Site icon Vistara News

Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

Winter Foods

ಚಳಿಗಾಲದಲ್ಲಿ ಎಲ್ಲೆಡೆ (foods to boost brain health) ಮಬ್ಬು ಆವರಿಸಿದಂತೆ, ಮೆದುಳಿಗೂ ಮೋಡ ಕವಿದ ವಾತಾವರಣವೇ. ಬೆಳಗಾದರೂ ಹೆಬ್ಬಾವಿನಂತೆ ಬಿದ್ದುಗೊಂಡಿರುವುದು, ಎದ್ದರೂ ಚಟುವಟಿಕೆಯಿಲ್ಲದಿರುವುದು ಇಂಥವೆಲ್ಲ ಮಾಮೂಲಿಯಾಗುತ್ತದೆ. ಆದರೆ ನಮ್ಮ ಶರೀರ ಮತ್ತು ಮೆದುಳು ಎಂದಿಗಿಂತಲೂ ಹೆಚ್ಚಿಗೆ ಕೆಲಸ ಮಾಡಬೇಕು. ಹೊರಗಿನ ಚಳಿಗೆ ಪ್ರತಿಯಾಗಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು, ಆಗಾಗ ದಾಳಿ ಮಾಡುವ ಸೋಂಕುಗಳಿಗೆ ಪ್ರತಿರೋಧವಾಗಿ ಶರೀರ ಹೆಚ್ಚು ಕೆಲಸ ಮಾಡಬೇಕು. ಈ ಎಲ್ಲಾ ಕೆಲಸಗಳ ಜೊತೆಗೆ ದೇಹ-ಮನಸ್ಸುಗಳು ಮಬ್ಬು, ಜಡತೆಯತ್ತ ಜಾರದಿರುವಂತೆ ಮಾಡಲು ಮೆದುಳು ಇನ್ನೂ ಚುರುಕಾಗಬೇಕು. ಚಳಿಗಾಲದಲ್ಲಿ ಇದಕ್ಕಾಗಿಯೇ ಮೆದುಳಿಗೆ ಹೆಚ್ಚಿನ ಪೋಷಣೆ ಬೇಕು. ವರ್ಷಾಂತ್ಯದ ಪ್ರವಾಸ ಮತ್ತು ರಜೆಯ ನೆವದಲ್ಲಿ ಸುಲಭಕ್ಕೆ ದೊರೆಯುವಂಥದ್ದು ಮತ್ತು ಬಾಯಿಗೆ ರುಚಿಸುವಂಥ ಆಹಾರಗಳತ್ತ ಮನಸ್ಸು ಹರಿಯುವುದು ಸಹಜ. ಆದರೆ ಇಂಥ ದಿನಗಳಲ್ಲಿ ದೇಹಕ್ಕೆ ಅಗತ್ಯವಾದ ಆಹಾರಗಳನ್ನು ಒದಗಿಸಿದರೆ, ಚಳಿಗಾಲದ ಸೋಂಕುಗಳೊಂದಿಗೆ ಹೋರಾಡಲು ಶರೀರ ಸಿದ್ಧವಿರುತ್ತದೆ. ಜೊತೆಗೆ ಮೆದುಳು ಸಹ ಚೈತನ್ಯಪೂರ್ಣವಾಗಿ ಇರುತ್ತದೆ. ಈ ಸತ್ವಗಳನ್ನು ಪೂರೈಸುವುದಕ್ಕೆ ಎಂಥ ಆಹಾರಗಳು ಅಗತ್ಯ?

ಕೊಬ್ಬಿನ ಮೀನುಗಳು

ಮೆದುಳಿನ ಟಾನಿಕ್‌ ಎಂದೇ ಕರೆಸಿಕೊಳ್ಳುವ ಸತ್ವವೆಂದರೆ ಒಮೇಗಾ ೩ ಕೊಬ್ಬಿನಾಮ್ಲ. ಇದು ಮೆದುಳಿನ ಕಾರ್ಯ ಮತ್ತು ಕ್ಷಮತೆಯನ್ನು ವೃದ್ಧಿಸುತ್ತದೆ. ಇದರಿಂದ ಮೆದುಳಿಗೆ ಬೇಕಾದ ಆಮ್ಲಜನಕದ ಪೂರೈಕೆ ಸಮೃದ್ಧವಾಗಿ ನಡೆದು, ಮೆದುಳು ಚುರುಕಾಗುತ್ತದೆ. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು ಈ ಹೊತ್ತಿಗೆ ಉಪಯುಕ್ತ.

ಕಾಯಿ-ಬೀಜಗಳು

ಎಲ್ಲಿಗೆ ಪ್ರಯಾಣಿಸುವಾಗಲೂ ಇವುಗಳನ್ನು ಒಯ್ಯುವುದು ಕಷ್ಟವಲ್ಲ. ಬಾದಾಮಿ, ವಾಲ್‌ನಟ್‌, ಶೇಂಗಾ, ಸೂರ್ಯಕಾಂತಿ ಮತ್ತು ಕುಂಬಳಕಾಯಿ ಬೀಜಗಳು, ಪಿಸ್ತಾ ಇತ್ಯಾದಿ ನಿಮ್ಮಿಷ್ಟ ಬೀಜಗಳನ್ನು ಇರಿಸಿಕೊಳ್ಳಬಹುದು. ಇದರಿಂದ ಮೆದುಳಿಗೆ ಬೇಕಾದ ಒಮೇಗಾ ೩ ಕೊಬ್ಬಿನಾಮ್ಲ ಹಾಗೂ ದೇಹಕ್ಕೆ ಬೇಕಾದ ಪ್ರೊಟೀನ್‌ ಮತ್ತು ಖನಿಜಗಳು ಸುಲಭವಾಗಿ ದೊರೆಯುತ್ತವೆ. ಪೌಷ್ಟಿಕವಾದ ಈ ಆಹಾರವನ್ನು ಹಸಿವಾದಾಗೆಲ್ಲ ಬಾಯಾಡಬಹುದು, ಗುಜರಿ ತಿಂಡಿಗಳ ಅಗತ್ಯವೇ ಬೀಳುವುದಿಲ್ಲ.

ಹಸಿರು ತರಕಾರಿ-ಸೊಪ್ಪು

ಮೆದುಳಿಗೆ ಪೂರಕವಾದ ಆಹಾರಗಳಲ್ಲಿ ಫೋಲೇಟ್‌ ಮತ್ತು ವಿಟಮಿನ್‌ ಇ ಸಹ ಹೌದು. ದೇಹದಲ್ಲಿ ಮುಕ್ತ ಕಣಗಳು ಉಪಟಳ ಕೊಡದಂತೆ ಕಾಯುವಂಥ ಸೈನಿಕರಂತೆ, ಈ ಹಸಿರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ವರ್ತಿಸುತ್ತವೆ. ಯಾವುದೇ ಹಸಿರು ಸೊಪ್ಪುಗಳು, ನುಗ್ಗೆಕಾಯಿ, ಬೆಂಡೆಕಾಯಿ, ಬ್ರೊಕೊಲಿ, ಎಲೆಕೋಸಿನಂಥ ಹಸಿರು ಬಣ್ಣದ ತರಕಾರಿಗಳು ಊಟದ ತಟ್ಟೆ ಮತ್ತು ಹೊಟ್ಟೆ ಸೇರಲಿ.

ಅವಕಾಡೊ

ಅಥವಾ ಬೆಣ್ಣೆ ಹಣ್ಣು ಹೆಚ್ಚಾಗಿ ಸೇವಿಸಿದಂತೆ, ದೇಹ ಮತ್ತು ಮೆದುಳು ನಮಗೆ ಧನ್ಯವಾದ ಹೇಳುತ್ತದೆ. ಚಳಿಗಾಲದಲ್ಲಿ ಶರೀರಕ್ಕೆ ಅವಶ್ಯವಾಗಿ ಬೇಕಾದ ಕೆಲವು ಸೂಕ್ಷ್ಮ ಪೋಷಕಾಂಶಗಳು ಮತ್ತು ನಾರು ಇದರಲ್ಲಿ ಹೇರಳವಾಗಿದೆ. ಜೊತೆಗೆ ವಿಟಮಿನ್‌ ಇ ಮತ್ತು ಒಮೇಗಾ ೩ ಕೊಬ್ಬಿನಾಮ್ಲವಂತೂ ಇದ್ದೇಇದೆ. ಹಾಗಾಗಿ ಬೆಣ್ಣೆ ಹಣ್ಣು ಸಿಕ್ಕಾಗೆಲ್ಲಾ ಸೇವಿಸಿ. ಇದರಿಂದ ಹಲವು ರೀತಿಯಲ್ಲಿ ದೇಹ, ಮೆದುಳಿಗೆ ಪೋಷಣೆ ದೊರೆಯುತ್ತದೆ.

ಅರಿಶಿನ

ಹಸಿಯಾದ ಅರಿಶಿನದ ಗಡ್ಡೆಗಳು ಅಥವಾ ಬೇರುಗಳು ಈ ಕಾಲದಲೂ ದೊರೆಯುತ್ತವೆ. ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಮೆದುಳನ್ನು ಗಂಭೀರ ಹಾನಿಯಿಂದ ರಕ್ಷಿಸುತ್ತದೆ. ಸೋಂಕುಗಳಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಇದು ಪರಿಣಾಮಕಾರಿಯಾಗಿ ಶಮನ ಮಾಡುತ್ತದೆ. ಹಾಗಾಗಿ ಚಳಿಗಾಲದ ಅನಾರೋಗ್ಯಕ್ಕೆ ಅರಿಶಿನ ಒಳ್ಳೆಯ ಮದ್ದು. ಜೊತೆಗೆ ಮೆದುಳಿನ ಜಡತೆಗೂ ನೀಡುತ್ತದೆ ಗುದ್ದು!

ಬೆರ್ರಿಗಳು

ಬ್ಲೂಬೆರಿ, ಸ್ಟ್ರಾಬೆರಿ ಮುಂತಾದ ಎಲ್ಲಾ ಬೆರ್ರಿಗಳಲ್ಲೂ ವಿಟಮಿನ್‌ ಸಿ ಅಧಿಕವಾಗಿದೆ. ಈ ಉತ್ಕರ್ಷಣ ನಿರೋಧಕವು ದೇಹ, ಮೆದುಳುಗಳ ಪೋಷಣೆಗೆ ಅಗತ್ಯವಾದದ್ದು. ನೆನಪಿನ ಶಕ್ತಿ ಹೆಚ್ಚಿಸಿ, ಒತ್ತಡ ನಿವಾರಿಸಿ, ಮೆದುಳನ್ನು ಚಟುವಟಿಕೆಯಿಂದಿಡುವ ಈ ಪುಟ್ಟ ಹಣ್ಣುಗಳು ಬಾಯಿಯ ಚಪಲವನ್ನೂ ತಣಿಸುತ್ತವೆ.

ಮೆಂತೆ

ಇದನ್ನು ಸೊಪ್ಪಿನ ರೂಪದಲ್ಲಾದರೂ ತಿನ್ನಿ ಅಥವಾ ಕಾಳುಗಳನ್ನಾದರೂ ಸೇವಿಸಿ. ದೇಹದ ಉರಿಯೂತಗಳನ್ನು ಶಮನ ಮಾಡುವಲ್ಲಿ ಮೆಂತೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿಯೇ ನೋವು ನಿವಾರಕ ಗುಣವನ್ನೂ ಮೆಂತೆ ಬೀಜಗಳು ಹೊಂದಿವೆ.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Exit mobile version