Site icon Vistara News

Y Chromosome | ಮಾನವನ ಲಿಂಗ ನಿರ್ಧರಿಸುವ ವೈ ವರ್ಣತಂತುವೇ ನಶಿಸುತ್ತಿದೆಯೇ?

Y Chromosome

ಮಾನವನಲ್ಲಿ ಪುರುಷರ ಲಿಂಗ ನಿರ್ಧರಿಸುವ ವೈ ವರ್ಣತಂತು ನಿಧಾನವಾಗಿ ನಶಿಸಿಹೋಗುತ್ತಿದ್ದು, ಮುಂದೊಂದು ದಿನ ಇದು ಮಾನವನ ಅವನತಿಗೆ ಕಾರಣವಾಗಬಹುದೆಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ ಇದು ಬೆಳಕಿಗೆ ಬಂದಿದ್ದು, ಮಾನವನೂ ಸೇರಿದಂತೆ ಇತರ ಸಸ್ತನಿಗಳು ಇನ್ನು ೧೧ ಮಿಲಿಯನ್‌ ವರ್ಷಗಳ ನಂತರ ವಿನಾಶ ಹೊಂದುವ ಸಾಧ್ಯತೆಯಿದೆ ಎಂದಿದೆ.

ಎಲ್ಲ ಸಸ್ತನಿಗಳಂತೆ ಮನುಷ್ಯನಲ್ಲಿ ಎರಡು ಬಗೆಯ ವರ್ಣತಂತುಗಳಿದ್ದು, ಇದರಲ್ಲಿ ಎಕ್ಸ್‌ ಎಂಬುದು ಮಹಿಳೆಯ ಲಿಂಗವನ್ನೂ, ವೈ ಎಂಬುದು ಪುರುಷನ ಲಿಂಗವನ್ನೂ ನಿರ್ಧರಿಸುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪುರುಷನ ಲಿಂಗವನ್ನು ನಿರ್ಧರಿಸುವ ವೈ ವೃಣತಂತುವೇ ನಿಧಾನವಾಗಿ ನಶಿಸಿಹೋಗುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಶೋಧನೆಗಳ ಪ್ರಕಾರ, ವೈ ವರ್ಣತಂತು ನಿಧಾನವಾಗಿ ಅಳಿವಿನ ಹಾದಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಇಲಿ ಜಾತಿಗೆ ಸೇರಿದ ಎರಡು ಪ್ರಾಣಿಗಳು ಹಾಗೂ ಪ್ಲಾಟಿಪಸ್‌ಗೆ ಆದ ಪರಿಸ್ಥಿತಿಯೇ ಮನುಷ್ಯನಿಗೂ ಬರುವ ಸಾಧ್ಯತೆಯಿದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ಆದರೆ, ವಿಶೇಷವೆಂದರೆ, ಪ್ಲಾಟಿಪಸ್‌ ಹಾಗೂ ಉಳಿದೆರಡು ಬಗೆಯ ಇಲಿ ಜಾತಿಗೆ ಸೇರಿದ ಪ್ರಾಣಿಗಳು ತಮ್ಮ ವೈ ವರ್ಣತಂತುವನ್ನು ಕಳೆದುಕೊಂಡರೂ ಅಳಿದು ಹೋಗಿಲ್ಲ. ಅವು ಕಾಲ ಕ್ರಮೇಣ ಬೇರೆಯೇ ವರ್ಣತಂತುವನ್ನು ತಮ್ಮೊಳಗೇ ಅಭಿವೃದ್ಧಿಪಡಿಸಿಕೊಂಡು ಇಂದಿಗೂ ಭೂಮಿಯಲ್ಲಿ ಜೀವಿಸುತ್ತಿದೆ ಎಂಬುದೇ ಸಮಾಧಾನದ ಸಂಗತಿ.

ಆಸ್ಟ್ರೇಲಿಯಾದ ಪ್ಲಾಟಿಪಸ್‌ನಲ್ಲಿ ಸಂಪೂರ್ಣವಾಗಿ ಬೇರೆಯದೇ ವರ್ಣತಂತುಗಳಿವೆ. ಇದರಲ್ಲಿರುವ ಎಕ್ಸ್‌ ಹಾಗೂ ವೈ ವರ್ಣತಂತು ಸಾಮಾನ್ಯ ವರ್ಣತಂತುವಾಗಿ ವಂಶವಾಹಿನಿಯಲ್ಲಿ ಮುಂದುವರಿದಿದೆ. ಆದರೆ, ಲಿಂಗವನ್ನು ನಿರ್ಧರಿಸುವ ವರ್ಣತಂತು ಬದಲಾಗಿದೆ.

ಪೂರ್ವ ಯುರೋಪ್‌ನ ಇಲಿ ಜಾತಿಗೆ ಸೇರಿದ ಪ್ರಾಣಿ ಹಾಗೂ ಜಪಾನಿನ ಇಲಿಯೊಂದರ ತಳಿಯಲ್ಲಿ ವೈ ವರ್ಣತಂತು ಸಂಪೂರ್ಣವಾಗಿ ಮಾಯವಾಗಿದೆ. ಎಕ್ಸ್‌ ವರ್ಣತಂತು ಏಕಾಂಗಿಯಾಗಿ ಅಥವಾ ಜಂಟಿಯಾಗಿ ಈ ಪ್ರಾಣಿಗಳ ಗಂಡು ಹಾಗೂ ಹೆಣ್ಣುಗಳಲ್ಲಿ ಉಳಿದುಕೊಂಡಿದೆ.  ಹಾಗೂ ಈ ಬಗ್ಗೆ ಅಲ್ಲಿ ಸಾಕಷ್ಟು ಪ್ರಯೋಗಗಳೂ ಅಧ್ಯಯನಗಳೂ ನಡೆಯುತ್ತಿವೆ. ಜಪಾನಿನ ದ್ವೀಪಗಳಲ್ಲಿ ಈ ಬಗೆಯ ಇಲಿಗಳು ಅಳುವಿನಂಚಿನಲ್ಲಿ ಇವೆ ಎಂಬುದನ್ನು ಲೆಕ್ಕಾಚಾರ ಹಾಕಲಾಗಿದೆ.

ಹಾಗಾದರೆ, ಮನುಷ್ಯನಲ್ಲೂ ಇಂಥದ್ದೇ ಪರಿಸ್ಥಿತಿ ಬರಬಹುದೆಂದಾದಲ್ಲಿ, ಮನುಷ್ಯನ ದೇಹವೂ ಹೊಸತೊಂದು ಬಗೆಯ ಜೀವವಿಕಾಸದ ಹಾದಿಯಲ್ಲಿ ತನ್ನೊಳಗೇ ಇನ್ನೊಂದು ವರ್ಣತಂತು ಲಿಂಗ ನಿರ್ಧಾರಕ್ಕೆ ನಾಂದಿ ಹಾಡುತ್ತದೋ ಎಂಬ ಕುತೂಹಲವೂ ಇದೆ.

ವೈ ವರ್ಣತಂತು ಗರ್ಭಕೋಶದಲ್ಲಿರುವಾಗಲೇ ಶಿಶು ಗಂಡಾಗಿ ರೂಪುಗೊಳ್ಳುವ ಪ್ರತಿ ಬೆಳವಣಿಗೆಯ ಹಂತವನ್ನು ನಿರ್ಧರಿಸುತ್ತದೆ. ೧೨ ವಾರಗಳಲ್ಲಿ ಗರ್ಭದಲ್ಲಿ ಗಂಡು ಶಿಶು ತನ್ನ ಎಲ್ಲ ಬಗೆಯ ದೇಹರಚನೆಯೂ ಪಡೆದುಕೊಳ್ಳಲಾರಂಭಿಸುತ್ತದೆ. ಮಗುವಿನ ಶಿಶ್ನ, ವೃಷಣಗಳೂ ಇದೇ ಸಂದರ್ಭ ರಚನೆಯಾಗುತ್ತದೆ. ಹಾಗಾಗಿ, ವೈ ವರ್ಣತಂತು ಗರ್ಭಕೋಶದಲ್ಲಿರುವಾಗಲೇ ಭ್ರೂಣದ ಲಿಂಗ ನಿರ್ಧರಿಸುತ್ತದೆ.

ಇದನ್ನೂ ಓದಿ | Sudden cardiac death | ಮೊದಲೇ ತಿಳಿಯುವುದು, ತಪ್ಪಿಸುವುದು ಹೇಗೆ?

ಬಹುತೇಕ ಎಲ್ಲ ಸಸ್ತನಿಗಳಲ್ಲೂ ಎಕ್ಸ್‌ ಹಾಗೂ ವೈ ಎಂಬ ಎರಡು ಬಗೆಯ ವರ್ಣತಂತುಗಳಿವೆ. ಎರಡು ಎಕ್ಸ್‌ಗಳು ಸೇರಿದರೆ ಹೆಣ್ಣೆಂದೂ, ಎರಡು ವೈಗಳು ಸೇರಿದರೆ ಗಂಡೆಂಬುದೂ ವೇದ್ಯ. ಮನುಷ್ಯ ಹಾಗೂ ಇತರ ಸಸ್ತನಿಗಳಲ್ಲಿ ೩೦ ಬಗೆಯ ಅಚ್ಚುಗಳ ಬೇರೆಬೇರೆ ವಂಶವಾಹಿನಿಗಳಿದ್ದು ಇವು ವೀರ್ಯದ ಪ್ರವಹಿಸುವ ಮೂಲಕವಷ್ಟೇ ಕೆಲಸ ಮಾಡಬಲ್ಲದು. ಹಾಗಾಗಿ ಸಂತಾನೋತ್ಪತ್ತಿ ಮಾಡಬೇಕೆಂದರೆ, ವೀರ್ಯ ಪುರುಷರ ಮೂಲಕವೇ ಪ್ರವಹಿಸಬೇಕಾಗಿರುವುದರಿಂದ, ಮನುಷ್ಯ ಮುಂದೊಂದು ದಿನ ಇಂತಹ ಸ್ಥಿತಿ ತಲುಪುವ ಸಾಧ್ಯತೆಗಳಿವೆಯೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಆದರೂ, ಮನುಷ್ಯನ ಜೀವ ವಿಕಾಸದ ಹಾದಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಲೇ ಬಂದಿರುವುದರಿಂದ ಮುಂದೊಂದು ದಿನ ಮನುಷ್ಯನೂ ತನ್ನ ವಂಶವಾಹಿನಿಯಲ್ಲಿ ಹಲವು ಅಭಿವೃದ್ಧಿಪಡಿಸಿದ ವರ್ಣತಂತುಗಳನ್ನು ಹೊಂದುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುತ್ತಿಲ್ಲ.

ಆದರೆ, ಇವೆಲ್ಲ ಇಂದು ನಾಳೆಯ ಮಾತಲ್ಲ. ೧೧ ಮಿಲಿಯನ್‌ ವರ್ಷಗಳ ನಂತರ ಭೂಮಿಯ ಮೇಲೆ ಮನುಷ್ಯನೆಂಬ ಜೀವಿಯೇ ಅಳಿಸಿಹೋಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಪ್ಲಾಟಿಪಸ್‌ ತನ್ನ ವೈ ವರ್ಣತಂತುವಿನಲ್ಲಿರುವ ೯೦೦-೫೫ ಕ್ರಿಯಾಶೀಲ ವಂಶವಾಹಿಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳಲು ೧೬೬ ವಿಲಿಯನ್‌ ವರ್ಷಗಳನ್ನು ತೆಗೆದುಕೊಂಡಿರುವುದರಿಂದ ಈ ಅಂದಾಜಿನಲ್ಲಿ ಮಾನವ ತನ್ನ ೫೫ ವಂಶವಾಹಿನಿಯನ್ನು ಕಳೆದುಕೊಳ್ಳಲು ೧೧ ಮಿಲಿಯನ್‌ ವರ್ಷಗಳು ಬೇಕಾಗಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.

ಇದನ್ನೂ ಓದಿ | Dandruff control | ಚಳಿಗಾಲದ ತಲೆಹೊಟ್ಟಿನ ಸಮಸ್ಯೆಗೆ ಈ ಆಹಾರಗಳನ್ನು ಸೇವಿಸಿ!

Exit mobile version