ಮನುಷ್ಯನಿಗೆ ಆರೋಗ್ಯ ಅತ್ಯಂತ ಮುಖ್ಯ. ಯಾವುದೇ ಭಾಗ್ಯವಿದ್ದರೂ, ಬೇಕಾದಷ್ಟು ಐಶ್ವರ್ಯವಿದ್ದರೂ ಲ್ಲಕ್ಕಿಂತ ಮುಖ್ಯವಾಗುವುದು ಆರೋಗ್ಯವೇ. ಸರಿಯಾದ ಆರೋಗ್ಯವಿರಬೇಕಾದರೆ, ನಿದ್ದೆಯೂ ಬೇಕೇಬೇಕು. ನಿದ್ದೆಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧ. ಹಾಗೆಯೇ, ನಿದ್ದೆಗೂ ಆಹಾರಕ್ಕೂ ಕೂಡಾ ಸಂಬಂಧವಿದೆ. ನಾವು ತಿನ್ನುವ ಆಹಾರದ ಗುಣಮಟ್ಟ ನಮ್ಮ ನಿದ್ದೆಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ಬಹಳ ಸಾರಿ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ಗಮನಿಸುವುದೇ ಇಲ್ಲ. ರಾತ್ರಿ ಹೊಟ್ಟೆ ತುಂಬ ಊಟ ಮಾಡಿ, ಬೇಕುಬೇಕಾದ್ದನ್ನೆಲ್ಲ ತಿಂದು, ನಿದ್ದೆ ಸುಳಿಯುವುದಿಲ್ಲ ಎನ್ನುತ್ತೇವೆ. ಆದರೆ, ಇದಕ್ಕೆ ನಮ್ಮ ಆಹಾರ ಕ್ರಮವೂ ಕಾರಣ ಎಂಬುದನ್ನು ಮರೆಯುತ್ತೇವೆ. ಹಾಗಾದರೆ ಬನ್ನಿ, ಯಾವೆಲ್ಲ ಬಗೆಯ ಆಹಾರವನ್ನು ರಾತ್ರಿಯೂಟದ ಸಂದರ್ಭ (best food to eat at night) ತಿನ್ನುವುದರಿಂದ ನಿದ್ದೆ ಬರುವುದಿಲ್ಲ ಎಂಬುದನ್ನು ತಿಳಿಯೋಣ.
- ಮಸಾಲೆಭರಿತ ಊಟವನ್ನು ರಾತ್ರಿ ಬಿಡಿ. ರಾತ್ರಿಯ ಹೊತ್ತಿನ ಊಟ ಆದಷ್ಟೂ ಮಿತವಾಗಿರಲಿ, ಅಷ್ಟೇ ಅಲ್ಲ, ಹೊಟ್ಟೆಗೆ ಹಿತವಾಗಿರಲಿ. ಹೆಚ್ಚು ಖಾರವಲ್ಲದ, ಹೆಚ್ಚು ಮಸಾಲೆಗಳಿಲ್ಲದ, ಮೆದುವಾದ ಆಹಾರವನ್ನು ಸೇವಿಸಿ. ಆದಷ್ಟೂ ರಾತ್ರಿಯೂಟ ಲಘುವಾಘಿರಲಿ. ರಾತ್ರಿ ಮಲಗುವ ಸುಮಾರು ಮೂರು ಗಂಟೆಗಳಿಗೂ ಮೊದಲೇ ಊಟ ಮಾಡಿ. ಕರಗಲು ಸಾಕಷ್ಟು ಸಮಯಾವಕಾಶವಿರಲಿ.
- ರಾತ್ರಿಯ ಊಟ ಮೃಷ್ಟಾನ್ನ ಭೋಜನವಾಗದಿರಲಿ. ನಿಧಾನವಾಗಿ ಕರಗುವಂತಹ ಆಹಾರಗಳನ್ನು ಸೇವಿಸಬೇಡಿ. ಜಿಡ್ಡುಯುಕ್ತ ಆಹಾರವೂ ರಾತ್ರಿಯ ಹೊತ್ತು ಬೇಡ. ಇವು ಸುಲಭವಾಗಿ ಕರಗದು. ನಿದ್ದೆಯೂ ಬಾರದು.
- ರಾತ್ರಿ ಮಲಗುವ ಮುನ್ನ, ಸಂಜೆಯ ನಂತರ ಕಾಫಿ ಚಹಾದಂತಹ ಕೆಫಿನ್ಯುಕ್ತ ಪೇಯಗಳನ್ನು ಸೇವಿಸಬೇಡಿ. ಇದು ನಿಮ್ಮ ಮಿದುಳನ್ನು ಇನ್ನೂ ಹೆಚ್ಚು ಹೊತ್ತು ಎಚ್ಚರವಿರುವಂತೆ ಮಾಡಿ, ನಿದ್ದೆಯನ್ನು ಓಡಿಸಿಬಿಡುತ್ತದೆ.
- ರಾತ್ರಿ ಊಟದ ನಂತರ ಸಿಹಿ ತಿನ್ನುವ ಅಭ್ಯಾಸವಿದ್ದರೆ ಬಿಡಿ. ಸಂಜೆಯಾದ ಮೇಲೆ ಸಿಹಿತಿಂಡಿಗಳನ್ನು, ಸಿಹಿಯಾದ ಪಾನೀಯಗಳನ್ನು ತಿನ್ನುವ, ಕುಡಿಯುವ ಅಭ್ಯಾಸ ಮಾಡಬೇಡಿ. ಸಕ್ಕರೆಯಿರುವ ಪದಾರ್ಥಗಳನ್ನು ರಾತ್ರಿಯ ಹೊತ್ತು ಸೇವಿಸಬೇಡಿ. ಇದು ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ.
- ಅಲ್ಕೋಹಾಲ್ ಅಥವಾ ಮದ್ಯಪಾನದ ಅಭ್ಯಾಸವಿದ್ದರೆ ಆದಷ್ಟು ಕಡಿಮೆ ಮಾಡಿ. ರಾತ್ರಿ ಕುಡಿದೇ ಮಲಗುವ ಅಭ್ಯಾಸ ಕೆಲವರದ್ದು. ಅಥವಾ ತಡರಾತ್ರಿಯವರೆಗೆ ಪಾರ್ಟಿ ಮಾಡುವ ಅಭ್ಯಾಸ. ಗೆಳೆಯರೊಡಗೂಡಿ ಇಂತಹ ಪಾರ್ಟಿಗಳನ್ನು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ನಿಮ್ಮ ಆರೋಗ್ಯದ ಬಗ್ಗೆ ಯೋಚಿಸಿ. ಎಲ್ಲಕ್ಕಿಂತ ಮುಖ್ಯ ಆರೋಗ್ಯ.
- ಸಿಟ್ರಸ್ ಹಣ್ಣುಗಳಾದ, ಲಿಂಬೆ, ಮೂಸಂಬಿ, ಕಿತ್ತಳೆಯಂತಹುಗಳನ್ನು ರಾತ್ರಿ ಹೊತ್ತಿನಲ್ಲಿ ತಿನ್ನಬೇಡಿ. ಇದು ಕೆಲವರಿಗೆ ಎದೆಯುರಿಗೂ ಕಾರಣವಾಗಬಹುದು. ಈ ತೊಂದರೆಯಿಂದ ನಿದ್ದೆ ನಿಮ್ಮ ಹತ್ತಿರ ಸುಳಿಯದು.
- ಹೆಚ್ಚು ಪ್ರೊಟೀನ್ಯುಕ್ತ ಆಹಾರವನ್ನು ರಾತ್ರಿಯ ಹೊತ್ತು ಸೇವಿಸಬೇಡಿ. ಇದು ಕರಗಲು ಹೆಚ್ಚು ಸಮಯ ಬೇಕು. ವರ್ಕೌಟ್ ಮಾಡುತ್ತಿದ್ದರೆ ಆ ಸಮಯದಲ್ಲಿ ಪ್ರೊಟೀನ್ಯುಕ್ತ ಆಹಾರ ಒಳ್ಳೆಯದು. ಆದಷ್ಟೂ ಹಗಲು ಹೊತ್ತಿನಲ್ಲಿ ಸೂರ್ಯನಿರುವ ಹೊತ್ತು ಇಂತಹ ಆಹಾರ ಒಳ್ಳೆಯದು.
- ನೀರು ಕುಡಿಯಬೇಕು ನಿಜ, ಆದರೆ, ನೀರು ಒಳ್ಳೆಯದೆಂದು ರಾತ್ರಿ ಅತಿಯಾಗಿ ನೀರು ಕುಡಿಯುವುದು ಒಳ್ಳೆಯದಲ್ಲ. ಮಲಗುವ ಸಮಯದಲ್ಲಿ ಅತಿಯಾಗಿ ನೀರು ಕುಡಿದು ಮಲಗುವುದು ಖಂಡಿತಾ ಒಳ್ಳೆಯದಲ್ಲ. ಅಷ್ಟೇ ಅಲ್ಲ, ರಾತ್ರಿ ಆಗಾಗ ಮೂತ್ರಶಂಕೆಗೂ ಎಚ್ಚರವಾಗಿ ನಿದ್ದೆ ಹಾಳಾಗಬಹುದು.
ಈ ಎಲ್ಲ ಬಗೆಯ ಆಹಾರಗಳ ಸೇವನೆ ನಿಮಗೆ ಗೊತ್ತೇ ಆಗದಂತೆ ನಿಮ್ಮ ನಿದ್ದೆಗೆ ಸಂಚಕಾರ ತರಬಹುದು. ಬೆಳಗ್ಗೆ ಏಳುವ ಹೊತ್ತಿನಲ್ಲಿ ದೇಹ ಹಗುರವಾಗಿರಲು, ಚಂದ ನಿದ್ದೆ ಮಾಡಿದ ಅನುಭವ ನಿಮ್ಮದಾಗಲು, ರಾತ್ರಿಯೂಟದ ನಿಮ್ಮ ಅಭ್ಯಾಸಗಳ ಬಗ್ಗೆ ಗಮನ ಹರಿಸಿ.
ಇದನ್ನೂ ಓದಿ: Bone Health: ಮೂಳೆಗಳನ್ನು ದುರ್ಬಲಗೊಳಿಸುವ ಈ ಅಭ್ಯಾಸ ಬಿಡಿ!