Site icon Vistara News

Tele ICU: ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು: ದಿನೇಶ್ ಗುಂಡೂರಾವ್

Tele ICU in all taluk hospitals in the Karnataka Dinesh Gundu Rao

ಬೆಂಗಳೂರು: ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು (Tele ICU) ವ್ಯವಸ್ಥೆ ಕಲ್ಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಟೆಲಿ ಐಸಿಯು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ನುರಿತ ತಜ್ಞ ವೈದ್ಯರಿಂದ ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಚಿಕಿತ್ಸೆ ದೊರೆಯುವಂತಾಗಬೇಕು. ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಹಳ್ಳಿಗಾಡಿನ ಜನರಿಗೆ ದೂರದ ಜಿಲ್ಲೆಗಳಿಗೆ ಬರುವುದು ಕಷ್ಟವಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿಯೇ ಸೂಪರ್ ಸ್ಪೆಷಾಲಿಟಿ ಕೇರ್ ಅನ್ನ ಒದಗಿಸುವ ನಿಟ್ಟಿನಲ್ಲಿ ಟೆಲಿ ಐಸಿಯು ವ್ಯವಸ್ಥೆ ಸಹಕಾರಿ ಎಂದು ಹೇಳಿದರು.

ಬೆಂಗಳೂರಿನಿಂದಲೇ ಸಲಹೆ ರವಾನೆ

ತಾಲೂಕು ಮಟ್ಟದಲ್ಲಿ ಟೆಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ಬೆಂಗಳೂರಿನಿಂದಲೇ ಅವುಗಳನ್ನು ಪರಿಶೀಲಿಸುವಂತಹ ತಂತ್ರಜ್ಞಾನಗಳ ಬಳಕೆ ಕಾರ್ಯಕ್ಕೆ ನಾವು ಒತ್ತು ನೀಡಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೋಗ್ಯ ಪರಿಶೀಲನೆ ಹಾಗೂ ಚಿಕಿತ್ಸಾ ಸಲಹೆಗಳನ್ನು ಟೆಲಿ ಐಸಿಯು ಮೂಲಕ ತಜ್ಞ ವೈದ್ಯರಿಂದ ಪಡೆಯಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಾಲ್ಕು ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಹಬ್‌

ಈಗಾಗಲೇ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದೀಗ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬಳ್ಳಾರಿ ಮೆಡಿಕಲ್ ಕಾಲೇಜುಗಳಲ್ಲಿ ಟೆಲಿ ಐಸಿಯು ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದೇವೆ. ಒಟ್ಟು ನಾಲ್ಕು ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಹಬ್‌ಗಳಾಗಿ ರಚಿಸಲಾಗಿದ್ದು, ಇವುಗಳಿಗೆ 41 ತಾಲೂಕು ಆಸ್ಪತ್ರೆಗಳನ್ನು ಲಿಂಕ್ ಮಾಡಲಾಗಿದೆ. ಈ 41 ತಾಲೂಕು ಆಸ್ಪತ್ರೆಗಳಲ್ಲಿ 10 ಟೆಲಿ ಐಸಿಯು ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, AI ತಂತ್ರಜ್ಞಾನಗಳ ಮೂಲಕ ತಜ್ಞ ವೈದ್ಯರ ಸಲಹೆಯೊಂದಿಗೆ ಸೂಪರ್ ಸ್ಪೆಷಾಲಿಟಿ ಕೇರ್ ರೋಗಿಗಳಿಗೆ ದೊರೆಯಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸ್ಪೋಕ್ ಕೇಂದ್ರಗಳಾಗಿ 41 ತಾಲೂಕು ಆಸ್ಪತ್ರೆ

ಬೆಂಗಳೂರು ಹಾಗೂ ಬಳ್ಳಾರಿ ಕ್ಲಸ್ಟರ್‌ಗೆ ತಲಾ 9 ತಾಲೂಕು ಆಸ್ಪತ್ರೆಗಳನ್ನು ಜೋಡಿಸಲಾಗಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ 10 ಹಾಗೂ ಮೈಸೂರು ವೈದ್ಯಕೀಯ ಸಂಸ್ಥೆಗೆ 13 ತಾಲೂಕು ಆಸ್ಪತ್ರೆಗಳನ್ನು ಲಿಂಕ್ ಮಾಡಲಾಗಿದೆ. ಒಟ್ಟು 41 ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳನ್ನಾಗಿ ರಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಇದನ್ನೂ ಓದಿ: HD Kumaraswamy: ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದು ತಪ್ಪು ಎಂದ ದೇವೇಗೌಡ; ಗೌಡರ ಸ್ಥಿತಿ ನೋಡಿದರೆ ಭಯವಾಗುತ್ತೆ ಎಂದ ಡಿಕೆಶಿ

ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅನುಷ್ಠಾನ

ಮುಂದಿನ ವರ್ಷ 60 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಮೂಲಕ ತಜ್ಞ ವೈದ್ಯರ ಆರೋಗ್ಯ ಸೇವೆ ಕಲ್ಪಿಸಿಕೊಡುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Exit mobile version