡಿಮೆ ಮಾಡುತ್ತದೆ. ಬ್ಯ್ಲಾಕ್‌ ಟೀಯನ್ನು ಹೆಚ್ಚು ಬೆವರಿನ ಜಾಗಗಳಲ್ಲಿ ಹಚ್ಚುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಆಲೊವೆರಾ ಜೆಲ್

ಆಲೋವೆರಾ ಜೆಲ್‌ ತನ್ನ ಕೂಲಿಂಗ್‌ ಗುಣಗಳ ಮೂಲಕ ಚರ್ಮದ ಎಲ್ಲ ಬಗೆಯ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಬೆವರಿನ ಸಮಸ್ಯೆಯಿರುವ ಮಂದಿಯೂ ಆಲೊವೆರಾ ಜೆಲ್‌ ಅನ್ನು ಅತಿಯಾಗಿ ಬೆವರುವ ಜಾಗಗಳಲ್ಲಿ ಹಚ್ಚುವ ಮೂಲಕ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

Exit mobile version