ವಡೋದರಾ: ಮಗಳಿಗೆ ಮದುವೆಯಾಗಿದ್ದರೂ, ತನ್ನ ತಂದೆ ಖರೀದಿಸಿದ ವಿಮೆಯನ್ನು ಕ್ಲೇಮ್ ಮಾಡಿಕೊಳ್ಳಬಹುದು ಎಂದು ವಡೋದರಾ ಗ್ರಾಹಕ ಹಕ್ಕುಗಳ ಆಯೋಗವು (Vadodara) ತೀರ್ಪು ನೀಡಿದೆ. (Vadodara Disputes Redressal Commission) ಆಯೋಗವು ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ಈ ಬಗ್ಗೆ ಆದೇಶಿಸಿದೆ. ಅದರ ಪ್ರಕಾರ ಕಂಪನಿಯು ಭರತ್ ಚೌಧುರಿ ಅವರಿಗೆ ಅವರ ಮಗಳ ವೈದ್ಯಕೀಯ ಚಿಕಿತ್ಸೆಯ ಸಲುವಾಗಿ ಮಾಡಿದ ವಿಮೆ ಕ್ಲೇಮ್ ಅನ್ನು ಇತ್ಯರ್ಥಪಡಿಸಬೇಕಾಗಿದೆ.
ಆಗಿದ್ದೇನು? ಚೌಧುರಿ ಅವರು 2009ರಲ್ಲಿ ಫ್ಲೋಟರ್ ಮೆಡಿಕ್ಲೇಮ್ ಪಾಲಿಸಿಯನ್ನು 2009ರಲ್ಲಿ ತಮ್ಮ ಕುಟುಂಬದ ಸದಸ್ಯರಿಗಾಗಿ ಖರೀದಿಸಿದ್ದರು. ಹಾಗೂ ಪ್ರತಿ ವರ್ಷ ರಿನ್ಯೂವಲ್ ಮಾಡುತ್ತಿದ್ದರು. 2021ರಲ್ಲಿ ಮಗಳು ಅಂಕಿತಾ ಅವರಿಗೆ ಮೂತ್ರಕೋಶದ ಸೋಂಕು ಉಂಟಾಯಿತು. ಹೀಗಾಗಿ ವಾಘೋಡಿಯಾದಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರ್ಪಡೆಯಾದರು. ಚಿಕಿತ್ಸೆಗೆ 65,000 ರೂ. ವೆಚ್ಚವಾಯಿತು. ಅದನ್ನು ಭರತ್ ಚೌಧುರಿ ಅವರು ವಿಮೆ ಕಂಪನಿಯಿಂದ ಕ್ಲೇಮ್ ಮಾಡಿದ್ದರು.
ಹೀಗಿದ್ದರೂ, ವಿಮೆ ಕಂಪನಿಯು ಕ್ಲೇಮ್ ಅನ್ನು ತಿರಸ್ಕರಿಸಿತು. ಆಗ ಅಂಕಿತಾ ಮದುವೆಯಾಗಿದ್ದರು. ವಿಮೆಯ ಷರತ್ತುಗಳ ಪ್ರಕಾರ ಕ್ಲೇಮ್ ಮಾಡುವಂತಿರಲಿಲ್ಲ. ಪಾಲಿಸಿ ನವೀಕರಿಸುವಾಗ ಚೌಧುರಿ ಅವರು ಮಗಳಿಗೆ ವಿವಾಹ ಆಗಿರುವುದನ್ನು ತಿಳಿಸಿಲ್ಲ ಎಂದು ವಿಮೆ ಕಂಪನಿ ಆರೋಪಿಸಿತ್ತು. 2022ರ ಅಕ್ಟೋಬರ್‌ನಲ್ಲಿ ವಿಮೆ ಕಂಪನಿಯು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ಉಭಯ ಬಣಗಳ ವಾದವನ್ನು ಆಲಿಸಿದ ಬಳಿಕ ಗ್ರಾಹಕರ ಆಯೋಗವು, ಮಗಳು ಮದುವೆಯಾಗಿದ್ದರೆ ವಿಮೆ ಕ್ಲೇಮ್ ಮಾಡುವಂತಿಲ್ಲ ಎಂದು ಯಾವ ನಿಯಮವೂ ಇಲ್ಲ. ಪಾಲಿಸಿಯ ಪ್ರಕಾರ ಮೂರು ತಿಂಗಳಿನಿಂದ 25 ವರ್ಷ ತನಕದ ವಯೋಮಿತಿಯ ಅವಲಂಬಿತರಿಗೆ ವಿಮೆ ಕವರೇಜ್ ಸಿಗುತ್ತದೆ ಎಂದು ಆಯೋಗ ಹೇಳಿತು.
ಇದನ್ನೂ ಓದಿ: ವಿಸ್ತಾರ Money Guide : ಪ್ರೀಮಿಯಂ ಕಟ್ಟಿದ ಮೇಲೆ ವಿಮೆ ಪಾಲಿಸಿ ಬೇಡವೆಂದರೆ ನಿಮ್ಮ ಹಣ ವಾಪಸ್
ಅಂಕಿತಾ ಅವರು ಕಳೆದ ವರ್ಷ ಡೆಂಗ್ಯು ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ವಿಮೆ ಕಂಪನಿಯು ಚಿಕಿತ್ಸೆಯ ವೆಚ್ಚ ಭರಿಸಿತ್ತು ಎಂಬುದನ್ನೂ ಆಯೋಗ ಗಮನಿಸಿತ್ತು. ಎರಡನೇ ಕ್ಲೇಮ್ ಮಾಡಲು ಮಗಳಿಗೆ ಮದುವೆಯಾಗಿರುವುದು ಅಡ್ಡಿಯಾಗುವಂತಿಲ್ಲ ಎಂದು ಆಯೋಗ ಪ್ರತಿಪಾದಿಸಿತು. ವಿಮೆ ಕಂಪನಿಯು ಈ ಕ್ಲೇಮ್ ಅನ್ನು ತಿರಸ್ಕರಿಸಿರುವುದು ಸರಿಯಲ್ಲ, ವಿಮೆ ಕಂಪನಿಯು 65,846 ರೂ.ಗಳನ್ನು 9% ಬಡ್ಡಿ ಸಹಿತ ಪಾಲಿಸಿದಾರರಿಗೆ ನೀಡಬೇಕು, ಮಾನಸಿಕ ಕಿರುಕುಳಕ್ಕೆ 2,000 ರೂ. ಪರಿಹಾರ ಕೊಡಬೇಕು ಎಂದು ಆಯೋಗ ತೀರ್ಪು ನೀಡಿದೆ.