ಕೋಳಿ ಮೊದಲಾ ಮೊಟ್ಟೆ ಮೊದಲಾ ಅನ್ನುವಂಥ ಜಿಜ್ಞಾಸೆಗಳಿಗೆ ಕೊನೆಯೇ ಇಲ್ಲ. ಇಂಥದ್ದೇ ಇನ್ನೊಂದು ಪ್ರಶ್ನೆ ಬೆಳಗಿನ ತಿಂಡಿ ತಿಂದ ಬಳಿಕ ಹಲ್ಲುಜ್ಜಬೇಕೆ (Tips For Dental Care) ಅಥವಾ ಮೊದಲೇ ಈ ಕೆಲಸ ಮಾಡಬೇಕೆ ಎಂಬುದು. ಕೆಲವರು ಮೊದಲೇ ಮಾಡಬೇಕು ಎಂದರೆ, ತಿಂಡಿ ಆದ ಬಳಿಕ ಹಲ್ಲುಜ್ಜುವುದೇ ಸರಿ ಎಂದು ಹೇಳುವವರೂ ಇದ್ದಾರೆ. ಈಗ ಮತ್ತದೇ ಪ್ರಶ್ನೆ- ಯಾವುದು ಮೊದಲು?
ಹೆಚ್ಚಿನ ಜನರ ಅಭಿಪ್ರಾಯ ಇರುವುದು, ತಿಂಡಿಗೆ ಮೊದಲು ಅಥವಾ ನಂತರ ಎನ್ನುವುದಕ್ಕಿಂತ ದಿನಾ ಒಂದು ನಿಯಮಿತ ಸಮಯಕ್ಕೆ ಮಾಡಬೇಕು ಮತ್ತು ಸರಿಯಾಗಿ ಮಾಡಬೇಕು ಎನ್ನುವುದು. ಅಂದರೆ, ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವ ಅಭ್ಯಾಸ ಸೂಕ್ತ ಎಂಬುದಷ್ಟೇ ಅವರ ಮಾತು. ಇದರಿಂದ ಪ್ರತಿದಿನ ಹಲ್ಲಿನ ಆರೋಗ್ಯ ಕಾಪಾಡುವ ಮಾಡುವ ಅಭ್ಯಾಸ ಬೆಳೆಯುತ್ತದೆ ಎನ್ನುವವರೂ ಕೆಲವೊಮ್ಮೆ, ಟೂತ್‌ಪೇಸ್ಟಿನ ರುಚಿಯ ಇಡ್ಲಿ-ಸಾಂಬಾರ್ ರುಚಿಸುವುದಿಲ್ಲ ಎಂದು ಗೊಣಗುವುದನ್ನು ಕೇಳಬಹುದು. ಹಾಗಾದರೆ- ಯಾವುದು ಮೊದಲು!
ಹಲ್ಲುಜ್ಜಿದ ನಂತರ ತಿಂಡಿ
ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛಗೊಳಿಸಿದ್ದರೂ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬಾಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು, ಪದರಗಳು ಕಟ್ಟಿಕೊಂಡಿರುತ್ತವೆ. ಹಾಗಾಗಿ ಬೆಳಗ್ಗೆ ಏಳುವಾಗ ಬಾಯಿ ದುರ್ಗಂಧವಿರುವುದು ಅಥವಾ ವಿಚಿತ್ರ ರುಚಿ ಬಾಯಲ್ಲಿರುವುದೆಲ್ಲಾ ಸಾಮಾನ್ಯ. ಫ್ಲೂರೈಡ್‌ಯುಕ್ತ ಟೂತ್‌ಪೇಸ್ಟ್‌ನಿಂದ ಬಾಯನ್ನು ಸಂಪೂರ್ಣವಾಗು ಸ್ವಚ್ಛ ಮಾಡುವುದರಿಂದ ಈ ಪ್ಲೇಕ್ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಮಾಡಬಹುದು. ಮಾತ್ರವಲ್ಲ, ನಾವು ತಿನ್ನುವ ಆಮ್ಲೀಯ ಆಹಾರಗಳಿಂದ ನಮ್ಮ ಹಲ್ಲುಗಳ ಎನಾಮಲ್ಲನ್ನು ರಕ್ಷಿಸಲು ಈ ಟೂತ್‌ಪೇಸ್ಟ್ ನೆರವಾಗುತ್ತದೆ. ಹಾಗಾಗಿ ತಿಂಡಿಗೂ ಮೊದಲೇ ಹಲ್ಲುಜ್ಜುವುದು ಕ್ಷೇಮ ಎನ್ನುತ್ತದೆ ಒಂದು ಗುಂಪು.
ಬೆಳಗಿನ ಹೊತ್ತೇ ಹಲ್ಲುಜ್ಜುವುದರಿಂದ ಬಾಯಲ್ಲಿ ಲಾಲಾರಸದ ಉತ್ಪಾದನೆಗೆ ಪ್ರಚೋದನೆ ದೊರೆಯುತ್ತದೆ. ಜಠರದಲ್ಲಿರುವ ಆಹಾರ ಜೀರ್ಣವಾಗುವುದಕ್ಕೆ ಬಾಯಿಯ ಜೊಲ್ಲುರಸದ ಯೋಗದಾನ ದೊಡ್ಡ ಮಟ್ಟದ್ದು. ಜೊತೆಗೆ, ಬಾಯಿಯಲ್ಲಿ ಬ್ರಷ್ ಮಾಡಿದ ನಂತರವೂ ಬ್ಯಾಕ್ಟೀರಿಯಾಗಳು ಉಳಿದಿದ್ದರೆ, ಅವುಗಳನ್ನು ನಾಶ ಮಾಡುವಲ್ಲಿ ಜೊಲ್ಲು ಸಹಕಾರಿ.
ತಿಂಡಿಯ ನಂತರ ಮಾಡಿದರೆ?
ತಪ್ಪೇನಿಲ್ಲ! ಆದರೆ ಇದರಲ್ಲಿ ಕೆಲವು ಸೂಕ್ಷ್ಮಗಳಿವೆ ಎನ್ನುತ್ತಾರೆ ತಜ್ಞರು. ತಿಂಡಿ ತಿಂದ ತಕ್ಷಣ ಪೇಸ್ಟ್ ಹಾಕಿ ಹಲ್ಲುಜ್ಜುವುದರಿಂದ ದಂತಗಳ ಎನಾಮಲ್‌ಗೆ ಹಾನಿ ಎನ್ನುವಂಥ ಅಭಿಪ್ರಾಯವೂ ಇದೆ. ಅದರಲ್ಲೂ ಹುಳಿ ಇರುವಂಥ ಆಹಾರವನ್ನು ಸೇವಿಸಿದ ಮೇಲಂತೂ, ಚೆನ್ನಾಗಿ ನೀರು ಕುಡಿದು, ಬಾಯಿ ಮುಕ್ಕಳಿಸಿ, ಸುಮಾರು ಒಂದು ತಾಸು ಬಿಟ್ಟು ಟೂತ್‌ಪೇಸ್ಟ್‌ನೊಂದಿಗೆ ಹಲ್ಲುಜ್ಜುವುದು ಸರಿ. ಹಾಗಿಲ್ಲದಿದ್ದರೆ ಬಾಯಲ್ಲಿರುವ ಆಮ್ಲೀಯ ಗುಣಗಳ ಮೇಲೆಯೇ ಪೇಸ್ಟ್‌ನಲ್ಲಿರುವ ಫ್ಲೂರೈಡ್ ಕವಚ ಕುಳಿತು ಹಲ್ಲಿಗೆ ತೊಂದರೆಯಾಗಬಹುದು.
ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಹಲ್ಲು ಸ್ವಚ್ಛ ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಸೂಕ್ತ. ಹಾಗೆಂದು ಮತ್ತೆ ರಾತ್ರಿಯವರೆಗೆ ಬಾಯಿಯ ಬಗ್ಗೆ ಕಾಳಜಿ ಮಾಡದಿದ್ದರೆ, ಅದು ಕೂಡ ಸಮಸ್ಯೆಗಳನ್ನು ಒಡ್ಡುತ್ತದೆ. ಹಾಗೆಯೇ, ಸರಿಯಾದ ರೀತಿಯಲ್ಲಿ ದಂತಗಳನ್ನು ಉಜ್ಜುವುದು ಸಹ ಮುಖ್ಯ.
ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!