ದೇಹಕ್ಕೆ ಅಗತ್ಯವಾಗಿ ಬೇಕಿರುವ ಪೋಷಕಾಂಶಗಳ ಪಟ್ಟಿಯಲ್ಲಿ ವಿಟಮಿನ್ ಸಿ (Vitamin C Benefits) ಮುಂಚೂಣಿಯಲ್ಲಿ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಜೀವಸತ್ವ ಬೇಕು ಎಂಬುದನ್ನು ಪದೇಪದೆ ಕೇಳಿರುತ್ತೇವೆ. ಹಾಗಾದರೆ ಅದೊಂದೇ ಕಾರಣಕ್ಕೆ ನಮಗೆ ಸಿ ಜೀವಸತ್ವ ಅಗತ್ಯವೇ? ಇದಲ್ಲದೆ ಇನ್ನೂ ಯಾವೆಲ್ಲಾ ಕಾರಣಗಳಿಗಾಗಿ ವಿಟಮಿನ್ ಸಿ ಬೇಕು? ಇನ್ನೇನೇನು ಕೆಲಸವಿದೆ ಇದಕ್ಕೆ ನಮ್ಮ ದೇಹದಲ್ಲಿ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯಿದು.
ಬೇಸಿಗೆಯಲ್ಲಿ ನಮ್ಮನ್ನು ಅತಿ ಉಷ್ಣದಿಂದ ಕಾಪಾಡುವುದಕ್ಕೆ ವಿಟಮಿನ್ ಸಿ (Vitamin C) ಪ್ರಧಾನವಾಗಿ ಬೇಕು. ಮಾತ್ರವಲ್ಲ, ವಾತಾವರಣದಲ್ಲಿರುವ ಅತಿಯಾದ ಹೊಗೆ, ಮಾಲಿನ್ಯದಿಂದ ನಮ್ಮನ್ನು ರಕ್ಷಿಸಲು, ಬಿಸಿಲಿಗೆ ದೇಹ ಸೊರಗದೆ ಇರಲು, ಶರೀರಕ್ಕೆ ಅಗತ್ಯವಾದ ಕೊಲಾಜಿನ್ ಮತ್ತು ಎಲಾಸ್ಟಿನ್ ಉತ್ಪಾದನೆಗೆ ಈ ಪೋಷಕತತ್ವ ಆವಶ್ಯಕ. ಇದಲ್ಲದೆ, ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ಅನುಕೂಲ ಮಾಡಿಕೊಡುವ ಪಾತ್ರವೂ ಇದೇ ಜೀವಸತ್ವದ್ದು. ಹಾಗಾಗಿ, ನಮ್ಮ ಚರ್ಮ, ಕೂದಲು, ಶ್ವಾಸಕೋಶಗಳನ್ನು ರಕ್ಷಿಸುವುದೇ ಅಲ್ಲದೆ, ಅನೀಮಿಯದಿಂದ ದೂರವಿರಿಸಿ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಮಲ್ಟಿಟಾಸ್ಕಿಂಗ್ ಕೆಲಸ ಇದರದ್ದು. ಇವಿಷ್ಟು ವಿಟಮಿನ್ ಸಿ ಮಾಡುವ ಕೆಲಸದ ಸ್ಥೂಲ ಪರಿಚಯವಾದರೆ, ಇವುಗಳ ವಿವರಗಳು ಇಲ್ಲಿವೆ.
ಸೂರ್ಯನ ಪ್ರಕೋಪದಿಂದ ರಕ್ಷಿಸುತ್ತದೆ
ಸೂರ್ಯ ಸ್ನಾನ ಮಾಡುವವರ ಸಂಖ್ಯೆ ಪಶ್ಚಿಮ ದೇಶಗಳಲ್ಲಿ ಬಹಳ ಹೆಚ್ಚು. ವರ್ಷದ ಆರೆಂಟು ತಿಂಗಳು ಚಳಿ ಅಥವಾ ಹಿಮದಲ್ಲೇ ಹುಗಿದುಕೊಂಡಿರುವ ಭೂಭಾಗಗಳ ಜನರಿಗೆ ಬೇಸಿಗೆಯಲ್ಲಿ ಬಿಸಿಲಿಗೆ ಮೊಸಳೆಯಂತೆ ಒಡ್ಡಿಕೊಳ್ಳುವುದು ಬಲುಪ್ರಿಯವಾದ ಸಂಗತಿ. ಆದರೆ ಓಝೋನ್ ಪದರಕ್ಕೆ ಹಾನಿಯಾಗಿ, ಭೂಮಿಗೆ ಅತಿನೇರಳೆ ಕಿರಣಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗೆ ಸೂರ್ಯ ಸ್ನಾನ ಮಾಡಿದವರಲ್ಲಿ ಅಪರೂಪಕ್ಕೆ ಚರ್ಮದ ಕ್ಯಾನ್ಸರ್ ಕಾಣಿಸಿಕೊಳ್ಳುವುದಿದೆ. ಸೂರ್ಯನ ಬಿಸಿಲಿಗೆ ಹಾನಿಯಾದ ಕೋಶಗಳನ್ನು ಚುರುಕಾಗಿ ಸರಿಪಡಿಸಿ, ಕ್ಯಾನ್ಸರ್ ತಡೆಗಟ್ಟಲು ವಿಟಮಿನ್ ಸಿ (Vitamin C) ಅವಶ್ಯವಾಗಿ ಬೇಕು.
ಗುಣಪಡಿಸಲು
ಯಾವುದೇ ಗಾಯಗಳು ಗುಣವಾಗುವುದಕ್ಕೆ, ಗಾಯಗೊಂಡ ಕೋಶಗಳನ್ನು ರಿಪೇರಿ ಮಾಡಲು ಸಿ ಜೀವಸತ್ವ ಅಗತ್ಯ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಹಾನಿ ಸರಿಪಡಿಸಲು ನೆರವಾಗುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಸುತ್ತುವ ಮುಕ್ತ ಕಣಗಳನ್ನು ನಿರ್ಬಂಧಿಸುತ್ತವೆ. ಇದರಿಂದ ಮಾರಕ ರೋಗಗಳ ದಾಳಿಯ ಸಾಧ್ಯತೆ ಕ್ಷೀಣಿಸುತ್ತದೆ.
ಜೊತೆಗೆ, ಚರ್ಮದ ಆರೋಗ್ಯ ಕಾಪಾಡುವಂಥ ಕೊಲಾಜಿನ್ ಉತ್ಪತ್ತಿಗೆ ಈ ಪೋಷಕಾಂಶ ಪೂರಕ. ಹಾಗಾಗಿ, ಕೂದಲು ಮತ್ತು ಚರ್ಮದ ತೊಂದರೆಗಳು ಶೀಘ್ರವೇ ಗುಣವಾಗುತ್ತವೆ. ಮೂಳೆಗಳು ಮತ್ತು ಕೀಲುಗಳ ನಡುವಿನ ಕೋಶಗಳು- ಇವೆಲ್ಲವುಗಳು ಆರೋಗ್ಯಕರವಾಗಿ ಇರುವುದಕ್ಕೆ ದೇಹದಲ್ಲಿ ಸಾಕಷ್ಟು ಎಲಾಸ್ಟಿನ್ ಮತ್ತು ಕೊಲಾಜಿನ್ ತಯಾರಾಗಲೇ ಬೇಕು. ಕೊಲಾಜಿನ್ ಕಡಿಮೆಯಾದರೆ ಮಂಡಿ ಕೀಲುಗಳ ಸವೆತ, ಚರ್ಮ ಸುಕ್ಕಾಗುವುದು, ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಗಂಟಾಗುತ್ತವೆ.
ಬೇಸಿಗೆಯಲ್ಲಿ ಅನುಕೂಲ
ಸೆಖೆಗಾಲದಲ್ಲಿ ತೀಕ್ಷ್ಣವಾಗಿ ಏರುವ ತಾಪಮಾನವನ್ನು ಸಹಿಸಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುವಲ್ಲಿ ವಿಟಮಿನ್ ಸಿ ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ. ಬೆವರು ಹರಿಸುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೆವರುಸಾಲೆಯಂಥ ಚರ್ಮದ ಕಿರಿಕಿರಿಗಳನ್ನು ದೂರವಿರಿಸುತ್ತದೆ.
ಹೇಗೆ ದೊರೆಯುತ್ತದೆ?
ವಿಟಮಿನ್ ಸಿ (Vitamin C) ಬೇಕು ಎನ್ನುವುದು ನಿಜ. ಆದರೆ ದೇಹಕ್ಕೆ ಹೇಗೆ ದೊರೆಯುತ್ತದೆ? ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳಲ್ಲೇ ಸಿ ಜೀವಸತ್ವ ಹೇರಳವಾಗಿರುತ್ತದೆ. ಉದಾ, ಕಿತ್ತಳೆ, ದ್ರಾಕ್ಷಿಯಂಥ ಹುಳಿ ಹಣ್ಣುಗಳಲ್ಲಿ, ಸೇಬು, ಕಿವಿ, ಅನಾನಸ್, ಪಪ್ಪಾಯಿ, ದಪ್ಪ ಮೆಣಸಿನ ಕಾಯಿ ಇತ್ಯಾದಿಗಳನ್ನು ಸೇವಿಸುವುದರಿಂದ ವಿಟಮಿನ್ ಸಿ ಪಡೆಯಬಹುದು. ಪೂರಕಗಳ ಮೂಲಕವೂ ವಿಟಮಿನ್ ಸಿ ಸೇವಿಸಬಹುದು. ಅದನ್ನು ಸೇವಿಸುವ ಪ್ರಮಾಣವೆಷ್ಟು ಎಂಬುದಕ್ಕೆ ತಜ್ಞರ ಮಾರ್ಗದರ್ಶನ ಸೂಕ್ತ.
ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್ ಡ್ರಿಂಕ್!