Site icon Vistara News

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Tobacco use

ತಂಬಾಕು ಬಳಸುವವರಲ್ಲಿ (Tobacco Use) ವಿಶ್ವದಲ್ಲೇ ಭಾರತ (india) ಎರಡನೇ ಸ್ಥಾನದಲ್ಲಿದ್ದು, ಶೇ. 27ರಷ್ಟು ವಯಸ್ಕ ಭಾರತೀಯರು ತಂಬಾಕು ಸೇವನೆ (Tobacco consumption) ಮಾಡುತ್ತಾರೆ ಎಂದು ಕೆಪಿಎಂಜಿ (KPMG) ಅಶ್ಯೂರೆನ್ಸ್ ಮತ್ತು ಕನ್ಸಲ್ಟಿಂಗ್ ಸರ್ವಿಸಸ್ ಎಲ್ಎಪಿಯ ವರದಿ ಹೇಳಿದೆ. 2019ರಲ್ಲಿ ವಿಶ್ವದಲ್ಲೇ 7 ಮಿಲಿಯನ್‌ಗೂ ಹೆಚ್ಚು ಮಂದಿ ತಂಬಾಕು ಸೇವಿಸಿ ಸಾವನ್ನಪ್ಪಿದ್ದು , ಭಾರತದಲ್ಲಿ 1.35 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಟಿ ಎಡ್ಜ್ ಸಹಯೋಗದೊಂದಿಗೆ ನಡೆದ ಸಮೀಕ್ಷೆಯಲ್ಲಿ ಭಾರತವು ಶೇ. 27ರಷ್ಟು ವಯಸ್ಕ ತಂಬಾಕು ಸೇವನೆ ಮಾಡುವವರನ್ನು ಹೊಂದಿದ್ದು, ವಿಶ್ವದ ಎರಡನೇ ಅತೀ ದೊಡ್ಡ ತಂಬಾಕು ಬಳಸುವ ಜನಸಂಖ್ಯೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.

ಈ ಅಂಕಿ ಅಂಶವು ತಂಬಾಕು ಪ್ರೇರಿತ ಹಾನಿಯನ್ನು ಕಡಿಮೆ ಮಾಡಲು ತಂಬಾಕು ನಿಯಂತ್ರಣದ ಕಡೆಗೆ ಸಮಗ್ರ ಮಾರ್ಗಸೂಚಿಯನ್ನು ಹೊಂದಲು ಕಡ್ಡಾಯ ಮತ್ತು ನಿರ್ಣಾಯಕವಾಗಿದೆ. 2060ರ ವೇಳೆಗೆ ತಂಬಾಕು ಸಂಬಂಧಿತ ರೋಗಗಳಿಂದ ಜಾಗತಿಕವಾಗಿ ವಾರ್ಷಿಕ ಮರಣಗಳ ಅಂದಾಜು ಶೇ. 50ರಷ್ಟು ಕಡಿಮೆ ಮಾಡುವ ಉದ್ದೇಶವಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

ಭಾರತದ ತಂಬಾಕು ಬಳಕೆ

2019ರಲ್ಲಿ ಜಾಗತಿಕವಾಗಿ 7 ಮಿಲಿಯನ್ ತಂಬಾಕು ಸಂಬಂಧಿತ ಸಾವುಗಳಲ್ಲಿ ಭಾರತದಲ್ಲಿ 1.35 ಮಿಲಿಯನ್ ಸಾವು ಸಂಭವಿಸಿವೆ. ಶೇ. 66ರಷ್ಟು ಭಾರತೀಯರು 20- 25 ವರ್ಷ ವಯಸ್ಸಿನ ನಡುವೆ ತಂಬಾಕು ಸೇವಿಸಲು ಪ್ರಾರಂಭಿಸಿದರು. ಪರ್ಯಾಯ ಮಾರ್ಗಗಳ ಕೊರತೆಯಿಂದ ಶೇ.45ರಷ್ಟು ಮಂದಿಗೆ ಧೂಮಪಾನ ಅಥವಾ ತಂಬಾಕು ಜಗಿಯುವುದನ್ನು ಬಿಡಲು ಸಾಧ್ಯವಾಗಲಿಲ್ಲ.

ಜನರು ಬಳಸುವ ತಂಬಾಕಿನಲ್ಲಿ ಶೇ. 8ರಷ್ಟು ಮಾತ್ರ ಕಾನೂನುಬದ್ಧವಾಗಿ ಉತ್ಪಾದಿಸಲಾಗಿದೆ. ಆದರೆ ಉಳಿದ ಶೇ. 92 ರಷ್ಟು ಬಳಕೆ ಬೀಡಿಗಳು, ಜಗಿಯುವ ತಂಬಾಕು, ಖೈನಿ ಮುಂತಾದ ಅಗ್ಗದ ತಂಬಾಕು ಉತ್ಪನ್ನಗಳಾಗಿದೆ. ತಂಬಾಕು ಸೇವನೆಗೆ ಮುಖ್ಯ ಕಾರಣ ಒತ್ತಡ, ಆತಂಕ ಮತ್ತು ಭಾವನಾತ್ಮಕ ಯಾತನೆ ಎಂಬುದನ್ನು ಸಮೀಕ್ಷೆಯು ಬಹಿರಂಗಪಡಿಸಿದೆ.

ಭಾರತದಲ್ಲಿ ತಂಬಾಕು ಸೇವನೆಗೆ ನಿಯಂತ್ರಣ ಹೇರುವುದು ಅತೀ ಅವಶ್ಯಕವಾಗಿದೆ. ಜಾಗತಿಕವಾಗಿ ಸೂಚಿಸಲಾದ ತಂಬಾಕು ನಿಯಂತ್ರಣ ಕ್ರಮಗಳನ್ನು ಭಾರತದಲ್ಲಿ ಜಾರಿಗೊಳಿಸಲು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವುದು ಸವಾಲಾಗಿ ಪರಿಣಮಿಸುತ್ತಿದೆ.


ತಂಬಾಕು ಸೇವನೆ ಮಾಡುವ ಶೇ. 50ರಷ್ಟು ಪುರುಷರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಶೇ. 29 ರಷ್ಟು ಗಂಭೀರ ಪ್ರಕರಣಗಳಾಗಿವೆ. ಅರಿವಿನ ಕೊರತೆ ಮತ್ತು ಪರ್ಯಾಯಗಳ ಅಲಭ್ಯತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿರುವ ನಗರಗಳಲ್ಲಿ ಶೇ. 81ರಷ್ಟು ಮಂದಿ ಪುರುಷರು ತಂಬಾಕನ್ನು ತ್ಯಜಿಸಲು ಮುಂದಾಗುತ್ತಿಲ್ಲ.
2030ರ ವೇಳೆಗೆ ತಂಬಾಕು ಸಂಬಂಧಿತ ಸಾವುಗಳಲ್ಲಿ ಶೇ.80ಕ್ಕಿಂತ ಹೆಚ್ಚು ಸಾವುಗಳು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸಬಹುದು ಎಂದು ವರದಿ ಹೇಳಿದೆ.

ಜಿಡಿಪಿ ಮೇಲೆ ಪರಿಣಾಮ

ತಂಬಾಕು ಸೇವನೆಯಿಂದ ಉಂಟಾಗುವ ರೋಗಗಳು ಮತ್ತು ಸಾವುಗಳಿಂದಾಗಿ ಭಾರತವು ಪ್ರತಿ ವರ್ಷ ತನ್ನ ಜಿಡಿಪಿಯ ಶೇ.1ರಷ್ಟನ್ನು ಕಳೆದುಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಯನ್ನು ಅಳವಡಿಸಿಕೊಳ್ಳಲು ಭಾರತ ಮುಂದಾಗಬೇಕಿದೆ.

ತಂಬಾಕು ನಿಯಂತ್ರಣಕ್ಕೆ ಕ್ರಮ

ಭಾರತವು ಈಗಾಗಲೇ ತಂಬಾಕು ಸೇವನೆಯನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಹೊಂದಿರುವ ಕಠಿಣ ನಿಯಮಗಳನ್ನು ಸಕ್ರಿಯವಾಗಿ ಜಾರಿಗೊಳಿಸುತ್ತಿದೆ. ತಂಬಾಕು ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಡಬ್ಲ್ಯೂ ಎಚ್‌ಒ ಸೂಚಿಸಿದ ಕಾನೂನುಗಳ ನಿಬಂಧನೆಗಳಿಗೆ ಹೊಂದಿಕೆಯಾಗಲು ದೇಶವು ತಂಬಾಕು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದಿದೆ. ಧೂಮಪಾನಿಗಳಲ್ಲದವರನ್ನು ಧೂಮಪಾನದಿಂದ ದೂರವಿಡಲು ಇದು ಸಹಾಯ ಮಾಡುತ್ತದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ (NLEM) ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯನ್ನು (NRT) ಪರಿಚಯಿಸಿದೆ. ಉದಾಹರಣೆಗೆ ಚೂಯಿಂಗ್ ನಿಕೋಟಿನ್ ಗಮ್ ಅಥವಾ ಇನ್ಹೇಲರ್‌ಗಳನ್ನು ಬಳಸುವುದು ಧೂಮಪಾನ ಅಭ್ಯಾಸವನ್ನು ಮುರಿಯಲು ಮತ್ತು ಸಿಗರೇಟಿನ ಮೇಲೆ ಮಾನಸಿಕ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಜಾಗತಿಕ ನೀತಿಗಳು

ತಂಬಾಕು ಬಳಕೆಯನ್ನು ನಿಯಂತ್ರಿಸಲು ಅನೇಕ ದೇಶಗಳು ಡಬ್ಲ್ಯೂ ಎಚ್ ಒ ಫ್ರೇಮ್‌ವರ್ಕ್ ಕನ್ವೆನ್ಶನ್ ಆನ್ ತಂಬಾಕು ನಿಯಂತ್ರಣವನ್ನು (FCTC) ಅನುಸರಿಸಿದರೆ, ಕೆಲವು ಸೂಕ್ತವಾದ ವಿಧಾನವನ್ನು ಅಳವಡಿಸಿಕೊಂಡಿವೆ.

ಭಾರತ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಕ್ಕೆ ಹೋಲಿಸಿದರೆ ಜಪಾನ್, ಯುಕೆ, ನ್ಯೂಜಿಲೆಂಡ್ ಮತ್ತು ಸ್ವೀಡನ್‌ನಂತಹ ದೇಶಗಳಲ್ಲಿ ಧೂಮಪಾನದ ಪ್ರಮಾಣವು ಹೆಚ್ಚು ಎಂದು ವರದಿ ಬಹಿರಂಗಪಡಿಸಿದೆ.

ಏನು ಮಾಡಬಹುದು?

ಧೂಮಪಾನವನ್ನು ತೊರೆಯಲು ಇಷ್ಟಪಡದ ವ್ಯಕ್ತಿಗಳು ಕಡಿಮೆ ಅಪಾಯಕಾರಿ ತಂಬಾಕುಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್‌ಆರ್‌ಟಿ) ಅನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡಬೇಕು. ತಂಬಾಕು ಉತ್ಪನ್ನಗಳ ಪಟ್ಟಿ ಮಾಡಲಾದ ಮತ್ತು ಪಟ್ಟಿ ಮಾಡದ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಸಮಗ್ರ ಡೇಟಾಬೇಸ್ ಅನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಧೂಮಪಾನಿಗಳಿಗೆ ಶಿಕ್ಷಣ ನೀಡಲು, ತಂಬಾಕು ಬಳಕೆಯ ಬಗ್ಗೆ ಇರುವ ಮಿಥ್ಯೆಗಳನ್ನು ಹೋಗಲಾಡಿಸಲು ರಾಷ್ಟ್ರವ್ಯಾಪಿ ಸಮೂಹ ಮಾಧ್ಯಮ ಪ್ರಚಾರಕ್ಕಾಗಿ ಹೂಡಿಕೆಯನ್ನು ಹೆಚ್ಚಳ ಮಾಡಬೇಕು.

ಆರೋಗ್ಯಕರ ಭವಿಷ್ಯಕ್ಕಾಗಿ ವಾಸ್ತವಿಕ ಮತ್ತು ವೈಜ್ಞಾನಿಕ ತಂಬಾಕು ನಿಯಂತ್ರಣ ನೀತಿಗಳನ್ನು ಸುಗಮಗೊಳಿಸಲು ಗ್ರಾಹಕರು, ಉದ್ಯಮಿಗಳು ಮತ್ತು ಸರ್ಕಾರ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Exit mobile version