Site icon Vistara News

Causes Of Obesity: ದೇಹದಲ್ಲಿ ಬೊಜ್ಜು ಬೆಳೆಯಲು ಮುಖ್ಯ ಕಾರಣಗಳು ಇವು…

Causes Of Obesity

ವಿಶ್ವದ ಬಹಳಷ್ಟು ದೇಶಗಳು ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ ಎದುರಿಸುವ ಭೀತಿಯನ್ನು ಮುಂದಿರಿಸಿಕೊಂಡಿವೆ. ಇದಕ್ಕೆ ಕಾರಣ ಎಲ್ಲರಲ್ಲಿ ಹೆಚ್ಚುತ್ತಿರುವ ಬೊಜ್ಜು. ಯಾವ ದೇಶಕ್ಕೆ ಹೋದರೂ ಎಕ್ಸೆಲ್‌, ಡಬಲ್‌ ಎಕ್ಸೆಲ್‌ ಗಾತ್ರದ ಜನಸಂಖ್ಯೆ ವೃದ್ಧಿಸುತ್ತಿದೆ. ಇದರಿಂದ ಇಡೀ ದೇಶಗಳೇ ʻಅನಾರೋಗ್ಯಕರʼ ಎಂಬ ಹಣೆಪಟ್ಟಿಯನ್ನು ಹೊರುವ ದಿನಗಳು ಎದುರಾಗುತ್ತಿವೆ. ಏಕೆಂದರೆ ಬೊಜ್ಜಿನ ಕಾರಣದಿಂದ ಕಾಣುವ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು ವಯಸ್ಸು, ಲಿಂಗಗಳ ಭೇದವಿಲ್ಲದಂತೆ ಎಲ್ಲರನ್ನೂ ಕಾಡಲಾರಂಭಿಸಿವೆ. ಭಾರತದ ಅಂಕಿ-ಅಂಶಗಳನ್ನೇ ಹೇಳುವುದಾದರೆ, ಸುಮಾರು ಎಂಟು ಕೋಟಿ ಭಾರತೀಯರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ 19 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಇದನ್ನೀಗ ವಿಶ್ವ ಮಟ್ಟದಲ್ಲಿ ಹೇಳುವುದಾದರೆ, ಎಂಟು ಜನರಲ್ಲಿ ಒಬ್ಬರು ಬೊಜ್ಜಿನ ಸುಳಿಯಲ್ಲಿ ಸಿಲುಕಿದ್ದಾರೆ. ಹಾಗಾದರೆ ಚಯಾಪಚಯದ ದೋಷ ಮತ್ತು ತೂಕ ಅತಿಯಾಗಿ ಹೆಚ್ಚುವುದಕ್ಕೆ (Causes of obesity) ಕಾರಣಗಳೇನು?

ಆಹಾರದ ದೋಷ

ಬಿಸಿಯಾದ, ತಾಜಾ ಆಹಾರವನ್ನು ಮನೆಯಲ್ಲೇ ಮಾಡಿ ತಿನ್ನುವ ಕ್ರಮವನ್ನು ಪಾಲಿಸುವವರೇ ಅಪರೂಪ ಎನ್ನುವಂತಾಗಿದೆ. ಸಿಕ್ಕಿದ್ದನ್ನು, ಸಿಕ್ಕಿದಲ್ಲಿ ತಿಂದು ಓಡುತ್ತೇವೆ. ಅದಕ್ಕೆ ಬಳಸಲಾದ ವಸ್ತುಗಳೇನು, ಎಣ್ಣೆ ಯಾವುದು, ಬಣ್ಣ, ಘಮ ಮುಂತಾದ ರಾಸಾಯನಿಕಗಳನ್ನು ಹಾಕಲಾಗಿದೆಯೆ ಎಂಬಂಥ ವಿಷಯಗಳತ್ತ ಗಮನ ಕೊಡುವ ವ್ಯವಧಾನ ಯಾರಿಗೂ ಇರುವುದಿಲ್ಲ. ಇವೆಲ್ಲ ಕ್ರಮೇಣ ದೇಹದ ಜೀರ್ಣಾಂಗಗಳನ್ನು ಹಾಳು ಮಾಡುತ್ತವೆ. ಅದರಲ್ಲೂ ಫಾಸ್ಟ್‌ ಫುಡ್‌ನಂಥ ತಿನಿಸುಗಳಲ್ಲಿ ಕ್ಯಾಲರಿ ಸಿಕ್ಕಾಪಟ್ಟೆ, ಆದರೆ ಸತ್ವ ಅತಿ ಕಡಿಮೆ. ಇದರ ಫಲವಾಗಿ ಹೆಚ್ಚೆಚ್ಚು ತಿನ್ನಬೇಕೆನಿಸುತ್ತದೆ. ತೂಕ ಹೆಚ್ಚುತ್ತಲೇ ಹೋಗುತ್ತದೆ.

ಜಡ ಜೀವನ

ತಂತ್ರಜ್ಞಾನದ ಮೇಲಿನ ಅವಲಂಬನೆ ಹೆಚ್ಚಿದಂತೆ ಜೀವನಶೈಲಿಯೂ ಜಡವಾಗುತ್ತಿದೆ. ಬೀದಿ ತುದಿಯ ಅಂಗಡಿಯಿಂದ ಹಾಲು ತರಬೇಕೆಂದರೆ ವಾಹನ ಬೇಕು ನಮಗೆ; ನಾವು ನಡೆಯುವವರಲ್ಲ. ಒಂದೆರಡು ಮಹಡಿ ಹತ್ತುವುದಕ್ಕೂ ಲಿಫ್ಟ್‌ ಬೇಕು ನಮಗೆ, ಮೆಟ್ಟಿಲಲ್ಲ. ಕೂತಲ್ಲೇ ಟಿವಿ, ಫ್ಯಾನು, ಎಸಿ, ಎಲ್ಲದಕ್ಕೂ ರಿಮೋಟ್‌ ಇಟ್ಟುಕೊಳ್ಳುತ್ತೇವೆ, ಎದ್ದು ಹೋಗಿ ಗೋಡೆ ಮೇಲಿನ ಬಟನ್‌ ಒತ್ತುವವರಲ್ಲ. ಜೀವನಶೈಲಿಯೇ ಇಷ್ಟು ಜಡವಾಗಿದೆ. ಇದರ ಜೊತೆಗೆ ವ್ಯಾಯಾಮವೂ ನಾಸ್ತಿ, ಗುಜರಿ ತಿಂಡಿಗಳೂ ಜಾಸ್ತಿ ಎಂದಾದರೆ ಮೈಯ ಮೂಲೆ-ಮೂಲೆಗಳಲ್ಲಿ ಕೊಬ್ಬು ಸೇರದೆ ಇನ್ನೇನಾಗುವುದಕ್ಕೆ ಸಾಧ್ಯ?

ಅರಿವಿನ ಕೊರತೆ

ಹೆಚ್ಚಿನವರಲ್ಲಿ ಪೌಷ್ಟಿಕಾಂಶದ ಬಗೆಗಿನ ಅರಿವಿನ ಕೊರತೆಯಿದೆ. ಸಂಸ್ಕರಿತ ಆಹಾರವೆಂದರೇನು ಎನ್ನುವ ಬಗ್ಗೆಯೇ ಸರಿಯಾದ ಜ್ಞಾನ ಇರುವುದಿಲ್ಲ. ಮನೆಯಲ್ಲಿ ಮಾಡಿದ್ದಾದರೆ ಏನನ್ನಾದರೂ ತಿನ್ನಬಹುದು ಎನ್ನುವ ತೀರ್ಮಾನಕ್ಕೆ ಬಂದಿರುತ್ತಾರೆ. ಫ್ರೆಂಚ್‌ ಫ್ರೈಸ್‌ ಮನೆಯಲ್ಲೇ ಮಾಡಿದ್ದಾದರೂ ಆರೋಗ್ಯಕ್ಕೆ ಹಾನಿಯೆ, ಇದರಲ್ಲಿ ವ್ಯತ್ಯಾಸವಿಲ್ಲ. ಇನ್ನು ಕೆಲವರಿಗೆ ಬೊಜ್ಜುಭರಿತ ಶರೀರದಿಂದ ಆಗುವ ಹಾನಿಯ ಬಗ್ಗೆಯೇ ಮಾಹಿತಿ ಇರುವುದಿಲ್ಲ.

ಅತಿಯಾದ ನಗರೀಕರಣ

ಎಲ್ಲರಿಗೂ ಯೋಗ, ಪಿಲಾಟೆ, ಜಿಮ್‌ ಎಂದೆಲ್ಲಾ ಕ್ಲಾಸುಗಳಿಗೆ ಹೋಗುವ ಸಾಧ್ಯತೆ ಇರುವುದಿಲ್ಲ. ಮನೆಯಲ್ಲೇ ಒಂದಿಷ್ಟು ವ್ಯಾಯಾಮ ಮಾಡಿಕೊಳ್ಳೋಣವೆಂದರೆ, ಇಂದಿನ ನಗರಗಳ ಕಿಷ್ಕಿಂಧೆಯಂಥ ಮನೆಗಳಲ್ಲಿ ಅಷ್ಟೊಂದು ಜಾಗವಿರುವುದು ಕಡಿಮೆ. ಇರುವುದರಲ್ಲಿಯೇ ಮನೆಯ ಸುತ್ತಮುತ್ತ ವಾಕಿಂಗ್‌ ಹೋಗೋಣವೆಂದರೆ, ಕಾಂಕ್ರೀಟ್‌ ಕಾಡುಗಳಲ್ಲಿ ಹತ್ತಿರದಲ್ಲಿ ಉದ್ಯಾನಗಳು ಇರುವುದಿಲ್ಲ; ರಸ್ತೆಯ ಮೇಲೆ ಜೀವಭಯ ಹುಟ್ಟಿಸುವ ಟ್ರಾಫಿಕ್.‌ ದೇಹಕ್ಕೆ ಚಟುವಟಿಕೆ ಎಲ್ಲಿಂದ ಬರಬೇಕು?

ಆರ್ಥಿಕ ಕಾರಣಗಳು

ಆರ್ಥಿಕವಾಗಿ ಅನುಕೂಲಗಳು ಕಡಿಮೆ ಇರುವುದು ಸಹ ಆನಾರೋಗ್ಯಕರ ಆಹಾರದ ಸೇವನೆಗೆ ಪ್ರೇರೇಪಿಸಬಹುದು. ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ಎಣ್ಣೆ ಬಳಸುವುದು ಅನಿವಾರ್ಯ ಆಗಬಹುದು. ಕೊಂಚ ದುಬಾರಿ ಎನಿಸುವ ಕಾಳು-ಧಾನ್ಯಗಳನ್ನು ಕೊಳ್ಳಲು ಕಷ್ಟವಾಗಬಹುದು. ಇಡೀ ಕುಟುಂಬಕ್ಕೆ ಖರೀದಿಸುವ ಹಾಲಿನ ಪ್ರಮಾಣ ಕಡಿಮೆಯಿದ್ದರೆ, ದಿನಕ್ಕೊಂದು ಲೋಟ ಹಾಲು ಕುಡಿಯಲೂ ಅಸಾಧ್ಯ ಎನಿಸಬಹುದು. ಇದರ ಫಲವಾಗಿ ಶರೀರ ಸ್ಥೂಲವಾದರೂ, ಅಪೌಷ್ಟಿಕತೆ ಕಾಡಬಹುದು.

ವಂಶವಾಹಿಗಳು

ಕೆಲವೊಮ್ಮೆ ಆನುವಂಶಿಕವಾಗಿ ಸ್ಥೂಲ ಶರೀರಗಳು ಬರಬಹುದು. ಇದಕ್ಕಾದರೂ ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮಗಳನ್ನು ಅನುಸರಿಸಿದರೆ, ಪರಿಸ್ಥಿತಿ ಕೈ ಮೀರದಂತೆ ಕಾಪಾಡಿಕೊಳ್ಳಬಹುದು. ಒಂದೊಮ್ಮೆ ಜೀವನಶೈಲಿಯ ಬಗ್ಗೆ ಗಮನ ನೀಡದಿದ್ದರೆ ಕಾದಿರುವ ಅನಾರೋಗ್ಯಗಳನ್ನು ತಡೆಯಲು ನಿಜಕ್ಕೂ ಕಷ್ಟವಾಗುತ್ತದೆ.

ಇದನ್ನೂ ಓದಿ: Why zinc is necessary: ನಮ್ಮ ಆರೋಗ್ಯಕ್ಕೆ ಜಿಂಕ್‌ ಏಕೆ ಬೇಕೆಂದರೆ…

Exit mobile version