ಹಸಿವು ಮತ್ತು ಬಾಯಾರಿಕೆ- ಎರಡನ್ನೂ ತಣಿಸುವಂಥ ಪರಿಪೂರ್ಣ ಆಹಾರವೊಂದಿದ್ದರೆ ಅದು ಹಾಲು ಎಂಬುದು ಭಾರತೀಯರ ಪರಂಪರೆಯ ತಿಳಿವಳಿಕೆ. ಇದು ಪೋಷಕಾಂಶಗಳ ಖಜಾನೆಯೆಂದೇ ಕರೆಸಿಕೊಳ್ಳುವುದಕ್ಕೂ ಕಾರಣವಿಲ್ಲದೇ ಅಲ್ಲ. ಕಾರ್ಬ್, ಪ್ರೊಟೀನ್, ಕೊಬ್ಬಿನಂಥ ಪ್ರಮುಖ ಸತ್ವಗಳಿಂದ ಹಿಡಿದು ಕ್ಯಾಲ್ಶಿಯಂ, ವಿಟಮಿನ್ ಡಿ, ಪೊಟಾಶಿಯಂ, ಫಾಸ್ಫರಸ್ ಮುಂತಾದ ಸೂಕ್ಷ್ಮ ಪೋಷಕಾಂಶಗಳವರೆಗೆ ಎಲ್ಲವೂ ಇದರಲ್ಲಿ ದೊರೆಯುತ್ತದೆ. ಮಕ್ಕಳಿಂದ ವೃದ್ಧರವರೆಗೆ ಸರ್ವರಿಗೂ, ಸರ್ವ ಋತುವಿನಲ್ಲೂ ಸಲ್ಲುವ ಆಹಾರವಿದು. ಹಸಿದ ಹೊಟ್ಟೆ ತುಂಬಲು, ದಣಿದ ದೇಹ ಚೇತರಿಸಲು, ಹುರಿಗಟ್ಟಿಸುವ ದೇಹಕ್ಕೆ ಶಕ್ತಿ ನೀಡಲು- ಹೀಗೆ ಬಹಳಷ್ಟು ಕಾರ್ಯಗಳಿಗೆ ಹಾಲು ಅಗತ್ಯ. (Health Tips) ಆದರೆ ಅದನ್ನು ಕುಡಿಯುವುದಕ್ಕೆ ಸರಿಯಾದ ಸಮಯ ಎಂಬುದು ಉಂಟೇ? ರಾತ್ರಿ ಮಲಗುವ ಮೊದಲಿನ ಸಮಯದಲ್ಲಿ ಹಾಲು ಕುಡಿಯುವುದು ಸರಿಯೋ, ಹಗಲಿಗೋ?
ಈ ಬಗ್ಗೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳಿದಾಗ ಗೊಂದಲ ಮೂಡುವುದು ಸಹಜವೇ. ಈ ಬಗ್ಗೆ ನಿರ್ಣಾಯಕವಾಗಿ ಹೇಳುವಂಥ ಅಧ್ಯಯನಗಳು ನಡೆದಿರುವುದು ಅನುಮಾನ. ಎಲ್ಲಕ್ಕಿಂತ ಮುಖ್ಯವಾಗಿ ಯಾವ ಕಾರಣಕ್ಕಾಗಿ ಕುಡಿಯುತ್ತಿದ್ದೀರಿ ಹಾಲನ್ನು ಎಂಬುದು, ಯಾವ ಸಮಯದಲ್ಲಿ ಇದರ ಸೇವನೆ ಸೂಕ್ತ ಎಂಬುದಕ್ಕೆ ದಿಕ್ಸೂಚಿ ಆಗಬಲ್ಲದು. ಕಾರಣ, ಪರಂಪರಾಗತ ತಿಳುವಳಿಕೆಯಲ್ಲಿ ರಾತ್ರಿ ಹಾಲು ಕುಡಿಯುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ ಎಂದು ಹೇಳಲಾದರೂ, (Health Tips) ಕೆಲವು ಆಯುರ್ವೇದ ಪರಿಣತರು ರಾತ್ರಿ ಹಾಲು ಕುಡಿಯುವುದು ಸೂಕ್ತವಲ್ಲವೆಂಬ ಅಭಿಪ್ರಾಯವನ್ನೂ ಸೂಚಿಸುತ್ತಾರೆ.
ಬೆಳಗಿನ ಹೊತ್ತಾದರೇನು ಲಾಭ?
ಬೆಳಗಿನ ಹೊತ್ತಿಗೆ ಹಾಲು ಕುಡಿಯುವುದು ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದು. ಅದರಲ್ಲೂ ಹಾಲನ್ನು ಬೆಳಗಿನ ತಿಂಡಿಯ ಭಾಗವಾಗಿ ಸೇರಿಸಿಕೊಂಡರೆ ಇನ್ನೂ ಒಳ್ಳೆಯದು. ಅಂದರೆ ಬೆಳಗಿನ ಅಂಬಲಿ, ಗಂಜಿ, ಸೀರಿಯಲ್ ಮುಂತಾದವುಗಳ ಜೊತೆ ಹಾಲು ಸೇರಿಸಿಕೊಳ್ಳುವುದು ಅಥವಾ ಉಪ್ಪಿಟ್ಟು-ಅವಲಕ್ಕಿಯಂಥ ತಿಂಡಿಗಳೊಂದಿಗೂ ಹಾಲು ಕುಡಿಯಬಹುದು. ಇದರಿಂದ ಪೂರ್ಣ ಸಮತೋಲನದಿಂದ ಕೂಡಿದ ಉಪಾಹಾರ ಬೆಳಗಿನ ಹೊತ್ತಿಗೆ ದೇಹಕ್ಕೆ ದೊರೆಯುತ್ತದೆ. ಇದರಲ್ಲಿರುವ ವಿಫುಲ ಪ್ರೊಟೀನ್ ಅಂಶವು, ದೀರ್ಘ ಕಾಲದವರೆಗೆ ಶಕ್ತಿಯನ್ನು ದೇಹಕ್ಕೆ ನೀಡುತ್ತಾ ಬೇಗ ಹಸಿವಾಗದಂತೆ ನೋಡಿಕೊಳ್ಳುತ್ತದೆ.
ಮಧುಮೇಹಿಗಳಿಗೂ ಇದು ಹೇಳಿಸಿದಂಥ ಆಹಾರ. ಇದರ ಗ್ಲೈಸೆಮಿಕ್ ಅಂಶ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರ್ ಏರದಂತೆ ತಡೆಯುತ್ತದೆ. ಹಾಗಾಗಿ ಮಧುಮೇಹದ ನಿಯಂತ್ರಣಕ್ಕೂ ಇದು ಅನುಕೂಲವಾಗುತ್ತದೆ.
ದೇಹವನ್ನು ಹುರಿಗಟ್ಟಿಸುವ ಇರಾದೆ ಇದೆಯೇ? ಹಾಗಾದರೆ ಹಾಲು ಬೆಳಗಿನ ಹೊತ್ತಿನಲ್ಲಿ ಅಗತ್ಯವಾಗುತ್ತದೆ. ಕಾರಣ, ದೇಹವನ್ನು ದಂಡಿಸಿ, ಬೆವರಿಳಿಸಿದ ಕೆಲ ಹೊತ್ತಿನ ನಂತರ ಹಾಲು ಕುಡಿಯುವುದು ಸೂಕ್ತ. ಇದರಲ್ಲಿರುವ ಪ್ರೊಟೀನ್ ಸಾಂದ್ರತೆಯಿಂದಾಗಿ ಮಾಂಸಖಂಡಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅದರಲ್ಲೂ ಹಾಲಿನಲ್ಲಿರುವ ಲೂಸಿನ್ ಎಂಬ ಪ್ರೊಟೀನ್ ಅಂಶವು, ಮಾಂಸಖಂಡಗಳು ಚೇತರಿಸಿಕೊಳ್ಳುವುದಕ್ಕೆ ಅತಿ ಉತ್ತಮವಾದದ್ದು. ಹಾಗಾಗಿ ವ್ಯಾಯಾಮದ ನಂತರ ದೇಹಕ್ಕೆ ಅಗತ್ಯವಾದ ಚೇತರಿಕೆಗೆ ಅನುಕೂಲವಾಗುವಂಥ ಎಷ್ಟೋ ಅಂಶಗಳು ಹಾಲಿನಲ್ಲಿವೆ.
ರಾತ್ರಿಯ ಹೊತ್ತಾದರೇನು ಲಾಭ?
ನಿದ್ದೆ ಸರಿಯಾಗಿ ಬರುತ್ತಿಲ್ಲವೇ? ಮಲಗುವಾಗ ಕುಡಿಯುವುದಕ್ಕೆ ಹಾಲು ನೀಡುವ ಪದ್ಧತಿ ಅಜ್ಜಿಯ ಕಾಲದಿಂದ ಬಂದಿದ್ದು ಸರಿಯಾಗಿಯೇ ಇದೆ. ಕಾರಣ, ಹಾಲಿನಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೊ ಆಮ್ಲವು ದೇಹವನ್ನು ವಿಶ್ರಾಂತಿಗೆ ದೂಡಬಲ್ಲ ಸೆರೊಟೋನಿನ್ ಮತ್ತು ಮೆಲೊಟೊನಿನ್ ಚೋದಕಗಳ ಬಿಡುಗಡೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದರಿಂದ ಕಣ್ತುಂಬಾ ನಿದ್ದೆ ಬರುವುದಕ್ಕೆ ಸಾಧ್ಯ. ನಿದ್ದೆ ಚೆನ್ನಾಗಿದ್ದರೆ ತೂಕ ಇಳಿಸುವುದರಿಂದ ಹಿಡಿದು ಹಲವಾರು ರೀತಿಯ ಧನಾತ್ಮಕ ಪರಿಣಾಮಗಳು ದೇಹದ ಮೇಲಾಗುವುದು ತಿಳಿದೇ ಇರುವ ವಿಷಯ.
ದಿನಕ್ಕೊಂದು ಲೋಟ (ಅಂದಾಜು 160 ಮಿ.ಲೀ) ಹಾಲು ಎಲ್ಲರ ಆರೋಗ್ಯಕ್ಕೂ ಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನ ಪ್ರಮಾಣ ಬೇಕಾಗುವವರಿಗೆ ಅವರವರ ದೇಹಕ್ಕೆ ಅಗತ್ಯಕ್ಕೆ ತಕ್ಕಂತೆ ಸೇವಿಸಬಹುದು. ಮೂಳೆಗಳ ಆರೋಗ್ಯ ಕಾಪಾಡಲು ಅಗತ್ಯವಾದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಸತ್ವಗಳು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವ ಮೆಗ್ನೀಷಿಯಂ ಮತ್ತು ಪೊಟಾಶಿಯಂನಂಥ ಸತ್ವಗಳು ಹಾಲಿನಿಂದ ದೊರೆಯುತ್ತವೆ. ಮಾತ್ರವಲ್ಲ, ಸೂಕ್ತ ಪ್ರಮಾಣದಲ್ಲಿ ಪ್ರೊಟೀನ್ ಸಹ ದೇಹಕ್ಕೆ ದೊರೆತು, ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ. ಹಾಗಾಗಿ ಅವರವರ ಆರೋಗ್ಯಕ್ಕೆ ಸೂಕ್ತವಾಗುವಂತೆ ಹಾಲು ಸೇವನೆಯ ಸಮಯ ಯಾವುದು ಎಂಬುದನ್ನು ನಿರ್ಧರಿಸಿಕೊಂಡು, ಈ ಪರಿಪೂರ್ಣಾ ಆಹಾರದ ಸೇವನೆಯನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ.
ಇದನ್ನೂ ಓದಿ: Kiwi Fruit Benefits: 9 Health Benefits Of Kiwi Fruit