ಆರೋಗ್ಯದ (Year ender 2023) ಕುರಿತಾದ ಕಾಳಜಿಗೆ ಈಗ ಬಹಳಷ್ಟು ಆಯಾಮಗಳು ಹುಟ್ಟಿಕೊಂಡಿವೆ. ಮೊದಲಿನಂತೆ ಅನಾರೋಗ್ಯವಿದ್ದಾಗ ಮನೆಮದ್ದು ಮಾಡುವುದು ಅಥವಾ ವೈದ್ಯರಲ್ಲಿ ಹೋಗುವುದು ಮಾತ್ರವೇ ಆರೋಗ್ಯದ ಕಾಳಜಿ ಎಂದು ಭಾವಿಸಲಾಗದು. ಬದುಕಿನ ಉಳಿದೆಲ್ಲಾ ವಿಷಯಗಳಲ್ಲಿ ಟ್ರೆಂಡ್‌ಗಳು ವರ್ಷದಿಂದ ವರ್ಷಕ್ಕೆ ಬದಲಾದಂತೆ, ಆರೋಗ್ಯದ ಕಾಳಜಿಯ ಟ್ರೆಂಡ್‌ಗಳೂ ಬದಲಾಗುತ್ತಿವೆ. ಇದೀಗ ಪ್ರಚಲಿತ ವರ್ಷ ಸರಿದು, ಹೊಸ ವರ್ಷ ಹೊಸಿಲಾಚೆ ಇರುವ ಸಮಯದಲ್ಲಿ. 2023ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಪ್ರಚಲಿತವಿದ್ದ ಅಲೆಗಳೇನು ಎಂಬ ಮಾಹಿತಿಯಿದು
ಬುಲೆಟ್‌ಪ್ರೂಫ್ ಕಾಫಿ
ಇದರ ಹೆಸರೇ ಗುಂಡು ಹೊಡೆದಂತಿದೆ! ಆದರೆ ಆರೋಗ್ಯಕರ ಕಾಫಿ ಎಂಬ ಖ್ಯಾತಿಯನ್ನು ಗಳಿಸಿದೆ ಇದು. ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಲ್ಪ ಆಚೀಚೆ ನೋಡಿದರೆ ಇದರ ಜನಪ್ರಿಯತೆ ಅರಿವಿಗೆ ಬರುತ್ತದೆ. ಶಕ್ತಿವರ್ಧಕ ಪೇಯವಾಗಿ ಹೆಚ್ಚಾಗಿ ಬಳಕೆಗೆ ಬಂದಿದೆ. ಸಾಂಪ್ರದಾಯಿಕ ಕಾಫಿಯ ಜೊತೆಗೆ ಬೆಣ್ಣೆ, ತುಪ್ಪದಂಥ ಎಂಸಿಟಿ ಜಿಡ್ಡನ್ನು ಸೇರಿಸಲಾಗುತ್ತದೆ. ಮಧ್ಯಮ ಗಾತ್ರದ ಕೊಂಡಿಗಳನ್ನು ಹೊಂದಿರುವ ಜಿಡ್ಡಿನ ಸೇವನೆಯಿಂದ ಹಲವು ಲಾಭಗಳಿವೆ. ಇದರಿಂದ ತೂಕ ಇಳಿಸಲು, ಚಯಾಪಚಯ ಹೆಚ್ಚಿಸಲು, ಹಸಿವೆಯನ್ನು ನಿಯಂತ್ರಿಸಲು ಮತ್ತು ಮೆದುಳಿಗೆ ಅಗತ್ಯವಾದ ಶಕ್ತಿಯನ್ನು ಪೂರೈಸಲು ಸಾಧ್ಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.
ಜಪಾನೀಸ್ ವಾಟರ್ ಥೆರಪಿ
ಇದೆಂಥದ್ದೋ ಹೊಸದು ಎಂದು ಹುಬ್ಬೇರಿಸಬೇಡಿ, ಇದರ ಪ್ರಕ್ರಿಯೆ ಸರಳ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಹಲವು ಕಪ್‌ಗಳಷ್ಟು ಬೆಚ್ಚನೆಯ ನೀರನ್ನು ಕುಡಿಯಬೇಕೆಂಬುದು ವಿಷಯ. ಇದರಿಂದ ದೇಹದ ಚಯಾಪಚಯ ಹೆಚ್ಚಿ, ನೀರಿನ ಅಗತ್ಯ ಪೂರೈಕೆಯಾಗಿ, ತೂಕ ಇಳಿಕೆಗೆ ನೆರವಾಗುತ್ತದೆ. ಜೊತೆಗೆ ಜೀರ್ಣಾಂಗಗಳ ಸಾಮರ್ಥ್ಯವೂ ಹೆಚ್ಚಿ, ಮಲಬದ್ಧತೆ ನಿವಾರಣೆಯಾಗುತ್ತದೆ. ಚರ್ಮದ ಕಾಂತಿಯೂ ವೃದ್ಧಿಸಿ, ನೈಸರ್ಗಿಕ ಕಾಂತಿ ಸಿದ್ಧಿಸುತ್ತದೆ ಎಂಬುದು ಈ ಥೆರಪಿಯ ಕೈಗೆತ್ತಿಕೊಳ್ಳುವ ಉದ್ದೇಶ.
ಮಧ್ಯಂತರ ಉಪವಾಸ
ಹಾಗೆ ನೋಡಿದರೆ, ಉಪವಾಸ ಮಾಡುವುದು ಭಾರತೀಯರಿಗೆ ಹೊಸದೇನಲ್ಲ. ಏಕಾದಶಿ ಉಪವಾಸ, ಸಂಕಷ್ಟಿ ಉಪವಾಸ, ನವರಾತ್ರಿ ಉಪವಾಸ ಎನ್ನುತ್ತಾ ಹಲವು ವ್ರತಗಳ ಕಾರಣಗಳಿಗೆ ಉಪವಾಸಗಳ ಆಚರಣೆ ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಆದರೆ ಅತಿಯಾಗಿ ತಿನ್ನುವ ಅಭ್ಯಾಸವೂ ಇತ್ತೀಚಿನ ವರ್ಷಗಳಲ್ಲಿ ಆಚರಣೆಗೆ ಬಂದಿರುವ ಹಿನ್ನೆಲೆಯಲ್ಲಿ, ಜೀರ್ಣಾಂಗಗಳಿಗೆ ಅಗತ್ಯವಾದ ವಿಶ್ರಾಂತಿಯನ್ನು ನೀಡುವ ಬಗ್ಗೆ ಮಾಹಿತಿ ಹಂಚಿಕೆಯಾಗುತ್ತಿದೆ. ಈ ಮಧ್ಯಂತರ ಉಪವಾಸಗಳಲ್ಲೂ ಹಲವು ಬಗೆಗಳಿವೆ. ಅವರವರ ದೇಹಸ್ಥಿತಿ ಮತ್ತು ಕೆಲಸದ ಅನುಕೂಲಗಳ ಹಿನ್ನೆಲೆಯಲ್ಲಿ ಜೀರ್ಣಾಂಗಗಳಿಗೆ ಬಿಡುವು ಕೊಡುವ ಟೈಮ್‌ಟೇಬಲ್ ಮಾಡಿಕೊಳ್ಳಬಹುದು. ಉದಾ, ರಾತ್ರಿ ೭ ಗಂಟೆಗೆ ಊಟ ಮಾಡಿ ಮರುದಿನ ಬೆಳಗ್ಗೆ ೭ ಗಂಟೆಗೆ ತಿಂಡಿ ತಿನ್ನುವುದು ಅಥವಾ ವಾರಕ್ಕೊಂದು ದಿನ ಕೇವಲ ದ್ರವಾಹಾರ ಮುಂತಾದವು. ಅದರಲ್ಲೂ ತೂಕ ಇಳಿಸುವ ವ್ರತ ಮಾಡುತ್ತಿರುವವರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಬೀಜಗಳು
ಇದೀಗ ಸೂಪರ್‌ಫುಡ್‌ಗಳ ಕಾಲ. ಒಂದು ಆಹಾರದಿಂದ ಒಂದೇ ಅನುಕೂಲ ದೊರೆಯುತ್ತದೆ ಎಂದರೆ ಜನರಿಗದು ರುಚಿಸುವುದಿಲ್ಲ. ತಿನ್ನುವ ಒಂದೇ ಆಹಾರದಲ್ಲಿ ಎಷ್ಟು ಹೆಚ್ಚಿನ ಸತ್ವಗಳು ದೊರೆಯುತ್ತವೆ ಎಂಬುದನ್ನು ಅವರು ನೋಡುತ್ತಾರೆ. ಈ ನಿಟ್ಟಿನಲ್ಲಿ ಕಾಯಿ-ಬೀಜಗಳು ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿವೆ. ಹಾಗಾಗಿ ಈವರೆಗೆ ಪ್ರಚಲಿತದಲ್ಲಿದ್ದ ಬಾದಾಮಿ, ಪಿಸ್ತಾ ಮುಂತಾದ ಬೀಜಗಳ ಜೊತೆಗೆ ಅಗಸೆ ಮತ್ತು ಚಿಯಾ ಬೀಜಗಳು ಸೂಪರ್‌ಫುಡ್‌ಗಳಾಗಿ ಹೆಚ್ಚಿನ ಪ್ರಚಾರ ಪಡೆಯುತ್ತಿವೆ. ಹತ್ತು ಹಲವು ಮಹತ್ವದ ಸತ್ವಗಳನ್ನು ದೇಹಕ್ಕೆ ನೀಡುವ ಇವು, ನಾನಾ ರೀತಿಯ ಆರೋಗ್ಯಕರ ಲಾಭಗಳನ್ನೂ ಶರೀರಕ್ಕೆ ಒದಗಿಸುತ್ತವೆ. ಹಾಗಾಗಿ ಈ ವರ್ಷದಲ್ಲಿ ಇವೆರಡೂ ಬೀಜಗಳ ಬಳಕೆ ಹೆಚ್ಚಿನ ಪ್ರಚಾರವನ್ನು ಪಡೆದಿದೆ.
ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?