Site icon Vistara News

Curry Leaves: ಆರೋಗ್ಯವೃದ್ಧಿಯಲ್ಲಿ ಕರಿಬೇವು ಬಳಕೆಯ ಪ್ರಯೋಜನಗಳು ಹಲವು

Curry Leaves

ಭಾರತೀಯ ಅಡುಗೆ ಮನೆಗಳ ಅಗತ್ಯ ಪರಿಕರಗಳಲ್ಲಿ ಕರಿಬೇವಿನ ಸೊಪ್ಪೂ (Curry Leaves) ಒಂದು. ಒಗ್ಗರಣೆಗಳ ಘಮ ಹೆಚ್ಚಿಸುವುದರಿಂದ ಹಿಡಿದು, ವ್ಯಂಜನಗಳ ರುಚಿ ಇಮ್ಮಡಿಗೊಳಿಸುವವರೆಗೆ ಎಲ್ಲದಕ್ಕೂ ಕರಿಬೇವಿನ ಸೊಪ್ಪು (benefits of curry leaves) ಅಗತ್ಯ. ಉಪ್ಪಿಟ್ಟು, ಅವಲಕ್ಕಿಗಳಿಂದ ಹಿಡಿದು, ತಿಳಿಸಾರು, ಬಿಸಿಬೇಳೆಭಾತ್‌ನಂಥ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳಿಗೆ ಮಾತ್ರವಲ್ಲ, ಉತ್ತರ ಭಾರತೀಯ ಶೈಲಿಯ ಗ್ರೇವಿಗಳಿಂದ ಹಿಡಿದು ಗುಜರಾತ್‌ನ ಧೋಕ್ಲಾಗಳವರೆಗೆ ಎಲ್ಲವಕ್ಕೂ ಕರಿಬೇವಿನ ಸೊಪ್ಪು ಇರಲೇಬೇಕು. ಹಾಗಾದರೆ ಅಡುಗೆಗಳ ರುಚಿ, ಘಮ ಹೆಚ್ಚುಸುವಷ್ಟಕ್ಕೇ ಇದು ಸೀಮಿತವೇ? ಖಂಡಿತಾ ಇಲ್ಲ, ಆರೋಗ್ಯಕ್ಕೆ ಇದರ ಕೊಡುಗೆ ಬಹಳಷ್ಟಿದೆ.
ದೇಹದ ಸ್ವಾಸ್ಥ್ಯಕ್ಕೆ ಪೂರಕವಾದ ಬಹಳಷ್ಟು ಪೋಷಕಾಂಶಗಳು ಕರಿಬೇವಿನ ಸೊಪ್ಪಿನಲ್ಲಿವೆ. ಅಡಿಯಿಂದ ಮುಡಿಯವರೆಗೆ ನಮ್ಮ ಶರೀರದ ಆರೋಗ್ಯವರ್ಧನೆಯ ಸಾಮರ್ಥ್ಯ ಈ ಸೊಪ್ಪಿನದ್ದು. ಕೂದಲು, ಹೃದಯಗಳ ಆರೋಗ್ಯವರ್ಧನೆಗೆ ಉಪಯುಕ್ತವಾಗುವುದರ ಜೊತೆಗೆ, ರಕ್ತಹೀನತೆ, ಮಧುಮೇಹದಂಥ ಸಮಸ್ಯೆಗಳಿಗೂ ಇವು ಮದ್ದಾಗಬಲ್ಲವು. ಏನೆಲ್ಲಾ ಸದ್ಗುಣಗಳಿವೆ ಕರಿಬೇವಿನ (benefits of curry leaves) ಸೊಪ್ಪಿನಲ್ಲಿ ಎಂಬುದನ್ನು ಗಮನಿಸಿದರೆ, ಊಟದ ತಟ್ಟೆಯಲ್ಲಿ ಈ ಸೊಪ್ಪು ತೆಗೆದಿರಿಸುವವರ ಸಂಖ್ಯೆ ಕಡಿಮೆಯಾದೀತು.

ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ

ನಮ್ಮ ದೇಹದಲ್ಲಿ ಜಮೆಯಾಗಿ ತೊಂದರೆ ಕೊಡುವ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಮರ್ಥ್ಯವನ್ನು ಕರಿಬೇವಿನ ಎಲೆಗಳು ಹೊಂದಿವೆ. ಎಲ್‌ಡಿಎಲ್‌ ದೇಹದಲ್ಲಿ ಹೆಚ್ಚಿದಷ್ಟೂ ಹೃದಯದ ಸಮಸ್ಯೆಗಳೂ ಹೆಚ್ಚುತ್ತವೆ. ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರದ ಭಾಗವಾಗಿ ನಿಯಮಿತವಾಗಿ ಕರಿಬೇವಿನ ಎಲೆಗಳ ಸೇವನೆಯಿಂದ ಕೊಲೆಸ್ಟ್ರಾಲ್‌ ಪ್ರಮಾಣ ನಿಯಂತ್ರಿಸಬಹುದು ಎನ್ನುತ್ತವೆ ಕೆಲವು ಅಧ್ಯಯನಗಳು

ಬಿಪಿ ಹತೋಟಿ

ರಕ್ತದ ಏರೊತ್ತಡ ಹೆಚ್ಚಾದಷ್ಟೂ ಹೃದಯಕ್ಕೆ ಸಮಸ್ಯೆ, ಪಾರ್ಶ್ವವಾಯುವಿನಂಥ ತೊಂದರೆಗಳ ಭೀತಿ. ಕರಿಬೇವಿನಲ್ಲಿರುವ ಪೊಟಾಶಿಯಂ ಅಂಶದಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ. ಅಧಿಕ ಸೋಡಿಯಂನಿಂದ ದೇಹದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪೊಟಾಶಿಯಂ ಸೇವನೆ ಕಡಿಮೆ ಮಾಡುತ್ತದೆ. ಹಾಗಾಗಿ ಕರಿಬೇವಿನ ಎಲೆಗಳನ್ನು ತಿನ್ನುವುದು ಸರ್ವದಾ ಒಳ್ಳೆಯದು

ಉತ್ಕರ್ಷಣ ನಿರೋಧಕಗಳು

ಇದರಲ್ಲಿರುವ ಫ್ಲೆವನಾಯ್ಡ್‌ ಮತ್ತು ಫೆನಾಲಿಕ್‌ ಸಂಯುಕ್ತಗಳು ಪ್ರಬಲ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ವಿಟಮಿನ್‌ ಎ, ಸಿ, ಇ ಅಂಶಗಳು ದೇಹಕ್ಕೆ ಮಹತ್ವದ ಪೋಷಣೆಯನ್ನು ನೀಡಬಲ್ಲವು. ಜೊತೆಗೆ ದೇಹದಲ್ಲಿನ ಉರಿಯೂತ ನಿವಾರಿಸಿ, ಬಹಳಷ್ಟು ಮಾರಕ ರೋಗಗಳು ಹತ್ತಿರ ಸುಳಿಯದಂತೆ ಕಾಪಾಡಬಲ್ಲವು
ಮಧುಮೇಹ ನಿಯಂತ್ರಣ: ಇನ್‌ಸುಲಿನ್‌ ಪ್ರತಿರೋಧದಿಂದ ದೇಹದಲ್ಲಿ ಉಂಟಾಗುವ ಸಕ್ಕರೆಯ ಏರಿಳಿತಗಳನ್ನು ಹತೋಟಿಯಲ್ಲಿಡುವ ಅಂಶಗಳು ಕರಿಬೇವಿನಲ್ಲಿವೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ರಕ್ತದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಏರದಂತೆ ಕಾಪಾಡಿ, ಮಧುಮೇಹ ಸಮಸ್ಯೆಯ ನಿಯಂತ್ರಣಕ್ಕೆ ನೆರವಾಗುವ ಸಾಧ್ಯತೆ ಇದಕ್ಕಿದೆ.

ತೂಕ ಇಳಿಕೆ

ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯ ಈ ಎಲೆಗಳಿಗೆ ಇರುವುದರಿಂದ ತೂಕ ಇಳಿಕೆಗೂ ಇದು ಪೂರಕವಾಗಿ ಕೆಲಸ ಮಾಡುತ್ತದೆ. ಬೊಜ್ಜು, ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಧ್ಯತೆಯೂ ಇರುವುದರಿಂದ ಅತಿತೂಕ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಉಪಯುಕ್ತವಾಗಬಲ್ಲದು.

ರಕ್ತಹೀನತೆ ನಿವಾರಣೆ

ಇದರಲ್ಲಿ ಕಬ್ಬಿಣದಂಶ ಯಥೇಚ್ಛವಾಗಿ ಇರುವುದರಿಂದ, ಇದರ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ಇದರಲ್ಲಿರುವ ಇತರ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳು ದೇಹದ ಸ್ವಾಸ್ಥ್ಯವನ್ನು ಸುಧಾರಿಸಬಲ್ಲವು

ಕೂದಲಿಗೆ ಪೋಷಣೆ

ಇದರಲ್ಲಿರುವ ವಿಟಮಿನ್‌ ಎ ಮತ್ತು ಇ ಹಾಗೂ ಕಬ್ಬಿಣದ ಅಂಶಗಳಿಂದಾಗಿ ಕೂದಲನ್ನು ಕಪ್ಪಾಗಿಸಿ, ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ಇದರ ಎಲೆಗಳ ಪೇಸ್ಟ್‌ ಮಾಡಿ ಹೇರ್‌ಪ್ಯಾಕ್‌ ಹಾಕುವವರಿದ್ದಾರೆ. ಮದರಂಗಿಯ ಎಲೆಗಳ ಜೊತೆಗೆ ಇದನ್ನೂ ಪೇಸ್ಟ್‌ ಮಾಡಿ, ಸೌಂದರ್ಯವರ್ಧಕವಾಗಿಯೂ ಇದು ಬಳಕೆಯಲ್ಲಿದೆ.

ಇದನ್ನೂ ಓದಿ: Summer Sweating Problem: ಬೇಸಿಗೆಯಲ್ಲಿ ಬೆವರಿನ ದುರ್ಗಂಧದಿಂದ ಪಾರಾಗಲು ಇಲ್ಲಿದೆ ಸುಲಭ ಉಪಾಯ

Exit mobile version