Site icon Vistara News

World Sleep Day: ಇಂದು ವಿಶ್ವ ನಿದ್ರಾ ದಿನ; ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು?

Sleeping Tips

ಕುಂಭಕರ್ಣನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವನನ್ನು ಎಬ್ಬಿಸುವದಕ್ಕೆ ರಾವಣನ ಸೈನ್ಯವೇ ಒದ್ದಾಡಿದರೂ ತಬ್ಬಿದ ನಿದ್ರಾಂಗನೆಯನ್ನು ಆತ ಬಿಡುತ್ತಿರಲಿಲ್ಲವಂತೆ. ಈಗಿನವರೂ ಒಂಥರಾ ಕುಂಭಕರ್ಣರೇ! ಆದರೆ ಎಬ್ಬಿಸಲಿಕ್ಕಲ್ಲ, ನಿದ್ರಿಸುವುದಕ್ಕೇ ಹರಸಾಹಸ ಪಡಬೇಕು. ಲೋಕವೆಲ್ಲಾ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲ ಇಂದಿನವರಿಗೆ. ದಿಂಬಿಗೆ ತಲೆ ಕೊಡುವ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಬೇಗನೇ ʻಹಾಸಿಗೆ ಹಿಡಿಯುವುದುʼ ಸತ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರತಿ ಮಾರ್ಚ್‌ ೧೫ರಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಘೋಷಣೆ “ಜಾಗತಿಕ ಆರೋಗ್ಯಕ್ಕಾಗಿ (World Sleep Day) ಎಲ್ಲರಿಗೂ ನಿದ್ರೆ”.

ಭಾರತೀಯರಲ್ಲಿ ದಿನಕ್ಕೆ 6 ತಾಸುಗಳ ಗಾಢ ನಿದ್ರೆಗೂ ಗತಿಯಿಲ್ಲದವರು ಶೇ. 61 ಮಂದಿ ಎನ್ನುತ್ತದೆ ಇತ್ತೀಚಿನ ಸಮೀಕ್ಷೆಯೊಂದು. ಶೇ. 34ರಷ್ಟು ಜನ 4 ತಾಸುಗಳ ಗಾಢ ನಿದ್ದೆ ಮಾಡುತ್ತೇವೆ ಎಂದಿದ್ದರೆ ಉಳಿದವರಿಗೆ ಅದೂ ಅಲಭ್ಯವಾಗಿದೆ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ 2022ಕ್ಕೆ ಹೋಲಿಸಿದರೆ, 2023ರಲ್ಲಿ ನಿದ್ದೆಬಿಡುವವರು, ನಿದ್ದೆಗೆಡುವವರ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿರುವುದು. ಈ ಪ್ರಮಾಣ 2024ಕ್ಕೆ ಮತ್ತೂ ಏರುತ್ತಿರುವುದಂತೂ ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ನಿದ್ದೆಗೆಟ್ಯೊ ಬುದ್ಧಿಗೆಟ್ಯೊ ಎನ್ನುವ ಹಳೆಯ ಜನರ ಮಾತನ್ನು ಮರೆಯುವಂತಿಲ್ಲ ಈಗ. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು. ಯಾವುದು ಆ ಬದಲಾವಣೆಗಳು? ಏನನ್ನು ಬದಲಿಸಿಕೊಳ್ಳಬೇಕು?

ನಿದ್ದೆಗೊಂದು ಅಲರಾಂ

ಅಂದರೆ ಬೆಳಗ್ಗೆ ಏಳುವುದಕ್ಕೆ ಅಲರಾಂ ಇಡುವುದರ ಬಗ್ಗೆ ಅಲ್ಲ. ರಾತ್ರಿ ಮಲಗುವುದಕ್ಕೆ ಅಲರಾಂ ಇಡುವ ಬಗ್ಗೆ ಇಲ್ಲಿ ಹೇಳುತ್ತಿರುವುದು. ಹೌದು. ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದಲ್ಲ, ಸಾಧ್ಯವಾದಷ್ಟೂ ನಿಗದಿತ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ರಾತ್ರಿ ತೀರಾ ತಡವಾಗಿ ಮಲಗುವುದು, ಇದಕ್ಕೆ ಬದಲಿಗೆ ಹಗಲಿಗೆ ಒಂದೆರಡು ತಾಸು ನಿದ್ರಿಸುವುದು ಸರಿಯಲ್ಲ. 7 ತಾಸುಗಳ ಗಾಢ ನಿದ್ರೆ ರಾತ್ರಿಯೇ ದೊರೆಯುವಂತೆ ನಿಮ್‌ ಕೆಲಸಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ದೇಹದ ಸರ್ಕೇಡಿಯನ್‌ ಲಯಕ್ಕೆ ತೊಂದರೆಯಾಗದೆ, ಸ್ವಾಸ್ಥ್ಯ ಸುಧಾರಿಸುತ್ತದೆ.

ರಿಲ್ಯಾಕ್ಸ್‌ ಪ್ಲೀಸ್!

ಮಲಗುವ ಮುನ್ನ ಭಯಾನಕ ಸಿನೆಮಾಗಳನ್ನು ನೋಡುವುದು, ಮನಸ್ಸನ್ನು ಅಶಾಂತಗೊಳಿಸುವ ಸುದ್ದಿಗಳನ್ನು ಹೇಳಿ-ಕೇಳುವುದು- ಇಂಥ ಯಾವುದೇ ಸಂಗತಿಗಳನ್ನು ನಿದಿರೆಯನ್ನು ಹಾಳು ಮಾಡಬಲ್ಲವು. ಹಾಗಾಗಿ ಮಲಗುವ ಮುನ್ನ ದೇಹವನ್ನು ಮಾತ್ರವೇ ಅಲ್ಲ, ಮನಸ್ಸನ್ನು ವಿಶ್ರಾಂತಿಗೆ ದೂಡಿ. ಬೆವರು ಹರಿಸಿ ವ್ಯಾಯಾಮ ಮಾಡುವುದು ಸಹ ಮಲಗುವ ಮೊದಲು ಬೇಡ. ಬದಲಿಗೆ, ಹಗಲು ಹೊತ್ತಿನಲ್ಲಿ ಚೆನ್ನಾಗಿ ವ್ಯಾಯಾಮ ಮಾಡಿ. ಮಲಗುವ ಮುನ್ನ ಹದವಾದ ಬಿಸಿ ನೀರಿನ ಸ್ನಾನ, ದೀರ್ಘ ಉಸಿರಾಟ, ಸಂಗೀತ ಕೇಳುವುದು, ಏನನ್ನಾದರು ಓದುವುದು, ತಂಗಾಳಿಯಲ್ಲಿ ಹತ್ತಾರು ನಿಮಿಷ ಲಘುವಾಗಿ ಓಡಾಡುವುದು ಇತ್ಯಾದಿಗಳು ನಿದ್ದೆಗೆ ಪೂರಕ.

ಮಲಗುವ ಸ್ಥಳ

ಇದು ಸಹ ಮುಖ್ಯವಾಗುತ್ತದೆ. ಸ್ವಚ್ಛವಾದ, ಗಾಳಿಯಾಡುವ ಸ್ಥಳದಲ್ಲಿ ಮಲಗುವುದು ಒಳ್ಳೆಯದು. ಸೊಳ್ಳೆಗಳ ಉಪದ್ರವಿದ್ದರೆ ಪರದೆ ಬಳಸಿ. ಗಲಾಟೆಯಿಲ್ಲದ ಮಂದ ಬೆಳಕಿನ ವಾತಾವರಣ ಏರ್ಪಡಿಸಿಕೊಳ್ಳಿ. ಹಾಸಿಗೆ ಮತ್ತು ದಿಂಬುಗಳು ಕೂಡಾ ಆರಾಮದಾಯಕವಾಗಿರಲಿ. ಒಂದೊಮ್ಮೆ ಹೊರಗಿನ ಗಲಾಟೆಗೆ ನಿದ್ದೆ ಬರುತ್ತಿದ್ದ ಎಂದಾದರೆ, ಅದನ್ನು ಮರೆಮಾಚುವುದಕ್ಕೆ ನಿಮ್ಮಿಷ್ಟದ ಮೆಲು ಸಂಗೀತ ಹಾಕಿಕೊಳ್ಳಿ. ಅದು ಬೇಡದಿದ್ದರೆ, ಇಯರ್‌ ಪ್ಲಗ್‌ ಬಳಕೆ ಸಾಧ್ಯವೇ ನೋಡಿ.

ನೀಲಿ ಬೆಳಕು ಬೇಡ

ಯಾವುದೇ ಎಲೆಕ್ಟ್ರಾನಿಕ್‌ ಉಪಕರಣದಿಂದ ಸೂಸುವ ನೀಲಿ ಬೆಳಕು ನಿದ್ದೆಯ ಶತ್ರುವಿದ್ದಂತೆ. ಮಲಗುವ ಒಂದು ತಾಸು ಮೊದಲೇ ಇವುಗಳಿಂದ ಸನ್ಯಾಸ ತೆಗೆದುಕೊಳ್ಳಿ. ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಮುಂತಾದವು ದೇಹದ ಆಂತರಿಕ ಗಡಿಯಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಹಾಸಿಗೆಯಲ್ಲಿ ಫೋನ್‌ ಇರಿಸಿಕೊಳ್ಳುವ ತಪ್ಪನ್ನಂತೂ ಮಾಡಲೇಬೇಡಿ.

ಆಹಾರ

ಊಟ ಮಾಡಿ ಕೈ ತೊಳೆಯುತ್ತಿದ್ದಂತೆ ಹಾಸಿಗೆ ಸೇರಿದರೆ ನಿದ್ದೆಯೂ ಹಾಳು, ಹೊಟ್ಟೆಗೂ ಗೋಳು! ರಾತ್ರಿಯೂಟವನ್ನು ಆದಷ್ಟೂ ಸರಳವಾಗಿಡಿ, ಕೊಬ್ಬು, ಖಾರದ ವಸ್ತುಗಳನ್ನು ರಾತ್ರಿ ಕಡಿಮೆ ಮಾಡಿ. ರಾತ್ರಿ ಮಲಗುವ ಮೂರು ತಾಸುಗಳ ಮುನ್ನ ಊಟ ಮಾಡುವುದು ಸರಿಯಾದ ಕ್ರಮ. ಆನಂತರ ಕಾಫಿ, ಚಹಾ ಸೇರಿದಂತೆ ಯಾವುದೇ ಕೆಫೇನ್‌ ಸೇವನೆ ಸಲ್ಲದು. ಆಲ್ಕೋಹಾಲ್‌ ಸೇವನೆಯನ್ನು ರೂಢಿಸಿಕೊಂಡರೆ ಕ್ರಮೇಣ ನಿದ್ದೆ ಹಾಳಾಗುತ್ತದೆ.

ಇದನ್ನೂ ಓದಿ: Sugar Side Effects: ನಾವು ಒಂದು ದಿನದಲ್ಲಿ ಹೆಚ್ಚೆಂದರೆ ಎಷ್ಟು ಸಕ್ಕರೆ ಸೇವಿಸಬಹುದು?

Exit mobile version