ಮೆತ್ತನೆಯ ದಿಂಬಿಗೆ ತಲೆ ಕೊಟ್ಟರೆ (Side effects of pillow) ನಿದ್ದೆ ಸದ್ದಿಲ್ಲದೆಯೆ ಆವರಿಸುತ್ತದೆ ಎಂಬ ಭಾವ ಬಹಳಷ್ಟು ಜನರಲ್ಲಿದೆ. ವಿಷಯ ಹೌದು, ಆರಾಮದಾಯಕ ಹಾಸಿಗೆ-ದಿಂಬುಗಳು ಗಾಢ ನಿದ್ದೆಗೆ ಪೂರಕವೇ. ಮುಖ್ಯವಾಗಿ ಕುತ್ತಿಗೆ ಮತ್ತು ಬೆನ್ನಿಗೆ ಸುಖ ನೀಡುವಂಥ ದಿಂಬು ಮಾತ್ರವೇ ಚೆನ್ನಾದ ನಿದ್ದೆಯನ್ನು ನೀಡಬಲ್ಲದು. ಆದರೆ ದಿಂಬುಗಳೇನು ಶಾಶ್ವತವಾಗಿ ಇರುವಂತೆ ಸಿದ್ಧಗೊಂಡವಲ್ಲ. ಹೊಸದರಲ್ಲಿ ಸುಖ ನೀಡುತ್ತಿದ್ದ ಮೆತ್ತೆಗಳು ಕೆಲಕಾಲದ ನಂತರ ಗಂಟುಗಂಟಾಗಿ ಮಲಗಿದವರ ಮೈಗೆ ಒತ್ತಲಾರಂಭಿಸುತ್ತವೆ. ಹೊಸದರಲ್ಲಿ ಮೆತ್ತಗಿದ್ದ ದಿಂಬುಗಳು ಕ್ರಮೇಣ ಗಟ್ಟಿಯಾಗಿ ಒತ್ತಲಾರಂಭಿಸಿದರೆ, ಅದರ ಮೇಲೆ ಇನ್ನೊಂದು ದಿಂಬು ಹಾಕಿಕೊಳ್ಳಬಹುದು. ಅಥವಾ ಹೊಸದಾದ ಇನ್ನೂ ಎತ್ತರದ ದಿಂಬು ಖರೀದಿಸುವ ಯೋಚನೆಯೂ ಬಂದೀತು. ಕ್ರಮೇಣ ತನ್ನ ಮೃದುತ್ವವನ್ನು ಕಳೆದುಕೊಂಡು, ತಗ್ಗಿ ಗಟ್ಟಿಯಾಗುವ ದಿಂಬುಗಳ ಗುಣದಿಂದ, ಈ ಯೋಚನೆ ಬಂದಿದ್ದರೆ ಅದು ಸಹಜ. ಆದರೆ ಹಾಗೆ ಎತ್ತರದ ದಿಂಬುಗಳನ್ನು ಬಳಸಿದರೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಅಥವಾ ಒಂದಕ್ಕಿಂತ ಹೆಚ್ಚು ದಿಂಬುಗಳನ್ನು ತಲೆ, ಕುತ್ತಿಗೆ, ಬೆನ್ನು ಎಂದು ಎಲ್ಲೆಂದರಲ್ಲಿ ಒತ್ತರಿಸಿಕೊಂಡರೂ ತೊಂದರೆ ತಪ್ಪಿದ್ದಲ್ಲ. ಎತ್ತರದ ದಿಂಬುಗಳ ಬಳಕೆಯಿಂದ ಬರುವ ಸಮಸ್ಯೆಗಳೇನು?
ಭಂಗಿ ಹಾಳಾಗುತ್ತದೆ
ಮಲಗುವುದಕ್ಕೆ ಆರಾಮದಾಯಕ ಭಂಗಿಯನ್ನು ಅನುಸರಿಸುವುದು ಮುಖ್ಯ. ಎತ್ತರದ ದಿಂಬನ್ನು ಹಾಕಿಕೊಳ್ಳುವುದರಿಂದ ಕುತ್ತಿಗೆ ಮತ್ತು ಬೆನ್ನಿನ ಭಂಗಿಗಳು ಹಾಳಾಗುತ್ತವೆ. ತೀರಾ ಎತ್ತರದ ದಿಂಬುಗಳು ಬೆನ್ನು ಹುರಿಯನ್ನು ಅತಿಯಾಗಿ ಬಾಗಿಸಿ, ಕುತ್ತಿಗೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಭುಜ, ಕುತ್ತಿಗೆ, ಬೆನ್ನಿನ ಮೇಲ್ಭಾಗಗಳಲ್ಲಿ ನೋವು, ಒತ್ತಡ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.
ಸ್ನಾಯುಗಳ ಮೇಲೆ ಒತ್ತಡ
ಯಾವುದೇ ಒಂದು ಭಂಗಿಯಲ್ಲಿ ಸ್ವಲ್ಪ ಕಾಲ ಇದ್ದಾಗಲೇ ನಮಗೆ ಕಿರಿಕಿರಿ ಉಂಟಾಗುತ್ತದೆ. ಉದಾ, ಒಂಟಿ ಕಾಲಲ್ಲಿ ಎರಡು ನಿಮಿಷ ನಿಲ್ಲುವುದೇ ಕಷ್ಟ, ನಿಂತರೂ ಕಾಲು ನೋವು ಅನುಭವಕ್ಕೆ ಬರುತ್ತದೆ. ಹಾಗಿರುವಾಗ ಆರಾಮವಲ್ಲದ ಮತ್ತು ಸೂಕ್ತವಲ್ಲದ ಭಂಗಿಯಲ್ಲಿ ಇಡೀ ರಾತ್ರಿ ಮಲಗಿದರೆ ಸ್ನಾಯುಗಳ ಮೇಲೆ ಬೀಳುವಂಥ ಒತ್ತಡವನ್ನು ನಾವು ಅರ್ಥಮಾಡಿಕೊಳ್ಳಬೇಕು. ಬೆಳಗ್ಗೆ ಏಳುವಾಗಲೇ ಸುಸ್ತಾಗಿ, ತಲೆ, ಕುತ್ತಿಗೆಯೆಲ್ಲಾಭಾರವಾದ ಅನುಭವವನ್ನು ನೀಡುತ್ತದೆ.
ಉಸಿರಾಟದ ತೊಂದರೆ
ನೆಗಡಿಯಾದಾಗ ದಿಂಬು ಎತ್ತರಿಸಿಕೊಂಡು ಮಲಗುವುದು ಬಹಳಷ್ಟು ಜನರ ರೂಢಿ. ಇದರಿಂದ ಮೂಗು ಕಟ್ಟಿದ ತೊಂದರೆಯಿಂದ ಕೊಂಚ ಆರಾಮ ದೊರೆಯುತ್ತದೆ. ಹಾಗೆಂದು ಸದಾಕಾಲ ಅದೇ ಭಂಗಿಯಲ್ಲಿ ಮಲಗುವುದು ಸೂಕ್ತವಲ್ಲ. ಇದರಿಂದ ಶ್ವಾಸನಾಳಗಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಯಾಗುತ್ತದೆ. ಸಶಬ್ದ ಉಸಿರಾಟ, ಉಬ್ಬಸದಂಥ ತೊಂದರೆಗಳು ಗಂಟು ಬೀಳಬಹುದು. ದೀರ್ಘವಾಗಿ ಉಸಿರಾಡಲು ಆಗುವುದಿಲ್ಲ ಎಂಬ ಭಾವನೆ ಬರಬಹುದು.
ಜೀರ್ಣಾಂಗಗಳ ತೊಂದರೆ
ದಿಂಬಿಗೂ ಜೀರ್ಣಾಂಗಗಳಿಗೂ ಏನು ಸಂಬಂಧ? ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದು ಯೋಚಿಸಬಹುದು. ತಲೆ, ಕುತ್ತಿಗೆಯ ಭಾಗಗಳು ಒಂದೇ ಪಂಕ್ತಿಯಲ್ಲಿ ಸರಿಯಾಗಿ ಜೋಡಿಸಿಕೊಂಡು ಇರದಿದ್ದರೆ ಎದೆಯುರಿ, ಹುಳಿತೇಗಿನಂಥ ತೊಂದರೆಗಳಿಗೆ ದಾರಿ ಮಾಡಬಹುದು. ಅದರಲ್ಲೂ ಊಟ ಆದ ತಕ್ಷಣ ಹೀಗೆ ಕುತ್ತಿಗೆ, ತಲೆಗಳನ್ನು ಎತ್ತರಿಸಿ ಮಲಗಿಕೊಳ್ಳುವುದು ಸರಿಯಲ್ಲ.
ಪರಿಚಲನೆಗೆ ಅಡಚಣೆ
ಭುಜ, ತೋಳು ಮತ್ತು ಬೆನ್ನಿನ ಮೇಲ್ಭಾಗಗಳಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುವುದಕ್ಕೆ ಎತ್ತರದ ದಿಂಬುಗಳು ಅಡಚಣೆ ಮಾಡುತ್ತವೆ. ಇದರಿಂದ ತೋಳು, ಬೆರಳುಗಳಲ್ಲಿ ಚುಚ್ಚಿದ ಅನುಭವ, ಮರಗಟ್ಟಿದಂತಾಗುವುದು, ಜೋಮು ಹಿಡಿಯುವುದು ಸಾಮಾನ್ಯ. ಆದರೆ ದೀರ್ಘಕಾಲದವರೆಗೆ ಇದೇ ಭಂಗಿಯಲ್ಲಿ ಮಲಗುವುದನ್ನು ರೂಢಿಸಿಕೊಂಡರೆ ನರಸಂಬಂಧಿ ತೊಂದರೆಗಳು ಕಾಣಬಹುದು.
ತಲೆನೋವು
ಬೆಳಗ್ಗೆ ಏಳುತ್ತಿದ್ದಂತೆಯೇ ತಲೆನೋವಿನ ಅನುಭವವೇ? ಕುತ್ತಿಗೆ, ಭುಜವೆಲ್ಲ ನೋಯುತ್ತಿರುವ ಇಲ್ಲವೇ ಮರಗಟ್ಟಿದ ಹಾಗಿದೆಯೇ? ನಿಮ್ಮ ದಿಂಬಿನ ದೋಷವೇ ಇರಬಹುದು. ಮಲಗಿದ ಭಂಗಿಯ ತೊಂದರೆಯಿಂದಾಗಿ ದಿನವೂ ನಿದ್ರೆ ಸರಿಯಾಗುತ್ತಿಲ್ಲ ಎಂದಾದರೆ, ಮೈಗ್ರೇನ್ ಅಥವಾ ಅರೆತಲೆಶೂಲೆ ಅಂಟಿಕೊಳ್ಳುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: Tips To Prevent Acne: ಮೊಡವೆ ಬರದಂತೆ ತಡೆಯಬೇಕೆ? ಇಲ್ಲಿದೆ ಪರಿಹಾರ!