Site icon Vistara News

Tips To Drink More Water: ನಾವು ಕುಡಿಯುವ ನೀರಿನ ಪ್ರಮಾಣವನ್ನು ಹೀಗೆ ಹೆಚ್ಚಿಸಬಹುದು!

Water Bottle

ಸುಲಭವಾದ ಯಾವುದಾದರೂ ಕೆಲಸಕ್ಕೆ, ʻನೀರು ಕುಡಿದಷ್ಟು ಸುಲಭವಾಗಿ ಮಾಡಬಹುದುʼ ಎನ್ನುತ್ತೇವೆ. ʻಎದುರಾಳಿಗೆ ನೀರು ಕುಡಿಸಿದರುʼ ಎನ್ನುವಾಗ ಸುಲಭವಾಗಿ ಸೋಲಿಸಿದರು ಎಂದು ಭಾವಿಸುತ್ತೇವೆ. ಅಂತೂ ನೀರು ಕುಡಿಯುವುದೆಂದರೆ ಸುಲಭವಾದ ಕೆಲಸ ಎಂಬ ಭಾವ ನಮ್ಮದು. ಹಾಗಾದರೆ, ಈ ಬೇಸಿಗೆಯ ದಿನಗಳಲ್ಲಿ ನೀರು ಕುಡಿಯುವುದಕ್ಕೆ ಯಾಕಿಷ್ಟು ಕಷ್ಟ ಪಡುತ್ತೇವೆ ನಾವು? ದೇಹಕ್ಕೆ ನೀರು ಸಾಕಾಗದಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ವಕ್ಕರಿಸಿಕೊಳ್ಳುತ್ತವೆ ಎಂಬುದನ್ನು ತಿಳಿದಿದ್ದರೂ, ನೀರು ಕುಡಿಯುವುದನ್ನು ಮುಂದೂಡುತ್ತೇವೆ.
ದೇಹದ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ, ಮಲಬದ್ಧತೆ ನಿವಾರಣೆಗೆ, ಕಿಡ್ನಿ ಕ್ಷಮತೆ ಹೆಚ್ಚಿಸಲು, ಕೀಲು ಮತ್ತು ಸ್ನಾಯುಗಳು ಸ್ವಸ್ಥವಾಗಿರಲು, ಚರ್ಮ ನಳನಳಿಸಲು, ದೇಹದ ಉಷ್ಣತೆ ಸರಿಯಾಗಿರಲು… ಇಂಥ ಬಹಳಷ್ಟು ಕೆಲಸಗಳು ನಡೆಯುವುದಕ್ಕೆ ನಮಗೆ ನೀರು ಬೇಕು. ಇವೆಲ್ಲ ನಮಗೆ ಹೊಸ ವಿಷಯಗಳು ಅಲ್ಲದಿದ್ದರೂ, ನಿತ್ಯದ ಕೆಲಸಗಳ ಒತ್ತಡದಲ್ಲಿ ನೀರು ಕುಡಿಯುವುದನ್ನು ಮಾತ್ರ ಮರೆಯುತ್ತೇವೆ. ನಿರ್ಜಲೀಕರಣಕ್ಕೆ ಈಡಾಗಿ, ತಲೆನೋವು, ಚರ್ಮ ಒಣಗುವಂಥ ಹಲವು ಸಮಸ್ಯೆಗಳಿಂದ ಒದ್ದಾಡುತ್ತೇವೆ. ಹಾಗಾದರೆ ನೀರು ಹೆಚ್ಚು ಕುಡಿಯುವಂತೆ ನಮಗೆ ನಾವು ಹೇಗೆ (tips to drink more water) ಸ್ಫೂರ್ತಿ ತುಂಬಬಹುದು?

ಬರೀ ನೀರಲ್ಲ

ನೀರಿಗೆ ಇನ್ನೇನಾದರೂ ಇಷ್ಟವಾಗುವಂಥದ್ದನ್ನು ಸೇರಿಸಿ ನೋಡಿ. ಇದರರ್ಥ ಸಕ್ಕರೆ, ಬೆಲ್ಲ, ಸೋಡಾಗಳನ್ನೆಲ್ಲ ಸೇರಿಸುವುದಲ್ಲ. ನಾಲ್ಕೆಂಟು ಪುದೀನಾ ಅಥವಾ ಬೆಸಿಲ್‌ ಎಲೆಗಳು, ಸ್ಟ್ರಾಬೆರಿ, ಕಿತ್ತಳೆ ಅಥವಾ ಅನಾನಸ್ ಹೋಳುಗಳು, ಒಂದು ಚಮಚ ಚಿಯಾ ಬೀಜ, ಸೌತೇಕಾಯಿ ತುಂಡುಗಳು… ಹೀಗೆ ನಿಮ್ಮಿಷ್ಟದ ಏನನ್ನಾದರೂ ಸೇರಿಸಿ. ಆದರೆ ಇದಕ್ಕೆ ಕೃತಕ ಸಿಹಿಯನ್ನು ಸೇರಿಸುವಂತಿಲ್ಲ. ಈ ರೀತಿಯಿಂದ ದಿನಕ್ಕೆ 8-10 ಗ್ಲಾಸ್‌ ನೀರು ಕುಡಿಯುವ ಗುರಿಯನ್ನು ತಲುಪಲು ಸಾಧ್ಯವಾದೀತು.

ಅಲರಾಂ ಇಡಿ

ಪ್ರತಿ ಗಂಟೆಗೊಮ್ಮೆ ಇರುವ ಸ್ಥಳದಿಂದ ಎದ್ದು ಹೋಗಿ ನೀರು ಕುಡಿಯಬೇಕು ಎಂಬುದನ್ನು ನೆನಪಿಸಲು ತಾಸಿಗೊಮ್ಮೆ ಅಲರಾಂ ಇಟ್ಟುಕೊಳ್ಳಬಹುದು. ಒಂದೊಮ್ಮೆ ಇದು ಹಳೆಯ ಕಾಲದ್ದಾಯಿತು ಎನಿಸಿದರೆ, ವಾಟರ್‌ ರಿಮೈಂಡರ್‌ ಇರುವ ಆಪ್‌ಗಳನ್ನು ಬಳಸಬಹುದು. ಇದರಿಂದ ಆಯಾ ದಿನಕ್ಕೆ ಎಷ್ಟು ಬಾರಿ ನೀರು ಕುಡಿದಿದ್ದೀರಿ ಎಂಬುದನ್ನು ಲೆಕ್ಕ ಹಾಕುವುದಕ್ಕೂ ಸುಲಭವಾಗುತ್ತದೆ.

ಸೆಕ್ಸಿ ವಾಟರ್‌!

ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಇದರದ್ದೇ ಗಾಳಿ ಬೀಸುತ್ತಿದೆ. ವಿಷಯ ಮತ್ತೇನಲ್ಲ, ಕುಡಿಯುವ ನೀರಿಗೆ ನಿಮ್ಮಿಷ್ಟದ ಆರೋಗ್ಯಕರ ವಸ್ತುಗಳನ್ನು ಸೇರಿಸಿ, ನೋಡುವುದಕ್ಕೆ ಸಿಕ್ಕಾಪಟ್ಟೆ ಸುಂದರವಾಗಿರುವ ಕಪ್‌, ಬಾಟಲಿಗಳಲ್ಲಿ ಅವುಗಳನ್ನು ತುಂಬಿಸಿ, ಅದಕ್ಕೊಂದು ಫ್ಯಾನ್ಸಿ ಸ್ಟ್ರಾ ಸಿಕ್ಕಿಸಿದರೆ- ಸೆಕ್ಸಿ ವಾಟರ್‌ ಸಿದ್ಧ. ಇದನ್ನು ಹೇಗೆಲ್ಲಾ ಕುಡಿದು ಮುಗಿಸುತ್ತೀರಿ ಎನ್ನುವುದನ್ನೂ ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಬಿತ್ತರಿಸಬಹುದು.

ನೀರು ಕುಡಿಯುವ ಆಟ

ನಿಮ್ಮ ಕುಟುಂಬ ಅಥವಾ ಮಿತ್ರರೊಂದಿಗೆ ನೀರು ಕುಡಿಯುವ ಆಟ ಆಡಬಹುದು. ನಿಂನಿಮ್ಮ ಗುಂಪಿನಲ್ಲಿ ಪ್ರತಿ ದಿನದ ನೀರಿನ ಸವಾಲು ಮುಂದಿಟ್ಟು, ಯಾರೆಲ್ಲ ಅದನ್ನು ಪೂರ್ಣಗೊಳಿಸುತ್ತಾರೆ ಎಂಬುದನ್ನು ನೋಡಬಹುದು. ದಿನದ ವಿಜೇತರಿಗೆ ಏನಾದರೂ ಬಿರುದಾವಳಿಗಳನ್ನು ನೀಡಿ ಮಜಾ ಮಾಡಬಹುದು. ತಿಂಗಳಿಗೊಮ್ಮೆ ಎಲ್ಲರೂ ಸೇರಿ ನೀರಿಗಾಗಿ ಆರೋಗ್ಯಕರ ಪಾರ್ಟಿ ಮಾಡಬಹುದು.

ವಿನೂತನ ಬಾಟಲ್‌ಗಳು

ನೀರಿನ ಅಳತೆಯ ಗುರುತು ಮಾತ್ರವಲ್ಲ, ಸಮಯದ ಗುರುತನ್ನೂ ಹೊಂದಿರುವ ಸುಂದರ ನೀರಿನ ಬಾಟಲಿಗಳು, ಮುದ್ದಾದ ಕಪ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಮ್ಮೆ ತುಂಬಿಸಿದರೆ ಎಷ್ಟು ತಾಸಿಗೆ ಎಷ್ಟು ನೀರು ಕುಡಿದಿರಿ ಎನ್ನುವ ಲೆಕ್ಕವನ್ನೂ ಈ ಬಾಟಲಿಗಳು ಸುಲಭವಾಗಿ ಹೇಳಿಬಿಡುತ್ತವೆ. ನೋಡಿ, ನೀರು ಕುಡಿಸುವುದಕ್ಕೆ ಮಾರುಕಟ್ಟೆಯ ಮಂದಿ ಎಷ್ಟೊಂದು ಉತ್ಸುಕರಾಗಿದ್ದಾರೆ! ನಾವು ಕುಡಿಯಬೇಕಷ್ಟೆ.

ಗ್ರೀನ್‌ ಟೀ, ಬ್ಲಾಕ್‌ ಕಾಫಿ

ನಿತ್ಯದ ಜ್ಯೂಸ್‌, ಸೋಡಾದ ಸರ್ವಿಂಗ್‌ ಇದ್ದರೆ ಅದನ್ನು ಗ್ರೀನ್‌ ಟೀ ಅಥವಾ ಬ್ಲಾಕ್‌ ಕಾಫಿಗೆ ಬದಲಾಯಿಸಬಹುದು. ಅಂಥವು ಯಾವುದೂ ಬೇಡ ಎನಿಸಿದರೆ ಕೋಕಂ, ನೆಲ್ಲಿಕಾಯಿ, ಬೇಲದಹಣ್ಣು ಮುಂತಾದವುಗಳ ಪಾನಕ ಸೇವಿಸಬಹುದು. ಇದರಿಂದ ಬೇಸಿಗೆಯಲ್ಲಿ ಶರೀರ ತಂಪಾಗಿಯೂ ಇರುತ್ತದೆ, ನೀರೂ ಹೆಚ್ಚಿಗೆ ದೊರೆತಂತೆ ಆಗುತ್ತದೆ.

ರಸಭರಿತ ಹಣ್ಣುಗಳು

ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಸೌತೇಕಾಯಿಯಂಥ ರಸಭರಿತ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಶರೀರ ಬಳಲದಂತೆ ಕಾಪಾಡಿಕೊಳ್ಳುವುದರ ಜೊತೆಗೆ ಅಗತ್ಯವಾದ ನೀರಿನ ಪ್ರಮಾಣವನ್ನೂ ಹೆಚ್ಚಿಸಬಹುದು. ಜೊತೆಗೆ ಕಬ್ಬಿನಹಾಲು, ಎಳನೀರಿನಂಥ ನೈಸರ್ಗಿಕ ಪೇಯಗಳು ಬೇಸಿಗೆಯ ದಾಹ ತಣಿಸುವುದರ ಜೊತೆಗೆ, ಶರೀರಕ್ಕೆ ಭರಪೂರ ಖನಿಜಗಳನ್ನೂ ಒದಗಿಸುತ್ತವೆ.

Exit mobile version