ಇದೊಂದು ವಿಚಿತ್ರ ಕಾಯಿಲೆ. ಇಲ್ಲೊಬ್ಬ ಯುವತಿ ತನಗಿರುವ ಈ ವಿಚಿತ್ರ ಕಾಯಿಲೆಯಿಂದ ದಿನದ ೨೩ ಗಂಟೆಯನ್ನೂ ಹಾಸಿಗೆಯಲ್ಲೇ ಕಳೆಯಬೇಕಂತೆ!
ಈ ೨೮ರ ಯುವತಿ ಜಗತ್ತಿನಲ್ಲೇ ವಿರಳಾತಿವಿರಳ ಕಾಯಿಲೆಗೆ ತುತ್ತಾಗಿದ್ದಾಳೆ. ಆಕೆ ಹೇಳುವಂತೆ ಆಕೆಗಿರುವ ವಿಚಿತ್ರ ಕಾಯಿಲೆ ಒಂದು ಅಲರ್ಜಿ. ಆದರೆ ಈ ಅಲರ್ಜಿ ಸಾಮಾನ್ಯದಲ್ಲ. ಎಲ್ಲ ತತ್ವಗಳ ಅಡಿಪಾಯವಾಗಿರುವ ಗುರುತ್ವಾಕರ್ಷಣೆಯಿಂದಲೇ ಈಕೆಗೆ ಅಲರ್ಜಿಯಂತೆ. ವಿಚಿತ್ರ ಎನಿಸಿದರೂ ಸತ್ಯವೇ. ಆಕೆ ಹೇಳುವ ಪ್ರಕಾರ ಆಕೆಗೂ ಗುರುತ್ವಾಕರ್ಷಣೆಗೂ ಆಗಿಬರುವುದಿಲ್ಲ. ಹಾಗಾಗಿ ದಿನದ ೨೩ ಗಂಟೆ ಬೆಡ್ಡಿನಲ್ಲಿಯೇ ಬಿದ್ದುಕೊಂಡಿರಬೇಕು!
ಯುಎಸ್ ನೌಕಾಪಡೆಯ ಮಾಜಿ ಏವಿಯೇಷನ್ ಡೀಸಿಲ್ ಮೆಕ್ಯಾನಿಕ್ ಲಿಂಡ್ಸಿ ಜಾನ್ಸನ್ ಹೇಳುವ ಪ್ರಕಾರ, ಆಕೆಗಿರುವ ಈ ಸಮಸ್ಯೆ ವಿಶ್ವದಲ್ಲೇ ಅತ್ಯಂತ ಕಡಿಮೆ ತಿಳಿವಳಿಕೆಯುಳ್ಳ ಕಾಯಿಲೆಯಾಗಿದೆ. ಇದರಿಂದಾಗಿ ದಿನದಲ್ಲಿ ೨೩ ಗಂಟೆ ಬೆಡ್ಡಿನಲ್ಲೇ ಇರಬೇಕು. ದಿನಕ್ಕೆ ೧೦ ಬಾರಿಯಾದರೂ ಮೂರ್ಛೆ ತಪ್ಪುತ್ತದೆ. ಮೂರು ನಿಮಿಷಕ್ಕಿಂತ ಹೆಚ್ಚು ಒಂದು ಜಾಗದಲ್ಲಿ ನಿಲ್ಲಲಾಗುವುದಿಲ್ಲ ಎಂದಿದ್ದಾಳೆ.
೨೦೧೫ರಲ್ಲಿ ಹೊಟ್ಟೆನೋವು ಹಾಗೂ ಬೆನ್ನು ನೋವಿನಿಂದ ಆರಂಭವಾದ ಈ ಕಾಯಿಲೆ ವರ್ಷ ಕಳೆದಂತೆ ಕೆಟ್ಟ ಪರಿಸ್ಥಿತಿಗೆ ಈಕೆಯನ್ನು ನೂಕಿದೆ. ವಾಂತಿ, ತಲೆಸುತ್ತು, ಮೂರ್ಛೆ ತಪ್ಪುವುದು ಹೀಗೆ ವರ್ಷದಿಂದ ವರ್ಷಕ್ಕೆ ಕಾಯಿಲೆಯ ಸ್ವರೂಪ ಬದಲಾಗುತ್ತಾ ಹೋಯಿತು. ದಿನದಲ್ಲಿ ಕನಿಷ್ಟ ೧೦ ಬಾರಿಯಾದರೂ ಮೂರ್ಛೆ ತಪ್ಪಿ ಬೀಳುವುದು ಕಾಯಂ ಆಯಿತು ಎಂದು ಆಕೆ ರೋಗ ಲಕ್ಷಣವನ್ನು ವಿವರಿಸುತ್ತಾಳೆ.
ಇದನ್ನೂ ಓದಿ | Viral Video | ಅಮ್ಮನ ಸಮಾಧಿಗೆ ಕಿಂಡಿ ಮಾಡಿ ಹುಡುಕಿದ ಮಗು; ಹೃದಯ ಕಿವುಚುವ ದೃಶ್ಯವಿದು
ವರ್ಷಗಳ ಕಾಲ ಈಕೆ ವೈದ್ಯರಲ್ಲಿಗೆ ಹೋಗಿದ್ದಾಳೆ, ಹಲವಾರು ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನು ಮಾಡಿಸಿದ್ದಾಳೆ. ಆದರೆ ವರ್ಷಗಟ್ಟಲೆ ಅಂದರೆ ತೀರಾ ಇತ್ತೀಚಿನವರೆಗೆ ಆಕೆಗಿರುವ ಕಾಯಿಲೆ ಏನು ಎಂಬುದೇ ವೈದ್ಯಲೋಕ್ಕೆ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲವಂತೆ. ಇದೀಗ ಕಳೆದ ಫೆಬ್ರವರಿ ತಿಂಗಳಲ್ಲಿ ಆಕೆಗೆ ಇರುವ ರೋಗದ ಹೆಸರನ್ನು ವೈದ್ಯರು ಪತ್ತೆಹಚ್ಚಿದ್ದು, ಇದರ ಹೆಸರು ಪೋಸ್ಚರಲ್ ಆರ್ಥೋಸ್ಟಾಟಿಕ್ ಟ್ಯಾಕಿಕಾರ್ಡಿಯಾ ಸಿಂಡ್ರೋಮ್ (ಪಿಒಟಿಎಸ್) ಎಂದು ಹೇಳಿ ವರದಿ ನೀಡಿದ್ದಾರೆ. ಈ ಕಾಯಿಲೆಯಿರುವ ವ್ಯಕ್ತಿ ನಿಂತಾಗ ಮತ್ತು ಕೂತಾಗ ದೇಹದಲ್ಲಿರುವ ರಕ್ತದ ಪ್ರಮಾಣ ಇದ್ದಕ್ಕಿದ್ದಂತೆ ಕಡಿಮೆಯಾದಂತಾಗಿ, ಹೃದಯ ಬಡಿತದಲ್ಲಿ ತಕ್ಷಣ ಏರುಪೇರುಂಟಾಗುವುದು ಎಂದು ವಿವರಿಸಿದ್ದಾರೆ.
ವೈದ್ಯರುಗಳು ಏನೇ ವೈದ್ಯಕೀಯ ಪರಿಭಾಷೆಯಲ್ಲಿ ವಿವರಗಳನ್ನು ನೀಡಿದರೂ ಈಕೆ ಮಾತ್ರ ತನಗೆ ಗುರುತ್ವಾಕರ್ಷಣೆಯೇ ಅಲರ್ಜಿ. ಹಾಗಾಗಿಯೇ ಹೆಚ್ಚು ನಿಮಿಷಗಳ ಕಾಲ ನಿಲ್ಲುವುದು ಕೂರುವುದು ಮಾಡಲಾಗುವುದಿಲ್ಲ ಎಂದಿದ್ದಾಳೆ.
ನನಗೆ ಮಲಗಿದರೆ ಸಮಾಧಾನವೆನಿಸುತ್ತದೆ. ನಿಲ್ಲಲು ಹೊರಟರೆ ಮೂರು ನಿಮಿಷಕ್ಕಿಂತ ಹೆಚ್ಚು ನಿಲ್ಲಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ನಾನು ದಿನದ ೨೩ ಗಂಟೆಗಳ ಕಾಲ ಬೆಡ್ಡಿನಲ್ಲಿಯೇ ಮಲಗಿದ ಸ್ಥಿತಿಯಲ್ಲಿಯೇ ಇರಬೇಕಾಗುತ್ತದೆ. ಮನೆ ಬಿಟ್ಟು ಹೊರಗೆ ಎಲ್ಲೂ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದೇನೆ. ೨೮ರ ಹರೆಯದಲ್ಲಿ ಹೀಗೆ ಸ್ನಾನ ಮಾಡಲೆಂದು ರೋಗಿಗಳು ಬಳಸುವ ಕುರ್ಚಿಯಲ್ಲಿ ಕೂತು ಸ್ನಾನ ಮಾಡಬೇಕಾದ ಪರಿಸ್ಥಿತಿ ನನಗೆ ಬರಬಹುದು ಎಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ಆಕೆ ಭಾವುಕಳಾಗುತ್ತಾಳೆ.
ಇದನ್ನೂ ಓದಿ | Heart Attack | 19 ವರ್ಷದ ಯುವಕನಿಗೆ ಹೃದಯಾಘಾತ, ಸಣ್ಣ ವಯಸ್ಸಿನಲ್ಲೇ ಏಕೆ ಹೀಗೆ?
ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದಾಗ, ಒಂದು ದಿನ ಇಂಥ ತೊಂದರೆ ಆರಂಭವಾಯಿತು. ಸಾಮಾನ್ಯ ಬೆನ್ನು ನೋವು ಅಂದುಕೊಂಡ ನನಗೆ ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಹೊಟ್ಟೆನೋವು, ತಲೆ ಸುತ್ತುವುದು, ವಾಂತಿ, ಮೂರ್ಛೆ ಹೋಗುವುದು ಹೀಗೆ ಎಲ್ಲವೂ ಒಂದಾದ ಮೇಲೆ ಒಂದರಂತೆ ಆರಂಭವಾಗುತ್ತಿದ್ದಂತೆ ನನ್ನ ವೃತ್ತಿಯಿಂದ ಆರೋಗ್ಯ ಸಮಸ್ಯೆಯ ಕಾರಣದಿಂದಲೇ ಹೊರಗುಳಿಯಬೇಕಾಯಿತು.ಕಳೆದ ಹಲವು ವರ್ಷಗಳಲ್ಲಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆದರೂ ಆಕೆಯ ಸಮಸ್ಯೆಯೇನೆಂಬುದನ್ನು ಗುರುತು ಹಚ್ಚುವುದೇ ಸಾಧ್ಯವಾಗಿರಲಿಲ್ಲ. ೨೦೨೨ರಲ್ಲಿ ಕೊನೆಗೂ ಕಾಯಿಲೆ ಪತ್ತೆಯಾಯಿತು. ಕೊನೆಗೂ ನನ್ನ ಕಾಯಿಲೆ ಏನೆಂಬುದು ನನಗೆ ಗೊತ್ತಾಯಿತು ಎಂಬುದೇ ಸದ್ಯಕ್ಕೆ ನನಗಾದ ಸಂತೋಷ ಎಂದು ಆಕೆ ಹೇಳಿದ್ದಾಳೆ.
ಈಕೆಯ ಚಿಕಿತ್ಸೆ ಮುಂದುವರಿದಿದ್ದು, ಆದಷ್ಟು ಬೇಗ ಗುಣಮುಖಳಾಗಿ ಮತ್ತೆ ಕೆಲಸಕ್ಕೆ ಹೋಗುವಂತಾಗಬೇಕು ಎಂಬ ಕನಸು ಈಕೆಗಿದೆ. ಸದ್ಯ ಆರೋಗ್ಯ ಪರಿಸ್ಥಿತಿಯೂ ಹಾಗೆಯೇ ಮುಂದುವರಿದಿದ್ದು, ಈಕೆಯ ಗಂಡ ಈಕೆಯನ್ನು ನೋಡಿಕೊಳ್ಳುತ್ತಿದ್ದಾರೆ.