Site icon Vistara News

Vegetarian Foods To Increase Weight: ದೇಹದ ತೂಕವನ್ನು ಸಸ್ಯಾಹಾರದಿಂದಲೇ ಹೆಚ್ಚಿಸಬೇಕೆ? ಇಲ್ಲಿವೆ ಆಯ್ಕೆ!

Vegetarian Foods To Increase Weight

ಹೇಗಿದ್ದರೂ ಚಿಂತೆ ತಪ್ಪುವುದಿಲ್ಲ. ಜೊತೆಗೆ ಲೋಕದ ಪ್ರಶ್ನೆಗಳೂ ತಪ್ಪುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ದೇಹದ ತೂಕ ಹೆಚ್ಚಾದರೆ ಅದನ್ನಿಳಿಸುವುದು ಹೇಗೆ ಎಂಬ ಚಿಂತೆ. ಜೊತೆಗೆ ತೂಕವೇಕೆ ಇಷ್ಟೊಂದು ಹೆಚ್ಚಾಗಿದೆ ಎಂದು ಸುತ್ತಲಿನವರ ಪ್ರಶ್ನೆ. ಹಾಗಿಲ್ಲದೆ ಸಣ್ಣ ಇದ್ದರೆ ಅವರಿಗೆ ಸ್ವಲ್ಪ ಮೈಕೈ ತುಂಬಿಕೊಳ್ಳುವ ಚಿಂತೆ. ಜೊತೆಗೆ ಹೊಟ್ಟೆಗಿಲ್ಲದವರಂತೆ ಇದ್ದಾರೆ ಎಂಬ ಟೀಕಾಸ್ತ್ರಗಳು ಸುತ್ತಲಿಂದ ಚುಚ್ಚುತ್ತವೆ. ಅಂತೂ ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ! ದಪ್ಪ ಇರುವವರಿಗೆ ತೂಕ ಇಳಿಸುವುದು ಎಷ್ಟು ಕಷ್ಟವೋ, ಸಪೂರ ಇರುವವರಿಗೆ ತೂಕ ಏರಿಸುವುದೂ ಅಷ್ಟೇ ಕಷ್ಟವೆಂದರೆ ನಂಬುವ ಮಾತಾ? ಅದರಲ್ಲೂ ಸಸ್ಯಾಹಾರಿಗಳಿಗೆ (vegetarian foods to increase weight) ತೂಕ ಏರಿಸಿಕೊಳ್ಳುವುದು ಇನ್ನೊಂದು ಹೆಜ್ಜೆ ದೂರ ಎನ್ನುವ ಭಾವನೆಯಿದೆ.

ನಿಜಕ್ಕೂ ಹಾಗೇನಿಲ್ಲ. ತೂಕ ಏರಿಸುವುದೆಂದರೆ ಸಿಕ್ಕಿದ್ದೆಲ್ಲಾ ತಿಂದು ಊದಿಕೊಳ್ಳುವುದಲ್ಲ. ಬದಲಿಗೆ ಆರೋಗ್ಯಕರ ರೀತಿಯಲ್ಲಿ ಕ್ರಮೇಣ ತೂಕವನ್ನು ಹೆಚ್ಚಿಸಿಕೊಳ್ಳುವುದು ಆದ್ಯತೆಯಾಗಬೇಕು. ಸಸ್ಯಾಹಾರಿಗಳಿಗೂ (vegetarian foods to increase weight) ಇದು ಅನ್ವಯಿಸುತ್ತದೆ. ಹಾಗಾದರೆ ಯಾವೆಲ್ಲಾ ಆಹಾರಗಳಿಂದ ಸಸ್ಯಾಹಾರಿಗಳು ಆರೋಗ್ಯಕರ ರೀತಿಯಲ್ಲಿ ತಮ್ಮ ತೂಕ ಹೆಚ್ಚಿಸಿಕೊಳ್ಳಬಹುದು? ಇಲ್ಲಿದೆ ಪಟ್ಟಿ

ಬೀಜಗಳು ಮತ್ತವುಗಳ ಬೆಣ್ಣೆ

ನಟ್‌ ಮತ್ತು ನಟ್‌ ಬಟರ್‌ ಎಂದೇ ಇವು ಪ್ರಚಲಿತದಲ್ಲಿವೆ. ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ಸೂಕ್ಷ್ಮ ಪೋಷಕತತ್ವಗಳಿಂದ ಭರಿತವಾದ ಈ ತಿನಿಸುಗಳನ್ನು ನೆನೆಸಿ, ಹುರಿದು, ಪುಡಿ ಮಾಡಿ- ನಾನಾ ರೀತಿಗಳಲ್ಲಿ ಸೇವಿಸಬಹುದು. ಬಾದಾಮಿ, ಶೇಂಗಾ, ಗೋಡಂಬಿ, ವಾಲ್‌ನಟ್‌, ಸೂರ್ಯಕಾಂತಿ ಬೀಜ- ಹೀಗೆ ನಾನಾ ಬೀಜಗಳ ಬೆಣ್ಣೆಯನ್ನೂ ಸ್ಯಾಂಡ್‌ವಿಚ್‌, ಚಪಾತಿ ಮುಂತಾದವುಗಳ ಜೊತೆಗೆ ಸವಿಯಬಹುದು. ಇವುಗಳಿಂದ ದೇಹದಲ್ಲಿ ಅನಾರೋಗ್ಯಕರ ಕೊಬ್ಬು ಜಮೆಯಾಗುವುದಿಲ್ಲ.

ಬೆಣ್ಣೆ ಹಣ್ಣು

ಬೆಣ್ಣೆಯಂಥ ಈ ಮೃದು ಹಣ್ಣುಗಳನ್ನು ಸಲಾಡ್‌, ಸ್ಯಾಂಡ್‌ವಿಚ್‌, ದೋಸೆ-ಚಪಾತಿಗಳು, ಸ್ಮೂದಿ ಎಂದು ಹಲವು ರೀತಿಯಲ್ಲಿ ಇವುಗಳನ್ನು ಹಸಿಯಾಗಿಯೇ ಸೇವಿಸಬಹುದು. ಅತ್ಯಧಿಕ ಪ್ರಮಾಣದಲ್ಲಿ ಆರೋಗ್ಯಕರ ಕೊಬ್ಬು, ಅತ್ತ್ಯುತ್ತಮ ಪ್ರಮಾಣದಲ್ಲಿ ನಾರು, ಅಗಾಧ ಪ್ರಮಾಣದಲ್ಲಿ ಖನಿಜಗಳು, ವಿಟಮಿನ್‌ ಸಿ, ಫೋಲೇಟ್‌, ಒಮೇಗಾ ೩ ಕೊಬ್ಬಿನಾಮ್ಲ- ಹೀಗೆ ಉತ್ಕೃಷ್ಟ ಸತ್ವಗಳನ್ನು ಈ ಹಣ್ಣು ಒದಗಿಸುತ್ತದೆ

ಕಿನೊವಾ

ಹುಸಿ ಧಾನ್ಯ ಎಂದೇ ಕರೆಯಲ್ವಡುವ ಇದು ಸಸ್ಯಾಹಾರಿಗಳಿಗೆ ದೊರೆಯುವ ಕೆಲವೇ ಸಂಪೂರ್ಣ ಪ್ರೊಟೀನ್‌ಗಳಲ್ಲಿ ಒಂದು. ಒಂದು ಕಪ್‌ ಬೇಯಿಸಿದ ಕಿನೊವಾದಿಂದ ಸುಮಾರು 220 ಕ್ಯಾಲರಿ ದೊರೆಯುತ್ತದೆ. ಜೊತೆಗೆ 8 ಗ್ರಾಂ ಪ್ರೊಟೀನ್‌ ಮತ್ತು 5 ಗ್ರಾಂ ನಾರು ಸಹ ದೇಹ ಸೇರುತ್ತದೆ. ಇದಲ್ಲದೆ, ಫೋಲೇಟ್‌, ಮೆಗ್ನೀಶಿಯಂ, ತಾಮ್ರ, ಮ್ಯಾಂಗನೀಸ್‌ ಸೇರಿದಂತೆ ಹಲವು ರೀತಿಯ ಖನಿಜಗಳು ದೊರೆಯುತ್ತವೆ

ಡೈರಿ ಉತ್ಪನ್ನಗಳು

ಹಾಲು, ಮೊಸರು, ಪನೀರ್‌, ಚೀಸ್‌, ಬೆಣ್ಣೆ ಮತ್ತು ತುಪ್ಪದಂಥ ಡೈರಿ ಉತ್ಪನ್ನಗಳು ದೇಹಕ್ಕೆ ಒಳ್ಳೆಯ ಕ್ಯಾಲರಿ ನೀಡುತ್ತವೆ. ಆದರೆ ಇವುಗಳನ್ನು ಸೇವಿಸುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಅಂದರೆ ಬೆಣ್ಣೆ, ಚೀಸ್‌ ಮುಂತಾದವನ್ನು ಮಿತಿಮೀರಿ ತಿಂದರೆ ದೇಹದಲ್ಲಿ ಕೊಬ್ಬು ಜಮೆಯಾಗುವ ಅಪಾಯವಿದೆ. ಹಾಲು, ಪನೀರ್‌ಗಳು ಬಳಸುವಾಗ ಲೋ ಫ್ಯಾಟ್‌ ಆಯ್ಕೆ ಮಾಡಿದರೆ ಅನಗತ್ಯ ಕೊಬ್ಬು ಪೇರಿಸಿಕೊಳ್ಳುವುದನ್ನು ತಪ್ಪಿಸಬಹುದು.

ಒಣ ಹಣ್ಣುಗಳು

ದ್ರಾಕ್ಷಿ, ಖರ್ಜೂರ, ಅಂಜೂರ, ಬಾಳೆಹಣ್ಣು ಮುಂತಾದವುಗಳನ್ನು ಒಣಗಿಸಿದ್ದನ್ನೂ ಪ್ರತಿದಿನ ಬಾಯಾಡಬಹುದು. ಉತ್ಕರ್ಷಣ ನಿರೋಧಕಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ನಾರಿನಿಂದ ಈ ತಿನಿಸುಗಳು ಸಮೃದ್ಧವಾಗಿರುತ್ತವೆ. ಆದರೆ ಇವುಗಳನ್ನು ಸಿಕ್ಕಾಪಟ್ಟೆ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುವ ಭಯವೂ ಇರುವುದರಿಂದ, ಇವುಗಳನ್ನು ಹೆಚ್ಚಿನ ಪ್ರೊಟೀನ್‌ಗಳ ಜೊತೆ ಸೇರಿಸಿ ಸೇವಿಸಿ. ಪ್ರೊಟೀನ್‌ ಶೇಕ್‌ಗಳು ಅಥವಾ ಟ್ರೇಲ್‌ ಮಿಕ್ಸ್‌ ಇಲ್ಲವೇ ಪ್ರೊಟೀನ್‌ ಬಾರ್‌ಗಳ ಜೊತೆಗೆ ಇದು ಸೂಕ್ತವಾದುದು.

ಕಾಳು ಮತ್ತು ಧಾನ್ಯಗಳು

ತೂಕ ಏರಿಸುವುದೆಂದರೆ ಕೇವಲ ದಪ್ಪಗಾಗುವುದು ಮಾತ್ರವೇ ಅಲ್ಲ, ಅದಕ್ಕೆ ಸರಿಯಾಗಿ ಸ್ನಾಯುಗಳನ್ನು ಬೆಳೆಸುವುದು. ಅಂದರೆ ದೇಹದಲ್ಲಿ ಕೊಬ್ಬು ಶೇಖರವಾಗುವ ಬದಲು, ಹುರಿಗಟ್ಟಿಸುವುದು. ಇದಕ್ಕೆ ಸಂಕೀರ್ಣವಾದ ಪಿಷ್ಟಗಳೂ ಬೇಕು. ಹಾಗಾಗಿ ಸಿರಿಧಾನ್ಯಗಳು, ಗೆಣಸು, ಕೆಂಪಕ್ಕಿಯಂಥವನ್ನು ಬಳಸಬಹುದು. ಜೊತೆಗೆ ಮೊಳಕೆ ಕಟ್ಟಿದ ಕಾಳುಗಳು ಒಳ್ಳೆಯ ಆಯ್ಕೆ

ವ್ಯಾಯಾಮ

ಇದನ್ನು ಮರೆಯುವಂತಿಲ್ಲ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವಲ್ಲಿ ಸರಿಯಾದ ವ್ಯಾಯಾಮವೂ ಗಣನೀಯ ಪಾತ್ರ ವಹಿಸುತ್ತದೆ. ತಿಂದ ಆಹಾರವನ್ನು ಕರಗಿಸುವುದು ಸ್ನಾಯುಗಳ ಬೆಳವಣಿಗೆಗೆ ಪೂರಕ. ಹಾಗಾಗಿ ಒಳ್ಳೆಯ ಆಹಾರವನ್ನು ಚೆನ್ನಾಗಿ ತಿನ್ನಿ, ತಿಂದಿದ್ದನ್ನು ಕರಗಿಸಿ. ಒಳ್ಳೆಯ ದೇಹ ತೂಕ ನಿಮ್ಮದಾಗುತ್ತದೆ.

FAQ

ತೆಳ್ಳಗಿನ ದೇಹವನ್ನು ಸುಧಾರಿಸುವುದು ಹೇಗೆ?

ದೇಹ ಪೀಚು ಎಂಬ ಕೀಳರಿಮೆಯನ್ನು ಮೊದಲು ಬಿಡಿ. ಧಡೂತಿ ದೇಹವೂ ಸರಿಯಲ್ಲ. ಆದರೆ ಆಹಾರಕ್ರಮವನ್ನು ಬದಲು ಮಾಡಿಕೊಂಡಲ್ಲಿ, ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಬಹುದು

ಅಂಗಡಿಗಳಲ್ಲಿ ದೊರೆಯುವ ಪ್ರೊಟೀನ್‌ ಪುಡಿ ತಿನ್ನುವುದರಿಂದ ದಪ್ಪಗಾಗುತ್ತಾರಂತೆ. ಹೌದೇ?

ತ್ವರಿತ ಫಲಿತಾಂಶಗಳ ಆಮಿಷಕ್ಕೆ ಬೀಳುವುದು ಸರಿಯಲ್ಲ. ದೇಹಕ್ಕೆ ಪೋಷಣೆ ದೊರೆಯಬೇಕಾದ್ದು ಪ್ರಾಕೃತಿಕವಾದ ಆಹಾರಗಳಿಂದಲೇ ಹೊರತು ಕೃತಕ ಪುಡಿಗಳಿಂದಲ್ಲ. ಸೂಕ್ತ ಮಾರ್ಗದರ್ಶನಕ್ಕಾಗಿ ಪೋಷಕಾಂಶ ತಜ್ಞರನ್ನು ಭೇಟಿ ಮಾಡಿದರೆ ಉಪಯುಕ್ತ.

ಇದನ್ನೂ ಓದಿ: Health Benefits Of Rice Water: ಅಕ್ಕಿ ತಿಳಿಯ ಲಾಭಗಳು ಬಹಳಷ್ಟಿವೆ!

Exit mobile version