Site icon Vistara News

ವಿಟಮಿನ್‌ ಡಿ ಕೊರತೆಯೇ? ಸೂರ್ಯನ ಬಿಸಿಲಿನೊಂದಿಗೆ ಇವನ್ನೆಲ್ಲ ತಿನ್ನಿ!

vitamin d

ನಿಮಗೆ ಆಗಾಗ ತಲೆನೋವು ಕಾಣಿಸುವುದು, ತಲೆ ಸುತ್ತಿದಂತಾಗುವುದು, ಅಥವಾ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಅಂತನಿಸಿದೆಯೇ? ಹಾಗಾದರೆ, ನಿಮ್ಮ ಈ ತೊಂದರೆಗೆ ಕಾರಣ ವಿಟಮಿನ್‌ ಡಿಯ ಕೊರತೆಯೂ ಆಗಿರಬಹುದು! ವಿಟಮಿನ್‌ ಡಿ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಕ್ಕರಷ್ಟೇ, ದೇಹವೂ ಸರಿಯಾದ ಪ್ರಮಾಣದಲ್ಲಿ, ಸಮರ್ಪಕವಾಗಿ ಕ್ಯಾಲ್ಶಿಯಂ, ಮೆಗ್ನೀಶಿಯಂ, ಫಾಸ್ಪರಸ್‌ ಮೊದಲಾದ ಖನಿಜಾಂಶಗಳನ್ನೂ ಹೀರಿಕೊಳ್ಳಲು ಸಹಾಯವಾಗುತ್ತದೆ. ದೇಹದಲ್ಲಿ ಎಲುಬು, ಹಲ್ಲು ಗಟ್ಟಿಯಾಗಿ ದೇಹ ಸರಿಯಾದ ರೀತಿಯಲ್ಲಿ ಇನ್ಸುಲಿನ್‌ ಉತ್ಪತ್ತಿ ಮಾಡುತ್ತಾ, ರಕ್ತದೊತ್ತಡ ಸಮತೋಲನದಲ್ಲಿರಿಸಿ ಶಕ್ತಿವರ್ಧಿಸಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ವಿಟಮಿನ್‌ ಡಿಯ ಪಾತ್ರ ದೊಡ್ಡದು.

ಸೂರ್ಯನ ಬಿಸಿಲಿನಿಂದ ಪಡೆಯಬಹುದಾದ ವಿಟಮಿನ್‌ ಡಿಯ ಕೊರತೆ ಇತೀಚೆಗೆ ಎಲ್ಲರಲ್ಲೂ ಕಾಣುತ್ತಿದೆ. ಸೂರ್ಯನ ಬಿಸಿಲಿಗೆ ಮೈಯೊಡಿದರೂ ವಿಟಮಿನ್‌ ಡಿ ಕೊರತೆ ಯಾಕೆ ಆಗುತ್ತಿದೆ ಎಂಬ ಪ್ರಶ್ನೆಯೂ ಹಲವರದಿರಬಹುದು. ಅಥವಾ, ನಾವು ಸೂರ್ಯನ ಬಿಸಿಲಿನಲ್ಲಿಯೇ ದಿನವಿಡೀ ಇರುತ್ತೇವೆ, ಹಾಗಾಗಿ ನಮಗೀ ಸಮಸ್ಯೆಯೇ ಬಾರದು ಎಂದುಕೊಂಡರೆ ಅದು ತಪ್ಪಾಗಬಹುದು. ಯಾಕೆಂದರೆ, ಪಡೆದ ವಿಟಮಿನ್‌ ಡಿಯನ್ನು ದೇಹ ಸಮರ್ಪಕವಾಗಿ ಹೀರಿಕೊಳ್ಳಲೂ ಕೂಡಾ ದೇಹಕ್ಕೆ ಕ್ಷಮತೆ ಬೇಕು. ಹಾಗಾದರೆ, ವಿಟಮಿನ್‌ ಡಿ ಸರಿಯಾಗಿ ಹೀರಿಕೊಳ್ಳಲು ಪೂರಕ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಹಲವು ಅಧ್ಯಯನಗಳ ಪ್ರಕಾರ ವಿಟಮಿನ್‌ ಡಿಯನ್ನು ಹೀರುವಲ್ಲಿ ಹಾಲು ಹಾಗೂ ನೀರು ಮುಖ್ಯ ಪಾತ್ರ ವಹಿಸುತ್ತವೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ನಿತ್ಯ ಬಳಕೆಯ ಜೊತೆ ಯಥೇಚ್ಛ ನೀರು ಕುಡಿಯುವುದು ಬಹಳ ಮುಖ್ಯ.

ಸರಿಯಾದ ಪ್ರಮಾಣದಲ್ಲಿ ವಿಟಮಿನ್‌ ಡಿ ದೇಹಕ್ಕೆ ಪೂರೈಕೆ ಆಗದಿದ್ದರೆ ನೂರೆಂಟು ಆರೋಗ್ಯದ ಸಮಸ್ಯೆಗಳು ಶುರುವಾಗುತ್ತವೆ. ಕೋವಿಡ್‌ ೧೯ ಸೇರಿದಂತೆ ಎಲ್ಲ ವಿಚಾರದಲ್ಲೂ ರೋಗನಿರೋಧಕ ಶಕ್ತಿ ದೇಹದಲ್ಲಿ ಕಡಿಮೆಯಾಗುತ್ತದೆ. ಹಾಗಾಗಿ ಮಾತ್ರೆಯ ರೂಪದಲ್ಲಿ ಹೆಚ್ಚುವರಿ ವಿಟಮಿನ್‌ ಡಿ ಸಪ್ಲಿಮೆಂಟ್‌ ವೈದ್ಯರ ಸಲಹೆಯಂತೆ ತೆಗೆದುಕೊಳ್ಳುವುದು ಬಹಳ ಸಾರಿ ಅನಿವಾರ್ಯವಾಗಿ ಬಿಡುತ್ತದೆ. ವಿಟಮಿನ್‌ ಡಿ ಮಾತ್ರೆ ಮದ್ದುಗಳ ಮೊರೆ ಹೋದರೂ ದೇಹವನ್ನು ನಾವು ನೈಸರ್ಗಿಕವಾಗಿ ವಿಟಮಿನ್‌ ಡಿ ಕೊರತೆಯಾಗದಂತೆ ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದೂ ಬಹಳ ಅತ್ಯವಶ್ಯಕ.

೧. ಮೊಸರು: ಮೊಸರಿನಲ್ಲಿ ಪ್ರೊಟೀನ್‌ ಇದೆ. ಮೊಸರನ್ನು ನಿತ್ಯ ಸೇವಿಸುವುದರಿಂದ ವಿಟಮಿನ್‌ ಡಿ ದೇಹಕ್ಕೆ ಪೂರೈಕೆಯಾಗುವ ಪ್ರಮಾಣವನ್ನು ನಾವು ಹೆಚ್ಚು ಮಾಡಬಹುದು.

೨. ಓಟ್ಸ್‌: ಧಾನ್ಯಗಳೇ ಇರುವ ಓಟ್ಸ್‌ ಕೂಡಾ ದೇಹಕ್ಕೆ ವಿಟಮಿನ್‌ ಡಿಯ ಮೂಲ. ಇದರಲ್ಲಿರುವ ಎಲ್ಲ ಬಗೆಯ ಖನಿಜಾಂಶಗಳೂ, ವಿಟಮಿನ್‌ಗಳೂ ದೇಹವನ್ನು ಸದೃಢ ಹಾಗೂ ಆರೋಗ್ಯಕರವಾಗಿರಿಸುವಲ್ಲಿ ಸಹಾಯ ಮಾಡುತ್ತದೆ.

೩. ಮೊಟ್ಟೆಯ ಹಳದಿ ಭಾಗ: ವಿಟಮಿನ್‌ ಡಿಯ ಇನ್ನೊಂದು ಮೂಲವೆಂದರೆ ಅದು ಮೊಟ್ಟೆಯ ಹಳದಿ ಭಾಗ. ಇದರಲ್ಲಿ ಹೇರಳವಾಗಿ ಕೊಬ್ಬು ಹಾಗೂ ಕ್ಯಾಲರಿ ಇದ್ದರೂ ಸಾಕಷ್ಟು ಪ್ರೊಟೀನ್‌ ಹಾಗೂ ಕಾರ್ಬೋಹೈಡ್ರೇಟ್‌ಗಳೂ ಇವೆಯೆಂಬ ಕಾರಣಕ್ಕೆ ಬಹಳ ಸಾರಿ ಇದನ್ನು ತಿನ್ನದೆ ಬಿಡುವವರೇ ಹೆಚ್ಚು. ಆದರೆ ಇವೂ ದೇಹಕ್ಕೆ ಅತೀ ಅಗತ್ಯ. ಆದರೆ, ದಿನಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿನ್ನಬೇಡಿ.

ಇದನ್ನೂ ಓದಿ | Health Tips | ಮೆದುಳಿಗೆ ಮರೆವು ಆವರಿಸದಿರಲು ಬೇಕು ವಿಟಮಿನ್‌ ಬಿ12

೪. ಕಿತ್ತಲೆ ಜ್ಯೂಸ್‌: ಅತ್ಯಂತ ಒಳ್ಳೆಯ ಹಣ್ಣಿನ ರಸಗಳ ಪೈಕಿ ಕಿತ್ತಲೆ ಹಣ್ಣಿನ ರಸವೂ ಒಂದು. ದೇಹಕ್ಕೆ ಬೇಕಾದ ಹಲವು ಉತ್ತಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿತ್ತಲೆ ಹಣ್ಣಿನ ರಸದಿಂದ ಬೆಳಗು ಆರಂಭಿಸುವುದು ಒಂದೊಳ್ಳೆ ಐಡಿಯಾ. ತಾಜಾ ಹಣ್ಣಿನ ರಸವೇ ಹೆಚ್ಚು ಉತ್ತಮ.

೫. ಮೀನು: ಯಥೇಚ್ಛ ವಿಟಮಿನ್‌ ಡಿ ಸಿಗಬೇಕಾದರೆ, ಮೀನಿನ ಮೊರೆ ಹೋಗುವುದು ಉತ್ತಮ. ಕ್ಯಾಲ್ಶಿಯಂ, ಪ್ರೊಟೀನ್‌, ಫಾಸ್ಪರಸ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೀನು ವಿಟಮಿನ್‌ ಡಿಯನ್ನೂ ತನ್ನೊಳಗೆ ಹೇರಳವಾಗಿ ಹೊಂದಿದೆ.

೬. ಅಣಬೆ: ಮೀನು, ಮೊಟ್ಟೆಯನ್ನು ತಿನ್ನದ ಮಂದಿ ವಿಟಮಿನ್‌ ಡಿಯನ್ನು ಯಥೇಚ್ಛವಾಗಿ ಯಾವುದರಿಂದ ಪಡೆದುಕೊಳ್ಳಬಹುದು ಎಂದರೆ ಅದಕ್ಕೆ ಉತ್ತರ ಅಣಬೆ. ತಾಜಾ ಅಣಬೆಯಲ್ಲಿ ಈ ಅಂಶ ಇನ್ನೂ ಹೆಚ್ಚಿರುತ್ತದೆ. ಫ್ರಿಜ್‌ನಲ್ಲಿಟ್ಟ ಹಾಗೂ ಅಡುಗೆ ಮಾಡಲಾದ ಅಣಬೆಯಲ್ಲಿ ಪೋಷಕಾಂಶ ಸಾಕಷ್ಟು ನಷ್ಟವಾದರೂ ವಿಟಮಿನ್‌ ಡಿಗಾಗಿ ಇದನ್ನು ಸಸ್ಯಾಹಾರಿಗಳು ಆಹಾರಕ್ರಮದಲ್ಲಿ ಸೇರಿಸಬಹುದು.

ಇದನ್ನೂ ಓದಿ | Vitamin D | ನಮಗೇಕೆ ಅಗತ್ಯ ವಿಟಮಿನ್‌ ಡಿ?

Exit mobile version