Site icon Vistara News

Thyroid health: ಥೈರಾಯ್ಡ್‌ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಮೂಲಿಕೆಗಳು ಬೇಕು!

healthy herbs for kids

ಬಹಳಷ್ಟು ಮಂದಿಯ ಹಲವು ಸಮಸ್ಯೆಗಳಿಗೆ ಮೂಲ ಕಾರಣವಾಗುವುದು ಥೈರಾಯ್ಡ್‌ ಸಮಸ್ಯೆ. ಇಂದು ಬದಲಾದ ಜೀವನ ಪದ್ಧತಿ, ಒತ್ತಡದ ಜೀವನ, ನಿಗದಿತ ಸಮಯ ಮೀರಿದ ಅತಿಯಾದ ಕೆಲಸ, ಬದಲಾದ ಆಹಾರಕ್ರಮ ಇವೆಲ್ಲವೂ ಇಂದು ಥೈರಾಯ್ಡ್‌ ಸಮಸ್ಯೆಯನ್ನು (Thyroid health) ಬಹಳ ಸಾಮಾನ್ಯವಾದ ಸಮಸ್ಯೆಯಂತೆ ಮಾಡಿವೆ. ವಯಸ್ಸಿನ ಹಂಗಿಲ್ಲದೆ, ಹಲವರನ್ನು ಇಂದು ಥೈರಾಯ್ಡ್‌ ಸಮಸ್ಯೆ ಬಾಧಿಸುತ್ತಿದೆ. ಮೇಲ್ನೋಟಕ್ಕೆ ಸಮಸ್ಯೆ ಸರಳವಾಗಿ ಅನಿಸಿದರೂ, ನಿಜವಾಗಿ ನೋಡಿದರೆ, ಇದು ತಂದೊಡ್ಡುವ ತೊಂದರೆಗಳು ಹಲವು. ಥೈರಾಯ್ಡ್‌ ಗ್ರಂಥಿ ಉತ್ಪತ್ತಿ ಮಾಡುವ ಹಾರ್ಮೋನಿನ ಏರುಪೇರಿನಿಂದ ದೇಹದ ತೂಕದಲ್ಲಿ ಏರುಪೇರು, ಜೀರ್ಣಕ್ರಿಯೆ ಸಮಸ್ಯೆಗಳು, ನಿದ್ದೆಯ ತೊಂದರೆ, ಭಾವನಾತ್ಮಕ ಸಮಸ್ಯೆಗಳು, ಬದಲಾಗುತ್ತಿರುವ ಮೂಡ್‌, ಒತ್ತಡ, ಖಿನ್ನತೆಯಂತಹ ಹಲವು ಸಮಸ್ಯೆಗಳು ಇದರ ಬೆನ್ನಲ್ಲೇ ನಮ್ಮನ್ನೇ ಹುಡುಕಿಕೊಂಡು ಬರುತ್ತವೆ. ಅಯೋಡಿನ್‌, ಪ್ರೊಟೀನ್‌ ಹಾಗೂ ಒಳ್ಳೆಯ ಕೊಬ್ಬು ಇತ್ಯಾದಿಗಳು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನಾವು ಪೂರೈಸಿದರೆ (Health tips) ಥೈರಾಯ್ಡ್‌ ಸಮಸ್ಯೆಯಿಂದ ದೂರವಿರಬಹುದು. ಹಾಗಾದರೆ ಬನ್ನಿ, ಥೈರಾಯ್ಡ್‌ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಯಾವೆಲ್ಲ ಮೂಲಿಕೆಗಳು, ಆಹಾರಗಳು ಒಳ್ಳೆಯದು ನೋಡೋಣ.

1. ಅಶ್ವಗಂಧ: ಅಶ್ವಗಂಧ ಎಂಬ ಈ ಮೂಲಿಕೆಯಲ್ಲಿ ಆಲ್ಕನಾಯ್ಡ್‌ಗಳು, ಸ್ಟೆರಾಯ್ಡಾಲ್‌, ಸೆಪೋನಿನ್‌ ರಸಾಯನಿಕಗಳು ಇರುವುದರಿಂದ ಇವು ಹಾರ್ಮೋನ್‌ ಉತ್ಪತ್ತಿಯಲ್ಲಿ ಸಹಾಯ ಮಾಡುತ್ತವೆ. ಇದು ದೇಹದಲ್ಲಿ ಟಿ೪ ಹಾರ್ಮೋನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

2. ಒಣಶುಂಠಿ: ಶುಂಠಿಯಿಂದ ಹಲವು ಆರೋಗ್ಯಕರ ಲಾಭಗಳಿವೆ. ಥೈರಾಯ್ಡ್‌ ಗ್ರಂಥಿ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾರ್ಮೋನನ್ನು ಉತ್ಪಾದನೆ ಮಾಡದಿದ್ದರೆ ಉಂಟಾಗುವ ಸಮಸ್ಯೆಯನ್ನು ಶುಂಠಿ ಸಮತೋಲನಕ್ಕೆ ತರುವಲ್ಲಿ ನೆರವಾಗುತ್ತದೆ. ಈ ಕಾರಣದಿಂದ ಏರುಪೇರಾದ ತೂಕ ಇಳಿಕೆಯಲ್ಲಿಯೂ ಇದು ಸಹಾಯ ಮಾಡುತ್ತದೆ.

3. ನುಗ್ಗೆಸೊಪ್ಪು: ನುಗ್ಗೆಸೊಪ್ಪು ಥೈರಾಯ್ಡ್‌ ಸಮಸ್ಯೆಗೆ ಹೇಳಿ ಮಾಡಿಸಿದ ಇನ್ನೊಂದು ಆಹಾರ. ಇದರಲ್ಲಿರುವ ಪಾಲಿಫಿನಾಲ್‌ ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಲು ನೆರವಾಗುತ್ತದೆ. ಇದು ಥೈರಾಕ್ಸಿನ್‌ ಹಾರ್ಮೋನನ್ನು ಹಾಗೂ  ಟ್ರೈಅಯೋಡೋ ಥೈರೋನಿನ್‌ ಹಾರ್ಮೋನಿನ ಉತ್ಪತ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!

4. ಕರಿಜೀರಿಗೆ: ಥೈರಾಯ್ಡ್‌ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಇನ್ನೊಂದು ಮನೆಮದ್ದು ಎಂದರೆ ಅದು ಕರಿಜೀರಿಗೆ. ಇದು ಟಿಎಸ್‌ಎಚ್‌ ಮಟ್ಟವನ್ನು ಕಡಿಮೆಗೊಳಿಸಿ ಟಿ೩ಯನ್ನು ಏರಿಸುವಲ್ಲಿ ಸಹಾಯ ಮಾಡುತ್ತದೆ.

5. ಜೇಷ್ಠಮಧು: ಜೇಷ್ಠಮಧು ಆಯುರ್ವೇದದಲ್ಲಿ ಹಲವು ಆರೋಗ್ಯಕರ ಲಾಭಗಳನ್ನು ಹೊತ್ತು ತರುವ ಮೂಲಿಕೆ. ಇದು ಕಾರ್ಟಿಸೋಲ್‌ ಮಟ್ಟವನ್ನು ಕಡಿಮೆ ಮಾಡಿ ಥೈರಾಯ್ಡ್‌ ಗ್ರಂಥಿಯ ಮೇಲೆ ಅಡ್ಡ ಪರಿಣಾಮ ಬೀರುವುದನ್ನು ತಪ್ಪಿಸುತ್ತದೆ.

ಇವೆಲ್ಲ ಮೂಲಿಕೆಗಳೂ ಕೂಡಾ ಥೈರಾಯ್ಡ್‌ ಗ್ರಂಥಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಆದರೆ, ಥೈರಾಯ್ಡ್‌ ಸಮಸ್ಯೆ ಇದ್ದರೆ, ಖಂಡಿತವಾಗಿ ವೈದ್ಯರ ಸಲಹೆ ಸೂಚನೆಯ ಮೇರೆಗೆ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ. ವೈದ್ಯರ ಸೂಚನೆ ಕಡೆಗಣಿಸಿ ಕೇವಲ ಇವುಗಳನ್ನೇ ಅವಲಂಬಿಸಿದರೆ, ಸಮಸ್ಯೆಗೆ ಸರಿಯಾದ ಪರಿಹಾರ ಸಿಗಲಾರದು.

ಇದನ್ನೂ ಓದಿ: Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು!

Exit mobile version