Site icon Vistara News

Sweet Potato Benefits: ಸಿಹಿಗೆಣಸಿನಿಂದ ಕೇವಲ ಆರೋಗ್ಯವಷ್ಟೇ ಅಲ್ಲ, ಸೌಂದರ್ಯವನ್ನೂ ವೃದ್ಧಿಸಿಕೊಳ್ಳಿ!

sweet potato

ಎಲ್ಲ ಬಗೆಯ ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ಚರ್ಮದ ಹೊಳಪಿನ ಜೊತೆಗೆ ಆರೋಗ್ಯವೂ ಹೆಚ್ಚುತ್ತದೆ ಎಂಬ ಸತ್ಯ (health tips) ಎಲ್ಲರಿಗೂ ಗೊತ್ತಿರುವಂಥದ್ದೇ. ಎಲ್ಲ ಬಗೆಯ ಪೋಷಕಾಂಶಗಳೂ ದೇಹಕ್ಕೆ ಲಭ್ಯವಾಗಲು ನಾವು ಎಲ್ಲ ಬಗೆಯ ತರಕಾರಿಗಳನ್ನು ನಿತ್ಯವೂ ನಿಯಮಿತವಾಗಿ ಸೇವಿಸುತ್ತಿರಬೇಕು. ಅದರಲ್ಲೂ ಚರ್ಮದ ಆರೋಗ್ಯಕ್ಕೆ (skin health) ಬಹುಮುಖ್ಯವಾಗಿ ಹಸಿರು ಸೊಪ್ಪು ತರಕಾರಿಗಳ ಸೇವನೆ ಬಹಳ ಮುಖ್ಯ. ಅಷ್ಟೇ ಅಲ್ಲ, ಗಡ್ಡೆಗೆಣಸುಗಳೂ ಕೂಡಾ ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಮೂಲಗಳು. ಅವುಗಳ ಪೈಕಿ ಸಿಹಿಗೆಣಸು (Sweet Potato Benefits) ಕೂಡಾ ಪ್ರಮುಖವಾದುದು. ಹಾಗಾದರೆ ಬನ್ನಿ, ಸಿಹಿಗೆಣಸಿನಿಂದ ಸೌಂದರ್ಯಕ್ಕೆ ಆಗುವ ಲಾಭಗಳು (sweet potato beauty benefits) ಯಾವುವು ಎಂದು ನೋಡೋಣ.

1. ಸೂರ್ಯನ ಬಿಸಿಲಿನಿಂದಾಗುವ ಹಾನಿಯನ್ನು ತಪ್ಪಿಸುತ್ತದೆ: ಸಿಹಿಗೆಣಸು ಬೀಟಾ ಕೆರೋಟಿನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮುಂದೆ ವಿಟಮಿನ್‌ ಎ ಆಗಿ ಪರಿವರ್ತನೆ ಹೊಂದುವುದರಿಂದ ಹಾಗೂ ಈ ಆಂಟಿ ಆಕ್ಸಿಡೆಂಟ್‌ ಚರ್ಮಕ್ಕೆ ಸೂರ್ಯನಿಂದಾಗುವ ಹಾನಿಯನ್ನು ತಪ್ಪಿಸುತ್ತದೆ.

2. ಚರ್ಮಕ್ಕೆ ಹೊಳಪನ್ನು ನೀಡುತ್ತದೆ: ಬೀಟಾ ಕೆರೋಟಿನ್‌ ಹೆಚ್ಚಿರುವ ಆಹಾರಗಳು ಚರ್ಮಕ್ಕೆ ಹೊಳಪನ್ನು ನೀಡುತ್ತವೆ. ಸಿಹಿ ಗೆಣಸಿನಲ್ಲಿ ಬೀಟಾ ಕೆರೋಟಿನ್‌ ಇರುವುದರಿಂದ ಚರ್ಮಕ್ಕೆ ಇದು ಸಹಜ ಹೊಳಪನ್ನು ನೀಡುತ್ತದೆ. ಅಷ್ಟೇ ಅಲ್ಲ, ಚರ್ಮದ ನಿರಂತರ ಆರೋಗ್ಯ ಕಾಪಾಡುವಲ್ಲಿ ಇದು ಮುಖ್ಯಪಾತ್ರ ವಹಿಸಿ, ಆಗಾಗ ಆಗುವ ಹಾನಿಯನ್ನು ತಪ್ಪಿಸುತ್ತದೆ.

3. ಸುಕ್ಕಾಗುವುದನ್ನು ತಡೆಯುತ್ತದೆ: ಸಿಹಿಗೆಣಸಿನಲ್ಲಿ ವಿಟಮಿನ್‌ ಸಿ ಹೆಚ್ಚಿದೆ. ವಿಟಮಿನ್‌ ಸಿ ಗೆ ಕೊಲಾಜೆನ್‌ ಅನ್ನು ಸಮನ್ವಯಗೊಳಿಸುವ ತಾಕತ್ತಿರುವುದರಿಂದ ಚರ್ಮವನ್ನು ಮೃದುವಾಗಿ, ಒಣಕಲಾಗದಂತೆ ನೋಡಿಕೊಳ್ಳುತ್ತದೆ. ಯೌವನದಿಂದ ಕಂಗೊಳಿಸುವಂತೆ ಚರ್ಮವನ್ನು ಸುಕ್ಕಾಗದಂತೆ ಕಾಫಾಡಿಕೊಳ್ಳಲೂ ಇದು ಸಹಾಯ ಮಾಡುತ್ತದೆ.

4. ಕಪ್ಪುಕಲೆಗಳನ್ನು ತಡೆಯುತ್ತದೆ: ಸಿಹಿಗೆಣಸಿನಲ್ಲಿ ಆಂಥೋಸಯನಿನ್‌ ಇದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಗುಣಗಳಿವೆ. ಈ ಗುಣಕ್ಕೆ ಕಪ್ಪುಕಲೆಗಳನ್ನು ನಿವಾರಿಸುವ ತಾಕತ್ತಿದೆ.

ಇದನ್ನೂ ಓದಿ: Skin Health Tips: ಚರ್ಮದ ಆರೋಗ್ಯಕ್ಕೂ ಕಾರ್ಬೋನೇಟೆಡ್‌ ಪೇಯಗಳಿಗೂ ಏನು ಸಂಬಂಧ ಗೊತ್ತೇ?

5. ಕೂದಲಿಗೂ ಇದು ಒಳ್ಳೆಯದು: ಸಿಹಿಗೆಣಸಿನಲ್ಲಿ ಬೀಟಾ ಕೆರೋಟಿನ್‌ ಹೆಚ್ಚಿರುವುದರಿಂದ ಇದು ಕೂದಲುದುರುವುದನ್ನು ಕಡಿಮೆ ಮಾಡುತ್ತದೆ. ವಿಟಮಿನ್‌ ಎ ಹಾಗೂ ಸಿಯ ಹೊರತಾಗಿ ವಿಟಮಿನ್‌ ಬಿ ಹಾಗೂ ಇಯನ್ನೂ ಹೊಂದಿರುವುದರಿಂದ ಅಲ್ಲದೆ ಪೊಟಾಶಿಯಂ, ಮ್ಯಾಂಗನೀಸ್‌ ಮತ್ತಿತರ ಖನಿಜಾಂಶಗಳನ್ನೂ ಹೊಂದಿದೆ. ಈ ಪೋಷಕಾಂಶಗಳು ಚರ್ಮ ಹಾಗೂ ಕೂದಲ ಆರೋಗ್ಯವನ್ನು ನಿರಂತರವಾಗಿ ಕಾಪಾಡುತ್ತವೆ.

ಹಾಗಾದರೆ ಸಿಹಿಗೆಣಸನ್ನು ನಿತ್ಯಾಹಾರದಲ್ಲಿ ಬಳಸುವುದು ಹೇಗೆ ಎಂಬ ಗೊಂದಲಗಳೂ ನಿಮಗೆ ಉಂಟಾಗಬಹುದು. ಸಿಹಿಗೆಣಸಿನಲ್ಲಿ ಸಾಕಷ್ಟು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಆಲೂಗಡ್ಡೆಗೆ ಪರ್ಯಾಯವಾಗಿಯೂ ಇದನ್ನು ಆಗಾಗ ಬಳಸಿಕೊಳ್ಳಬಹುದು. ಸಿಹಿಗೆಣಸಿನ ಫಿಂಗರ್‌ ಚಿಪ್ಸ್‌, ಸಿಹಿಗೆಣಸಿನ ಚಿಪ್ಸ್‌, ಬಜ್ಜಿ ಇತ್ಯಾದಿಗಳು ರುಚಿಕರವಾಗಿರುತ್ತದೆ. ಸಿಹಿಗೆಣಸಿನ ಸಬ್ಜಿ ಮಾಡಬಹುದು ಅಥವಾ ಸುಮ್ಮನೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಂಜೆಯ ಸ್ನ್ಯಾಕ್‌ಗೆ ಸಿಪ್ಪೆ ಸುಲಿದುಕೊಂಡು ಹಾಗೆಯೇ ತಿನ್ನಬಹುದು. ಎಣ್ಣೆಯಲ್ಲಿ ಕರಿದು ತಿನ್ನುವ ಖಾದ್ಯಗಳ ಮೂಲಕ ಪೋಷಕಾಂಶ ನಷ್ಟ ಮಾಡಿ ಸೇವಿಸುವುದರಿಂದ ಅಥವಾ ಎಣ್ಣೆ ತಿಂಡಿಯ ಮೂಲಕ ಕ್ಯಾಲರಿ ಹೆಚ್ಚು ಮಾಡಿಕೊಳ್ಳುವ ಬದಲಾಗಿ ಆರೋಗ್ಯಕರ ರೆಸಿಪಿಗಳ ಮೂಲಕ ಇದರಲ್ಲಿರುವ ಪೋಷಕಾಂಶಗಳ ಉತ್ತಮ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ?

Exit mobile version