Site icon Vistara News

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

Tea vs Coffee

ಬೆಳಗಾಗುತ್ತಿದ್ದಂತೆಯೇ ನಾವು (Tea vs coffee) ಮಾಡುವ ಕೆಲಸಗಳಲ್ಲಿ ಎರಡು ಪ್ರಮುಖವಾದವು. ಒಂದು ಮೊಬೈಲ್‌ ಗೀರುವುದು, ಇನ್ನೊಂದು ಕಾಫಿ/ ಚಹಾ ಹೀರುವುದು. ಇವೆರಡೂ ಇಲ್ಲದಿದ್ದರೆ ಬೆಳಕು ಹರಿಯುವುದೇ ಇಲ್ಲ ನಮಗೆ. ಇವೆರಡೂ ದೇಹಕ್ಕೆ ನೀಡುವುದರಲ್ಲಿ ಕೆಫೇನ್‌ ಅಂಶವೇ ಪ್ರಧಾನವಾಗಿ ನಮಗೆ ಲೆಕ್ಕಕ್ಕೆ ಬರುವುದು. ಶರೀರದಲ್ಲಿ ಕಾಣುವ ಚೇತರಿಕೆಗೆ ಇದೇ ಪ್ರಧಾನವಾದ ಕಾರಣ. ಚಹಾ ಎಲೆಗಳ ರಸ ಹೀರುವುದು ಒಳ್ಳೆಯದೋ ಅಥವಾ ಕಾಫಿ ಬೀಜಗಳ ರಸ ಹೀರುವುದೋ ಎಂಬ ಚರ್ಚೆ ಬಹುಶಃ ಇವುಗಳ ಹುಟ್ಟಿನಷ್ಟೇ ಹಳೆಯದು. ಆದರೂ… ಯಾವುದು ಸೂಕ್ತ? ಅಂದಹಾಗೆ ಚಹಾದ ಹುಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಸಣ್ಣದೊಂದು ಕಥೆಯೂ ಇದೆ. ಚೀನಾದ ಚಕ್ರವರ್ತಿ ಷೆನ್‌ ನಂಗ್‌ ಒಮ್ಮೆ ತನ್ನ ಪಡೆಯೊಂದಿಗೆ ಎಲ್ಲಿಗೋ ಹೋಗುತ್ತಿದ್ದ. ಆಗ ದಾರಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನೆರಳಿನಲ್ಲಿ ಬೀಡು ಬಿಟ್ಟಿದ್ದರು. ಏನೋ ಕಾರಣಕ್ಕಾಗಿ ಪಾತ್ರೆಯೊಂದರಲ್ಲಿ ನೀರನ್ನು ಕುದಿಸುತ್ತಿದ್ದರು. ಎಲ್ಲಿಂದಲೋ ತೂರಿ ಬಂದ ಚಹಾ ಎಲೆಗಳು ಈ ಪಾತ್ರೆಯೊಳಗೆ ಬಿದ್ದವಂತೆ. ನೀರು ತನ್ನಷ್ಟಕ್ಕೇ ಕುದಿದು, ಚಹಾ ಪರಿಮಳದ ನೀರು ಸಿದ್ಧವಾಯಿತು. ಈ ಲಘುವಾದ ಡಿಕಾಕ್ಷನ್‌ ಘಮ ಚಕ್ರವರ್ತಿಗೆ ಇಷ್ಟವಾಯಿತು ಎಂಬುದು ಚಹಾ ಹುಟ್ಟಿನ ಕಥೆ. ಇದೇನೇ ಇದ್ದರೂ, ಸಾವಿರಾರು ವರ್ಷಗಳಿಂದ ಏಷ್ಯಾದ ಸಂಸ್ಕೃತಿಗಳಲ್ಲಿ ಚಹಾಗೊಂದು ವಿಶಿಷ್ಟವಾದ ಸ್ಥಾನ ಇರುವುದಂತೂ ಹೌದು.

ಯಾವುದು ಒಳ್ಳೆಯದು?

ಇದೀಗ ಮುಖ್ಯವಾದ ಪ್ರಶ್ನೆ- ಕಾಫಿಯೊ ಚಹಾವೊ… ಆರೋಗ್ಯಕ್ಕೆ ಯಾವುದು ಸರಿ? ಇವೆರಡೂ ಪೇಯಗಳಲ್ಲಿ ಮುಖ್ಯವಾಗಿ ಇರುವುದು ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳು. ಇದರಿಂದ ದೇಹದಲ್ಲಿನ ಶಕ್ತಿ ಸಂಚಯನ ಹೆಚ್ಚುತ್ತದೆ; ಮೆದುಳು ಚುರುಕಾಗುತ್ತದೆ; ಚಯಾಪಚಯ ವೃದ್ಧಿಸುತ್ತದೆ ಮತ್ತು ತೂಕ ಇಳಿಕೆಗೂ ನೆರವಾಗುತ್ತದೆ. ಹಾಗೆಂದು ಈ ಎರಡೂ ಪೇಯಗಳ ಗುಣಗಳು ಒಂದೇ ಎಂದೇನಲ್ಲ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳಿಗೆ ಹೆಚ್ಚಾಗಿ ಮನಸ್ಸನ್ನು ಶಾಂತವಾಗಿಸುವ ಗುಣಗಳಿವೆ. ಆದರೆ ಕಾಫಿಯಲ್ಲಿ ಕೆಫೇನ್‌ ಸಾಂದ್ರತೆ ಹೆಚ್ಚಿದ್ದು, ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸಾಮ್ಯತೆಯೇನು?

ಇವೆರಡೂ ಪೇಯಗಳಲ್ಲಿರುವ ಸಾಮ್ಯತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಇವೆರಡೂ ಪೇಯಗಳಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ಕೆಲವು ರೀತಿಯ ರೋಗಗಳನ್ನು ದೂರ ಇರಿಸುವುದಕ್ಕೆ ಇಂಥ ಅಂಶಗಳು ನೆರವಾಗುತ್ತವೆ. ಮಿತಿಯಲ್ಲಿ ಇವುಗಳನ್ನು ಕುಡಿಯುವುದು ಒಂದರ್ಥದಲ್ಲಿ ಆರೋಗ್ಯವನ್ನು ಕಾಪಾಡಲೂಬಹುದು. ಇವೆರಡೂ ಪೇಯಗಳಲ್ಲಿ ಕೆಫೇನ್‌ ಇರುವುದು ಹೌದು. ಆದರೆ ಬ್ಲಾಕ್‌ ಟೀಗೆ ಹೋಲಿಸಿದಲ್ಲಿ ಕಾಫಿಯಲ್ಲಿರುವ ಕೆಫೇನ್‌ ಪ್ರಮಾಣ ಹೆಚ್ಚು. ಅಂದಾಜಿಗೆ ಹೇಳುವುದಾದರೆ, ಒಂದು ದೊಡ್ಡ ಕಪ್‌ ಕಾಫಿಯಲ್ಲಿ, ಮೂರು ಚಹಾಗಳಲ್ಲಿರುವಷ್ಟು ಕೆಫೆನ್‌ ದೇಹ ಸೇರುತ್ತದೆ. ಹಾಗಾಗಿ ಈ ಪೇಯಗಳ ಸೇವನೆಯನ್ನು ಮಿತಿಯಲ್ಲಿ ಇರಿಸಿಕೊಳ್ಳದಿದ್ದರೆ ನಿದ್ರಾಹೀನತೆ, ಜೀರ್ಣಾಂಗಗಳ ತೊಂದರೆ, ಮಾನಸಿನ ಆತಂಕಗಳಂಥವು ಗಂಟು ಬೀಳುತ್ತವೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ಭಿನ್ನತೆಗಳೇನು?

ಚಹಾದಲ್ಲಿರುವ ಎಲ್‌-ಥಿಯಾನಿನ್‌ ಅಂಶವು ಮಾನಸಿಕ ಒತ್ತಡವನ್ನು ದೂರ ಮಾಡುವ ಕ್ಷಮತೆಯನ್ನು ಹೊಂದಿದೆ. ಜೊತೆಗೆ, ಮೆದುಳನ್ನು ಜಾಗೃತ ಸ್ಥಿತಿಯಲ್ಲೂ ಇರಿಸುತ್ತದೆ. ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳಿದ್ದು, ಚಯಾಪಚಯವನ್ನು ವೃದ್ಧಿಸುತ್ತದೆ. ಗ್ರೀನ್‌ ಟೀ ಅಥವಾ ಹರ್ಬಲ್‌ ಚಹಾಗಳು ಜೀರ್ಣಾಂಗಗಳ ಬ್ಯಾಕ್ಟೀರಿಯಗಳಿಗೆ ಕೊಂಚ ಸಹಾಯ ನೀಡಿ, ತೂಕ ಇಳಿಕೆಗೂ ನೆರವಾಗುತ್ತದೆ.
ಆದರೆ ಕಾಫಿಯಲ್ಲಿರುವ ಕ್ಷಮತೆ ಬೇರೆಯೇ. ಇದರಲ್ಲಿ ಕೆಫೇನ್‌ ಅಂಶ ನೈಸರ್ಗಿಕವಾಗಿಯೇ ಹೆಚ್ಚಿರುವುದರಿಂದ ದೇಹದಲ್ಲಿ ಶಕ್ತಿಯಲ್ಲಿ ಹೆಚ್ಚಿಸಿ, ಅಥ್ಲೆಟಿಕ್‌ ಕ್ಷಮತೆಯನ್ನು ವೃದ್ಧಿಸುವಂಥದ್ದು. ಡೋಪಮಿನ್‌ ಅಂಶದಿಂದಾಗಿ ನರಗಳನ್ನು ಉತ್ತೇಜಿಸುವುದರಿಂದ ಪಾರ್ಕಿನ್‌ಸನ್‌ ಮತ್ತು ಅಲ್‌ಜೈಮರ್ಸ್‌ ರೋಗಿಗಳಿಗೆ ಇದರಿಂದಾಗುವ ಲಾಭಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಿತಿಯಲ್ಲಿದ್ದರೆ ಯಕೃತ್‌ಗೂ ಒಳ್ಳೆಯದು. ಆದರೆ ಮಿತಿ ಮೀರಿದರೆ ಜೀರ್ಣಾಂಗಗಳ ಆರೋಗ್ಯವನ್ನು ಹದಗೆಡಿಸಿ, ವ್ಯಸನವನ್ನೂ ಅಂಟಿಸುತ್ತದೆ.

Exit mobile version