ಯೌವನವನ್ನು ಚಿರವಾಗಿ ಇರಿಸಿಕೊಳ್ಳಬೇಕೆಂದು ಮಾನವ ಪ್ರಜ್ಞೆ ಬಂದಾಗಿನಿಂದ ಪ್ರಯತ್ನಿಸುತ್ತಲೇ ಇದ್ದಾನೆ. ಮಗನ ಪ್ರಾಯವನ್ನು ಕಡ ತೆಗೆದುಕೊಂಡ ಯಯಾತಿಯಿಂದ ಹಿಡಿದು ಬಟಾಕ್ಸ್ ಚುಚ್ಚಿಸಿಕೊಂಡೋ ಅಥವಾ ಇನ್ನಾವುದಾದರೂ ಯಾತನೆಯ ಚಿಕಿತ್ಸೆ ತೆಗೆದುಕೊಂಡೊ ಚಿರ ಯೌವನಿಗರಂತೆ ಕಾಣಲು ಯತ್ನಿಸುವ ಜನರನ್ನು ಕಂಡಾಗೆಲ್ಲಾ ಪ್ರಾಯವೆಂಬ ಮಾಯೆಯ ಬಗ್ಗೆ ಮೋಜೆನಿಸುತ್ತದೆ. ಈ ಸಾಲಿನಲ್ಲಿ ಜನಪ್ರಿಯತೆ ಪಡೆಯುತ್ತಿರುವ ಇನ್ನೊಂದೆಂದರೆ `ವಿಟಮಿನ್ ಸಿ ಫ್ಲಶ್’ (Vitamin C Flush) ಎಂಬ ಅಲೆ. ಏನಿದು? ಯಾಕಾಗಿ ಜನ ಇದರಲ್ಲಿ ಆಸಕ್ತರಾಗಿದ್ದಾರೆ? ಇದರಿಂದ ಏನು ಪ್ರಯೋಜನ?
ಏನಿದು?
ವಿಟಮಿನ್ ಸಿ ಫ್ಲಶ್‌ಗೆ ಆಸ್ಕಾರ್ಬಿಕ್ ಕ್ಲೆನ್ಸ್ ಎಂದೂ ಕರೆಯಲಾಗುತ್ತದೆ. ವಿಟಮಿನ್ ಸಿ ಇರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದು ದೇಹವನ್ನು ಡಿಟಾಕ್ಸ್ ಮಾಡುವ ಉದ್ದೇಶ ಇದರದ್ದು. ಕೆಲವೊಮ್ಮೆ ಪೂರಕ ಮಾತ್ರೆಗಳ ರೂಪದಲ್ಲೂ ವಿಟಮಿನ್ ಸಿ (Vitamin C Flush) ತೆಗೆದುಕೊಳ್ಳಲಾಗುತ್ತದೆ. ಹೀಗೆಲ್ಲಾ ಮಾಡುವುದರಿಂದ ನಿಜಕ್ಕೂ ತಾರುಣ್ಯ ಮರಳುವುದು ಹೌದೇ ಅಥವಾ ವಯಸ್ಸಾಗದಂತೆ ತಡೆಯುವುದು ಸಾಧ್ಯವೇ?
ಕೊಲಾಜಿನ್ ಹೆಚ್ಚಿಸುತ್ತದೆ
ಚರ್ಮದ ಹಿಗ್ಗುವ ಸಾಮರ್ಥ್ಯವನ್ನು ಹೆಚ್ಚಿಸುವ ಕೊಲಾಜಿನ್ ಉತ್ಪಾದನೆ ಮಾಡಲು ವಿಟಮಿನ್ ಸಿ ದೊಡ್ಡ ಪ್ರಮಾಣದಲ್ಲಿ ನೆರವಾಗುತ್ತದೆ. ಇದರಿಂದ ಚರ್ಮದ ದೃಢತೆ ಹೆಚ್ಚಿ ನೆರಿಗೆಗಳು ಕಡಿಮೆಯಾಗುತ್ತವೆ
ಆಕ್ಸಿಡೇಟಿವ್ ಸ್ಟ್ರೆಸ್ ಕಡಿಮೆ
ದೇಹದಲ್ಲಿ ಸಂಚರಿಸುವ ಮುಕ್ತ ಕಣಗಳು ಮಾಡುವ ಉಪದ್ರವಗಳು ಒಂದೆರಡೇ ಅಲ್ಲ. ಕ್ಯಾನರ್‌ನಂಥ ಮಾರಕ ರೋಗಗಳು ಹರಡುವುದಕ್ಕೆ ನೆರವಾಗುವುದರಿಂದ ಹಿಡಿದು ವಯಸ್ಸಾಗುವುದನ್ನು ತ್ವರಿತವಾಗಿಸುತ್ತವೆ. ವಿಟಮಿನ್ ಸಿ ಸೇವನೆಯಿಂದಾಗಿ ಈ ಮುಕ್ತ ಕಣಗಳಿಗೆ ಕಡಿವಾಣ ಹಾಕಿ, ಆಕ್ಸಿಡೇಟಿವ್ ಸ್ಟ್ರೆಸ್ ಕಡಿಮೆ ಮಾಡಬಹುದು. ಇದರಿಂದ ಚರ್ಮ ಸುಕ್ಕಾಗುವುದನ್ನೂ ಮುಂದೂಡಿದಂತಾಗುತ್ತದೆ
ಪ್ರತಿರೋಧಕತೆಗೆ ಪೂರಕ
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಲ್ಲಿ ವಿಟಮಿನ್ ಸಿ ಸಾಮರ್ಥ್ಯ ಈಗಾಗಲೇ ವಿಜ್ಞಾನಿಗಳಿಗೆ ಸಾಬೀತಾಗಿದೆ. ಹಾಗಾಗಿ ಸೋಂಕುಗಳೊಂದಿಗೆ ಹೋರಾಡಿ, ದೇಹವನ್ನು ಡಿಟಾಕ್ಸ್ ಮಾಡುವಲ್ಲಿ ಇದರ ಪಾತ್ರ ದೊಡ್ಡದು
ಡಿಟಾಕ್ಸ್
ನಾವು ತಿನ್ನುವ, ಉಸಿರಾಡುವ ಪ್ರತಿಯೊಂದರಲ್ಲೂ ದೇಹಕ್ಕೆ ಹೊರಗಿನಿಂದ ಶಕ್ತಿ ಪೂರೈಕೆ ಆಗುತ್ತಲೇ ಇರುತ್ತದೆ. ಹೀಗೆ ದೊರೆತ ಶಕ್ತಿಯಲ್ಲಿ ಎಲ್ಲವೂ ದೇಹಕ್ಕೆ ಬೇಕಾದಂಥವೇ ಆಗಿರುವುದಿಲ್ಲ. ಕೆಲವೊಂದನ್ನು ದೇಹದಿಂದ ಹೊರಗೆ ದೂಡಬೇಕಾದ್ದು ಅಗತ್ಯ. ಇದನ್ನೇ ಡಿಟಾಕ್ಸಿಫಿಕೇಷನ್ ಅಥವಾ ಚಿಕ್ಕದಾಗಿ ಡಿಟಾಕ್ಸ್ ಎನ್ನುತ್ತೇವೆ. ಅನಗತ್ಯವಾದವು ದೇಹದಿಂದ ಹೊರಗೆ ಹೋದಾಗಲೇ ಒಟ್ಟಾರೆ ದೇಹಸ್ವಾಸ್ಥ್ಯ ವೃದ್ಧಿಸುವುದಕ್ಕೆ ಸಾಧ್ಯ.
ಚೈತನ್ಯ ಹೆಚ್ಚಿಸುತ್ತದೆ
ದೇಹದ ಚೈತನ್ಯ ಹೆಚ್ಚಿಸುವ ಡೋಪಮಿನ್ ಮುಂತಾದ ಚೋದಕಗಳ ಸ್ರವಿಸುವಿಕೆಗೆ ಸಿ ಜೀವಸತ್ವ ನೆರವಾಗುತ್ತದೆ. ಇವನ್ನು ನ್ಯೂರೋಟ್ರಾನ್ಸಮಿಟರ್ ಎಂದು ಕರೆಯಲಾಗುತ್ತದೆ. ವಿಟಮಿನ್ ಸಿ ಸೇವನೆಯಿಂದಾಗಿ ನ್ಯೂರೋಟ್ರಾನ್ಸ್ ಮಿಟರ್ ಗಳ ಉತ್ಪಾದನೆ ಹೆಚ್ಚುತ್ತಿದ್ದಂತೆ ಪ್ರಾಯ ಹೆಚ್ಚಿದಾಗ ಕಾಡುವ ಸುಸ್ತು, ಆಯಾಸಗಳನ್ನು ಕಡಿಮೆ ಮಾಡಬಹುದು.
ಚರ್ಮದ ಕಾಂತಿ ಹೆಚ್ಚುತ್ತದೆ
ತ್ವಚೆಯ ಮೇಲಿನ ಪಿಗ್ಮೆಂಟೇಶನ್ ಅಥವಾ ಇನ್ನಾವುದಾದರೂ ಕಪ್ಪು ಕಲೆಗಳು, ಮೊಡವೆ, ಕಲೆಗಳು ಮುಂತಾದವನ್ನು ತಿಳಿಗೊಳಿಸುತ್ತದೆ. ವಯಸ್ಸಾಗುತ್ತಿಂದ್ದಂತೆ ಮೂಡುವ ಕಲೆಗಳನ್ನೂ ದೂರ ಮಾಡುತ್ತದೆ. ಜೊತೆಗೆ, ಕೊಲಾಜಿನ್ ಉತ್ಪಾದನೆಯನ್ನೂ ಹೆಚ್ಚಿಸುವುದರಿಂದ ಚರ್ಮದ ಕಾಂತಿ ಹೆಚ್ಚಿ, ನಯವಾದ ಹೊಳೆಯುವ ತ್ವಚೆಯನ್ನು ಹೊಂದಲು ಸಾಧ್ಯವಿದೆ.
ಇವೆಲ್ಲವುಗಳ ಅರ್ಥವೇನು? ಹೋದ ಪ್ರಾಯವನ್ನು ವಿಟಮಿನ್ ಸಿ ಮರಳಿ ತರುತ್ತದೆ ಎಂದೇ? ಖಂಡಿತ ಅಲ್ಲ! ಇರುವ ಪ್ರಾಯವನ್ನು ಕಾಪಾಡಿಕೊಂಡು, ಇನ್ನಷ್ಟು ವಯಸ್ಸಾಗುವುದನ್ನು ಮುಂದೂಡಲು ಅಥವಾ ನಿಧಾನ ಮಾಡಲು ಸಾಧ್ಯವಿದೆ. ಚರ್ಮದ ಕಾಂತಿ ಹೆಚ್ಚಿಸಿ, ಸ್ವಾಸ್ಥ್ಯವನ್ನು ವರ್ಧಿಸಿ ಚಂದಗಾಣಿಸಿದ ಮಾತ್ರಕ್ಕೆ ನಲವತ್ತು ವರ್ಷದವರು ಇಪ್ಪತ್ತರಂತೆ ಕಾಣುತ್ತಾರೆ ಎನ್ನುವುದು ನಿಜವಲ್ಲ. ಆದರೆ ರೋಗನಿರೋಧಕ ಶಕ್ತಿ ಹೆಚ್ಚಿ, ದೇಹದ ಚೈತನ್ಯ ವೃದ್ಧಿಸುವುದರಿಂದ ವಯಸ್ಸಾದ ಭಾವನೆ ದೂರವಾಗುವುದು ನಿಜ. ಹಾಗಾಗಿ ನಿತ್ಯವೂ ವಿಟಮಿನ್ ಸಿ ಯುಕ್ತ ಆಹಾರ ಸೇವನೆ ಲಾಭದಾಯಕ.
ಇದನ್ನೂ ಓದಿ: Men’s Health After 40: 40ರ ನಂತರ ಪುರುಷರ ಆರೋಗ್ಯ ಕಾಳಜಿ ಹೀಗಿರಲಿ