Site icon Vistara News

Green Tea: ಗ್ರೀನ್ ಟೀ ಆರೋಗ್ಯಕರ‌ ಎಂದುಕೊಂಡಿದ್ದೀರಾ? ಸೈಡ್‌ ಎಫೆಕ್ಟ್‌ಗಳೂ ಇವೆ!

Green tea

ಬಹುತೇಕ ಭಾರತೀಯರಿಗೆ ಚಹಾ (Green tea) ಎಂದರೆ ಕೇವಲ ಪೇಯವಲ್ಲ. ಅದೊಂದು ಭಾವನೆ. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಚಹಾ ಕುಡಿಯದಿದ್ದರೆ ಆ ದಿನ ಏನನ್ನೋ ಕಳೆದುಕೊಂಡ ಹಾಗೆ. ಇವು ಶಕ್ತಿವರ್ಧಕಗಳಂತೆ ಬಹುತೇಕರನ್ನು ಸದಾ ಪೊರೆಯುತ್ತವೆ. ಬೆಳಗ್ಗೆ ಎದ್ದರಷ್ಟೇ ಅಲ್ಲ, ಹಲವರಿಗೆ, ಬೇಸರವಾದರೂ ಚಹಾ, ಸಂತೋಷವಾದರೂ ಚಹಾ, ಗೆಳೆಯರು ಸಿಕ್ಕರೆ ಚಹಾ, ಒಬ್ಬರೇ ಇದ್ದು ಬೋರು ಬಂದರೂ ಚಹಾ, ನಿದ್ದೆ ಬರುವ ಹಾಗನಿಸಿದರೂ ಚಹಾ, ಸುಸ್ತಾದರೂ ಚಹಾ, ಮಳೆ ಬಂದರೂ ಚಹಾ, ಚಳಿಯಾದರೂ ಚಹಾ… ಹೀಗೆ ಚಹಾ ಇಲ್ಲದೆ ಜೀವನವೇ ಇಲ್ಲವೆಂಬಷ್ಟು ಚಹಾದ ಜೊತೆಗೆ ನಂಟು.

ಬಗೆಬಗೆಯ ಚಹ

ಇಂತಹ ಚಹಾ ಒಳ್ಳೆಯದೋ ಕೆಟ್ಟದ್ದೋ‌ ಎಂಬ ಗೊಂದಲದಲ್ಲಿ ಬಿದ್ದವರು ಗ್ರೀನ್ ಟೀಗೆ, ಇನ್ನೂ ಕೆಲವರು‌ ಸಕ್ಕರೆ ಹಾಕದೆ ಹೀಗೆ ಇನ್ನೂ ಏನೇನೋ ಬಗೆಯಲ್ಲಿ ಚಹಾ ಸೇವನೆ ಮಾಡುತ್ತಾರೆ. ಚಹಾ ಪುಡಿಯನ್ನು‌ ಹಾಕಿ‌ ಕುದಿಸಿ ಚಹಾ ಮಾಡಿದರೆ, ಇನ್ನೂ‌ ಕೆಲವರು ಚಹಾ ಡಿಪ್‌ಗಳನ್ನು ತಂದಿಟ್ಟುಕೊಳ್ಳುವುದುಂಟು. ಗ್ರೀನ್ ಟೀ‌ ಕುಡಿಯುವ ಮಂದಿಯೂ ಇಂತಹ ಡಿಪ್‌ಗಳನ್ನೇ ಬಿಸಿಬಿಸಿ ನೀರಿಗೆ ಹಾಕಿ ಗ್ರೀನ್ ಟೀ ಮಾಡಿ ಕುಡಿಯುವುದುಂಟು. ಹೊಟೇಲುಗಳಲ್ಲಿ, ವಿಮಾನದಲ್ಲಿ, ರೈಲು ಪ್ರಯಾಣದಲ್ಲಿ ಹೀಗೆ ಬಹಳ ಕಡೆಗಳಲ್ಲಿ ಚಹಾ ಡಿಪ್‌ಗಳನ್ನು ಬಳಸುವುದುಂಟು.

ಆರೋಗ್ಯಕರ ಪೇಯ

ಗ್ರೀನ್ ಟೀಯಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ತೂಕ ಇಳಿಸುವುದರಿಂದ ಹಿಡಿದು, ಸ್ಮರಣ ಶಕ್ತಿಯ‌ನ್ನು‌ ವೃದ್ಧಿಸಲು, ಒತ್ತಡ ಕಡಿಮೆ ಮಾಡಲು, ಕೊಲೆಸ್ಟರಾಲ್‌ ಕಡಿಮೆ ಮಾಡಲು ಹೀಗೆ ಸಾಕಷ್ಟು ಆರೋಗ್ಯಕರ ‌ಲಾಭಗಳನ್ನು ಹೊಂದಿದೆ. ಆದರೆ, ಇಂತಹ ಗ್ರೀನ್‌ಟೀ ಅಥವಾ ಚಹಾದ ಬ್ಯಾಗ್‌ಗಳನ್ನು ಬಳಸುವ ಮೊದಲು ಅವುಗಳ ಅಡ್ಡ ಪರಿಣಾಮಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಅಡ್ಡ ಪರಿಣಾಮಗಳೂ ಇವೆ

ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ ಅಥಾರಿಟಿ‌ ಆಫ್ ಇಂಡಿಯಾ (ಎಫ್ ಎಸ್ ಎಸ್ ಎ ಐ) ಕೂಡಾ ಚಹಾ ಡಿಪ್‌ಗಳಲ್ಲಿ ಪಿನ್ ಗಳನ್ನು ಬಳಸುವುದನ್ನು ಈಗಾಗಲೇ ನಿಷೇಧಿಸಿದೆ. ಇವಿಷ್ಟೇ ಅಲ್ಲ‌, ಈ‌ ಡಿಪ್ ಗಳಿಂದ ಇನ್ನೂ ಹಲವು ಅಡ್ಡ ಪರಿಣಾಮಗಳು ಇವೆ. ಟೀ ಬ್ಯಾಗ್‌ಗಳೊಳಗೆ ಎಂತಹ ಚಹಾ‌ಪುಡಿ ಇದೆ ಎಂಬ ಬಗ್ಗೆ ಅಂದರೆ, ಸರಿಯಾದ ಚಹಾ ಪುಡಿ ಇದೆಯೇ ಎಂಬ ಬಗ್ಗೆಯೂ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ಬಹಳ ಸಾರಿ ಹಳೆಯ ಟೀ ಬ್ಯಾಗ್‌ಗಳೊಳಗೆ ಇರುವ ಚಹಾ ಪುಡಿಯೂ ಹಳೆಯದಾಗಿರಬಹುದು, ಅಥವಾ ಕಡಿಮೆ ಗುಣಮಟ್ಟದ ಟೀ ಪುಡಿ ಅದರೊಳಗಿರಬಹುದು, ಅಥವಾ ಅದರೊಳಗೆ ಏನಿದೆ ಎಂಬುದರ ಬಗ್ಗೆ ಗ್ಯಾರೆಂಟಿ ಸಿಗದೆ ಇರಬಹುದು. ಹಾಗಾಗಿ ಟೀಬ್ಯಾಗ್‌ಗಳನ್ನು ಖರೀದಿಸುವ ಬದಲು ಯಾವಾಗಲೂ ಪುಡಿಯಾಗಿಯೇ ಖರೀದಿಸುವುದು ಒಳ್ಳೆಯದು. ಟೀ ಬ್ಯಾಗ್‌ಗಳಲ್ಲಿ ಬಳಸುವ ಬ್ಯಾಗ್‌ನ ಗುಣಮಟ್ಟ, ಅಲ್ಯೂಮಿನಿಯಂ ಹೊಟ್ಟೆ ಸೇರುವ ಸಾಧ್ಯತೆ, ಬ್ಯಾಗ್‌ಗಳಲ್ಲಿ ಬಳಸಿದ ಪಿನ್ ಚಹಾದೊಳಗೆ ಬಿದ್ದು ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇತ್ಯಾದಿಗಳ ಅಪಾಯ ಹೆಚ್ಚು. ಇವೆಲ್ಲವೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ‌ ಬೀರುವ ಸಾಧ್ಯತೆಗಳಿವೆ.

ಹೇಗೆ ಪಾರಾಗೋದು?

ಹಾಗಾದರೆ ಇವುಗಳೆಲ್ಲವುಗಳಿಂದ ಪಾರಾಗಲು ಏನು‌ ಮಾಡಬಹುದು ಎಂದರೆ, ಚಹಾಕ್ಕೆ ಬ್ಯಾಗ್‌ಗಳ ಬದಲು ಪುಡಿಯನ್ನೇ ನೇರವಾಗಿ ಬಳಸಬಹುದು. ಇಲ್ಲವಾದರೆ, ಬಟ್ಟೆಯ ಆಧಾರಿತ ಚಹಾ ಬ್ಯಾಗ್‌ಗಳನ್ನೇ ನೋಡಿ ಖರೀದಿಸಿ. ಪಿನ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ‌. ಬ್ಯಾಗ್ ಒಳಗಿನ ಚಹಾಪುಡಿಯ ಗುಣಮಟ್ಟ ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: Healthy Foods For Kidney: ಕಿಡ್ನಿಯ ಆರೋಗ್ಯವರ್ಧನೆಗೆ ಈ ಕೆಳಗಿನ ಆಹಾರಶೈಲಿಯ ಬಗೆಗೆ ಗೊತ್ತಿರಲಿ!

Exit mobile version