Site icon Vistara News

Tips For Home Cleaning : ಸುಲಭವಾಗಿ ಮನೆ ಕ್ಲೀನ್‌ ಮಾಡುವುದು ಹೇಗೆ?

Couple cleaning their home

ಮನಸ್ಸು ನೆಮ್ಮದಿಯಾಗಿರಬೇಕೆಂದರೆ ಮನೆ ಸ್ವಚ್ಛವಾಗಿರಬೇಕು. ಮನೆ ಸ್ವಚ್ಛವಿಲ್ಲವೆಂದರೆ (Tips For Home Cleaning) ದೈಹಿಕ ಆರೋಗ್ಯಕ್ಕೂ ಹಾನಿಯಷ್ಟೇ ಅಲ್ಲದೆ ಮನಸ್ಸಿನ ಆರೋಗ್ಯಕ್ಕೂ ಹಾನಿ. ಪ್ರತಿನಿತ್ಯ ಮನೆ ಸ್ವಚ್ಛ ಮಾಡುವುದು ಅತ್ಯವಶ್ಯಕ. ಆದರೆ ಕೆಲವು ಬಾರಿ ಅದೆಷ್ಟೇ ಸ್ವಚ್ಛ ಮಾಡಿದರೂ ಮನೆ ಸ್ವಚ್ಛವೆನಿಸುವುದೇ ಇಲ್ಲ. ಹಾಗಾದರೆ ಮನೆ ಸ್ವಚ್ಛತೆ ವೇಳೆ ನಾವು ಯಾವ ಯಾವ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಿ. ಪ್ರತಿನಿತ್ಯ ಮನೆಯನ್ನು ಸ್ವಚ್ಛ ಮಾಡಿ. ಆಗಾಗ ಮನೆಯನ್ನು ಡೀಪ್‌ ಕ್ಲೀನ್‌ ಮಾಡಿ. ಪ್ರತಿದಿನ ಸ್ವಚ್ಛತೆ ಮಾಡುವುದರಿಂದಾಗಿ ನಿಮಗೆ ಡೀಪ್‌ ಕ್ಲೀನ್‌ ಅಷ್ಟೊಂದು ಕಷ್ಟವಾಗುವುದಿಲ್ಲ.

ಬಚ್ಚಲುಮನೆ

ಬಚ್ಚಲು ಮನೆಯನ್ನು (ಬಾತ್‌ ರೂಮ್) ಸ್ವಚ್ಛ ಮಾಡುವಾಗ ಅಲ್ಲಿನ ಕಿಟಕಿಯನ್ನು ತೆರೆದಿಟ್ಟು ಗಾಳಿ ಚೆನ್ನಾಗಿ ಒಳಗೆ ಬರುವುದಕ್ಕೆ ಅವಕಾಶ ಮಾಡಿಕೊಡಿ. ಸ್ವಚ್ಛತೆ ಕೆಲಸ ಶುರು ಮಾಡುವುದಕ್ಕೂ ಮೊದಲು ಬಾತ್‌ ರೂಂನಲ್ಲಿರುವ ಸೋಪಿನ ಬಾಕ್ಸ್‌, ಶಾಂಪು ಬಾಟಲಿಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಹೊರಗೆ ಇರಿಸಿ. ಗಡಸು ನೀರಿನ ಕಲೆ ಬಾತ್‌ ರೂಂನಲ್ಲಿ ಸಾಮಾನ್ಯವಾಗಿ ಮೂಡಿರುತ್ತವೆ. ಅವುಗಳನ್ನು ಸ್ವಚ್ಛ ಮಾಡುವುದಕ್ಕೆ ನೀವು ಸೂಕ್ತ ಕ್ಲೀನರ್‌ಗಳನ್ನು ಬಳಸಬಹುದು. ಡೊಮೆಕ್ಸ್‌ ಫ್ಲೋರ್‌ ಕ್ಲೀನರ್‌ನಂತರ ಪರಿಣಾಮಕಾರಿ ಕ್ಲೀನರ್‌ ಬಳಸಿ ಬಾತ್‌ ರೂಂನ ನೆಲವನ್ನು ಸ್ವಚ್ಛವಾಗಿ ತೊಳೆಯಿರಿ. ಹಾಗೆಯೇ ಕಮೋಡ್‌ ಅನ್ನು ಕಮೋಡ್‌ ಕ್ಲೀನರ್‌ ಬಳಸಿ ತೊಳೆಯಿರಿ. ಅನೇಕರು ಕಮೋಡ್‌ ಕ್ಲೀನ್‌ ಮಾಡುವಾಗ ಅದರ ಹೊರ ಭಾಗವನ್ನು ತೊಳೆಯುವುದನ್ನು ಮರೆತುಬಿಡುತ್ತಾರೆ. ಆ ತಪ್ಪು ನೀವು ಮಾಡಬೇಡಿ. ಕಮೋಡ್‌ ಒಳಗೆ ಮತ್ತು ಹೊರಗೆ ನೀಟಾಗಿ ತೊಳೆಯಿರಿ. ನೀವು ಬಳಸುವ ಕ್ಲೀನರ್‌ಗಳ ಹಿಂಭಾಗದಲ್ಲಿ ಅದನ್ನು ಹೇಗೆ ಬಳಸಬೇಕು ಎನ್ನುವ ಮಾಹಿತಿಯನ್ನು ಕೊಡಲಾಗಿರುತ್ತದೆ. ಅದರಂತೆ ಸ್ವಚ್ಛತೆ ಕೆಲಸ ಮಾಡಿ.

ಅಡುಗೆ ಮನೆ

ಮನೆಯಲ್ಲಿರುವ ರೆಫ್ರಿಜರೇಟರ್‌ ಅನ್ನು ಕನಿಷ್ಠ 15 ದಿನಗಳಿಗೆ ಒಮ್ಮೆಯಾದರೂ ಡೀಪ್‌ ಕ್ಲೀನ್‌ ಮಾಡಿ. ಅದರಲ್ಲಿರುವ ದಿನಾಂಕ ಮೀರಿದ ಆಹಾರ ಮತ್ತು ಕೆಟ್ಟ ಪದಾರ್ಥಗಳನ್ನು ಕಸಕ್ಕೆ ಹಾಕಿ. ಯಾವುದಾದರೂ ಸೂಕ್ತ ಕಿಚನ್‌ ಕ್ಲೀನರ್‌ ಬಳಸಿಕೊಂಡು ಅಡುಗೆ ಮನೆಯ ಎಲ್ಲ ಕಪಾಟುಗಳನ್ನು ನೀಟಾಗಿ ತೊಳೆಯಿರಿ ಅಥವಾ ಒರೆಸಿರಿ. ಅದನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಕ್ಲೀನರ್‌ನ ಪ್ಯಾಕ್‌ನ ಹಿಂಭಾಗವನ್ನು ಪರಿಶೀಲಿಸಿ. ರೆಫ್ರಿಜರೇಟರ್‌ನ ಬಾಗಿಲು ಮತ್ತು ಬದಿಗಳನ್ನು ಸ್ಟೇನ್‌ ರಿಮೂವರ್‌ನಿಂದ ನೀಟಾಗಿ ಒರೆಸಿ. ಬ್ಲೆಂಡರ್‌, ಮೈಕ್ರೋವೇವ್‌ನಂತಹ ವಿದ್ಯುತ್‌ ಉಪಕರಣಗಳನ್ನು ಸ್ವಚ್ಛ ಮಾಡುವ ಮೊದಲು ಅದರ ತಯಾರಕರು ನೀಡಿರುವ ಸೂಚನೆಯನ್ನು ಓದಿ. ಮೈಕ್ರೋವೇವ್‌ ಅನ್ನು ಸ್ವಚ್ಛ ಮಾಡುವುದಕ್ಕೆ ಒಂದು ಕಪ್‌ ನೀರನ್ನು ಅದರೊಳಗಿಟ್ಟು ಬಿಸಿ ಮಾಡಿ. ನೀರಿನ ತೇವಾಂಶದಿಂದ ಮೈಕ್ರೋವೇವ್‌ನ ಬದಿಗಳಲ್ಲಿ ಅಂಟಿಕೊಂಡಿರುವ ಆಹಾರದ ಕಣಗಳು ಸಡಿಲವಾಗುತ್ತವೆ. ಅಂತರ ನೀವು ಅದನ್ನು ಒರೆಸಿ ತೆಗೆಯಬಹುದು.

ಮಲಗುವ ಕೋಣೆ

ನೀವು ಮಲಗುವ ಕೋಣೆಯಲ್ಲಿನ ಮಂಚದ ಬೆಡ್‌ ಕವರ್‌ಗಳು ಮತ್ತು ಬೆಡ್‌ಶೀಟ್‌ಗಳನ್ನು ವಾರಕೊಮ್ಮೆಯಾದರೂ ಬದಲಾಯಿಸಿ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ಬೆಡ್‌ಶೀಟ್‌ಗಳು ನಿಮ್ಮ ಮಲಗುವ ಕೋಣೆಯ ಒಳಾಂಗಣದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೋಣೆಯ ಕಪಾಟುಗಳನ್ನು, ಡ್ರೆಸಿಂಗ್‌ ಟೇಬಲ್‌, ನೈಟ್‌ ಸ್ಟ್ಯಾಂಡ್‌ ಅನ್ನು ಸ್ವಚ್ಛವಾಗಿ ಒರೆಸಿ. ರೂಮಿನ ಕಿಟಕಿ ಚೌಕಟ್ಟುಗಳನ್ನು ಒರೆಸಿ, ಪರದೆಗಳನ್ನು ತೆಗೆದು ಅವುಗಳನ್ನು ತೊಳೆಯಿರಿ. ಕೋಣೆಯನ್ನು ಗುಡಿಸಿ, ಒರೆಸಿಡಿ. ಯಾವುದಾದರೂ ಸೂಕ್ತ ಫ್ಲೋರ್‌ ಕ್ಲೀನರ್‌ ಅನ್ನು ಬಳಸಿ ಕೋಣೆಯ ನೆಲವನ್ನು ಸ್ವಚ್ಛ ಮಾಡಿ. ಅದನ್ನು ಬಳಸುವುದು ಹೇಗೆ ಎನ್ನುವುದಕ್ಕೆ ಕ್ಲೀನರ್‌ನ ಹಿಂಭಾಗದಲ್ಲಿನ ಸೂಚನೆಯನ್ನು ಪರಿಶೀಲಿಸಿ.

ಲಿವಿಂಗ್‌ ರೂಂ

ಮನೆಯಲ್ಲಿ ಲಿವಿಂಗ್‌ ರೂಂ ಸ್ವಚ್ಛ ಮಾಡುವುದು ಅತಿ ಮುಖ್ಯ. ಯಾವುದೇ ಬಂಧುಗಳು ಅಥವಾ ಸ್ನೇಹಿತರು ಮನೆಗೆ ಬಂದರೆ ಅವರು ಮೊದಲು ಬಂದು ಕೂರುವುದು ಲಿವಿಂಗ್‌ ರೂಂನಲ್ಲೇ. ಹಾಗಾಗಿ ಲಿವಿಂಗ್‌ ರೂಂನ ಮೂಲೆ ಮೂಲೆಯನ್ನೂ ಸ್ವಚ್ಛ ಮಾಡಿ. ಮನೆಯಲ್ಲಿರುವ ಸೋಫಾ, ಪೀಠೋಪಕರಣಗಳನ್ನು ಮೂರು ತಿಂಗಳಿಗೊಮ್ಮೆಯಾದರೂ ಶಾಂಪೂ ಬಳಸಿ ಸ್ವಚ್ಛ ಮಾಡಿಡಿ. ಬೇರೆ ಬೇರೆ ರೀತಿಯ ಸೋಫಾಗಳನ್ನು ಬೇರೆ ಬೇರೆ ರೀತಿಯಲ್ಲಿ ಸ್ವಚ್ಛ ಮಾಡಬೇಕಾಗುತ್ತದೆ. ಅದನ್ನು ಗಮನಿಸಿಕೊಂಡು ಸೋಫಾಗಳನ್ನು ಸ್ವಚ್ಛ ಮಾಡಿ. ಲೆದರ್‌ ಸೋಫಾಗಳಿಗೆ ಅದರ ಹೊಳಪು ಮಾಸದಂತೆ ಮಾಡುವುದಕ್ಕೆ ವಿಶೇಷವಾದ ಕ್ಲೀನರ್‌ಗಳು ಬರುತ್ತವೆ. ಅಂತವನ್ನು ಬಳಸಿ ಸ್ವಚ್ಛತೆ ಮಾಡಿ. ಡೈನಿಂಗ್‌ ಟೇಬಲ್‌ ಮತ್ತು ಲಿವಿಂಗ್‌ ರೂಂನ ಟೇಬಲ್‌ನ್ನು ಸ್ಟೇನ್‌ ರಿಮೂವರ್‌ ಬಳಸಿ ಒರೆಸಿಡಿ. ಕಿಟಕಿಗಳ ಗಾಜನ್ನು ಮೈಕ್ರೋಫೈಬರ್‌ ಬಟ್ಟೆ ಬಳಸಿ ಒರೆಸಿ. ಅದಕ್ಕೆ ಗಾಜಿನ ಕ್ಲೀನರ್‌ ಬಳಸಿ. ಗಾಜಿನಲ್ಲಿ ಗೆರೆಗಳು ಕಾಣಬಾರದು ಎಂದರೆ ಅದನ್ನು ಮೇಲಿನಿಂದ ಕೆಳಕ್ಕೆ ಒರೆಸಿ. ಹಾಗೆಯೇ ಒರೆಸಿದ ಗಾಜನ್ನು ನೈಸರ್ಗಿಕವಾಗಿ ಒಣಗಲು ಬಿಡಿ.

ವಿಧಾನ ಸರಿಯಿರಲಿ

ಮನೆಯನ್ನು ಸ್ವಚ್ಛ ಮಾಡುವಾಗ ಯಾವ ಕೆಲಸ ಆದ ಮೇಲೆ ಯಾವ ಕೆಲಸ ಮಾಡಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೊದಲಿಗೆ ಪೀಠೋಪಕರಣ, ಟೇಬಲ್‌ಗಳು, ಕಪಾಟುಗಳನ್ನು ಸ್ವಚ್ಛ ಮಾಡಿಕೊಳ್ಳಿ. ಅದರಲ್ಲಿನ ಧೂಳೆಲ್ಲವು ನೆಲದ ಮೇಲೆ ಬಿದ್ದಿರುತ್ತದೆ. ಹಾಗಾಗಿ ನಂತರ ನೆಲವನ್ನು ಗುಡಿಸಿ, ಒರೆಸುವ ಕೆಲಸ ಮಾಡಿ. ಎಲ್ಲ ಸ್ಥಳಗಳನ್ನು ಅದಾಗಿಯೇ ಒಣೆಯುವುದಕ್ಕೆ ಬಿಡಿ. ಸೋಂಕು‌ ನಿವಾರಕ ಗುಣಲಕ್ಷಣ ಹೊಂದಿರುವ ಪರಿಣಾಮಕಾರಿ ಕ್ಲೀನರ್‌ಗಳನ್ನು ಬಳಸಿಕೊಂಡು ನೆಲವನ್ನು ಸ್ವಚ್ಛ ಮಾಡಿ.
ನೆಲ ಸ್ವಚ್ಛವಾದ ನಂತರ ಎಲ್ಲ ವಸ್ತುಗಳನ್ನು ಅವುಗಳ ಜಾಗಕ್ಕೆ ವಾಪಸು ಇಡಿ. ಮೊದಲಿಗೆ ಕೋಣೆಗಳ ವಸ್ತುಗಳನ್ನು ಜೋಡಿಸಿಟ್ಟು ನಂತರ ಲಿವಿಂಗ್‌ ರೂಂನ ಸಾಮಾಗ್ರಿಗಳನ್ನು ವಾಪಾಸು ಇಡಿ. ಸೋಫಾ ಮೇಲಿನ ದಿಂಬುಗಳನ್ನು, ಮಕ್ಕಳ ಆಟಿಕೆಗಳನ್ನು, ಟಿವಿ, ಎಸಿ ರಿಮೋಟಗಗಳನ್ನು ಅವುಗಳ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡಿ. ತೊಳೆದ ಬಟ್ಟೆಗಳನ್ನು ನೀಟಾಗಿ ಮಡಸಿ ಕಬೋರ್ಡ್‌ಗಳ ಒಳಗಿಡಿ. ನಿಮ್ಮ ಮಕ್ಕಳು ಕೂಡ ಅವರ ಪುಸ್ತಕಗಳನ್ನು ಜೋಡಿಸಿಟ್ಟುಕೊಳ್ಳಲು ನಿರ್ದೇಶನ ನೀಡಿ.

ಹಳೆಯ ವಸ್ತುಗಳನ್ನು ಅಗತ್ಯ ಇದ್ದವರಿಗೆ ಕೊಡಿ

ಮನೆಯೆಂದ ಮೇಲೆ ಹಲವಾರು ವಸ್ತುಗಳ ಬಳಸದೆ ಇರುವುದು ಇರುತ್ತವೆ. ಯಾವುದೋ ವಸ್ತುಗಳು ನಮಗೆ ಬೇಡವಾಗಿರುತ್ತದೆ. ಇನ್ನು ಕೆಲವು ವಸ್ತುಗಳು ನಾವು ಹೊಸ ವಸ್ತು ತಂದಿರುವುದರಿಂದ ಹಳೆಯದಾಗಿ ಮೂಲೆ ಸೇರಿಬಿಟ್ಟಿರುತ್ತವೆ. ಅಂತಹ ವಸ್ತುಗಳನ್ನು ನೀವು ಅವಶ್ಯಕತೆ ಇರುವವರಿಗೆ ಕೊಡಬಹುದು. ನಿಮಗೆ ಬಳಕೆಗೆ ಬಾರದ ವಸ್ತುಗಳನ್ನೆಲ್ಲ ಒಂದು ಕಡೆ ಸಂಗ್ರಹಿಸಿಟ್ಟು, ಅದನ್ನು ಅವಶ್ಯಕತೆ ಇರುವವರಿಗೆ ಕೊಡಿ. ಇದರಿಂದ ನಿಮ್ಮ ಮನೆಯಲ್ಲಿರುವ ವಸ್ತುಗಳು ಕಡಿಮೆಯಾಗಿ ಗೊಂದಲ ಕಡಿಮೆಯಾಗುತ್ತದೆ. ಹಾಗೆಯೇ ಬಡವರಿಗೆ ಒಂದಿಷ್ಟು ಸಹಾಯ ಮಾಡಿದಂತೆಯೂ ಆಗುತ್ತದೆ. ಯಾವುದಾದರೂ ವಸ್ತುವನ್ನು ಖರೀದಿಸಿದರೆ ಕೂಡಲೇ ಹಳೆಯ ವಸ್ತುವನ್ನು ದಾನ ಮಾಡುವ ಯೋಚನೆ ಹಾಕಿಕೊಳ್ಳಿ.

ಇದನ್ನೂ ಓದಿ: Brain Health Tips: ಎಷ್ಟು ವಯಸ್ಸಾದರೂ ಮೆದುಳನ್ನು ಸದಾ ಚುರುಕಾಗಿಡುವುದು ಹೇಗೆ ಗೊತ್ತೇ?

Exit mobile version