Site icon Vistara News

Women’s Day 2024: 30 ವರ್ಷದ ನಂತರ ಮಹಿಳೆಯರು ಮಾಡಿಸಲೇಬೇಕಾದ ಆರೋಗ್ಯ ತಪಾಸಣೆಗಳಿವು

These are the health checks that women should do after the age of 30

ಬದುಕಿನ ಪ್ರತಿಯೊಂದು ಹಂತದಲ್ಲೂ ಹಲವಾರು ಬದಲಾವಣೆಗಳಿಗೆ ಸ್ತ್ರೀಯರ ದೇಹಗಳು ಒಳಪಡುತ್ತಲೇ ಇರುತ್ತವೆ. ಇದಕ್ಕೆ ಜೊತೆಯಾಗಿ ಮಾನಸಿಕ ಬದಲಾವಣೆಗಳೂ ಸಂಭವಿಸುತ್ತಿರುತ್ತವೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎನಿಸಿದರೂ, ಆಂತರಿಕವಾಗಿ ಆಗುವ ಸಮಸ್ಯೆಗಳು ಆರಂಭದಲ್ಲಿ ಗೋಚರಿಸದೇ ಹೋಗಬಹುದು. ಹಾಗಾಗಿ ಮೂವತ್ತು ವರ್ಷಕ್ಕೆ ಮೇಲ್ಪಟ್ಟ ಮಹಿಳೆಯರಿಗೆ ಕೆಲವು ಮುಂಜಾಗ್ರತಾ ಪರೀಕ್ಷೆಗಳು ಆರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತವೆ. ಯಾವ ಪರೀಕ್ಷೆಗಳವು?

ಥೈರಾಯ್ಡ್‌ ಪರೀಕ್ಷೆ

ದೇಹದ ಕೆಲಸಕ್ಕೆ ಅಗತ್ಯವಾಗಿ ಬೇಕಾದಂಥ ಚೋದಕಗಳನ್ನು ಥೈರಾಯ್ಡ್‌ ಗ್ರಂಥಿ ನೀಡುತ್ತದೆ. ಈ ಗ್ರಂಥಿಯ ಕೆಲಸದಲ್ಲಿ ಏರುಪೇರಾದರೆ ದೇಹದ ಆರೋಗ್ಯವೂ ಏರುಪೇರಾಗುತ್ತದೆ. ಕೂದಲು ಉದುರುವುದು, ಋತುಸ್ರಾವದಲ್ಲಿ ಏರುಪೇರು, ಮಾನಸಿಕ ಸಮಸ್ಯೆಗಳು ಮುಂತಾದ ಹಲವು ತೊಂದರೆಗಳು ಬೆನ್ನು ಬೀಳುತ್ತವೆ. ಹಾಗಾಗಿ ರಕ್ತ ಪರೀಕ್ಷೆಯಲ್ಲಿ ಟಿಎಸ್‌ಎಚ್‌ ಪತ್ತೆ ಪರೀಕ್ಷೆ ಮಾಡಿಸುವುದು 30 ವರ್ಷದ ನಂತರ ಅಗತ್ಯವಾಗಿ ಬೇಕು.

ಪಾಪ್‌ ಸ್ಮೇರ್‌

ಸರ್ವೈಕಲ್‌ ಅಥವಾ ಗರ್ಭಕಂಠದ ಕ್ಯಾನ್ಸರ್‌ ಇತ್ತೀಚಿನ ವರ್ಷಗಳಲ್ಲಿ ಸಿಕ್ಕಾಪಟ್ಟೆ ಹೆಚ್ಚಿದೆ. ಶೇ. 9ಕ್ಕೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಈ ತೊಂದರೆಯನ್ನು ಪ್ರಾರಂಭವಾಗುವ ಮೊದಲೇ ಪತ್ತೆ ಮಾಡುವ ಸಾಧ್ಯತೆ ಪಾಪ್‌ ಪರೀಕ್ಷೆಯಲ್ಲಿದೆ. 30 ವರ್ಷದ ನಂತರ ಪ್ರತಿಯೊಬ್ಬ ಮಹಿಳೆಯೂ ಪ್ರತಿ ಮೂರು ವರ್ಷಗಳಿಗೊಮ್ಮೆ ಸ್ತ್ರೀರೋಗ ತಜ್ಞರಲ್ಲಿ ಈ ಪರೀಕ್ಷೆಯನ್ನು ಮಾಡಿಸಲೇಬೇಕು.

ಇದನ್ನೂ ಓದಿ: Women’s Day 2024: ಅಪರೂಪದ ಕಾಯಿಲೆಯ ಮಗನ ಜತೆಗೂ ಪ್ರಪಂಚ ಸುತ್ತುವ ಈ ಅಮ್ಮನೆಂಬ ಸ್ಫೂರ್ತಿ!

ವಿಟಮಿನ್‌ ಡಿ ಮತ್ತು ಕ್ಯಾಲ್ಶಿಯಂ

ಮೂಳೆಗಳ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಈ ಅಂಶಗಳು ದೇಹದಲ್ಲಿ ಎಷ್ಟಿವೆ ಎಂಬುದನ್ನು ಪತ್ತೆ ಮಾಡುವ ಪರೀಕ್ಷೆಯಿದು. ಇವುಗಳು ಕಡಿಮೆಯಿದ್ದರೆ ಆಸ್ಟಿಯೊಪೊರೊಸಿಸ್‌ ಅಥವಾ ಮೂಳೆಗಳು ಟೊಳ್ಳಾಗಿ ಮುರಿಯುವ ಭೀತಿ ಎದುರಾಗುತ್ತದೆ. ಕ್ಯಾಲ್ಶಿಯಂ ಮತ್ತು ವಿಟಮಿನ್‌ ಡಿ ಕೊರತೆಯಿದ್ದರೆ, ಮೊದಲಿಗೆ ಪೂರಕಗಳನ್ನು ತೆಗೆದುಕೊಂಡು ನಂತರ ಆಹಾರದ ಮೂಲಕ ಮಟ್ಟವನ್ನು ನಿರ್ವಹಿಸಬಹುದು.

ಸಿಬಿಸಿ

ಸಂಪೂರ್ಣ ರಕ್ತ ಪರೀಕ್ಷೆಯೂ ಬೇಕಾದೀತು. ಇದರಲ್ಲಿ ಅಂಗಾಂಗಗಳ ಕ್ಷಮತೆ, ಕೊಲೆಸ್ಟ್ರಾಲ್‌, ಹಿಮೊಗ್ಲೋಬಿನ್‌ ಮಟ್ಟ ಮುಂತಾದ ಹಲವಾರು ವಿಷಯಗಳನ್ನು ಪತ್ತೆ ಮಾಡಬಹುದು. ರಕ್ತಹೀನತೆಯಂಥ ಸಮಸ್ಯೆಗಳಿದ್ದರೆ ಇಲ್ಲಿ ಪತ್ತೆಯಾಗುತ್ತದೆ. ಪ್ರತಿ ವರ್ಷ ಹುಟ್ಟಿದ ದಿನಕ್ಕೆ ತಮಗೆ ತಾವೇ ಇಂಥದ್ದೊಂದು ಪರೀಕ್ಷೆಯ ಉಡುಗೊರೆಯನ್ನು ಕೊಟ್ಟುಕೊಳ್ಳಬಹುದು.

ಮೂಳೆ ಸಾಂದ್ರತೆ

ರಜೋನಿವೃತ್ತಿಯಾದ ಮಹಿಳೆಯರು ಮಾಡಿಸಬೇಕಾದ ಪರೀಕ್ಷೆಯಿದು. ಮೂಳೆಗಳ ಸಾಂದ್ರತೆ ಎಷ್ಟಿದೆ ಎಂಬುದನ್ನು ಡೆಕ್ಸ ಸ್ಕ್ಯಾನ್‌ ಮೂಲಕ ಪರೀಕ್ಷಿಸಲಾಗುತ್ತದೆ. ಋತುಬಂಧದ ನಂತರ ಮೂಳೆಗಳು ದುರ್ಬಲವಾಗುವ ಸಾಧ್ಯತೆ ಹೆಚ್ಚಾಗುವುದರಿಂದ, ಇಂಥ ಪರೀಕ್ಷೆಗಳು ಆರಂಭದಲ್ಲೇ ಸಮಸ್ಯೆಗಳನ್ನು ಸೂಚಿಸಬಲ್ಲವು. ಇದಕ್ಕೆ ಸೂಕ್ತ ಚಿಕಿತ್ಸೆಯನ್ನೂ ತೆಗೆದುಕೊಂಡು ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು.

Exit mobile version