Site icon Vistara News

World Tuberculosis Day: ಇಂದು ವಿಶ್ವ ಕ್ಷಯರೋಗ ದಿನ; ರೋಗ ಬಾರದಂತೆ ತಡೆಯುವುದು ಹೇಗೆ?

World Tuberculosis Day

ವಿಶ್ವವನ್ನು ಕಾಡುತ್ತಿರುವ (World Tuberculosis Day) ಹಲವು ಮಾರಣಾಂತಿಕ ಸೋಂಕುಗಳ ಪೈಕಿ ಕ್ಷಯವೂ ಒಂದು. ವಿಶ್ವದಲ್ಲಿ ಹೆಚ್ಚಾಗಿ ಸಂಭವಿಸುತ್ತಿರುವ ರೋಗಜನ್ಯ ಮರಣಗಳಿಗೆ ಕ್ಷಯ ಅಥವಾ ಟಿಬಿ ರೋಗ ಮೊದಲ ಹತ್ತು ಸ್ಥಾನಗಳಲ್ಲಿದೆ. ಹಾಗಾಗಿ ಈ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಮಾರ್ಚ್‌ ತಿಂಗಳ 24ನೇ ದಿನವನ್ನು ವಿಶ್ವ ಕ್ಷಯ ರೋಗ ದಿನ ಎಂದು ಗುರುತಿಸಲಾಗಿದೆ. ಕ್ಷಯ ಎನ್ನುವುದೊಂದು ಬ್ಯಾಕ್ಟೀರಿಯ ಸೋಂಕು. ಮೈಕೊಬ್ಯಾಕ್ಟೀರಿಯಂ ಟ್ಯುಬರ್ಕಿಲೋಸಿಸ್‌ ಎನ್ನುವ ಬ್ಯಾಕ್ಟೀರಿಯದಿಂದ ಗಾಳಿಯ ಮೂಲಕ ಈ ರೋಗ ಹರಡುತ್ತದೆ. ಮೊದಲಿಗೆ ಶ್ವಾಸಕೋಶಕ್ಕೆ ತಗುಲುವ ಈ ರೋಗ, ಕ್ರಮೇಣ ಬೆನ್ನುಹುರಿ, ಮೆದುಳು, ಕರುಳು ಸೇರಿದಂತೆ ದೇಹದ ಇತರ ಭಾಗಗಳಿಗೂ ವ್ಯಾಪಿಸಬಹುದು. ಮೂರು ವಾರಗಳಾದರೂ ವಾಸಿಯಾಗದಂಥ ತೀವ್ರ ಕೆಮ್ಮು ಬಾಧಿಸುತ್ತಿದ್ದರೆ ವೈದ್ಯಕೀಯ ತಪಾಸಣೆ ಮಾಡಿಸಲೇಬೇಕು. ಇದಲ್ಲದೆ ಈ ಸೋಂಕು ಪೀಡಿತರಲ್ಲಿ ಇನ್ನೂ ಹಲವಾರು ಲಕ್ಷಣಗಳು ಕಾಣಿಸುತ್ತವೆ.

ರೋಗ ಲಕ್ಷಣಗಳು

ತೀವ್ರವಾದ ಕೆಮ್ಮು, ಎದೆನೋವು, ರಕ್ತಮಿಶ್ರಿತ ಕಫ, ಉಸಿರಾಟದ ತೊಂದರೆ, ಜ್ವರ, ರಾತ್ರಿಯ ಹೊತ್ತು ಬೆವರುವುದು, ಹಸಿವಾಗದಿರುವುದು, ತೀವ್ರ ಆಯಾಸ, ಬೆನ್ನುನೋವು, ತಲೆನೋವು, ಕಿಬ್ಬೊಟ್ಟೆಯಲ್ಲಿ ನೋವು, ಗುಣವಾಗದ ಹುಣ್ಣುಗಳು, ಮಲಬದ್ಧತೆ, ಸಂವೇದನೆ ಕಳೆದುಕೊಳ್ಳುವುದು- ಹೀಗೆ ಹಲವು ರೀತಿಯಲ್ಲಿ ಲಕ್ಷಣಗಳು ಗೋಚರಿಸಬಹುದು. ಒಮ್ಮೆ ಸೋಂಕು ಅಂಟಿದರೆ 9-12 ತಿಂಗಳ ಕಾಲ ನಿರಂತರ ಚಿಕಿತ್ಸೆ ಇದಕ್ಕೆ ಅಗತ್ಯವಾಗುತ್ತದೆ. ನಂತರವೂ ವರ್ಷಗಳವರೆಗೆ ವೈದ್ಯರ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ.

ಕಾರಣವೇನು?

ಕ್ಷಯದ ಸೋಂಕು ಬಹಳ ಮಂದಿಯಲ್ಲಿ ಸುಪ್ತವಾಗಿ ಇರಬಹುದು. ಆಯಾ ವ್ಯಕ್ತಿಗಳ ರೋಗ ನಿರೋಧಕತೆ ಚೆನ್ನಾಗಿದ್ದರೆ, ಬ್ಯಾಕ್ಟೀರಿಯ ಸಕ್ರಿಯವಾಗದಂತೆ ತಡೆಯುತ್ತದೆ. ಇಂಥವರಿಂದ ರೋಗ ಹರಡುವ ಸಂಭವ ಕಡಿಮೆ. ಆದರೆ ಇಂಥವರಲ್ಲಿ ಎಂದಾದರೂ ಪ್ರತಿರೋಧಕತೆ ಕಡಿಮೆಯಾದರೆ ಅವರಲ್ಲಿ ಕ್ಷಯ ಸಕ್ರಿಯವಾಗುತ್ತದೆ. ಹೀಗೆ ಸಕ್ರಿಯ ಟಿಬಿ ಇರುವಂಥವರು ಸೀನಿದಾಗ, ಕೆಮ್ಮಿದಾಗ, ಮಾತಾಡುವಾಗ ಅಥವಾ ಹಾರುವ ಬಾಯಿಂದ ಹಾರುವ ಹನಿಗಳಿಂದ ಗಾಳಿಯಲ್ಲಿ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಅದು ಗಾಳಿಯ ಮೂಲಕ ಆರೋಗ್ಯವಂತರ ಉಸಿರಲ್ಲಿ ಸೇರಿದರೆ, ಸೋಂಕು ದೇಹ ಸೇರಿದಂತೆ. ಆದರೆ ಸೋಂಕಿತರನ್ನು ಮುಟ್ಟುವುದರಿಂದ, ಅವರ ವಸ್ತುಗಳನ್ನು ಮುಟ್ಟುವುದರಿಂದ ಈ ರೋಗಾಣುಗಳು ಹರಡುವುದಿಲ್ಲ.
ಅಪೌಷ್ಟಿಕತೆಯಿಂದ ಬಳಲುವ, ಪ್ರತಿರೋಧಕ ಶಕ್ತಿ ಕುಂಠಿತವಾಗಿರುವವರಿಗೆ ಈ ಸೋಂಕು ಕಾಡುವುದು ಹೆಚ್ಚು. ಹಾಗಾಗಿ ಟಿಬಿ ಚಿಕಿತ್ಸೆಯ ಸಂದರ್ಭದಲ್ಲಿ ಮತ್ತು ನಂತರವೂ ಸರಿಯಾದ ಆಹಾರಕ್ರಮವನ್ನು ಅನುಸರಿಸಬೇಕು. ಋತುಮಾನದ ತರಕಾರಿಗಳು, ಹಣ್ಣುಗಳು, ಹಸಿರು ಸೊಪ್ಪುಗಳು, ಸಿರಿಧಾನ್ಯಗಳು, ಕಾಯಿ-ಬೀಜಗಳು, ವಿಟಮಿನ್‌ ಸಿ ಹೇರಳವಾದ ತಿನಿಸುಗಳು, ಖನಿಜಯುಕ್ತ ಆಹಾರಗಳು ಅಗತ್ಯವಾಗಿ ಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿರೋಧಕತೆ ಪ್ರಬಲವಾದಷ್ಟೂ ಬೇಗ ರೋಗಾಣುಗಳು ದುರ್ಬಲವಾಗುತ್ತವೆ.

ಪ್ರಸರಣ ತಡೆಗೆ

ಸಕ್ರಿಯ ಟಿಬಿ ಇರುವವರು ಸ್ವಚ್ಛ ಗಾಳಿ-ಬೆಳಕು ಇರುವ ಜಾಗದಲ್ಲೇ ವಿಶ್ರಾಂತಿ ಪಡೆಯುವುದು ಕಡ್ಡಾಯ. ಹಾಗಿಲ್ಲದಿದ್ದರೆ ಕುಟುಂಬದ ಇತರರೂ ಸೋಂಕಿಗೆ ಒಳಗಾಗಬಹುದು. ಕೆಮ್ಮುವಾಗ-ಸೀನುವಾಗ ಮೂಗು-ಬಾಯಿಯನ್ನು ಮುಚ್ಚಿಕೊಳ್ಳಲೇಬೇಕು. ಯಾರೊಂದಿಗಾದರೂ ಮಾತಾಡುವಾಗ ಮಾಸ್ಕ್‌ ಧರಿಸುವುದು ಉತ್ತಮ. ಸೋಂಕಿತರನ್ನು ಆರೈಕೆ ಮಾಡುವವರು ಸಹ ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಆರೈಕೆ ಮಾಡುವವರೂ ರೋಗಿಗಳ ಸಮೀಪ ಹೋಗುವಾಗ ಮಾಸ್ಕ್‌ ಧರಿಸುವುದು ಒಳ್ಳೆಯದು. ಸಮತೋಲಿತ ಆಹಾರವನ್ನು ಕುಟುಂಬದ ಉಳಿದವರೂ ಸೇವಿಸುತ್ತಿದ್ದಂತೆ ಸೋಂಕು ಪ್ರಸರಣ ತಡೆಗೆ ಅನುಕೂಲವಾಗುತ್ತದೆ.

ಬಿಸಿಜಿ ಲಸಿಕೆ

ಬದುಕಿನ ಯಾವುದೇ ಘಟ್ಟದಲ್ಲಿ ಟಿಬಿ ಅಂಟಬಹುದು. ಇದಕ್ಕೆ ವಯಸ್ಸು, ಲಿಂಗ, ಕಾಲ-ದೇಶಗಳ ಹಂಗಿಲ್ಲ. ಹಾಗಾಗಿ ಪುಟ್ಟ ಮಕ್ಕಳಿಗೆ ಬಿಸಿಜಿ ಲಸಿಕೆಯನ್ನು ನೀಡುವುದು ಕಡ್ಡಾಯ. ಕಾರಣ, ಒಂದೊಮ್ಮೆ ಟಿಬಿ ಬಂದರೆ ಸೋಂಕು ಮಾರಣಾಂತಿಕವಾಗುವುದನ್ನು ತಡೆಯಬಹುದು. ಒಳ್ಳೆಯ ಆಹಾರ, ಪ್ರತಿದಿನ ಎಂಟು ತಾಸುಗಳ ಗಾಢ ನಿದ್ದೆ, ನಿಯಮಿತ ವ್ಯಾಯಾಮ, ಸಿಗರೇಟ್-ಮದ್ಯದಿಂದ ದೂರ ಇರುವುದು- ಇಂಥವೆಲ್ಲವೂ ಟಿಬಿಯನ್ನು ನಮ್ಮಿಂದ ದೂರ ಮಾಡುತ್ತವೆ. ಒಂದೊಮ್ಮೆ ಸೋಂಕು ತಗುಲಿದರೂ, ಬೇಗನೇ ಚೇತರಿಸಿಕೊಳ್ಳಲು ದೇಹಕ್ಕೆ ನೆರವಾಗುತ್ತವೆ. ನಿಕಟವರ್ತಿಗಳಿಗೆ ಸೋಂಕು ಅಂಟದಂತೆ ತಡೆಯಲು ನೆರವಾಗುತ್ತವೆ.

ಇದನ್ನೂ ಓದಿ: Muskmelon Benefits: ಬೇಸಿಗೆಯಲ್ಲಿ ಕರಬೂಜದ ಹಣ್ಣನ್ನು ಭರಪೂರ ತಿನ್ನಿ!

Exit mobile version