ಈಗೀಗ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬ ಕಾಳಜಿ ವಹಿಸುತ್ತಾರೆ. ಹೀಗೆ ಅತಿಯಾದ ಕಾಳಜಿ ತೆಗೆದುಕೊಳ್ಳುವ ಭರದಲ್ಲಿ ಒಮ್ಮೊಮ್ಮೆ ತಮ್ಮಷ್ಟಕ್ಕೇ ತಾವು ಏನೇನೋ ಪ್ರಯೋಗ ಮಾಡಿಕೊಂಡು ಆರೋಗ್ಯವನ್ನೇ ಕೆಡಿಸಿಕೊಳ್ಳುತ್ತಾರೆ. ಒಂದಷ್ಟು ಜನರಂತೂ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಾರೆ. ಆರೋಗ್ಯದ ವಿಚಾರದಲ್ಲಿ ಸ್ವಯಂ ವೈದ್ಯರಾಗಬೇಡಿ. ಯಾರೋ ಹೇಳಿದರು, ಎಲ್ಲೋ ಓದಿದೆ ಎಂದು ಕಂಡಕಂಡಿದ್ದನ್ನೆಲ್ಲ ಮಾಡಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಲೇ ಇದ್ದಾರೆ. ಅದಕ್ಕೊಂದು ಉದಾಹರಣೆಯೆಂದರೆ ಚಹಾ ಮತ್ತು ಬೆಲ್ಲದ (Tea With Jaggery) ಸಂಯೋಜನೆ. ಸಕ್ಕರೆಯಿಂದ ಆರೋಗ್ಯಕ್ಕೆ ದುಷ್ಪರಿಣಾಮವೇ ಹೆಚ್ಚು ಎಂಬುದು ಎಷ್ಟು ಸತ್ಯವೋ, ಚಹಾಕ್ಕೆ ಬೆಲ್ಲ ಹಾಕಿಕೊಂಡು ಕುಡಿಯುವುದೂ ಆರೋಗ್ಯಕ್ಕೆ ಹಾನಿಕಾರ ಎಂಬುದು ಅಷ್ಟೇ ಸತ್ಯ. ಇದನ್ನು ಆಯುರ್ವೇದ ತಜ್ಞರಾದ ಡಾ. ರೇಖಾ ರಾಧಾಮೋನಿಯವರೇ ಸ್ಪಷ್ಟಪಡಿಸಿದ್ದಾರೆ.
ಸಕ್ಕರೆಯ ಪರ್ಯಾಯವಾಗಿ ಬೆಲ್ಲದ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಸಕ್ಕರೆಯನ್ನು ಬಿಡಬೇಕು ಎಂಬ ಕಾರಣಕ್ಕೆ ಅನೇಕರು ಚಹಾಕ್ಕೂ ಬೆಲ್ಲ ಹಾಕಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆಯುರ್ವೇದ ಪ್ರಕಾರ ಇದು ಸರಿಯಲ್ಲ. ಚಹಾ ಮತ್ತು ಬೆಲ್ಲ ವಿರುದ್ಧ ಆಹಾರವಾಗಿದ್ದು ಸಂಯೋಜನೆ ಮಾಡಿ ಕುಡಿಯುವುದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆಯುರ್ವೇದದಲ್ಲಿ ಪ್ರತಿ ಆಹಾರಕ್ಕೂ ಅದರದ್ದೇ ಆದ ವಿಶೇಷ ಮಹತ್ವ ನೀಡಲಾಗಿದೆ. ಪ್ರತಿ ಆಹಾರಕ್ಕೂ ವಿಭಿನ್ನ ರುಚಿ, ಸಾಮರ್ಥ್ಯ ಇರುತ್ತದೆ. ಅಷ್ಟೇ ಅಲ್ಲ, ಅವು ನಮ್ಮ ದೇಹಕ್ಕೆ ಸೇರಿ ಜೀರ್ಣವಾದ ಮೇಲೆ ಬೀರುವ ಪರಿಣಾಮವೂ ಭಿನ್ನವಾಗಿರುತ್ತದೆ. ಹೀಗಿರುವಾಗ ಒಂದಕ್ಕೊಂದು ಹೊಂದದ ಆಹಾರಗಳನ್ನು ಕೂಡಿಸಿ ಸೇವಿಸುವುದರಿಂದ ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಾಕಿರುವ ಡಾ. ರೇಖಾ, ಬೆಲ್ಲವನ್ನು ಚಹಾದೊಂದಿಗೆ ಮಾತ್ರವಲ್ಲ ಹಾಲಿನೊಂದಿಗೆ ಸೇರಿಸಿ ಕುಡಿಯುವೂ ತಪ್ಪು ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಬಿಎ.4 ಉಪ-ರೂಪಾಂತರಿ 2ಕೇಸ್‌ಗಳು ಪತ್ತೆ; ಆರೋಗ್ಯ ತಜ್ಞರಿಂದ ಎಚ್ಚರಿಕೆ
ಬೆಲ್ಲದಲ್ಲಿ ವಿವಿಧ ವಿಟಮಿನ್‌ಗಳಿವೆ. ಕಬ್ಬಿಣಾಂಶ, ಮ್ಯಾಗ್ನೇಷಿಯಂ, ಪೋಟ್ಯಾಷಿಯಂ, ಫಾಸ್ಪರಸ್‌ಗಳಿದ್ದು ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಅನುಕೂಲಗಳು ಇವೆ. ಆದರೆ ಹಾಲು, ಚಹಾಗಳೊಂದಿಗೆ ಇದನ್ನು ಬೆರೆಸುವುದು ಬೇಡ. ಯಾಕೆಂದರೆ ಬೆಲ್ಲ ಉಷ್ಣ ಮತ್ತು ಹಾಲು ತಂಪು. ಇವೆರಡೂ ಸ್ವಭಾವದಲ್ಲಿ ಸಂಪೂರ್ಣ ಬೇರೆಯಾಗಿದೆ. ಹಾಗಾಗಿ ಸಂಯೋಜಿಸುವಂತಿಲ್ಲ ಎಂದು ಡಾ. ರೇಖಾ ತಿಳಿಸಿದ್ದಾರೆ. ಸಾಮಾನ್ಯವಾಗಿ ಚಹಾಕ್ಕೆ ಹಾಲನ್ನು ಸೇರಿಸಲಾಗುತ್ತದೆ. ಚಹಾ ಒಮ್ಮೆ ಕುದಿಸಲ್ಪಟ್ಟ ಬಳಿಕ ತಂಪಾಗಲು ಶುರುವಾಗತ್ತದೆ. ಆದರೆ ಬೆಲ್ಲ ಅದಕ್ಕೆ ವಿರುದ್ಧವಾಗಿ ಇನ್ನಷ್ಟು ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ ಎಂದೂ ವಿವರಿಸಿದ್ದಾರೆ.
ಚಹಾವನ್ನಾಗಲಿ, ಹಾಲನ್ನಾಗಲೀ ಸಿಹಿಯಿಲ್ಲದೆ ಕುಡಿಯಬಹುದು. ಹಾಗೊಮ್ಮೆ ಸಿಹಿ ಇರಲೇಬೇಕು, ಸಕ್ಕರೆ ತಿನ್ನಲು ಸಾಧ್ಯವಿಲ್ಲ ಎಂದಾದರೆ ಸಕ್ಕರೆ, ಬೆಲ್ಲದ ಬದಲು ಕಲ್ಲುಸಕ್ಕರೆಯನ್ನು ಬಳಸಿ ಎಂಬ ಸಲಹೆಯನ್ನೂ ಡಾ. ರೇಖಾ ನೀಡಿದ್ದಾರೆ. ಇನ್ನುಳಿದಂತೆ ಆಯುರ್ವೇದದ ಪ್ರಕಾರ ಬಾಳೆಹಣ್ಣು-ಹಾಲು, ಹಾಲು-ಮೀನು, ಮೊಸರು-ಚೀಸ್, ಜೇನುತುಪ್ಪ-ತುಪ್ಪದ ಸಂಯೋಜನೆಗಳೂ ಸರಿಯಲ್ಲ. ವೈರುಧ್ಯ ಆಹಾರಗಳನ್ನು ಸಂಯೋಜಿಸಿ ಸೇವನೆ ಮಾಡುವುದರಿಂದ ಉರಿಯೂತ, ಚರ್ಮದ ಅಲರ್ಜಿಗಳು, ಅಜೀರ್ಣಗಳಂಥ ಸಮಸ್ಯೆಗಳು ಉಂಟಾಗಬಹುದು. ಕೆಲವನ್ನೆಲ್ಲ ತುಂಬ ಕಾಲದವರೆಗೆ ಸೇವನೆ ಮಾಡುವುದರಿಂದ ಅದೊಂತರ ಸ್ಲೋ ಪಾಯ್ಸನ್ ಆಗಿ ಪರಿಣಮಿಸುತ್ತದೆ.
ಇದನ್ನೂ ಓದಿ: ಅಮೆರಿಕದಲ್ಲಿ ಹರಡ್ತಿದೆ ಮಂಕಿ ಪಾಕ್ಸ್, ಏನಿದು ಹೊಸ ರೋಗ, ಎಷ್ಟು ಭಯಾನಕ?