ನಮ್ಮ ದೇಹವನ್ನು ಆರೋಗ್ಯವಾಗಿಡುವುದಕ್ಕೆ ಮತ್ತು ಅದರ ಸೂಕ್ಷ್ಮಾತಿಸೂಕ್ಷ್ಮ ಅಗತ್ಯಗಳನ್ನು ಪೂರೈಸುವುದಕ್ಕೆ ನಮ್ಮದೇ ದೇಹದಲ್ಲಿನ ವ್ಯವಸ್ಥೆ ಸಕ್ಷಮವಾಗಿದೆ. ಆದರೆ ಯಾವುದೇ ಅಂಗ ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ವ್ಯತ್ಯಾಸವಾದರೆ ಏನಾಗುತ್ತದೆ ಎಂಬ ಬಗ್ಗೆ ನಮಗೆ ಅರಿವಿರುವುದು ಅಗತ್ಯ. ಹಾಗಾಗಿಯೇ ಜನವರಿ ತಿಂಗಳನ್ನು ಥೈರಾಯ್ಡ್ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ.
ನಮ್ಮ ಗಂಟಲಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಪುಟ್ಟ ಗ್ರಂಥಿಯಿದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಈ ಪುಟ್ಟ ಗ್ರಂಥಿ ಸ್ರವಿಸುವ ಚೋದಕಗಳು ನಮ್ಮ ಆರೋಗ್ಯ ರಕ್ಷಣೆಗೆ ಬಹಳ ಮುಖ್ಯವಾದದ್ದು. ದೇಹದ ಉಷ್ಣತೆಯನ್ನು ನಿಯಂತ್ರಿಸುವುದು, ಹೃದಯದ ಬಡಿತವನ್ನು ಸರಾಗ ಮಾಡುವುದು, ಶರೀರದ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುವುದು- ಇಂಥ ಕೆಲವು ಮುಖ್ಯ ಹೊಣೆಗಳನ್ನು ಈ ಗ್ರಂಥಿ ನಿರ್ವಹಿಸುತ್ತದೆ. ಈ ಗ್ರಂಥಿಗಳು ಉತ್ಪಾದಿಸುವ ಚೋದಕಗಳ ಅಥವಾ ಹಾರ್ಮೋನುಗಳ ಪ್ರಮಾಣ ಹೆಚ್ಚು ಇಲ್ಲವೇ ಕಡಿಮೆಯಾದರೆ ಥೈರಾಯ್ಡ್ ಸಮಸ್ಯೆ ಇದೆಯೆಂದು ಅರ್ಥ. ಹೈಪರ್ ಥೈರಾಯ್ಡಿಸಂ, ಹೈಪೋ ಥೈರಾಯ್ಡಿಸಂ, ಥೈರಾಯ್ಡೈಟಿಸ್ ಮತ್ತು ಹಶಿಮೊಟೊ ಥೈರಾಯ್ಡೈಟಿಸ್- ಇವು ಸಾಮಾನ್ಯವಾಗಿ ಕಾಡುವ ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು.
ಈ ಗ್ರಂಥಿ ಸ್ರವಿಸುವ ಟಿ3 ಮತ್ತು ಟಿ4 ಚೋದಕಗಳು (T3 and T4 hormones) ಏರಿಳಿತವಾಗುವ ಸಮಸ್ಯೆ ಯಾರಲ್ಲೂ ಉಂಟಾಗಬಹುದು. ಆದರೆ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸುಮಾರು ಎಂಟು ಪಟ್ಟು ಹೆಚ್ಚು. ಕೆಲವೊಮ್ಮೆ ಬಾಲ್ಯದಲ್ಲೇ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ವಯಸ್ಸು ಮಾಗಿದಂತೆ ಈ ಸಮಸ್ಯೆ ಕಾಣಿಸಿಕೊಳ್ಳುವ ಪ್ರಮಾಣ ಏರುತ್ತದೆ. ಶಿಶು ಜನನದ ನಂತರ, ಋತುಬಂಧದ ಸಮಯದಲ್ಲಿ ಅಥವಾ 60ರ ನಂತರ ಥೈರಾಯ್ಡ್ ಸಮಸ್ಯೆ ಉಂಟಾಗಬಹುದು. ಸರಳ ರಕ್ತ ಪರೀಕ್ಷೆಯಿಂದ ಈ ಸಮಸ್ಯೆಯನ್ನು ಪತ್ತೆ ಮಾಡಬಹುದು.
ಹೈಪೋ ಥೈರಾಯ್ಡಿಸಂ
ಚೋದಕಗಳ ಸ್ರವಿಸುವಿಕೆ ಕಡಿಮೆಯಾದಾಗ ಕಾಣುವ ಸಮಸ್ಯೆಯಿದು. ಈ ಸಮಸ್ಯೆ ಆರಂಭದಲ್ಲಿ ಅಷ್ಟಾಗಿ ಗಮನಕ್ಕೆ ಬಾರದಿರಬಹುದು. ಆದರೆ ಸುಸ್ತು, ಆಯಾಸ, ಸುಮ್ಮನೆ ಚಳಿಯಾಗುವುದು, ಮಲಬದ್ಧತೆ, ಒಣ ಚರ್ಮ, ತೂಕ ಹೆಚ್ಚಳ, ಧ್ವನಿ ಒರಟಾಗುವುದು, ಮಾಂಸಖಂಡಗಳಲ್ಲಿ ನೋವು, ಕೂದಲು ಉದುರುವುದು, ಖಿನ್ನತೆ, ಫಲವಂತಿಕೆಯ ಸಮಸ್ಯೆ, ಮಾಸಿಕ ಸ್ರಾವ ಏರುಪೇರಾಗುವುದು- ಇಂಥ ಲಕ್ಷಣಗಳು ಉಂಟಾಗಬಹುದು.
ಹೈಪರ್ ಥೈರಾಯ್ಡಿಸಂ
ಹಾರ್ಮೋನುಗಳ ಸ್ರಾವ ಹೆಚ್ಚಾದಾಗ ಬರುವ ಸಮಸ್ಯೆಯಿದು. ಹೃದಯದ ಬಡಿತ ಏರುಪೇರಾಗುವುದು, ಹಸಿವು ಹೆಚ್ಚಾಗಿ ಹೆಚ್ಚು ತಿಂದರೂ ಇಳಿಯುವ ತೂಕ, ಹೊಟ್ಟೆ ಸರಿ ಇಲ್ಲದಂತಾಗುವುದು, ದೃಷ್ಟಿ ಸಮಸ್ಯೆ, ಋತುಚಕ್ರ ಏರುಪೇರು, ನಿದ್ರಾಹೀನತೆ, ಗಂಟಲು ಊದಿಕೊಂಡಂತೆ ಕಾಣುವುದು, ಕೂದಲು ತುಂಡಾಗಿ ಉದುರುವುದು, ಬೆವರುವ ಪ್ರಮಾಣ ಹೆಚ್ಚುವುದು- ಇಂಥ ಲಕ್ಷಣಗಳಿದ್ದರೆ ಎಚ್ಚರಿಕೆ ಅಗತ್ಯ.
ಇದನ್ನೂ ಓದಿ| Mental Health | ಒತ್ತಡ ಹೆಚ್ಚಿದೆಯೇ? ಇವು ನೆರವಾಗಬಹುದು!