Site icon Vistara News

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

Tips On Tea

ಚಹಾ ಮಾಡುವುದೆಂದರೆ ರಾಕೆಟ್‌ ಹಾರಿಸಿದಂತೇನಲ್ಲ, ಸುಲಭದ ಕೆಲಸ. ಮಾಡುವ ರೀತಿಗಳಲ್ಲಿ ಒಬ್ಬರಿಂದೊಬ್ಬರಿಗೆ ಭಿನ್ನತೆ ಇರಬಹುದೇ ಹೊರತು, ಚಹಾವನ್ನು ಪಾಯಸ ಮಾಡಿದಂತೆ ಮಾಡುವುದಕ್ಕಂತೂ ಸಾಧ್ಯವಿಲ್ಲ. ಅಂದರೆ, ಚಹಾ ಡಿಕಾಕ್ಷನ್‌ಗೆ ಹಾಲು ಹಾಕಿದ ಮೇಲೆ ಪಾಯಸದಂತೆ ಕುದಿಸುವವರಿದ್ದಾರೆ; ಡಿಕಾಕ್ಷನ್‌ ಕುದಿಸಿ ಕೊನೆಗೆ ಹಾಲು ಹಾಕುವವರಿದ್ದಾರೆ- ಹೀಗೆ. ದಿನಕ್ಕೊಂದೆರಡು ಬಾರಿ ಚಹಾ ಕುಡಿಯುವುದರಲ್ಲಿ ಸಮಸ್ಯೆಗಳಿಲ್ಲ. ಅದರಲ್ಲೂ ಏಕ್ಕಿ, ಶುಂಠಿ ಮುಂತಾದ ಮಸಾಲೆಗಳನ್ನು ಹಾಕಿ ಚಹಾ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ. ಆದರೆ ಇದನ್ನು ಮಾಡುವ ಕ್ರಮ ತಪ್ಪಾಗಿದ್ದರೆ, ಆರೋಗ್ಯಕ್ಕೆ ಸಮಸ್ಯೆಗಳು (Tips On Tea) ಎದುರಾಗಬಹುದು.

ಏನು ಹಾಗೆಂದರೆ?

ಒಮ್ಮೆ ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಯಾವುದೇ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ ವಿವರಗಳು ಇಲ್ಲಿವೆ.

ಏಕೆ ಕುದಿಸಬಾರದು?

ಚಹಾದಲ್ಲಿ ಟ್ಯಾನಿನ್‌ ಅಂಶಗಳಿವೆ. ಟ್ಯಾನಿನ್‌ಗಳೆಂದು ಪಾಲಿಫೆನಾಲ್‌ನಂಥ ಜೈವಿಕ ಕಣಗಳು. ಇವು ಹಣ್ಣುಗಳು, ತರಕಾರಿಗಳು, ಬೀಜಗಳು, ವೈನ್‌, ಚಹಾ ಇಂಥವುಗಳು ಕಂಡುಬರುತ್ತವೆ. ಪ್ರೊಟೀನ್‌, ಸೆಲ್ಯುಲೋಸ್‌, ಖನಿಜಗಳ ಜೊತೆಗೆಲ್ಲ ಟ್ಯಾನಿನ್‌ಗಳು ಅಂಟಿಕೊಂಡಿರುತ್ತವೆ. ಚಹಾದಲ್ಲೂ ಈ ಟ್ಯಾನಿನ್‌ಗಳು ಹೇರಳವಾಗಿರುವುದರಿಂದ, ದೀರ್ಘಕಾಲದವರೆಗೆ ಚಹಾ ಕುದಿಸಿದರೆ, ಕಬ್ಬಿಣದಂಶ ಹೀರಿಕೊಳ್ಳುವುದಕ್ಕೆ ದೇಹಕ್ಕೆ ಸಂಕಷ್ಟವನ್ನು ನೀಡುತ್ತವೆ. ಚಹಾವನ್ನು ಅತಿಯಾಗಿ ಕುದಿಸುವುದರಿಂದ ಸತ್ವಗಳು ನಾಶವಾಗಿ, ಹೊಟ್ಟೆಯಲ್ಲಿ ಆಸಿಡಿಟಿಯನ್ನು ಮಾತ್ರವೇ ಆಹ್ವಾನಿಸಿಕೊಂಡಂತಾಗುತ್ತದೆ. ಇದಲ್ಲದೆ, ಚಹಾವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇನ್ನೂ ಏನೇನಿವೆ?

ಸತ್ವಗಳ ನಾಶ

ಇಲ್ಲೀಗ ಕೇವಲ ಚಹಾ ಡಿಕಾಕ್ಷನ್‌ ಕುದಿಸುತ್ತಿರುವುದರ ಬಗ್ಗೆಯಲ್ಲ ಹೇಳುತ್ತಿರುವುದು. ಡಿಕಾಕ್ಷನ್‌ಗೆ ಹಾಲು ಹಾಕಿ, ಚಹಾ ಸಿದ್ಧವಾದ ಮೇಲೆ ಕುದಿಸುವುದರ ಬಗೆಗಿನ ಮಾತಿದು. ಹಾಲಿನಲ್ಲಿರುವ ಕ್ಯಾಲ್ಶಿಯಂ, ವಿಟಮಿನ್‌ ಸಿ, ವಿಟಮಿನ್‌ ಬಿ12 ಮುಂತಾದ ಪೋಷಕಾಂಶಗಳು ನಾಶವಾಗಿ ಬಿಡುತ್ತವೆ. ಹಾಗಾಗಿ ಚಹಾ ಅತಿಯಾಗಿ ಕುದಿಸುವುದು ಸಲ್ಲದು.

ರುಚಿಗೆಡುತ್ತದೆ

ಚಹಾವನ್ನು ಅತಿಯಾಗಿ ಕುದಿಸುವುದರಿಂದ ರುಚಿಗೆಟ್ಟಂತಾಗುತ್ತದೆ. ಅದರಲ್ಲೂ ಚಹಾ ರುಚಿಯನ್ನು ಸೂಕ್ಷ್ಮವಾಗಿ ಆಸ್ವಾದಿಸುವವರಿಗಂತೂ ಅರೆಘಳಿಗೆ ಹೆಚ್ಚು ಕುದಿಸಿದರೂ ಇಷ್ಟವಾಗದು. ಹೆಚ್ಚು ಕುದಿಸುವುದರಿಂದ ಸಣ್ಣದೊಂದು ಒಗರು, ಕಹಿ ರುಚಿಗಳು ಚಹಾದಲ್ಲಿ ಸೇರಿಕೊಳ್ಳುತ್ತವೆ. ಮಸಾಲೆ ಚಹಾಗಳಾದರೆ ಅದರ ಘಮವನ್ನೂ ಕೆಡಿಸುವಂತೆ ಕಹಿವಾಸನೆ ಚಹಾದಲ್ಲಿ ಸೇರಿಕೊಳ್ಳುತ್ತದೆ.

ಜೀರ್ಣಾಂಗಗಳ ಸಮಸ್ಯೆ

ಚಹಾ ಅತಿಯಾಗಿ ಕುದಿಸುವುದರಿಂದ ಅದರ ಪಿಎಚ್‌ ಹೆಚ್ಚುತ್ತದೆ. ಇದರಿಂದ ಆಸಿಡಿಟಿಯ ತೊಂದರೆ ಅಂಟಿಕೊಳ್ಳಬಹುದು. ಜೊತೆಗೆ, ಹಾಲಿನಲ್ಲಿರುವ ಪ್ರೊಟೀನ್‌ಗಳ ಸ್ವರೂಪ ವ್ಯತ್ಯಾಸವಾಗುತ್ತದೆ. ಇದರಿಂದ ಜೀರ್ಣವಾಗುವುದು ಕಷ್ಟವಾಗಿ, ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವಿಗೆ ಕಾರಣವಾಗಬಹುದು.

ಹಾನಿಕಾರಕ ಅಂಶಗಳು

ಕೆಫೇನ್‌ ಅಂಶವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇದ್ದೇಇವೆ. ಜೊತೆಗೆ, ಹೆಚ್ಚಿನ ಉಷ್ಣತೆಯಲ್ಲಿ ಹಾಲಿನಲ್ಲಿರುವ ಲ್ಯಾಕ್ಟೋಸ್‌ ಅಂಶವು ಚಹಾ ಅಂಶಗಳು ಮತ್ತು ಪ್ರೊಟೀನ್‌ಗಳ ಜೊತೆಗೂಡಿ ಇನ್ನಷ್ಟು ತೊಂದರೆ ನೀಡುತ್ತವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಆರೋಗ್ಯ ಹದಗೆಡಬಹುದು.

ಕಾರ್ಸಿನೋಜೆನ್‌ಗಳು

ಅತಿಯಾಗಿ ಕುದಿಸುವುದು ಅಕ್ರಿಲಮೈಡ್‌ನಂಥ ಕಾರ್ಸಿನೋಜೆನ್‌ಗಳನ್ನು ಸೃಷ್ಟಿ ಮಾಡಬಹುದು. ಆದರೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಸೃಷ್ಟಿಯಾಗುವುದರಿಂದ, ಈ ಮೂಲಕ ಕ್ಯಾನ್ಸರ್‌ನಂಥ ರೋಗಗಳು ಬರುವಂಥ ಸಾಧ್ಯತೆ ಅಸಾಧ್ಯ. ಆದರೂ ಹೀಗೊಂದು ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.

ಎಷ್ಟು ಕುದಿಸಬೇಕು?

ಹಾಗಾದರೆ ಎಷ್ಟು ಕುದಿಸಬೇಕು? ಹಾಲು ಹಾಕುವ ಮುನ್ನ ಮತ್ತು ಹಾಕಿದ ಮೇಲೆ- ಎಲ್ಲವೂ ಸೇರಿ ಅತಿ ಹೆಚ್ಚೆಂದರೆ 4-5 ನಿಮಿಷಗಳವರೆಗೆ ಕುದಿಸಿದರೆ ಸಾಕು. ಆದರೆ ಎಷ್ಟು ಕಡಿಮೆ ಕುದಿಸಿದರೂ ಅಷ್ಟು ಒಳ್ಳೆಯದು. ತಜ್ಞರ ಪ್ರಕಾರ, ಚಹಾವನ್ನು ಕುದಿಸುವುದಕ್ಕಿಂತ ನಿಧಾನ ವಿಧಾನದಲ್ಲಿ ಬ್ರೂ ಮಾಡುವುದು ಒಳ್ಳೆಯ ವಿಧಾನ. ಏನು ಹಾಗೆಂದರೆ? ಹೇಗೆ ಮಾಡುವುದು ಅದನ್ನು?

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಟೀ ಬ್ರೂ ಮಾಡುವುದೆಂದರೆ

ಚಹಾ ಮಾಡುವಾಗ ಅದಕ್ಕೆ ಹಾಲು, ಸಕ್ಕರೆ ಹಾಕಿ ಪಾಯಸದಂತೆ ಕುದಿಸುವದಲ್ಲ. ಬದಲಿಗೆ, ಕುದಿಯುವ ನೀರಿಗೆ ಚಹಾ ಪುಡಿಯನ್ನು ಹಾಕಿ. ಉರಿ ಆರಿಸಿ, ಮುಚ್ಚಿಡಿ. ಐದು ನಿಮಿಷದ ನಂತರ ಅದು ಕುಡಿಯಲು ಸಿದ್ಧವಾಗಿರುತ್ತದೆ. ಒಂದೊಮ್ಮೆ ಹಾಲು ಮತ್ತು ಸಕ್ಕರೆ ಬೇಕೆಂದರೆ, ಅದನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಕಡೆಯ ಹಂತದಲ್ಲಿ ಬೆರೆಸಿಕೊಳ್ಳಿ.

Exit mobile version