ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ (Vijayanagara News) ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು.
ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ಮಾಡಿದರು.
ಇದನ್ನೂ ಓದಿ: Credit Card Safety Tips: ಕ್ರೆಡಿಟ್ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಪ್ರತಿಯೊಬ್ಬ ಪ್ರಜೆ ಋತುಚಕ್ರದ ಕುರಿತು ಅರಿವು ಪಡೆದು ಜ್ಞಾನವಂತರಾಗಬೇಕು. ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಕಿಶೋರಿಯರು ಮತ್ತು ಮಹಿಳೆಯರು ಋತುಸ್ರಾವ ಉಂಟಾದಾಗ ವೈಯಕ್ತಿಕ ಕಾಳಜಿ, ಸಂತಾನೋತ್ಪತ್ತಿ, ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ತಿಳುವಳಿಕೆ ಹೊಂದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡಿಎಂಒ ಕಾರ್ಯಕ್ರಮದ ಅಧಿಕಾರಿ ಡಾ. ಕಮಲಮ್ಮ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಎಂದರೆ ಹದಿಹರೆಯದ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪುವ ಹಂತವಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಿದೆ ಎಂದು ಸಲಹೆ ನೀಡಿದರು.
ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಮುಟ್ಟಿನ ನೈರ್ಮಲ್ಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರ್‌ಸಿಎಚ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತುಂಗಭದ್ರಾ ಸ್ಕೂಲ್ ಆಫ್ ನರ್ಸಿಂಗ್ ಹೋಂನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಇದನ್ನೂ ಓದಿ: Child Trafficking Racket: ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ ಪತ್ತೆ; 11 ಮಕ್ಕಳ ರಕ್ಷಣೆ
ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಟ್ಟಿನ ನೈರ್ಮಲ್ಯದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರಾಸಾವಿಕ ಮಾತನಾಡಿದರು. ಧರ್ಮನಗೌಡ ವಂದಿಸಿದರು.