Site icon Vistara News

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Vaccin for Hiv

ಎಚ್‌ಐವಿ ಸೋಂಕು ಬಾರದಂತೆ (Vaccine for HIV) ತಡೆಯುವಲ್ಲಿ ಹೊಸ ಆಶಾಕಿರಣವೊಂದು ಕಂಡು ಬಂದಿದ್ದು, ವರ್ಷಕ್ಕೆ ಎರಡು ಡೋಸ್‌ನಂತೆ ನೀಡಲಾಗುತ್ತಿರುವ ಚುಚ್ಚುಮದ್ದೊಂದು ಕಿಶೋರಿಯರು ಮತ್ತು ಯುವತಿಯರಲ್ಲಿ ಸೋಂಕುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿರುವ ಲೇನಕಾಪವಿರ್‌ (lenacapavir) ಎನ್ನುವ ಚುಚ್ಚುಮದ್ದಿನ ಬಗೆಗೆ ಆಫ್ರಿಕಾದಲ್ಲಿ ನಡೆಸಲಾದ ಪ್ರಯೋಗದ ದತ್ತಾಂಶಗಳು ಈ ಹೊಸ ಭರವಸೆಯನ್ನು ಮೂಡಿಸಿವೆ. ಈ ಚುಚ್ಚುಮದ್ದನ್ನು ಎಚ್‌ಐವಿ ಸೋಂಕು ಇಲ್ಲದಿರುವ ಸುಮಾರು 5000 ಯುವತಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ನೀಡಲಾಗಿತ್ತು. ಈ ಅಧ್ಯಯನ ನಡೆಯುತ್ತಿರುವಾಗ ಇವರಾರಿಗೂ ಎಚ್‌ಐವಿ ಸೋಂಕು ಹೊಸದಾಗಿ ಅಂಟಿಲ್ಲ ಎನ್ನುವುದು, ಈ ಸೋಂಕನ್ನು ಶೇ. ನೂರರಷ್ಟು ತಡೆಯಲು ಸಾಧ್ಯವಾಗುವ ಆಸೆಯನ್ನು ಹುಟ್ಟಿಸಿದೆ. ಎಚ್‌ಐವಿ ಸೋಂಕುಗಳನ್ನು ತಡೆಗಟ್ಟಲು ಟ್ರುವಾಡದಂಥ ಮಾತ್ರೆಗಳು ಈಗಾಗಲೇ ಬಳಕೆಯಲ್ಲಿವೆ. ಈ ಭೀತಿಯನ್ನು ಕಡಿಮೆ ಮಾಡುವ ಇಂಜೆಕ್ಷನ್‌ಗಳು ಸಹ ಈಗಾಗಲೇ ಚಾಲ್ತಿಯಲ್ಲಿವೆ.

ಏನಿದರ ಪ್ರಾಮುಖ್ಯತೆ?

ಈ ಸೂಜಿಮದ್ದಿನ ಪ್ರಾಮುಖ್ಯತೆಯನ್ನು ಅರಿಯುವುದಕ್ಕೆ ಪ್ರಯೋಗದ ವಿವರಗಳನ್ನು ಚುಟುಕಾಗಿಯಾದರೂ ತಿಳಿದುಕೊಳ್ಳಬೇಕು. ದಕ್ಷಿಣ ಆಫ್ರಿಕಾ ಮತ್ತು ಉಗಾಂಡ ದೇಶಗಳ ಯುವತಿಯರು ಮತ್ತು ಕಿಶೋರಿಯರನ್ನು ಒಳಗೊಂಡು ಈ ಪ್ರಯೋಗ ನಡೆಸಲಾಗಿದೆ. ಈ ಪ್ರದೇಶಗಳಲ್ಲಿ ಎಚ್‌ಐವಿ ಸೋಂಕು ತೀರಾ ವ್ಯಾಪಕವಾಗಿದ್ದು, ಅರಿವು ಮತ್ತು ಮುನ್ನೆಚ್ಚರಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. 26 ವಾರಗಳ ಅವಧಿಯಲ್ಲಿ ಒಂದು ಬಾರಿಯಂತೆ ಲೇನಕಾಪವಿರ್‌ ಇಂಜೆಕ್ಷನ್‌ ನೀಡಿದ ಒಂದು ಗುಂಪು, ಖಾಲಿ ಇಂಜೆಕ್ಷನ್‌ ನೀಡಿದ ಇನ್ನೊಂದು ಗುಂಪು, ನಿತ್ಯವೂ ಎಚ್‌ಐವಿ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮತ್ತೊಂದು ಗುಂಪುಗಳು ಅಧ್ಯಯನಕ್ಕೆ ಒಳಪಟ್ಟಿದ್ದವು.

ಪ್ರಯೋಗ ಯಶಸ್ವಿ

26 ವಾರಗಳ ನಂತರ ಈ ಗುಂಪುಗಳನ್ನು ಪರಿಶೀಲಿಸಿದಾಗ 55 ಮಂದಿಗೆ ಸೋಂಕು ಉಂಟಾಗಿತ್ತು. ಅದರಲ್ಲಿ ಲೇನಕಾಪವಿರ್‌ ತೆಗೆದುಕೊಂಡಿದ್ದ ಗುಂಪಿನಲ್ಲಿ ಮಾತ್ರ ಯಾರೊಬ್ಬರಿಗೂ ಸೋಂಕು ತಾಗಿರಲಿಲ್ಲ. ಉಳಿದ ಗುಂಪುಗಳಲ್ಲಿ- ಒಂದರಲ್ಲಿ 39 ಮಂದಿಗೆ, ಇನ್ನೊಂದರಲ್ಲಿ 16 ಮಂದಿಗೆ ಸೋಂಕು ಅಂಟಿತ್ತು. ಹಾಗಾಗಿ ಎಚ್‌ಐವಿ ಹೊಸದಾಗಿ ಅಂಟದಂತೆ ತಡೆಯುವಲ್ಲಿ ಈ ಔಷಧಿ ಶೇ. ನೂರರಷ್ಟು ಪರಿಣಾಮ ಬೀರಬಹುದು ಎಂಬ ಭರವಸೆ ಇಡೀ ಜಗತ್ತಿನ ಸಂಶೋಧಕರ ಪಾಲಿಗೆ ಮಹತ್ವದ್ದೆನಿಸಿದೆ.
ಯುವತಿಯರಲ್ಲಿ ಮಾತ್ರವೇ ಈ ಔಷಧಿ ಕೆಲಸ ಮಾಡುತ್ತದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದನ್ನು ಪುರುಷರಿಗೆ ನೀಡಿ ನಡೆಸಲಾಗುತ್ತಿರುವ ಅಧ್ಯಯನ ಇನ್ನೂ ಚಾಲ್ತಿಯಲ್ಲಿದೆ. ಅಲ್ಲಿಂದ ಹೊರಹೊಮ್ಮುವ ದತ್ತಾಂಶಗಳ ಬಗೆಗೂ ಸಂಶೋಧಕರು ಕುತೂಹಲ ಹೊಂದಿದ್ದಾರೆ. ಮುಂದಿನ ಹಂತದ ಪ್ರಯೋಗಗಳಲ್ಲಿ ಪುರುಷರು, ಲಿಂಗ ಬದಲಾಯಿಸಿಕೊಂಡಿರುವ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಳ್ಳಲಾಗಿದೆ. ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ಥಾಯ್ಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿದೆ.

ಚುಚ್ಚು ಮದ್ದಿನಿಂದ ರಕ್ಷಣೆ

ಈಗಾಗಲೇ ಪರಿಣಾಮಕಾರಿ ಎನಿಸಿಕೊಂಡಿರುವ Pre-exposure prophylaxis (or PrEP) ಮಾತ್ರೆಗಳ ಜೊತೆಗೆ, ಈ ಚುಚ್ಚುಮದ್ದು ಸಹ ಹೆಚ್ಚಿನ ರಕ್ಷಣೆಯನ್ನು ನೀಡಲಿದೆ. PrEP ಮಾತ್ರೆಗಳನ್ನು ಪ್ರತಿದಿನ ಅಥವಾ ವೈದ್ಯರು ಸೂಚಿಸಿದ ರೀತಿಯಲ್ಲೇ ತೆಗೆದುಕೊಳ್ಳುವುದು ಅಗತ್ಯ. ಆದರೆ ಈ ಹೊಸ ಭರವಸೆಯನ್ನು ಆರು ತಿಂಗಳಿಗೊಮ್ಮೆ ಮಾತ್ರವೇ ತೆಗೆದುಕೊಂಡರೆ ಸಾಕು ಎನ್ನುವುದು, ಬಳಕೆಯನ್ನು ಇನ್ನಷ್ಟು ಸರಳಗೊಳಿಸುವ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಮಹತ್ವದ್ದು ಎನಿಸಿದೆ.

ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

ಈಗ ಪ್ರಯೋಗದಲ್ಲಿರುವ ಲೇನಕಾಪವಿರ್‌ ಚುಚ್ಚುಮದ್ದು ವಿಶ್ವದಲ್ಲಿ ಎಲ್ಲಿಯೂ ಎಚ್‌ಐವಿ ತಡೆಯುವ ಔಷಧಿಯೆಂದು ಮಾನ್ಯತೆ ಪಡೆದಿಲ್ಲ. ಆದರೆ ಇನ್ನೂ ಕೆಲವು ಔಷಧಿಗಳ ಜೊತೆಯಲ್ಲಿ ಇದನ್ನೂ ನೀಡುವುದಕ್ಕೆ ಅಮೆರಿಕದಲ್ಲಿ ಪರವಾನಗಿ ಇದೆ. ಇದಕ್ಕೆ ವರ್ಷಕ್ಕೆ ಸುಮಾರು 40,000 ಡಾಲರ್‌ ವೆಚ್ಚ ಈಗಾಗಲೇ ತಗುಲುತ್ತಿದೆ. ಒಂದೊಮ್ಮೆ ಎಚ್‌ಐವಿ ಸೋಂಕು ಬಾರದಂತೆ ತಡೆಯುವಲ್ಲಿ ಇದು ಸಂಪೂರ್ಣ ಯಶಸ್ವಿ ಎಂದಾದರೆ, ಈ ವೆಚ್ಚವನ್ನು ತಗ್ಗಿಸದಿದ್ದರೆ ಬಳಕೆದಾರರಿಗೆ ಪ್ರಯೋಜನ ಆಗದಿರಬಹುದು ಎನ್ನುತ್ತಾರೆ ಅಧ್ಯಯನಕಾರರು.

Exit mobile version