ತೂಕ ಇಳಿಸುವುದು ಹೇಗೆ ಎಂಬುದು ಸದ್ಯ ಎಲ್ಲರ ನಡುವೆ ಚರ್ಚೆಯಾಗುವ ಅತ್ಯಂತ ಸಾಮಾನ್ಯ ವಿಷಯ. ಜೀವನಶೈಲಿ, ಕೆಲಸದ ಒತ್ತಡ, ಹೊರಗೆ ತಿನ್ನುವ ಅಭ್ಯಾಸ, ಚಟುವಟಿಕೆಗಳಿಲ್ಲದ ಕೆಲಸ, ಹಾರ್ಮೋನ್ ಸಮಸ್ಯೆ, ರಾತ್ರಿಪಾಳಿ ಸೇರಿದಂತೆ ಅನೇಕ ವಿಚಾರಗಳು ಇಂದು ತೂಕ ಏರಿಕೆಗೆ ಕಾರಣವಾಗುತ್ತದೆ. ಆದರೆ ಇಳಿಸುವ ಬಗ್ಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಎಲ್ಲರ ಸಮಸ್ಯೆಯೂ ಇದೇ. ವ್ಯಾಯಾಮ, ಜಾಗಿಂಗ್, ಯೋಗ ಇತ್ಯಾದಿ ಮಾಡಿದರೂ ತೂಕ ಮಾತ್ರ ಇಳಿಯುವುದಿಲ್ಲ ಎಂಬುದು. ಏನೆಲ್ಲ ಪ್ರಯತ್ನಿಸಿ ನೋಡಿದ ನೀವು ಹುಣಸೆ ಹಣ್ಣನ್ನೂ ಯಾಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು? ಹುಣಸೆಹಣ್ಣಿಗೂ ತೂಕಕ್ಕೂ ಏನು ಸಂಬಂಧ ಅಂತೀರಾ? ಸಂಬಂಧ ಇದೆ. ಹುಳಿಯಾದ ಹುಣಸೇಹಣ್ಣನ್ನು ನೀವು ಚಿಕ್ಕವರಿದ್ದಾಗ ಚಪ್ಪರಿಸಿ ತಿಂದಿರಬಹುದು, ಈಗ ಕ್ಯಾಂಡಿಗಳ ರೂಪದಲ್ಲೋ, ಚಟ್ನಿ ರೂಪದಲ್ಲೋ, ಅಥವಾ ಅಡುಗೆಗೆ ಬಳಸುವ ಮೂಲಕ ಮಾತ್ರ ಹುಣಸೆ ಹಣ್ಣನ್ನು ಬಳಸುತ್ತಿರಬಹುದು. ಆದರೆ ಹುಣಸೆ ಹಣ್ಣಿನ (Tamarind Fruit Benefits) ನೀರನ್ನು ತೂಕ ಇಳಿಕೆಗೆ ನೀವು ಬಳಸಿಲ್ಲವಾದರೆ ಒಮ್ಮೆ ಬಳಸಿ ನೋಡಿ. ಇದೂ ಕೂಡಾ ತೂಕ ಇಳಿಸಲು ನೆರವಾಗುತ್ತದೆ.
ಕಡಿಮೆ ಕ್ಯಾಲರಿಯಿದೆ
ಹುಣಸೆ ಹಣ್ಣಿನ ನೀರು ಅತ್ಯಂತ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಒಂದು ಹುಣಸೆಹಣ್ಣಿನಲ್ಲಿ ಕೇವಲ ಐದರಿಂದ ಆರು ಕ್ಯಾಲರಿ ಇರುತ್ತದಂತೆ. ಹಾಗಾಗಿ ಇದರ ಮೂಲಕ ಕ್ಯಾಲರಿ ಹೆಚ್ಚು ತೆಗೆದುಕೊಂಡ ಭಯವಿಲ್ಲ. ಇದಕ್ಕೆ ಸಿಹಿ ಹಾಗೂ ಮಸಾಲೆಗಳನ್ನು ಸೇರಿಸಿದರೆ ಖಂಡಿತವಾಗಿಯೂ ಕ್ಯಾಲರಿ ಬದಲಾವಣೆಯಾಗುತ್ತದೆ.
ಜೀರ್ಣಕ್ರಿಯೆಗೆ ಒಳ್ಳೆಯದು
ತೂಕ ಇಳಿಕೆಯ ಹಾದಿಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆ ಯಾವತ್ತಿಗೂ ಇರಬಾರದು. ಆಹಾರ ಚೆನ್ನಾಗಿ ಜೀರ್ಣವಾಗಬೇಕು. ನಿಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸಬೇಕಾದರೆ, ಬಹುಬೇಗನೆ ಸರಿಯಾಗಿ ಆಹಾರ ಜೀರ್ಣವಾಗಬೇಕೆಂದರೆ ಈ ಹುಣಸೇ ಹಣ್ಣಿನ ನೀರು ಸಹಾಯ ಮಾಡುತ್ತದೆ. ಇದು ಪಚನಕ್ರಿಯೆಯನ್ನು ಚುರುಕಾಗಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ನಾರಿನಂಶವಿದೆ
ಹುಣಸೇಹಣ್ಣಿನಲ್ಲಿ ಸಾಕಷ್ಟು ನಾರಿನಂಶ ಇದೆ. ನಾರಿನಂಶವು ಜೀರ್ಣಕ್ರಿಯೆಗೆ ಒಳ್ಳೆಯದು. ಅಷ್ಟೇ ಅಲ್ಲ, ಇದು ತೂಕವನ್ನೂ ಇಳಿಸುತ್ತದೆ. ಹೊಟ್ಟೆ ತುಂಬಿರುವ ಫೀಲ್ ನೀಡುವುದರಿಂದ ಬೇರೆ ತಿನ್ನುವ ಬಯಕೆಯಾಗುವುದಿಲ್ಲ.
ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!
ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ
ಹುಣಸೇ ಹಣ್ಣಿನ ನೀರನ್ನು ಯಾಕೆ ಕುಡಿಯಬೇಕು ಎಂದರೆ ಹುಣಸೇಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಹುಣಸೆಯಲ್ಲಿ ಟಾರ್ಟಾರಿಕ್ ಆಸಿಡ್ ಎಂಬ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಇದ್ದು ಇದು ಫ್ರೀ ರ್ಯಾಡಿಕಲ್‌ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರವು ಆರೋಗ್ಯವನ್ನು ಹೆಚ್ಚಿಸಿ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡಿ ತೂಕವನ್ನು ಇಳಿಸುತ್ತದೆ. ಹಾಗಾದರೆ, ಹುಣಸೆ ಹಣ್ಣಿನ ನೀರನ್ನು ಮಾಡುವುದು ಹೇಗೆ ಅಂತೀರಾ? ಇದೇನೂ ಬ್ರಹ್ಮವಿದ್ಯೆಯಲ್ಲ. ಹುಣಸೆ ಹಣ್ಣಿನ ಒಂದು ಸಣ್ಣ ತುಂಡನ್ನು ಬಿಸಿನೀರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ಇದು ಮೆತ್ತಗಾದ ಮೇಲೆ ಇದನ್ನು ಸ್ವಲ್ಪ ಕಿವುಚಿ ರಸ ಹಿಂಡಿ. ಹಿಂಡಿದ ಮೇಲೆ ಉಳಿದ ರಸಹೀನ ಹುಣಸೇ ಹಣ್ಣನ್ನು ಎಸೆಯಿರಿ. ನಂತರ ಈ ಹುಣಸೇ ಹಣ್ಣಿನ ನೀರಿಗೆ ನಿಮಗೆ ಬೇಕಾದಷ್ಟು ರುಚಿಗೆ ತಕ್ಕಂತೆ ನೀರು ಸೇರಿಸಿ ಕುಡಿಯಿರಿ. ರುಚಿಯಾಗಿ ಕುಡಿಯಬೇಕೆಂಬ ಬಯಕೆಯಿದ್ದರೆ, ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಅಥವಾ ಚಾಟ್ ಮಸಾಲಾ ಹಾಕಿಯೂ ಕುಡಿಯಬಹುದು. ಆದರೆ ಇದು ನಿಮ್ಮ ರುಚಿಗೆ ಬಿಟ್ಟದ್ದು. ಹೀಗೆ ಮಾಡಿದಾಗ ಖಂಡಿತವಾಗಿ ನೀವು ಸೇವಿಸುವ ಕ್ಯಾಲರಿಯಲ್ಲಿ ವ್ಯತ್ಯಾಸವಾಗುತ್ತದೆ. ತೂಕ ಇಳಿಕೆಯ ಲಾಭ ಪಡೆಯಬೇಕೆಂದಿದ್ದರೆ ಬೆಳಗ್ಗಿನ ಹೊತ್ತು, ಇದಕ್ಕೆ ಸಿಹಿ, ಮಸಾಲೆ ಸೇರಿಸದೆ ಹಾಗೆಯೇ ಕುಡಿಯಿರಿ