Site icon Vistara News

Tamarind Benefits: ಬಹುಪಯೋಗಿ ಹುಣಸೆಹಣ್ಣಿನ ಪ್ರಯೋಜನಗಳನ್ನೇಕೆ ನಿರ್ಲಕ್ಷ್ಯ ಮಾಡುವಿರಿ?

tamarind2

ಹುಳಿಯಾದರೂ, ಹುಣಸೆಹಣ್ಣು (Tamarind) ಎಂದಾಕ್ಷಣ ಬಹುತೇಕರಿಗೆ ಬಾಯಲ್ಲಿ ನೀರೂರುತ್ತದೆ. ಯಾಕೆಂದರೆ ಹುಣಸೇಹಣ್ಣಿನ ರುಚಿಯೇ ಅಂಥದ್ದು. ಬಾಲ್ಯದಲ್ಲಿ, ಹುಣಸೆ ಹಣ್ಣಾಗುವ ಮೊದಲೇ ಕಾಯಿಯನ್ನೇ ಕೊಯ್ದು, ಉಪ್ಪು ಮೆಣಸಿನಪುಡಿಯಲ್ಲಿ ಅದ್ದಿ ಚಪ್ಪರಿಸುತ್ತಿದ್ದ ನೆನಪುಗಳು ಅನೇಕರಿಗೆ ಇರಬಹುದು. ಹುಣಸೇ ಹಣ್ಣಿನ ಕ್ಯಾಂಡಿ ಮಾಡಿ, ಪ್ಲಾಸ್ಟಿಕ್‌ನಲ್ಲಿ ಸುತ್ತಿ ತಿಂದಿರಬಹುದು. ಅಥವಾ ಈಗಲೂ ಗೂಡಂಗಡಿಯ ಮೂಲೆಯಲ್ಲಿ ಹುಣಸೆಹಣ್ಣಿನ ಕ್ಯಾಂಡಿ ಕಂಡರೆ ವಯಸ್ಸಿನ ಹಂಗಿಲ್ಲದೆ ಬಾಯಲ್ಲಿ ನೀರೂರಬಹುದು. ಇಂಥ ಹುಣಸೆ ಹಣ್ಣು ಸಾಕಷ್ಟು ಪೋಷಕಾಂಶಗಳನ್ನೂ ತನ್ನೊಂದಿಗೆ ಮೇಳೈಸಿಕೊಂಡು ಅಡುಗೆ ಮನೆಯ ಡಬ್ಬದಲ್ಲಿ ಬೆಚ್ಚಗೆ ಕೂತಿರಲು, ಅನೇಕರು ಈಚೆಗೆ ಅದರ ಬಳಕೆಯನ್ನೇ ಅನೇಕರು ಬಿಟ್ಟಿರಲೂ ಬಹುದು. ಹಾಗಿದ್ದರೆ ನಿತ್ಯದ ಆಹಾರದಲ್ಲಿ ಬಳಸುತ್ತಾ (tamarind uses) ಹೇಗೆ ಇದರ ಪ್ರಯೋಜನಗಳನ್ನು (tamarind benefits) ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ.

ಹುಣಸೇ ಹಣ್ಣಿನಲ್ಲಿ ಟಾರ್ಟಾರಿಕ್‌ ಆಸಿಡ್‌ ಇದೆ. ಈ ಟಾರ್ಟಾರಿಕ್‌ ಆಸಿಡ್‌ ಅತ್ಯಂತ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌ ಆಗಿರುವುದರಿಂದ ಇದು ದೇಹವನ್ನು ಹಲವು ಫ್ರೀ ರ್ಯಾಡಿಕಲ್ಸ್‌ ದಾಳಿಯಿಂದ ರಕ್ಷಿಸುತ್ತದೆ. ಇದು ಜೀರ್ಣಕಾರಕ ನಾರಿನಂಶವನ್ನು ಹೊಂದಿರುವುದರಿಂದ ಇದು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಹಾಗೂ ಚಯಾಚಪಯ ಕ್ರಿಯೆಗೂ ಸಹಾಯ ಮಾಡುತ್ತದೆ. ಇನ್ನು, ತೂಕ ಇಳಿಸುವ ಮಂದಿಗೂ ಒಳ್ಳೆಯ ಸುದ್ದಿಯೇ ಇದೆ. ಯಾಕೆಂದರೆ, ತೂಕ ಇಳಿಸಿಕೊಳ್ಳುವ ಮಂದಿಗೆ ಈ ಹುಣಸೆಹಣ್ಣು ಒಳ್ಳೆಯದನ್ನೇ ಮಾಡುತ್ತದೆ. ಯಾಕೆಂದರೆ ಇದರಲ್ಲಿರುವ ಹೈಡ್ರಾಕ್ಸಿಟ್ರಿಕ್‌ ಆಸಿಡ್‌ ಅಂಶವು ದೇಹದಲ್ಲಿರುವ ಅಗತ್ಯಕ್ಕಿಂತ ಹೆಚ್ಚು ಕೊಬ್ಬಿನಂಶವನ್ನು ಕರಗಿಸಲು ಸಹಾಯ ಮಾಡುತ್ತದೆ.

ಇಷ್ಟೇ ಅಲ್ಲ, ಹುಣಸೇ ಹಣ್ಣಿನಲ್ಲಿ ವಿಟಮಿನ್‌ ಸಿ ಕೂಡಾ ಹೇರಳವಾಗಿದ್ದು, ಇದರಲ್ಲಿರುವ ಆಂಟಿಸೆಪ್ಟಿಕ್‌ ಗುಣಗಳು ರೋಗ ನಿರೋಧಕತೆಯನ್ನು ಹೆಚ್ಚಿಸಿ, ದೇಹವನ್ನು ಬ್ಯಾಕ್ಟೀರಿಯಾ ಹಾಗೂ ವೈರಲ್‌ ಇನ್‌ಫೆಕ್ಷನ್‌ಗಳಿಂದ ದೂರವಿಡುತ್ತದೆ. ಹುಣಸೆಹಣ್ಣಿನಲ್ಲಿ ವಿಟಮಿನ್‌ ಎ ಕೂಡಾ ಹೇರಳವಾಗಿರುವುದರಿಂದ ಕಣ್ಣಿನ ತೊಂದರೆಗಳಿಗೂ ಇದು ಅತ್ಯಂತ ಉತ್ತಮ. ಕಣ್ಣು ಒಣಗಿದಂತಾಗುವುದು, ಕಣ್ಣು ಊದಿಕೊಳ್ಳುವುದು ಇತ್ಯಾದಿಗಳ ಸಮಸ್ಯೆಗಳಿಗೂ ಇದರ ಸೇವನೆಯಿಂದ ಪರಿಹಾರ ದೊರೆಯುತ್ತದೆ. ಇಷ್ಟೆಲ್ಲ ಆರೋಗ್ಯಕರ ಲಾಭಗಳಿರುವಾಗ (tamarind health benefits) ಇದನ್ನು ನಿತ್ಯೋಪಯೋಗದಲ್ಲಿ ಬಳಸುವುದಾದರೂ ಹೇಗೆ ಎಂದು ನಿಮಗೆ ಅನಿಸಬಹುದು. ಹಾಗಾದರೆ ಬನ್ನಿ, ಇಲ್ಲಿರುವ ಕೆಲವು ಮಾದರಿಯಲ್ಲಿ ನೀವು ಆಗಾಗ ಹುಣಸೆ ಹಣ್ಣನ್ನು ಬಳಸಿ ಅದರ ಲಾಭವನ್ನು (health guide) ಪಡೆಯಬಹುದು.

1. ಇಂಜಿಪುಳಿ: ಹುಣಸೇ ಹಣ್ಣಿನ ಚಟ್ನಿಯಿದು. ಹುಳಿಹುಳಿ, ಶುಂಠಿ,ಮೆಣಸು ಹಾಕಿ ಒಗ್ಗರಣೆ ಕೊಟ್ಟು ಮಾಡುವ ಸಿಂಪಲ್‌ ಅಡುಗೆ. ಇದನ್ನು ಮಾಡಿಟ್ಟು ಕೆಲ ಕಾಲ ಕೇವಲ ಗಂಜಿ ಊಟ ಮಾಡಲು ಮನಸ್ಸಾಗುತ್ತದಲ್ಲ, ಅಂಥ ಸಂದರ್ಭ ಬಳಸಿಕೊಳ್ಳಬಹುದು. ಸಿಂಪಲ್‌ ಊಟ ಮಾಡುವ ಸಂದರ್ಭ ಇದು ಸ್ವರ್ಗದಂತಹ ರುಚಿ ಕೊಡುತ್ತದೆ.

2. ಹುಣಸೇ ಶರಬತ್:‌ ಸಿಹಿಸಿಹಿಯಾಗಿ, ಹುಳಿಹುಳಿಯಾಗಿರುವ ಈ ಶರಬತ್‌ ದಾಹಕ್ಕೆ ಒಳ್ಳೆಯ ಮದ್ದು. ಹಣಸೆ ಹಣ್ಣನ್ನು ಕಿವುಚಿ, ರುಚಿಗೆ ತಕ್ಕಷ್ಟು ಬೆಲ್ಲವೋ, ಸಕ್ಕರೆಯನ್ನೋ ಸೇರಿಸಿ, ಜೀರಿಗೆ, ಕರಿಮೆಣಸಿನ ಪುಡಿಯನ್ನು ಸ್ವಲ್ಪ ಉದುರಿಸಿಕೊಂಡು ತಣ್ಣಗೆ ಈ ಜ್ಯೂಸ್‌ ಅಥವಾ ಶರಬತ್ತನ್ನು ಮಾಡಿ ಕುಡಿದರೆ, ಆಹಾ ಸ್ವರ್ಗಕ್ಕೆ ಮೂರೇ ಗೇಣು. ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್‌ ಜ್ಯೂಸ್‌ಗಳಿಗಿಂತ, ಆರೋಗ್ಯಕ್ಕೂ ಒಳ್ಳೆಯದು.

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

3. ಸಾಂಬಾರು: ನಿತ್ಯವೂ ಸಾಂಬಾರಿಗೆ ಕೊಂಚ ಹುಣಸೇ ಹಣ್ಣನ್ನು ಹಾಕುವ ಮಂದಿ ಇದ್ದಾರೆ. ಇನ್ನೂ ಕೆಲವರು ಹಾಕುವುದಿಲ್ಲ. ಆದರೆ, ಇನ್ನೂ ಕೆಲವರು, ಹುಣಸೇಹಣ್ಣನ್ನೇ ಪ್ರಧಾನವಾಗಿಟ್ಟುಕೊಂಡು ತರಕಾರಿಯೇ ಇಲ್ಲದೆ ಸಾಂಬಾರನ್ನೂ ಮಾಡುತ್ತಾರೆ. ಆ ಮೂಲಕವೂ ಹುಣಸೇ ಹಣ್ಣನ್ನು ನೀವು ಹೊಟ್ಟೆ ಸೇರುವಂತೆ ಮಾಡಬಹುದು.

4. ಪುಳಿಯೋಗರೆ: ದಕ್ಷಿಣ ಭಾರತೀರಯರಿಗೆ ಪುಳಿಯೋಗರೆ ಅಥವಾ ಹುಣಸೇ ಹಣ್ಣಿನ ರೈಸ್‌ಬಾತ್‌ ಅತ್ಯಂತ ಮುಖ್ಯವಾದ ತಿನಿಸುಗಳಲ್ಲಿ ಒಂದು. ತಮಿಳುನಾಡಿನ ದೇವಸ್ಥಾನಗಳಲ್ಲಿ ಇದನ್ನು ದೇವರ ಪ್ರಸಾದದಂತೆಯೂ ಕೊಡಲಾಗುತ್ತದೆ. ಹಾಗಾಗಿ, ಇದಕ್ಕೆ ವಿಶೇಷ ಸ್ಥಾನ. ಹುಣಸೇಹಣ್ಣನ್ನು ಹೇರಳವಾಗಿ ಬಳಸಿಕೊಂಡು ಇದನ್ನು ಮಾಡಲಾಗುತ್ತದೆ. ಆಗಾಗ ಪುಳಿಯೋಗರೆಗೂ ನಮ್ಮ ಆಹಾರಕ್ರದಲ್ಲಿ ಸ್ಥಾನ ನೀಡಬಹುದು.

5. ಅಂಬಲ್:‌ ಜಮ್ಮು ಕಾಶ್ಮೀರದ ಡೋಗ್ರ ಜನಾಂಗದ ಪಾರಂಪರಿಕ ಅಡುಗೆ ಈ ಅಂಬಲ್‌. ಈ ಅಂಬಲ್‌ ಅನ್ನು ಸಿಹಿಕುಂಬಳಕಾಯಿಯನ್ನು ಬಳಸಿ ಮಾಡಲಾಗುತ್ತದೆ. ಹುಣಸೇಹಣ್ಣು, ಬೆಲ್ಲ ಹಾಗೂ ಸಾಕಷ್ಟು ಮಸಾಲೆಗಳನ್ನೂ ಇದಕ್ಕೆ ಬಳಸಲಾಗುತ್ತದೆ. ಇದನ್ನೂ ಮಾಡಿ ತಿನ್ನುವ ಮೂಲಕ ಹುಣಸೇ ಹಣ್ಣನ್ನು ಹೊಟ್ಟೆ ಸೇರುವಂತೆ ಮಾಡಬಹುದು.

ಇದನ್ನೂ ಓದಿ: Health Tips: ಹಸಿ ಅರಿಶಿನ ಕೊಂಬು ಒಳ್ಳೆಯದೋ, ಒಣಗಿಸಿದ ಅರಿಶಿನ ಪುಡಿಯೋ?

Exit mobile version