Site icon Vistara News

Benefits Of Betel Leaves: ತಾಂಬೂಲ ಸವಿ ಬಣ್ಣಿಸುವುದಕ್ಕೆ ಮೆಲ್ಲುವುದೇ ದಾರಿ!

Betel Leaves

ತಾಂಬೂಲ ಚೂರ್ಣಿಸುವುದು ಎನ್ನುತ್ತಿದ್ದಂತೆ ಹಲವರ ತುಟಿಗಳು ಕೆಂಪೇರಬಹುದು. ಕೆಂಪೆಂದರೆ- ತಿಳಿಗೆಂಪು, ಕಡುಗೆಂಪು, ತುಸುಗೆಂಪು, ನಾಚಿನೀರಾದ ಕೆಂಪು. ಹೀಗೆ ಹಲವು ಛಾಯೆಗಳಲ್ಲಿ ಕಳೆಗಟ್ಟಿಸಬಹುದು ತಾಂಬೂಲ. ಅದರ ಸವಿಯೇ ಹಾಗೆ, ಎಂಥವರೂ ಮರುಳಾಗುವ ಹಾಗೆ. ಹಬ್ಬ, ಹರಿದಿನ, ಶುಭ ಕಾರ್ಯಗಳಲ್ಲಿ ನೀಡಲಾಗುವ ತಾಂಬೂಲಗಳಿಂದ ಹಿಡಿದು, ತಿಂದಿದ್ದು ಹೆಚ್ಚಾಗಿ ಉಬ್ಬರಿಸುವ ಹೊಟ್ಟೆ ಸರಿ ಮಾಡುವುದಕ್ಕೆ, ನಸುನಾಚುತ್ತಾ ಇನಿಯನ ಕೈಗಿಡುವವರೆಗೆ ತಾಂಬೂಲ ಬಹೂಪಯೋಗಿ. ಹೀಗೆ ಮೆಲ್ಲುವ ಇದರಲ್ಲಿ ಹಲವು ರೀತಿಯ ವ್ಯಂಜನಗಳು ಇರಬಹುದಾದರೂ ಪ್ರಧಾನವಾಗಿ ಬೇಕಾಗಿದ್ದು ವೀಳ್ಯದೆಲೆ (Benefits of betel leaves).

ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು 2ಕೋಟಿಗೂ ಹೆಚ್ಚು ಮಂದಿಗೆ ನಿತ್ಯವೂ ತಾಂಬೂಲ ಅಥವಾ ಪಾನ್‌ ಮೆಲ್ಲುವ ಹವ್ಯಾಸ ಇದೆಯಂತೆ. ಅಪರೂಪಕ್ಕೆ ಜಗಿಯುವವರದ್ದು ಬೇರೆಯದೇ, ಇನ್ನೂ ವಿಸ್ತಾರವಾದ ಕೆಟಗರಿ. ಹಾಗಾಗಿಯೇ ವೀಳ್ಯದೆಲೆಯನ್ನು 55ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಒಟ್ಟು ಉತ್ಪಾದನೆಯ ಶೇ. 66ರಷ್ಟು ಬರುವುದು ಪಶ್ಚಿಮ ಬಂಗಾಳದಿಂದ. ಮಾರುಕಟ್ಟೆಯಲ್ಲಿ ಒಂದರ ಜುಟ್ಟಿಗೆ ಇನ್ನೊಂದು ಅಂಟಿಕೊಂಡು ಒದ್ದೆ ಗೋಣಿಚೀಲದಡಿಗೆ ಕುಕ್ಕೆಯಲ್ಲಿ ಅಡಗಿ ಕೂರುವ ಈ ಎಲೆಗಳ ವಾರ್ಷಿಕ ವಹಿವಾಟು ಅಜಮಾಸು 900ಕೋಟಿ ರೂ.ಗಳು!

ಪೋಷಕಾಂಶಗಳು ಏನಿವೆ?

ಇಷ್ಟೆಲ್ಲಾ ಅಗಿಯುತ್ತಾ ಕೂರುವಂಥದ್ದು ಏನಿದೆ ಈ ಎಲೆಗಳಲ್ಲಿ ಎಂಬ ಕುತೂಹಲ ಸಹಜ (Benefits of betel leaves). ಪ್ರತಿ ನೂರು ಗ್ರಾಂ ವೀಳ್ಯದೆಲೆಯಲ್ಲಿ 1.3 ಮೈಕ್ರೋ ಗ್ರಾಂ ಅಯೋಡಿನ್‌, 4.6 ಮೈಕ್ರೋ ಗ್ರಾಂ ಪೊಟಾಶಿಯಂ, 2.9 ಮೈಕ್ರೋ ಗ್ರಾಂ ವಿಟಮಿನ್‌ ಎ, 3 ಮೈಕ್ರೋ ಗ್ರಾಂ ವಿಟಮಿನ್‌ ಬಿ1, 0.75 ಮೈಕ್ರೋ ಗ್ರಾಂನಷ್ಟು ನಿಕೋಟಿನಿಕ್‌ ಆಮ್ಲವಿದೆ. ಇದೀಗ ಪೋಷಕ ಸತ್ವಗಳ ಅಂಕಿ-ಅಂಶಗಳಾದವು. ಇದನ್ನು ಮೆಲ್ಲುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಗಮನಿಸಿದರೆ-

ಮಲಬದ್ಧತೆ ನಿವಾರಣೆ

ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳ ಖಜಾನೆಯಿದ್ದಂತೆ. ದೇಹದ ಪಿಎಚ್‌ ಸಮತೋಲನವನ್ನು ಕಾಯ್ದುಕೊಂಡು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯ ಕಷಾಯ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಗೆ ಸಹಾಯವಾಗುತ್ತದೆ. ಅಥವಾ ಹಸಿ ಎಲೆಯನ್ನು ರಾತ್ರಿಯೇ ಕಿವುಚಿಟ್ಟು. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಅದನ್ನು ಶೋಧಿಸಿಕೊಂಡು ನೀರನ್ನಷ್ಟೇ ಕುಡಿಯುವುದು ಪರಿಣಾಮಕಾರಿ.

ಬಾಯಿಯ ಆರೋಗ್ಯ ಕಾಪಾಡುತ್ತದೆ

ತಾಂಬೂಲ ಮೆಲ್ಲುವುದರಿಂದ ಬಾಯಿಯ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ. ಬಾಯಿಯ ದುರ್ಗಂಧದಿಂದ ಮುಕ್ತಿ ಪಡೆಯಲು ಪರಿಣಾಮಕಾರಿ ಮಾರ್ಗವಿದು. ಮಾತ್ರವಲ್ಲ, ಹಲ್ಲು ಹಳದಿಯಾದರೆ, ಹುಳುಕಾದರೆ ವೀಳ್ಯದೆಲೆ ಜಗಿಯುವುದು ಉಪಯುಕ್ತ. ಒಸಡುಗಳಲ್ಲಿ ಬಾವು, ನೋವುಗಳಿದ್ದರೆ ಉತ್ತಮ ಉಪಶಮನ ನೀಡುತ್ತದೆ. ಒಟ್ಟಾರೆಯಾಗಿ, ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಸವಿಯಾದ ಮಾರ್ಗವಿದು.

ಶ್ವಾಸಕೋಶಗಳ ಆರೋಗ್ಯವರ್ಧನೆ

ಕೆಮ್ಮು, ನೆಗಡಿ, ಕಫ, ಬ್ರಾಂಕೈಟಿಸ್‌, ಅಸ್ತಮಾದಂಥ ಸಮಸ್ಯೆಗಳ ನಿಯಂತ್ರಣಕ್ಕೆ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಇದರಲ್ಲಿರುವ ಸತ್ವಗಳು ಕಫ ಕರಗಲು ನೆರವಾಗಿ ಉಸಿರಾಟ ಸರಾಗ ಮಾಡುತ್ತವೆ.

ಒತ್ತಡ ನಿವಾರಣೆ

ತಾಂಬೂಲ ಮೆಲ್ಲುವ ಕ್ರಿಯೆಯಲ್ಲಿ ಒತ್ತಡ ನಿವಾರಣೆಯ ರಹಸ್ಯವೂ ಅಡಗಿದೆ. ಇದರಲ್ಲಿರುವ ಫಿನಾಲ್‌ ಅಂಶಗಳು ಆತಂಕ, ಒತ್ತಡ ಕರಗಿಸಲೂ ಪ್ರಯೋಜನಕಾರಿ. ಪದೇಪದೆ ಮೂಡ್‌ ಬದಲಾವಣೆಯಿಂದ ಒದ್ದಾಡುತ್ತಿರುವವರೂ ತಾಂಬೂಲವನ್ನು ಸವಿದರೆ ಉಪಯೋಗವಿದೆ.

ಮಧುಮೇಹ ನಿಯಂತ್ರಣ

ಇದರ ಹೈಪರ್ಗ್ಲೈಸೆಮಿಕ್‌ ನಿರೋಧಕ ತತ್ವಗಳು ಮಧುಮೇಹಿಗಳಿಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಅದರಲ್ಲೂ ಟೈಪ್‌ 4 ಮಧುಮೇಹಿಗಳು ಪಾನ್‌ ಚೂರ್ಣಿಸುವುದು ಪ್ರಯೋಜನಕಾರಿ. ಆದರೆ ವೀಳ್ಯದೆಲೆಯ ಜೊತೆಯಲ್ಲಿ ಸಿಹಿಯಾದ ವ್ಯಂಜನಗಳನ್ನು ಸೇರಿಸಿಕೊಂಡರೆ ಸರ್ವಬಣ್ಣ ಮಸಿ ನುಂಗಿದಂತಾದೀತು, ಎಚ್ಚರ!

ಇದಲ್ಲದೆ, ಕೂದಲಿನ ಕಾಂತಿ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವುದಕ್ಕಾಗಿ ವೀಳ್ಯದೆಲೆಯ ಹೇರ್‌ಪ್ಯಾಕ್‌ ಮಾಡುವ ಕ್ರಮವೂ ಇದೆ. ಕೆಲವರು ವೀಳ್ಯದೆಲೆಯ ಎಣ್ಣೆಯನ್ನೂ ಮಾಡಿ, ಕೂದಲಿಗೆ ಹಚ್ಚುವವರಿದ್ದಾರೆ.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Exit mobile version