ಬೇಸಿಗೆಯಲ್ಲಿ ಶರೀರದ ಉಷ್ಣತೆ ಹೆಚ್ಚಾದರೆ ಅದನ್ನು ತಣಿಸಲು ನಾವು ಬೆವರುವುದಿಲ್ಲವೇ? ಹಾಗೆಯೇ, ದೇಹಕ್ಕೆ ಬೇಡದಿರುವಂಥ ಯಾವುದು ಹೆಚ್ಚಾದರೂ ಅದನ್ನು ಹೊರಗೆ ಹಾಕುವುದಕ್ಕೆ ಶರೀರಕ್ಕೊಂದು ವಿಸರ್ಜನಾ ಕ್ರಮವೆಂಬುದಿದೆ. ಹಾಗಿರುವುದರಿಂದಲೇ ನಮ್ಮ ದೇಹ ಆರೋಗ್ಯಪೂರ್ಣವಾಗಿ ಇರುವುದು. ಇದು ಶರೀರಕ್ಕೆ ಮಾತ್ರವೇ ಅಲ್ಲ, ಮನಸ್ಸಿನ ವಿಷಯದಲ್ಲೂ ಹೌದು. ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಕ್ಕೆ ಹಾಕುವುದಕ್ಕೆ ಕಣ್ಣೀರು ನಮಗೆ ನೆರವಾಗುತ್ತದೆ (Tears Of Joy) ಎಂಬುದನ್ನು ಗಮನಿಸಿದ್ದೀರಾ? ದುಃಖ, ಬೇಸರವಾದಾಗ ಅಳುವಷ್ಟೇ ಸಹಜ, ಸಂತಸದಲ್ಲೂ ಅಳುವುದು. ಒಂದೊಮ್ಮೆ ಹೀಗೆ ಭಾವನೆಗಳ ಒತ್ತಡದಲ್ಲಿ ಕಣ್ಣೀರು ಬರುವುದನ್ನು ನಾಚಿಕೆ ಎಂದುಕೊಂಡರೆ- ತಪ್ಪು ತಿಳುವಳಿಕೆಯಿದು. ಸಂತೋಷದಲ್ಲಿ ಕಣ್ಣೀರು ಸುರಿಸುವುದರಲ್ಲೂ ಬಹಳಷ್ಟು ಪ್ರಯೋಜನಗಳಿವೆ. ಹಾಗಾಗಿ ಹೆಚ್ಚು ಯೋಚಿಸದೆ ಕಣ್ಣು, ಮೂಗು ಒರೆಸಿಕೊಳ್ಳುವುದಕ್ಕೆ ಕರವಸ್ತ್ರ ಇರಿಸಿಕೊಳ್ಳಿ.
ಖುಷಿಗೂ ಕಣ್ಣೀರೇ?
ನಮ್ಮ ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಹಾಕುವಂಥ ನೈಸರ್ಗಿಕ ವ್ಯವಸ್ಥೆಯೆಂದರೆ ಕಣ್ಣೀರು ಹಾಕುವುದು. ಕಣ್ಣೀರು ಹಾಕುವುದಕ್ಕೆ ಖುಷಿ-ಬೇಸರ ಎಂಬ ಭೇದವಿಲ್ಲ. ಮನಸ್ಸಿನಲ್ಲಿ, ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುವುದರಿಂದ ದೇಹ-ಮನಸ್ಸುಗಳ ಸ್ವಾಸ್ಥ್ಯಕ್ಕೆ ಬಹಳಷ್ಟು ಲಾಭವಿದೆ. ಕಣ್ಣು-ಮೂಗು ಒರೆಸಿಕೊಳ್ಳುತ್ತಿದ್ದಂತೆ ಮನಸ್ಸು ಶಾಂತವಾಗುವುದು, ದೇಹಾದ್ಯಂತ ಹರಡಿದ್ದ ಉದ್ವಿಗ್ನತೆ ಮಾಯವಾಗುವುದನ್ನು ಗಮನಿಸಬಹುದು. ಆನಂದಭಾಷ್ಪ ಸುರಿಸುವುದರಿಂದ ಆಗುವ ಲಾಭಗಳೇನು ಎಂದರೆ-
ಮನಸ್ಸು ಶಾಂತ
ಅತಿಯಾದ ಖುಷಿಯಲ್ಲಿ ಎಂಡಾರ್ಫಿನ್, ಆಕ್ಸಿಟೋಸಿನ್ ಮತ್ತು ಡೋಪಮಿನ್ ಮುಂತಾದ ಚೋದಕಗಳನ್ನು ದೇಹ ಸ್ರವಿಸುತ್ತದೆ. ಇಂಥ ಸಂದರ್ಭದಲ್ಲಿ ಭಾವನೆಗಳ ಹೊಳೆಯಿಂದ ಹೊರತಂದು ಮನಸ್ಸನ್ನು ಸ್ಥಿಮಿತಗೊಳಿಸುವುದಕ್ಕೆ ಸಂತೋಷದ ಕಣ್ಣೀರು ಸಹಾಯ ಮಾಡುತ್ತದೆ.
ಭಾವಗಳಿಗೆ ಕೋಡಿ
ನಿತ್ಯದ ಬದುಕಿನಲ್ಲಿ ಸುಪ್ತವಾಗಿ ಮನದಲ್ಲಿ ಅಡಗುವ ಭೀತಿ, ನೋವು, ಶೋಕ, ಖುಷಿ, ಸಂಭ್ರಮ ಮುಂತಾದ ಹತ್ತೆಂಟು ಭಾವನೆಗಳು ಸಹಿಸಲು ಅಸಾಧ್ಯವಾದ ಒತ್ತಡವನ್ನು ಉಂಟುಮಾಡುತ್ತವೆ. ಕಣ್ಣೀರು ಅವುಗಳಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತದೆ. ಮಕ್ಕಳ ವಿವಾಹದಲ್ಲಿ ಹೆತ್ತವರು ಸುರಿಸುವ ಆನಂದಭಾಷ್ಪ ಇರಬಹುದು, ಹೊಸ ಕೆಲಸ ಸಿಕ್ಕ ಸಂಭ್ರಮ ಆದರೂ ಸರಿಯೇ- ಅಂತೂ ಹಳೆಯದೆಲ್ಲಾ ಸುಪ್ತ ಖಾತೆಗಳನ್ನು ಹೊರತೆಗೆದು ಕಣ್ಣೀರು ಕರೆಯುತ್ತದೆ ಮನಸ್ಸು. ಇದರಿಂದ ಜೀವಕ್ಕೆ ಬಹಳ ಆರಾಮ ಲಭಿಸುವುದು ಅನುಭವಕ್ಕೆ ಬರುತ್ತದೆ.
ಸಂವಹನದ ಮಾಧ್ಯಮ
ಮಾನವ ಸಂಘಜೀವಿ. ಜೊತೆಗಿರುವವರೊಡನೆ ಸಂವಹನ ನಡೆಸುತ್ತಲೇ ಬದುಕು ನಡೆಸಬೇಕು. ಇಷ್ಟಾಗಿಯೂ ಕೆಲವೊಮ್ಮೆ ಎಲ್ಲವನ್ನೂ ವಾಚ್ಯವಾಗಿಯೇ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಭಾವನೆಗಳು ಅತಿಯಾದ ಹೊತ್ತಿನಲ್ಲಿ ಮಾತು ಸೋಲುವುದು ಸಹಜ. ಎದುರಿನವರ ಕಣ್ಣೀರು ಕಂಡಾಕ್ಷಣವೇ ಅವರ ಪ್ರೀತಿ, ಕೃತಜ್ಞತೆಯಂಥ ಭಾವನೆಗಳು ಫಕ್ಕನೆ ಮನಸ್ಸಿಗೆ ನಾಟುತ್ತವೆ. ಮನಸ್ಸುಗಳನ್ನು ಹತ್ತಿರವಾಗಿಸುತ್ತವೆ. ಆಕ್ಸಿಟೋಸಿನ್‌ನಂಥ ಚೋದಕಗಳು ಸಾಮಾಜಿಕವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಸಾಧಿಸಲು ಸಹ ನೆರವಾಗುತ್ತವೆ. ಮಾನಸಿಕ ಸ್ಥಿರತೆಯಿಂದ ಬದುಕು ಸ್ಥಿರವಾಗುವುದು ಹೌದು.
ದೇಹಕ್ಕೂ ಲಾಭ
ಈವರೆಗಿನ ಉಪಯುಕ್ತತೆಗಳೆಲ್ಲಾ ಹೆಚ್ಚಿನವು ಮಾನಸಿಕ ಸ್ತರದಲ್ಲಿನವು. ಆದರೆ ಅಷ್ಟೇ ಅಲ್ಲ, ದೇಹಕ್ಕೂ ಉಪಯೋಗವಿದೆ. ಕಣ್ಣನ್ನು ಸ್ವಚ್ಚಗೊಳಿಸಲು ಕಣ್ಣೀರು ಸಾಧನ. ಇದರಿಂದ ಕಣ್ಣಿನ ಸೋಂಕನ್ನು ಸಹ ತಡೆಗಟ್ಟಬಹುದು. ಅಳುವುದರಿಂದ ಉಸಿರಾಟ ಮತ್ತು ಹೃದಯ ಬಡಿತವೂ ನಿಯಂತ್ರಣಕ್ಕೆ ಬರುತ್ತದೆ. ಈ ಎಲ್ಲವುಗಳಿಂದ ಒತ್ತಡವನ್ನು ನಿಭಾಯಿಸುವ ಕ್ಷಮತೆ ಹೆಚ್ಚುತ್ತದೆ. ಹಾಗಾಗಿ ಎಂದಾದರೂ ಭಾವನೆಗಳ ಮಹಾಪೂರದಲ್ಲಿ ತೇಲುತ್ತಿರುವಾಗ ಅಳು ಬಂತೋ, ನಾಚಿಕೆ ಪಡಬೇಡಿ. ಮನಸ್ಸು ತುಂಬುವಷ್ಟು ಕಣ್ಣೀರು ಸುರಿಸಿ, ಆರೋಗ್ಯವಂತರಾಗಿರಿ.
ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ