ವಿಶ್ವಸಂಸ್ಥೆ: ಸುಧಾರಿತ ತಂತ್ರಜ್ಞಾನಗಳಿದ್ದು, ಆಧುನಿಕ ವೈದ್ಯಕೀಯ ಸೌಲಭ್ಯಗಳಿದ್ದ ಇಂದಿನ ದಿನಗಳಲ್ಲಿಯೂ ವಿಶ್ವದಲ್ಲಿ ಪ್ರತಿ ೨ ನಿಮಿಷಕ್ಕೆ ಒಬ್ಬ ಗರ್ಭಿಣಿ (Pregnancy Deaths) ಸಾವನ್ನಪ್ಪುತ್ತಿದ್ದಾಳೆ ಎಂಬ ಆಘಾತಕಾರಿ ವಿಷಯವನ್ನು ವಿಶ್ವಸಂಸ್ಥೆ (United Nations) ಬಹಿರಂಗಪಡಿಸಿದೆ. ನಿಜ, ಹಳೆಯ ಕಾಲದಲ್ಲಿ ಗರ್ಭಾವಸ್ಥೆಯಲ್ಲಿ ಅಥವಾ ಪ್ರಸವದ ವೇಳೆ ಮಹಿಳೆಯರು ಸಾವನ್ನಪ್ಪುತ್ತಿದ್ದರು ಎಂಬ ಸಂಗತಿ ಇಂದಿಗೂ ಸತ್ಯ.
ಕಳೆದ ೨೦ ವರ್ಷಗಳಲ್ಲಿ ತಾಯಂದಿರ ಮರಣದ ಪ್ರಮಾಣ ಸುಮಾರು ಶೇ. ೩೪ರಷ್ಟು ಕಡಿಮೆಯಾಗಿದೆ ಎಂಬುದು ಸಮಾಧಾನ ತರುವ ಅಂಶ. ೨೦೦೦ ವರ್ಷದಿಂದ ೨೦೧೫ರ ನಡುವೆ ಗರ್ಭಿಣಿಯರ ಮರಣ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಅಂದರೆ ೧,೦೦,೦೦೦ ಆರೋಗ್ಯವಂತ ಶಿಶುಗಳ ಜನನದಲ್ಲಿ, ೩೩೯ ತಾಯಂದಿರು ೨೦೦೦ರ ಸಾಲಿನಲ್ಲಿ ಜೀವ ಕಳೆದುಕೊಂಡಿದ್ದರು. ಈ ಪ್ರಮಾಣ ೨೦೨೦ರ ವೇಳೆಗೆ ೨೨೩ಕ್ಕೆ ಇಳಿದಿತ್ತು. ಆದರೆ ನಂತರ ಐದು ವರ್ಷಗಳಲ್ಲಿ ನಿರೀಕ್ಷಿತ ಕುಸಿತ ಕಂಡುಬರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಇತರ ಅಂಗ ಸಂಸ್ಥೆಗಳು ತಿಳಿಸಿವೆ.
ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರ, ೨೦೨೦ರಲ್ಲಿ ಏನಿಲ್ಲವೆಂದರೆ ೮೦೦ ತಾಯಂದಿರು ಗರ್ಭಾವಸ್ಥೆ ಸಂಬಂಧಿತ ಸಂಗತಿಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಅಂದರೆ, ಪ್ರತಿ ಎರಡು ನಿಮಿಷಕ್ಕೆ ಒಬ್ಬ ತಾಯಿ ಸಾವನ್ನಪ್ಪಿದ್ದಾಳೆ! ಬೆಲಾರಸ್ ದೇಶದಲ್ಲಿ ಈ ಪ್ರಮಾಣ ಅತಿ ಹೆಚ್ಚಿನ ಕಡಿತ ದಾಖಲಾಗಿದ್ದು, ತಾಯಂದಿರ ಮರಣ ಪ್ರಮಾಣ ಶೇ. ೯೫.೫ರಷ್ಟು ಕಡಿಮೆಯಾಗಿದೆ. ವೆನೆಜ್ಯುಯೆಲ ಮತ್ತು ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಕುಸಿತದ ಪ್ರಮಾಣ ಶೇ. ೩೫ ಇದ್ದರೆ, ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯಗಳಲ್ಲಿ ಇದು ಶೇ. ೧೬ರಷ್ಟು ಕಡಿಮೆಯಾಗಿದೆ.
“ಎಲ್ಲಾ ಮಹಿಳೆಯರಿಗೂ ಗರ್ಭಾವಸ್ಥೆಯೆಂದರೆ ನಿರೀಕ್ಷೆ ಮತ್ತು ಧನಾತ್ಮಕ ಅನುಭವಗಳ ಸಮಯವಾಗಬೇಕು. ಆದರೆ ವಿಶ್ವದ ಲಕ್ಷಾಂತರ ಮಹಿಳೆಯರಿಗೆ ಈ ಸಮಯ ಇಂದಿಗೂ ಭಯಾನಕ ಅನುಭವ. ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ತುರ್ತು ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡುವ ಅಗತ್ಯ ಎಷ್ಟಿದೆ ಎಂಬುದನ್ನು ಈ ಅಂಕಿ-ಅಂಶಗಳು ಬಹಿರಂಗ ಪಡಿಸುತ್ತಿವೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Global economy : 2023ರಲ್ಲಿ ಜಾಗತಿಕ ಆರ್ಥಿಕತೆ 1.9% ಕ್ಕೆ ಕುಸಿತ : ವಿಶ್ವಸಂಸ್ಥೆ ವರದಿ
ಎಲ್ಲಕ್ಕಿಂತ ಅಚ್ಚರಿಯ ವಿದ್ಯಮಾನವೆಂದರೆ, ಮುಂದುವರೆದ ದೇಶಗಳಿರುವ ಉತ್ತರ ಅಮೆರಿಕ ಮತ್ತು ಯುರೋಪ್ ಪ್ರಾಂತ್ಯಗಳಲ್ಲಿ ಶೇ. ೧೭ರಷ್ಟು ಸಾವಿನ ಪ್ರಮಾಣ ಹೆಚ್ಚಾಗಿರುವುದು. ಅದರಲ್ಲೂ ಗ್ರೀಸ್ ಮತ್ತು ಸೈಪ್ರಸ್‌ನಲ್ಲಿ ಈ ಸಂಗತಿಯಲ್ಲಿ ʻಮಹತ್ವದ ಏರಿಕೆʼ ದಾಖಲಾಗಿದೆ ಎಂದು ವರದಿ ಹೇಳಿದೆ. ಕೆರೀಬಿಯನ್ ಪ್ರಾಂತ್ಯದಲ್ಲೂ ಇದು ಶೇ. ೧೫ರಷ್ಟು ಹೆಚ್ಚಾಗಿದೆ. ಆದರೆ ಬಡ ಮತ್ತು ಸಂಘರ್ಷಪೀಡಿತ ರಾಷ್ಟ್ರಗಳಲ್ಲಿ ತಾಯಂದಿರ ಮರಣದ ಪ್ರಮಾಣ ಎಲ್ಲಕ್ಕಿಂತ ಹೆಚ್ಚು ದಾಖಲಾಗಿದೆ. ಅಂದರೆ, ೨೦೨೦ರಲ್ಲಿ ದಾಖಲಾದ ಗರ್ಭಿಣಿಯರ ಸಾವುಗಳ ಪೈಕಿ ಶೇ ೭೦ರಷ್ಟು ಸಂಭವಿಸಿರುವುದು ಸಹಾರಾ ಮರುಭೂಮಿಯ ಆಚೀಚೆಯ ಭಾಗಗಳಲ್ಲಿ. ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ಗಳಿಗೆ ಹೋಲಿಸಿದರೆ, ಈ ದೇಶಗಳಲ್ಲಿ ತಾಯಂದಿರ ಮರಣದ ಪ್ರಮಾಣ ೧೩೬ ಪಟ್ಟು ಅಧಿಕವಾಗಿದೆ.
ಅಫ್ಗಾನಿಸ್ತಾನ, ಮಧ್ಯ ಆಫ್ರಿಕಾ, ಚಾಡ್, ಕಾಂಗರೂ, ಸೊಮಾಲಿಯ, ಸೂಡಾನ್, ಸಿರಿಯಾ, ಯೆಮನ್- ಮುಂತಾದ ತೀವ್ರ ಸಂಘರ್ಷಪೀಡಿತ ರಾಷ್ಟ್ರಗಳಲ್ಲಿ ತಾಯಿ ಮರಣದ ಪ್ರಮಾಣ ಜಾಗತಿಕ ಸರಾಸರಿಗಿಂತ ದುಪ್ಪಟ್ಟು ಅಧಿಕವಾಗಿದೆ. ತೀವ್ರ ರಕ್ತಸ್ರಾವ, ಸೋಂಕು, ಅಸುರಕ್ಷಿತ ಗರ್ಭಪಾತ, ಎಚ್‌ಐವಿ ಸಂಬಂಧಿ ಸಮಸ್ಯೆಗಳು ಮುಂತಾದ ಹತ್ತಾರು ರೀತಿಯ ಅಪಾಯಗಳು ಈ ಪ್ರಾಂತ್ಯಗಳಲ್ಲಿ ಗರ್ಭಿಣಿಯರನ್ನು ಕಾಡುತ್ತಿವೆ.
ತಮ್ಮ ಪ್ರಜನನ ಕುರಿತ ವಿಷಯಗಳಲ್ಲಿ ಮಹಿಳೆಯರಿಗೆ ಪೂರ್ಣ ಅಧಿಕಾರವಿರುವುದು ಅಗತ್ಯ. ಯಾವಾಗ ಮತ್ತು ಎಷ್ಟು ಮಕ್ಕಳು ಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಅವರಿಗೆ ಇರಲೇಬೇಕು. ಆಗ ಮಾತ್ರವೇ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಸಾಧ್ಯ. ಮಹಿಳೆಯರು ಹೀಗೆ ಜೀವ ಕಳೆದುಕೊಳ್ಳುತ್ತಿರುವುದು ಅನ್ಯಾಯ ಎಂದು ವಿಶ್ವಸಂಸ್ಥೆ ಖೇದ ವ್ಯಕ್ತಪಡಿಸಿದೆ.