ಭಾರತೀಯ ಅಡುಗೆಗಳಲ್ಲಿ ನಾನಾ ರೀತಿಯ ಬೇಳೆ-ಕಾಳುಗಳಿಗೆ ಪ್ರಾಶಸ್ತ್ಯವಿದೆ. ಹಾಗೆಯೇ ಬೇಳೆ-ಕಾಳುಗಳ ಬಳಕೆಯ ವಿಧಾನಗಳಲ್ಲೂ ವೈವಿಧ್ಯತೆಯಿದೆ. ಕಾಳುಗಳನ್ನು ಅಡುಗೆಗೆ ನೇರವಾಗಿ ಬಳಸುವುದು ಮಾತ್ರವಲ್ಲದೆ, ಅವುಗಳನ್ನು ನೆನೆಸಿ ಮೊಳಕೆ ಬರಿಸಿ- ಹಸಿಯಾಗಿ ಮತ್ತು ಬೇಯಿಸಿ- ಎರಡೂ ರೀತಿಗಳಲ್ಲಿ ಉಪಯೋಗಿಸಲಾಗುತ್ತದೆ. ಮೊಳಗೆ ಕಾಳುಗಳ ವಿಷಯಕ್ಕೆ ಬಂದರೆ ಹೆಸರು ಕಾಳು, ಹುರುಳಿ ಕಾಳು, ಕಡಲೆ ಕಾಳು, ಅಲಸಂದೆ ಕಾಳು- ಹೀಗೆ ಹಲವು ರೀತಿಯ ಕಾಳುಗಳ ಮೊಳಕೆ ಕಟ್ಟಲಾಗುತ್ತದೆ. ಮೊಳಕೆ ಕಾಳುಗಳಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ನೆನೆದು, ಉಬ್ಬಿ, ಮೊಳಕೆಯೊಡೆದು ಹಸಿರು-ಬಿಳಿ ಬಣ್ಣಗಳಲ್ಲಿ ಗೋಚರಿಸುವ ಹೆಸರು ಕಾಳುಗಳು ಪ್ರೊಟೀನ್‌ಗಳ ಗಣಿಯಿದ್ದಂತೆ. ಸಿ, ಇ ಮತ್ತು ಕೆ ವಿಟಮಿನ್‌ಗಳ ಆಗರವಾಗಿರುವ ಇವು, ಹಸಿಯಾಗಿ ತಿನ್ನಲೂ ಸಹ ರುಚಿಸುತ್ತವೆ. ನೂರು ಗ್ರಾಂ ಹೆಸರು ಕಾಳಿನಲ್ಲಿ ಶೇ. ೨೮ರಷ್ಟು ಪ್ರೊಟೀನ್, ಶೇ. ೬೦ರಷ್ಟು ಕಾರ್ಬೊಹೈಡ್ರೇಟ್ ಇದೆ. ಮಾತ್ರವಲ್ಲ, ಫೋಲೇಟ್‌ಗಳು, ಜಿಂಕ್, ಮೆಗ್ನೀಶಿಯಂ, ಪೊಟಾಶಿಯಂ ಇರುವ ಈ ಆಹಾರದಲ್ಲಿ ಕೊಬ್ಬಿನಂಶ ಶೂನ್ಯ.
ಮೊಳಕೆ ಕಡಲೆ ಕಾಳಿನಲ್ಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಲಭ್ಯವಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಹೊಂದಿರುವ ಈ ಕಾಳುಗಳಲ್ಲಿ ಶೇ. ೨೦ರಷ್ಟು ಸಾರಜನಕ ಮತ್ತು ಶೇ. ೬೧ರಷ್ಟು ಶರ್ಕರ ಪಿಷ್ಟಾದಿಗಳಿವೆ. ಪ್ರತಿ ನೂರು ಗ್ರಾಂ ಕಡಲೆಯಲ್ಲಿ ೪೯ ಮಿ. ಗ್ರಾಂ. ಕ್ಯಾಲ್ಸಿಯಂ, ೭.೨ ಮಿ.ಗ್ರಾಂ ಕಬ್ಬಿಣ ದೊರೆಯುತ್ತದೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳೂ ದೇಹಕ್ಕೆ ದೊರೆಯುತ್ತವೆ.
ಮೊಳಕೆ ಹುರುಳಿ ಕಾಳು ಸಹ ಪ್ರೊಟೀನ್ ಸಮೃದ್ಧವಾಗಿರುವ ಆಹಾರ. ಇದು ಸತ್ವಯುತ ಆಹಾರ ಮಾತ್ರವಲ್ಲದೆ, ಹಲವಾರು ಔಷಧೀಯ ಗುಣಗಳನ್ನೂ ಹೊಂದಿದೆ. ನೂರ ಗ್ರಾಂ ಹುರುಳಿಯಲ್ಲಿ ೨೨ ಗ್ರಾಂ ಪ್ರೊಟೀನ್, ಶೇ ೫೭ ರಷ್ಟು ಕಾರ್ಬೊಹೈಡ್ರೇಟ್, ೫ ಗ್ರಾಂ ನಾರು, ೨೮೭ ಮಿಗ್ರಾಂ ಕ್ಯಾಲ್ಶಿಯಂ ಮತ್ತು ೭ ಮಿಗ್ರಾಂ ಕಬ್ಬಿಣವನ್ನು ಹೊಂದಿದೆ. ಇದಲ್ಲದೆ ಕಿರು ಪೋಷಕಾಂಶಗಳನ್ನು ಸಾಕಷ್ಟು ಹೊಂದಿರುವ ಈ ಕಾಳನ್ನು ಶೀತ, ಕೆಮ್ಮು, ಬ್ರಾಂಕೈಟಿಸ್ ಮತ್ತು ಉಬ್ಬಸ ಮುಂತಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.
ಮೊಳಕೆ ಅಲಸಂದೆ ಕಾಳು ಸಹ ಪ್ರೊಟೀನ್ ಪ್ಯಾಕ್ ಇದ್ದಂತೆ. ನೂರು ಗ್ರಾಂ ಅಲಸಂದೆಯಲ್ಲಿ ಶೇ. ೨೫ರಷ್ಟು ಪ್ರೊಟೀನ್ ಮತ್ತು ಇದರ ಎರಡು ಪಟ್ಟು ಕಾರ್ಬೊಹೈಡ್ರೇಟ್ ದೊರೆಯುತ್ತದೆ. ಜೊತೆಗೆ, ನಾರು, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ರಂಜಕ, ವಿಟಮಿನ್ ಬಿ ಹಾಗೂ ಥಿಯಾಮಿನ್ ಅಂಶಗಳನ್ನು ಈ ಕಾಳುಗಳು ಹೊಂದಿವೆ.
ಇದನ್ನೂ ಓದಿ | World vision day | ನಿಮ್ಮ ಕಣ್ಣಿನ ದೃಷ್ಟಿಯ ಬಗೆಗೆ ಇರಲಿ ದೂರದೃಷ್ಟಿ!
ದ್ವಿದಳ ಧಾನ್ಯಗಳು ಯಾವುದೇ ಇರಲಿ, ಮೊಳಕೆ ಕಟ್ಟಿ ಉಪಯೋಗಿಸುವುದು ಪ್ರಯೋಜನಕಾರಿ ಎನ್ನುತ್ತಾರೆ ಆಹಾರ ತಜ್ಞರು. ಮೊಳಕೆ ಕಟ್ಟುವುದರಿಂದ ಈ ಕಾಳುಗಳಲ್ಲಿರುವ ಫೀನಾಲ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್ ಗಳ ಆಂಟಿ ಆಕ್ಸಿಡೆಂಟ್ ಚಟುವಟಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತದೆ. ಇದರಿಂದ ದೇಹಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಸಾಧ್ಯವಿದೆ.
ಕೆಲವೊಮ್ಮೆ ಮೊಳಕೆ ಕಾಳುಗಳ ಅತಿಯಾದ ಸೇವನೆಯಿಂದ ಮಲಬದ್ಧತೆ, ಅಜೀರ್ಣದಂಥ ಸಮಸ್ಯೆಗಳು ಬರಬಹುದು. ಹೊಟ್ಟೆ ಉಬ್ಬರಿಸಿದಂತಾಗಬಹುದು. ಕೆಲವೊಮ್ಮೆ ಕೆಲವು ಕಾಳುಗಳು ದೇಹಕ್ಕೆ ಒಗ್ಗದೆ ಇರಬಹುದು. ಯಾವ ಕಾಳಿನಿಂದ ಸಮಸ್ಯೆ ಉಂಟಾಗುತ್ತಿದೆ ಎಂಬ ಬಗ್ಗೆ ಗಮನ ಬೇಕಾಗುತ್ತದೆ. ಹಾಗಿಲ್ಲದಿದ್ದರೆ ಮೊಳಕೆ ಕಾಳುಗಳನ್ನು ಹಸಿಯಾಗಿ ಸೇವಿಸುವ ಬದಲು ಬೇಯಿಸಿ, ಉಳಿದೆಲ್ಲಾ ಆಹಾರ ಪದಾರ್ಥಗಳ ಜೊತೆಗೂ ಸೇವಿಸಬಹುದು.
ಇದನ್ನೂ ಓದಿ | Fried food | ಅತಿಯಾಗಿ ಎಣ್ಣೆತಿಂಡಿ ತಿಂದಿರಾ? ಹಾಗಾದರೆ ಹೀಗೆ ಮಾಡಿ!