ಈಗ ಕಳೆಯುತ್ತಿರುವ ಸಾಲಿನ (Year Ender 2023) ಸ್ವಾಸ್ಥ್ಯ ಲೋಕವನ್ನು ದಿಟ್ಟಿಸಿದರೆ, ಆರೋಗ್ಯ ಸಮಸ್ಯೆಯ ಪರಿಹಾರಗಳಿಗಾಗಿ ದೀರ್ಘಕಾಲೀನ ಕ್ರಮಗಳತ್ತ ಜನಮನ ವಾಲುತ್ತಿರುವ ಸೂಚನೆಗಳು ದಟ್ಟವಾಗಿವೆ. ಅದರಲ್ಲೂ ತೂಕ ಹೆಚ್ಚಳದಿಂದಾಗುವ ಅಡ್ಡ ಪರಿಣಾಮಗಳನ್ನು ಗ್ರಹಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ತೂಕ ಇಳಿಸುವ ಮತ್ತು ಆನಂತರ ಅದನ್ನು ಸುಸ್ಥಿರವಾಗಿ ನಿಭಾಯಿಸುವ ಮಾರ್ಗಗಳನ್ನು ಜನ ತಡಕುತ್ತಿರುವುದು ಸ್ಪಷ್ಟವಾಗಿದೆ. ತೂಕ ಇಳಿಸುವುದಕ್ಕೆ ಇಡೀ ವರ್ಷದಲ್ಲಿ ಆಗಾಗ ಸದ್ದು ಮಾಡಿದ ಆಹಾರ ಕ್ರಮಗಳು ಯಾವುವು ಎಂಬುದರತ್ತ ಒಂದು ಕ್ಷಕಿರಣ.
ಬೊಜ್ಜು ಮತ್ತು ಅದರ ಸುತ್ತಮುತ್ತಲಿನ ಹಾನಿಕಾರಕ ಪರಿಣಾಮಗಳನ್ನು ದೂರ ಮಾಡಿ, ಪೂರ್ಣ ಸ್ವಾಸ್ಥ್ಯ ಸಾಧಿಸ ಬಯಸಿದವರು ಹೆಚ್ಚಾಗಿ ಗಮನ ಹರಿಸಿದ್ದು ವ್ಯಾಯಾಮಗಳ ಮೇಲೆ. ಆದರೆ ಕೇವಲ ವರ್ಕೌಟ್‌ಗಳಿಂದ ಮಾತ್ರವೇ ಬಯಸಿದ ಫಲಿತಾಂಶ ದೊರೆಯುತ್ತಿಲ್ಲ ಎನ್ನುವಾಗ, ಆಹಾರಕ್ರಮಗಳತ್ತ ದೃಷ್ಟಿ ಹರಿಸಿದರು. ಎರ್ರಾಬಿರ್ರಿ ಡಯೆಟ್ ಮಾಡಿದರೆ ಆರೋಗ್ಯ ಗೋವಿಂದ! ಹಾಗಾಗಿ ತೂಕ ಇಳಿಸುವ ಭರದಲ್ಲಿ ಆರೋಗ್ಯ ಹಾಳಾಗದಂತೆ, ಸತ್ವಗಳ ಕೊರತೆಯಾಗಿ ಇನ್ನೇನೋ ರೋಗಗಳು ಅಮರಿಕೊಳ್ಳದಂತೆ ನಿಭಾಯಿಸುವ ಅಗತ್ಯವೂ ಮನದಟ್ಟಾಗತೊಡಗಿತು. ಇವೆಲ್ಲವುಗಳ ನಡುವೆ, ಬೇಕಾಬಿಟ್ಟಿ ಅವೈಜ್ಞಾನಿಕ ಡಯೆಟ್‌ಗಳನ್ನು ಮಾಡಿ ಜೀವ ಕಳೆದುಕೊಂಡವರ ಸುದ್ದಿಗಳೂ ಬರತೊಡಗಿದವು. ಹಾಗಾಗಿ ಸ್ವಾಸ್ಥ್ಯ ಪ್ರಿಯರು ಮತ್ತು ಆಹಾರ ತಜ್ಞರು ಇಂಥ ಚುಟುಕು ಡಯೆಟ್‌ಗಳ ಬಗ್ಗೆ ಪದೇಪದೆ ಎಚ್ಚರಿಕೆ ನೀಡತೊಡಗಿದರು. ಈ ನಿಟ್ಟಿನಲ್ಲಿ ಪ್ರಯೋಜನಕಾರಿ ಎನಿಸಿದ ಕೆಲವು ಆಹಾರಕ್ರಮಗಳಿವು.
ಮಧ್ಯಂತರ ಉಪವಾಸ
ಈ ಕ್ರಮದಲ್ಲಿ ಇಂಥದ್ದೇ ಆಹಾರಗಳನ್ನು ತಿನ್ನಬೇಕೆಂಬ ಕಟ್ಟುನಿಟ್ಟಿಲ್ಲ. ಬದಲಿಗೆ ಆಹಾರ ಸೇವಿಸುವ ಹೊತ್ತಿನಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಿಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು. ಉದಾ, ಒಂದು ಊಟದಿಂದ ಇನ್ನೊಂದು ಊಟಕ್ಕೆ ೪ ತಾಸುಗಳ ಬಿಡುವು ಸಾಮಾನ್ಯವಾಗಿದ್ದರೆ, ಅದನ್ನು ೬ ತಾಸುಗಳಿಗೆ ಹೆಚ್ಚಿಸುವುದು… ಹೀಗೆ.
ಸಸ್ಯಜನ್ಯ ಆಹಾರ ಪದ್ಧತಿ
ಅಂದರೆ ವೇಗನ್ ಆಹಾರ ಪದ್ಧತಿ. ಪ್ರಾಣಿ ಮೂಲಗಳಿಂದ ದೊರೆಯುವಂಥ ಆಹಾರಗಳನ್ನು ಬಿಟ್ಟು ಹಣ್ಣು, ತರಕಾರಿ, ಇಡೀ ಧಾನ್ಯಗಳು, ಕಾಳುಗಳು. ಬೀಜಗಳು, ಕಾಯಿಗಳನ್ನು ಹೆಚ್ಚಾಗಿ ಸೇವಿಸುವುದು. ಇದರಿಂದ ತೂಕ ಇಳಿಕೆಯ ಜೊತೆಗೆ, ಹೃದಯ ಸಂಬಂಧಿ ರೋಗಗಳು, ಮಧುಮೇಹ, ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ನಿರ್ವಹಿಸಲು ಇದು ಒಳ್ಳೆಯ ಆಯ್ಕೆ ಎನಿಸಿದೆ. ಇದು ಪರಿಸರ-ಸ್ನೇಹಿ, ರೋಗಹರ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಈ ಆಹಾರಕ್ರಮದ ಅನುಯಾಯಿಗಳು.
ಸುಧಾರಿತ ಕೀಟೊ ಡಯೆಟ್
ಪಿಷ್ಟವನ್ನು ಸಂಪೂರ್ಣ ನಿರ್ಮೂಲ ಮಾಡುವಂಥ ಹಳೆಯ ಕೀಟೊ ಆಹಾರ ಪದ್ಧತಿಯಲ್ಲಿರುವ ದೋಷಗಳನ್ನು ನಿವಾರಿಸಿಕೊಂಡಿದೆ ಎಂಬ ಹಣೆಪಟ್ಟಿ ಹೊತ್ತಿದೆ ಈ ಸುಧಾರಿತ ಕೀಟೊ ಡಯೆಟ್. ಇದರಲ್ಲಿ ಕೊಬ್ಬು ಮತ್ತು ಪ್ರೊಟೀನ್ ಜೊತೆಗೆ ಪಿಷ್ಟವನ್ನೂ ಸೇರಿಸಲಾಗಿದೆ. ಈ ಹೊಸ ಕೀಟೊ ಪದ್ಧತಿಯನ್ನು ಅಳವಡಿಸಿಕೊಳ್ಳುವುದು, ಹೆಚ್ಚು ದಿನಗಳವರೆಗೆ ಅನುಸರಿಸುವುದು ಕಷ್ಟವಲ್ಲ ಎಂದೂ ಹೇಳಲಾಗಿದೆ.
ಮೈಂಡ್‌ಫುಲ್‌ನೆಸ್
ಇದನ್ನು ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಉತ್ತೇಜಿಸುತ್ತಿರುವಂತೆ, ಊಟದಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ. ತಿನ್ನುತ್ತಾ ಟಿವಿ, ಕಂಪ್ಯೂಟರ್, ಮೊಬೈಲ್ ನೋಡುವುದು, ಏನನ್ನೋ ಓದುವುದು- ಇವೆಲ್ಲಾ ಅಗತ್ಯವಿಲ್ಲ. ಪ್ರತಿ ತುತ್ತನ್ನೂ ಆಸ್ವಾದಿಸುತ್ತಾ, ಆಹಾರದ ಘಮ, ರುಚಿ ಇತ್ಯಾದಿಗಳನ್ನು ಅನುಭವಿಸಿ, ಚೆನ್ನಾಗಿ ಅಗಿದು ತಿನ್ನಬೇಕು. ಮಾತ್ರವಲ್ಲ, ಆ ಹೊತ್ತಿನ ಆಹಾರ ಕೈಗೆ ದೊರೆತಿದ್ದಕ್ಕೆ ಕೃತಜ್ಞತೆಯೂ ಮನದಲ್ಲಿ ಇರಬೇಕು. ಇಂಥ ಕ್ರಮಗಳಿಂದ ಅತಿಯಾಗಿ ತಿನ್ನುವುದು ನಿಲ್ಲುತ್ತದೆ; ತಿಂದ ಆಹಾರದ ಬಗ್ಗೆ ತೃಪ್ತಿ ಮೂಡುತ್ತದೆ. ದೇಹದ ಚಯಾಪಚಯವೂ ವೃದ್ಧಿಸುತ್ತದೆ. ಇದನ್ನು ಮಾಡುವುದು ಸುಲಭವಲ್ಲವಾದರೂ, ಅಭ್ಯಾಸದಿಂದ ಸಾಧಿಸಿಕೊಳ್ಳಬಹುದು.
ಇದನ್ನೂ ಓದಿ: Health Benefits Of Curd Rice: ಮೊಸರನ್ನ ಎಂಬ ಅಮೃತ: ಹೊಟ್ಟೆಗೂ ಹಿತ, ದೇಹಕ್ಕೂ ಹಿತ!